ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
"ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು"
ವರಕವಿ ದ ರಾ ಬೇಂದ್ರೆಯವರ ಉದಾತ್ತ ಮನಸ್ಸಿನ ಮುತ್ತಿನ ನುಡಿಗಳಿವು. ಇದರ ಅರ್ಥ ಇಷ್ಟೆ ಅದು ಕವನ ಇರಬಹದು, ಸಾಹಿತ್ಯವಿರಬಹುದು ಅದನ್ನು ಯಾರೇ ಬರೆಯಲಿ, ಯಾರೇ ಓದಲಿ ಅದು ಆ ಭಾಷೆಯ ಸ್ವತ್ತು. ಯಾಕೆಂದರೆ ಆ ಭಾಷೆಯೇ ಇರದಿದ್ದರೆ, ಅದು ಸಾಧ್ಯವಾಗುತ್ತಿರಲಿಲ್ಲ. ಎಂಥ ಉತ್ಕೃಷ್ಟ ಚಿಂತನೆ! ನೀವೇ ಯೋಚಿಸಿ, ಕನ್ನಡವೇ ಇರದ ಮೇಲೆ ಕನ್ನಡ ಸಾಹಿತ್ಯವಾದರೂ ಇರಲು ಸಾಧ್ಯವಿತ್ತೆ? ಅಂದಮೇಲೆ ಅದು ಯಾವುದೇ ಕವಿ, ಲೇಖಕ, ಸಾಹಿತಿಯೇ ಆಗಿರಲಿ ಅವರ ಕನ್ನಡ ಸಾಹಿತ್ಯ ಕೃಷಿಗೆ ಯಾರಾದರೂ ಗೌರವ ತೋರಿದರೆ, ಪ್ರಶಸ್ತಿ, ಸನ್ಮಾನ, ಸ್ಥಾನಮಾನ ನೀಡಿದರೆ, ಅದು ಆ ವ್ಯಕ್ತಿಗೆ ದಕ್ಕಿದ ಗೌರವ ಅನ್ನುವುದಕ್ಕಿಂತಲೂ, ಕನ್ನಡಕ್ಕೆ ದಕ್ಕಿದ ಸಮ್ಮಾನ ಎಂಬ ಭಾವನೆ ಬೇಕಲ್ಲವೇ? ಅದು ಜ್ಞಾನ ಪೀಠವಿರಲಿ, ಸರಸ್ವತಿ ಸಮ್ಮಾನವಿರಲಿ, ಪಂಪ, ನಾಡೋಜ ಯಾವುದೇ ಪ್ರಶಸ್ತಿ ಸಮ್ಮಾನ ಕನ್ನಡಕ್ಕೆ ದೊರಕಿದೆ ಎಂದರೆ, ಕನ್ನಡಿಗರ ಮೈ ಮನಗಳಲ್ಲಿ ಅದೆಂಥ ಸಂಭ್ರಮ ಮೂಡಬೇಕು? ಮೂಡಿರಬೇಕಿತ್ತು? ಆದರೆ ಆದದ್ದೇನು? ನಡೆಯುತ್ತಿರುವುದೇನು? ಇದೆಂಥ ಕಾದಾಟ? ಇದೆಂಥ ಬೌದ್ಧಿಕ ಬರಗಾಲ? ಒಬ್ಬರನ್ನು ಸನ್ಮಾನಿಸುವ ನೆಪದಲ್ಲಿ, ಮತ್ತೊಬ್ಬರನ್ನು ಅವಮಾನಿಸುವ ಪರಿಪಾಠ? ಈ ರೀತಿಯಾಗಿ ಸನ್ಮಾನಕ್ಕೊಳಪಡುವವರನ್ನು ನೋಯಿಸುವ ದೂರ್ಥ ಸೆಣಸಾಟ? ಪ್ರಗತಿ ಎಂದರೆ ಇದೇನಾ? ಪ್ರಗತಿಪರರು ಎಂದರೆ ಇವರೇನಾ? ಅಷ್ಟಕ್ಕೂ ಇಂಥವರಿಗೆ ಭಾರತದ ಸಂವಿಧಾನವೇ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನೊಬ್ಬರಿಂದ ಕಸಿಯುವಂತಹ ಹಕ್ಕನ್ನು ಕೊಟ್ಟವರಾರು? ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಯವನ್ನು ಬೇಕಾ ಬಿಟ್ಟಿಯಾಗಿ ಬಳಸುತ್ತಿರುವುದು, ಎಷ್ಟು ಸಮಂಜಸ? ಅವಶ್ಯವಿರಲಿ ಇರದೇ ಇರಲಿ ತಮ್ಮ ಬಾಯಿ ಚಪಲಕ್ಕೆ, ಮಾಧ್ಯಮಗಳಲ್ಲಿ ಕಾಣಬೇಕೆಂಬ ಕಾರಣಕ್ಕೆ ಇಲ್ಲ ಸಲ್ಲದ ಹೇಳಿಕೆಯನ್ನು ನೀಡುವ, ಅವಶ್ಯಕತೆಯೇನು? ಇದನ್ನು ಈ ಪ್ರಮುಖ ಪ್ರಾಜ್ಞರೇ ತಿಳಿಸಬೇಕು.
ಅದಿರಲಿ, ಶ್ರೀಯುತ ಚಂದ್ರಶೇಖರ್ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದ ನಂತರದ ಬೆಳವಣಿಗೆಯನ್ನು ಒಂದು ಸಾರಿ ನೆನಪಿಸಿಕೊಳ್ಳಿ, ನಿಮಗೆ ಬೇಸರವಾಗದಿದ್ದರೆ ಕೇಳಿ. ನಾಡಿನ ಹಿರಿಯರು, ಅತ್ಯಂತ ಅನುಭವಿ ಪತ್ರಕರ್ತರೊಬ್ಬರು ನೀಡಿದ ಹೇಳಿಕೆ ಅವರ ಗೌರವಕ್ಕೇ ಧಕ್ಕೆ ತಂದಿದ್ದಲ್ಲದೆ, ಒಂದು ಹೊಸ ಕೆಸರೆರಚಾಟಕ್ಕೆ ಮುನ್ನುಡಿ ಬರೆಯಿತು. ಕಂಬಾರರ ಮುಖಾಂತರ ಕನ್ನಡಕ್ಕೆ ೮ನೇ ಜ್ಞಾನಪೀಠ ಪ್ರಶಸ್ತಿ ಬಂದದ್ದನ್ನು ಸಂಭ್ರಮಿಸುವ ಬದಲು, ಅದಕ್ಕೆ ಕಂಬಾರರಿಗಿಂತ ಭೈರಪ್ಪನವರು ಅರ್ಹರಾಗಿದ್ದರು, ಇವರು ಲಾಬಿ ಮುಖಾಂತರ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದು ದೊಡ್ಡ ಸುದ್ದಿಯಾಯಿತು. ಅದೇನೆ ಇರಲಿ ಆ ಸಂದರ್ಭದಲ್ಲಿ ಅಂತಹ ಹೇಳಿಕೆ ನೀಡುವ ಅವಶ್ಯಕತೆಯಾದರೂ ಏನಿತ್ತು? ಎಂಬುದು ನಮಗೆ ಯಕ್ಷ ಪ್ರಶ್ನೆಯಾಗಿದೆ. ಅದು ಭೈರಪ್ಪನವರಿರಲಿ, ಕಂಬಾರರಿರಲಿ ಅಂಥವರಿಗೆ ಪ್ರಶಸ್ತಿಗಳಿಂದ ಗೌರವ ಬರುವುದಿಲ್ಲ, ಬದಲಿಗೆ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗುತ್ತದೆ ಎಂಬುದು ಸತ್ಯ. ಏಕೆಂದರೆ ಮಹಾತ್ಮಾ ಗಾಂಧಿಜಿ ಯವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಬರಲಿಲ್ಲ ಅಂದ ಮಾತ್ರಕ್ಕೆ ಅವರ ಗೌರವವೇನು ಕಡಿಮೆಯಾಗಲಿಲ್ಲ, ಬದಲಿಗೆ ಕೊನೆಗೊಮ್ಮೆ ನೋಬೆಲ್ ಪ್ರಶಸ್ತಿ ಸಮೀತಿಯೇ ಪಶ್ಚಾತ್ತಾಪ ಪಡುವಂತಾಯಿತು.
