ಕವಿತೆ: ವಯಸಾಗುತಿದೆ
ಬರಹ
ನನ್ನೊಡನೆ ಇರು ಚೆಲುವೆ, ಜ್ವಾಲೆ ನಂದುತ್ತಿದೆ.
ನನ್ನ ನಾಯಿ ಮುದಿಯಾಗಿದೆ. ನಾನೂ ಅಷ್ಟೆ.
ಬಗುರಿಯಂತೆ ತಿರುಗುತಲಿದ್ದ ಯುವಕ ಈಗ
ಅತ್ತಲಿತ್ತ ಸುಳಿಯಲಾರೆ, ಮೈಯ ಕಾವಿಳಿದು ತಣಿಯುತಿದೆ
ಮಂಚದ ಮೇಲೊರಗಿ ಹಳೆಯ ಕಾವ್ಯದ ಹಾಳೆ ತಿರುಗಿಸುತಲಿರುವೆ
ನನ್ನೆದೆ ಗಡಿಯಾರದ ಮುಳ್ಳು ನಿಮಿಷ ನಿಮಿಷ ಚುಚ್ಚುತ್ತಲಿದೆ
ಹೃದಯ ಹಾರ್ಮೊನಿಯಮ್ಮಿನ ಸ್ವರ ಏರುಪೇರಾಗುತಲಿದೆ
ನಿನ್ನೊಡನೆ ಬೀಚಿಗೆ ಬರಲಾರೆ, ನಿನ್ನೊಡನೆ ಪಾರ್ಕಿನಲ್ಲಿ ತಿರುಗಲಾರೆ
ಕಣಿವೆಗಳಲ್ಲಿ ಸುಳಿಯಲಾರೆ, ಎಲ್ಲೆಂದರಲ್ಲಿ ಅಲೆಯಲಾರೆ,
ಹಟದ ರೋಷದ ಛಲದ ಸೈನ್ಯ ದಿಕ್ಕುಪಾಲಾಗಿ ನಾನೀಗ
ಒಬ್ಬಂಟಿ ಸೇನಾನಿ. ಆದರೂ