ಇನ್ನು ನಂತರ ಕಂಬಾರರಿಗೆ ಸನ್ಮಾನವನ್ನು ಮಾಡುವ ನೆಪದಲ್ಲಿ ಭೈರಪ್ಪನವರನ್ನು ಟೀಕಿಸಹೋಗಿ ನಗೆಪಾಟಲಿಗೀಡಾದ ಸಂಗತಿಯಂತೂ ತೀರಾ ನಾಚಿಗೆಗೇಡು. ಬುದ್ಧ, ಬಸವಣ್ಣ, ಡಾ. ಬಿ ಆರ್ ಅಂಬೇಡ್ಕರ್, ಮದರ್ ಥೇರೆಸ್ಸಾ ಅಂಥ ಮಹನೀಯರ ಭಾವಚಿತ್ರಗಳನ್ನು ಬಳಸಿಕೊಂಡು ಪ್ರಗತಿಪರರು ಎಂದು ಹೇಳಿಕೊಳ್ಳುವ ಈ ಮಹನೀಯರು...
ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗಮೆಚ್ಚಿ ಅಹುದಹುದು ಎನ್ನಬೇಕು
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿಯುವನಯ್ಯ
ಎಂಬಂತಹ ಜಗಜ್ಯೋತಿ ಬಸವಣ್ಣನವರ ನುಡಿಗಳನ್ನು ಪಾಲಿಸಿದ್ದರೆ ಎಂತಹ ಉತ್ತಮ ನಡೆಯಾಗುತ್ತಿತ್ತು. ಅದನ್ನು ಬಿಟ್ಟು ತಮಗೆ ತೋಚಿದ್ದನ್ನು, ಬಾಯಿಗೆ ಬಂದದ್ದನ್ನು ನುಡಿಯುವುದು ಎಷ್ಟು ಸರಿ? ಇತರರಿರಲಿ ದಾರಿ ತೋರಿಸಬೇಕಾದಂತಹ ಸ್ವಾಮಿ ಎಂದು ಕರೆಸಿಕೊಳ್ಳುವವರೆ ಇದನ್ನು ಪಾಲಿಸದಿದ್ದರೆ ಹೇಗೆ? ಎಲ್ಲರೂ ಎಲ್ಲರನ್ನೂ ಮೆಚ್ಚಬೇಕು ಎಂದು ಯಾರೂ ಹೇಳುವುದಿಲ್ಲ, ಆದರೆ ಹೀಗೆ ಭೈರಪ್ಪನವರಂತಹ ಭಾರತದ ಎಲ್ಲ ಭಾಷೆಗಳಲ್ಲಿ ಓದುಗವೃಂದವನ್ನು ಹೊಂದಿರುವ ಲೇಖಕರನ್ನು ನೀವು ವಿರೋಧಿಸುವುದೇ ಆಗಿದ್ದಲ್ಲಿ, ಅವರು ಲೇಖಕರೇ ಅಲ್ಲ ಎಂಬುದು ನಿಮ್ಮ ಭಾವವಾಗಿದ್ದರೆ, ಇಲ್ಲವೇ ಅವರು ರಾಹುಗ್ರಸ್ಥ ಲೇಖಕ ಎಂಬುದೇ ನಿಮ್ಮ ತೀರ್ಮಾನವಾಗಿದ್ದಲ್ಲಿ, ಅವರ ಸಾಹಿತ್ಯದಲ್ಲಿ , ಅಥವ ಒಂದು ಕಾದಂಬರಿಯಲ್ಲಿ ನಿಮಗೆ ಯಾವುದಾದರು ತಪ್ಪು ಕಾಣಿಸಿದರೆ ಅದನ್ನು ಆಮೂಲಾಗ್ರವಾಗಿ ವಿಮರ್ಶಿಸಿ, ಸಾಕ್ಷಿ ಸಮೇತ ಪ್ರಚುರಪಡಿಸಿದರೆ ನಮ್ಮಂತಹ ಸಾಮಾನ್ಯರಿಗೂ ತಿಳಿಸಿದಂತಾಗುತ್ತದೆ. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದರೆ ಹೇಗೆ? ಅದೂ ಅವರ ಲೇಖನಗಳನ್ನಾಗಲಿ, ಇಲ್ಲವೇ ಇತರೆ ಕನ್ನಡ ಸಾಹಿತ್ಯಗಳನ್ನಾಗಲಿ ಓದದೇ!
ಅದೇನೇ ಆಗಿರಲಿ ಈ ಇಬ್ಬರೂ ಮಹನೀಯರು ಕನ್ನಡ ನುಡಿದೇವಿಯ ಆರಾಧಕರು, ಸರಸ್ವತಿ ಮಾತೆಯ ಪುತ್ರರು ಎಂಬುದಂತೂ ಸ್ಪಷ್ಟ ಸತ್ಯ. ಅಂದಮೇಲೆ ಕನ್ನಡದ ಕೀರ್ತಿಯನ್ನು ರಾಷ್ಟ್ರದಾದ್ಯಂತ ಪಸರಿಸಿರುವ ಈ ಮಹನೀಯರ ಯಶಸ್ಸಿನೊಂದಿಗೆ ಸಂಭ್ರಮಿಸುವಲ್ಲಿ ಯಾಕೆ ಇಂತಹ ಸಂಕುಚಿತತೆ ಮೂಡಿತು ಎಂಬುದು ದೊಡ್ಡವರಿಗೇ ಗೊತ್ತು.
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಡಾ ನಲ್ಲೂರು ಪ್ರಸಾದ್ ಅವರು ಹೇಳಿದಂತೆ "ಭೈರಪ್ಪನರು ಸರಸ್ವತಿ ಸಮ್ಮಾನವನ್ನು ಪಡೆದಿದ್ದಕ್ಕಿರಲಿ, ಕಂಬಾರರಿಗೆ ಜ್ಞಾನಪೀಠ ಬಂದದ್ದಕ್ಕಿರಲಿ, ಇಲ್ಲವೇ ಚಂದ್ರ ಶೇಖರ್ ಪಾಟೀಲರಿಗೆ ಪಂಪ ಪ್ರಶಸ್ತಿ ಲಭಿಸಿದ್ದಕ್ಕಾಗಲಿ" ನಾವೆಲ್ಲ ಕನ್ನಡಿಗರಾಗಿ ಸಂಭ್ರಮಿಸಬೇಕೆ ಹೊರತು, ಇಲ್ಲದ ವಿವಾದಗಳನ್ನು ಎಬ್ಬಿಸುವುದು ಸರಿಯಲ್ಲ. ಏಕೆಂದರೆ ಅವು ಕನ್ನಡಕ್ಕೆ ಬಂದ ಗೌರವಗಳಾಗಿವೆ.
ನೀವೆ ಹೇಳಿ, ಭೈರಪ್ಪನವರನ್ನಾಗಲಿ, ಕಂಬಾರರನ್ನಾಗಲಿ ತಿಳಿಸಿ ಕೊಡುವ ಕಾರ್ಯವನ್ನು ಎಷ್ಟು ಜನರು ಮಾಡಿದ್ದಾರೆ? ಕಳೆದ ಹತ್ತು ವರ್ಷಗಳಲ್ಲಿ ದೇಶದ ಸುಮಾರು ೨೫ ಭಾಷೆಗಳಲ್ಲಿ ಪ್ರಕಟವಾದ ಸಾವಿರಾರು ಕಾದಂಬರಿಗಳಲ್ಲಿಯೇ ಶ್ರೇಷ್ಠ ಎಂದು ಪರಿಗಣಿಸಿ ಸರಸ್ವತಿ ಸಮ್ಮಾನ ಪ್ರಶಸ್ತಿಗೆ ಆಯ್ಕೆ ಯಾಗಿ, ಕನ್ನಡಕ್ಕೆ ಹೆಮ್ಮೆಯ ಗರಿ ಮೂಡಿಸಿದ ಎಸ್ ಎಲ್ ಭೈರಪ್ಪನವರ "ಮಂದ್ರ" ಕಾದಂಬರಿಯನ್ನು ಕೂಲಂಕುಷವಾಗಿ ವಿಮರ್ಷಿಸಿ ನಮಗೆ ತಿಳಿಸಿ ಕೊಡುವ ಪ್ರಯತ್ನವನ್ನು ಎಷ್ಟು ಜನ ಮಹನೀಯರು ಮಾಡಿದ್ದಾರೆ? ಹೀಗಾಗಿ ನಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ಕೇವಲ ಭಾವನಾತ್ಮಕ, ಪೂರ್ವಾಗ್ರಹ ಪೀಡಿತ, ದೃಷ್ಟಿಕೋನದಿಂದ, ವ್ಯಕ್ತಿಗತವಾಗಿ ತಮ್ಮ ಬಾಯಿ ಚಪಲಕ್ಕೆ ಬೆಂಬಲಿಸುವ, ಇಲ್ಲವೆ ತೇಜೋವಧೆ ಮಾಡುವಂತಹ ಕ್ರಿಯೆಗಳು ನಮ್ಮ ಪ್ರತಿಷ್ಠಿತ, ಮಾಧ್ಯಮಗಳಿಂದ, ವ್ಯಕ್ತಿಗಳಿಂದ ಹೆಚ್ಚಾಗಿ ಆಗುತ್ತಿದೆಯೇ ಹೊರತು, ಸಾಹಿತ್ಯದ ನೆಲೆಗಟ್ಟಿನಲ್ಲಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸ್ವಚ್ಛ ಮನಸ್ಸಿನಿಂದ ವಿಮರ್ಷೆಗೆ, ಮಂಥನಕ್ಕೆ ಒಳಪಡಿಸುವಂತಹ ಕ್ರಿಯೆಗಳು ಎಳ್ಳಷ್ಟೂ ನಡೆಯುತ್ತಿರುವ ಉದಾಹರಣೆಗಳು ಸದ್ಯದ ನಮ್ಮ ಕನ್ನಡ ನಾಡಿನಲ್ಲಿ ಕಾಣುತ್ತಿಲ್ಲ, ಅದು ಎಲ್ಲಾದರೂ ನಡೆಯುತ್ತಿದ್ದರೂ ಬೆಳಕಿಗಂತೂ ಬರುತ್ತಿಲ್ಲ. ಇದು ದುರ್ದೈವದ ಸಂಗತಿಯಲ್ಲದೇ ಮತ್ತೇನಲ್ಲ.
ಇಂತಹ ಒಡಕುಗಳಿಂದಾಗಿಯೇ ತಾನೆ ಕನ್ನಡಕ್ಕೆ ಕನ್ನಡಿಗರಿಗೆ ದಕ್ಕಬೇಕಾದಂತಹ ಎಷ್ಟೋ ಪುರಸ್ಕಾರಗಳು ಕೈತಪ್ಪಿದ್ದು? ಒಮ್ಮೆ ನೆನಗಪಿಸಿಕೊಳ್ಳಿ ಡಾ ರಾಜಕುಮಾರ್ ಆಗಲಿ, ತುಮಕೂರಿನ ಸಿದ್ಧಗಂಗಾ ಶ್ರೀಗಳಾಗಲಿ ಇಲ್ಲವೇ ಪುಟ್ಟರಾಜಗವಾಯಿಗಳಾಗಲಿ ಅಥವಾ ಗಂಗೂಬಾಯಿ ಹಾನಗಲ್ರಂತಹ ಮಹನೀಯರಾಗಲಿ ಭಾರತರತ್ನ ಗೌರವಕ್ಕೆ ಯಾವ ರೀತಿಯಿಂದ ಕಡಿಮೆ ಇದ್ದರು? ಅಭಿನವ ಭಾರ್ಗವ ವಿಷ್ಣುವರ್ಧನ ಅವರು ಸುಮಾರು ೨೦೦ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದರೂ ಪದ್ಮ ಪ್ರಶಸ್ತಿಯ ಗೌರವವಕ್ಕೂ ಪಾತ್ರರಾಗದಿರುವುದು ಯಾರ ದುರ್ದೈವ? ಸ್ವತಂತ್ರ ಬಂದು ೬೪ವರ್ಷಗಳೂ ಕಳೆದರೂ ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವ ಒಬ್ಬ ಮಹನೀಯರೂ ನಮ್ಮಲ್ಲಿರಲಿಲ್ಲವೇ? (ಉಪ ರಾಷ್ಟ್ರಪತಿಯಾಗಿದ್ದ ಬಿ ಡಿ ಜತ್ತಿಯವ ಕೆಲ ದಿನಗಳ ಮಟ್ಟಿಗೆ ಹಂಗಾಮಿ ರಾಷ್ಟ್ರಪತಿಯಾಗಿದ್ದನ್ನು ಹೊರತುಪಡಿಸಿ). ಇದ್ದರೂ ಯಾಕೆ ರಾಜಕೀಯವಾಗಿ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ, ಯೋಚಿಸಿದ್ದೀರ? ಪ್ರತಿ ಬಾರಿ ಬಡ್ಜೆಟ್ ಮಂಡನೆಯಾದಾಗಲೂ ಕೇಂದ್ರದಿಂದ ಕರ್ನಾಟಕಕ್ಕೆ ಮಲತಾಯಿ ಧೋರಣೆ ಎಂದು ಬೊಬ್ಬಿರಿಯುವ ಹೋರಾಟಗಾರರಾಗಲಿ, ರಾಜಕಾರಣಿಗಳಾಗಲಿ, ಮಾಧ್ಯಮಗಳಾಗಲಿ, ಆ ಹೋರಾಟವನ್ನು ಇಷ್ಟು ದಿನ ಮುಂದುವರೆಸಿದ್ದಾರೆ? ಎಲ್ಲರೂ ಒಟ್ಟಾಗಿ ಅದಕ್ಕೆ ಪರಿಹಾರ ಹುಡುಕುವಂತಹ ಮಾರ್ಗಗಳನ್ನೇನಾದರೂ ಕಂಡುಹಿಡಿದಿದ್ದಾರೆಯೆ? ಇಲ್ಲವೇ ಇಲ್ಲ. ಹೀಗಾದರೆ ನಮ್ಮ ಕನ್ನಡದ ಬೆಳವಣಿಗೆ ಹೇಗೆ ಆಗಲು ಸಾಧ್ಯ? ಕನ್ನಡ ಸಾಹಿತ್ಯವು ಜನಸಾಮಾನ್ಯರನ್ನು, ಇತರೆ ಭಾಷೆಯವರನ್ನು ತಲುಪುವುದು ಎಷ್ಟು ಸಾಧ್ಯ? ಕನ್ನಡ ಚಲನಚಿತ್ರಗಳು ಬೆಳೆಯಲು ಹೇಗೆ ಸಾಧ್ಯ? ಕರ್ನಾಟಕದ ಹೆಜ್ಜೆಗುರುತು ರಾಷ್ಟ್ರಮಟ್ಟದಲ್ಲಿ ಮೂಡಲು ಹೇಗೆ ಸಾಧ್ಯ? ಕನ್ನಡಿಗರಿಗೆ ಸಲ್ಲ ಬೇಕಾದ ನ್ಯಾಯ ಸಲ್ಲಲು ಹೇಗೆ ಸಾಧ್ಯ? ಇಲ್ಲಿ ಎಲ್ಲರ ಮನಸ್ಥಿತಿ, ತಮ್ಮ ತಟ್ಟೆಯಲ್ಲಿ ಕತ್ತೆಸತ್ತು ಬಿದ್ದಿದ್ದರು, ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹಾರಿಸಲು ಹೋಗುತ್ತಿರುವರು ಎನ್ನುವಂತಾಗಿದೆ. ಮೊದಲು ತಮ್ಮನ್ನು ತಾವು ಸರಿಪಡಿಸಿಕೊಂಡರೆ ಭಾಷೆಯ ಬೆಳವಣಿಗೆ ತಂತಾನೆ ಆಗುತ್ತದೆ ಎಂಬ ಅರಿವು ನಮ್ಮಲ್ಲಿ ಮೂಡಿದರೆ ಎಷ್ಟು ಚೆನ್ನ? ಬಸವಣ್ಣನವರು ಹೇಳಿದಂತೆ
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ
ಎಂಬದು ನಮ್ಮ ಇಂದಿನ ಪರಿಸ್ಥಿತಿಗೆ ಎಂತಹ ಸುಂದರ ಸಲಹೆಯನ್ನು ನೀಡುತ್ತಿದೆ. ದೊಡ್ಡವರಲ್ಲಿ ನನ್ನದೊಂದು ಹೃತ್ಪೂರ್ವಕ ವಿನಂತಿ ಎಂದರೆ, ದಯಮಾಡಿ ನಿಮಗೆ ಇನ್ನು ಮೇಲಾದರೂ ಸಮಯ ಸಂದರ್ಭವನ್ನು ನೋಡಿಕೊಂಡು, ’ಮಾತು ನುಡಿದರೆ ಹೊಯಿತು’ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ನೀಡಿ, ಇಲ್ಲವಾದಲ್ಲಿ ನಿಮ್ಮ ಬಾಯಿ ಚಪಲಕ್ಕೆ ಇತರರಿಗೆ ತಪ್ಪು ಸಂದೇಶ ನೀಡಿ, ಮೊದಲೇ ಕಲುಕಿದ ನೀರಿನಂತಾಗಿರುವ ಸಾಹಿತ್ಯ ಪ್ರೇಮಿಗಳ, ಕನ್ನಡ ಪ್ರೇಮಿಗಳ, ಕನ್ನಡಿಗರ ಹೃದಯವನ್ನು ಗಬ್ಬೆಬ್ಬಿಸಬೇಡಿ. ಇನ್ನು ಮುಂದೆಯಾದರೂ ವರಕವಿ ಬೇದ್ರೆ ಯವರು ಹೇಳಿದಂತೆ ’ಕನ್ನಡವು ಯಾವಾಗಲೂ ಕನ್ನಡಿಸುತ್ತಿರಲಿ’. ಹಾಗಾದಾಗ ಇಂತಹ ಸಾಹಿತ್ಯ ಸಮ್ಮೇಳನಗಳಿಗೂ ಬೆಲೆ ಬರುತ್ತದಲ್ಲವೆ?
ಪ್ರತಿಕ್ರೀಯೆಯ ಪ್ರತಿಫಲಾಕಾಂಕ್ಷೆಗಳೊಂದಿಗೆ
ರಾಘವೇಂದ್ರ ಗುಡಿ
This article is Published By me In Our Website
http://thesundayindian.com/kn/story/dr-rajkumar-s-l-bhairappa-sarswati-samman-times-of-india-tsikannada-karnataka-raghavendra-gudi/14/1251/
Comments
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
In reply to ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು by makara
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
In reply to ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು by makara
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
In reply to ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು by rasikathe
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
In reply to ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು by makara
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು
In reply to ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು by swara kamath
ಉ: ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು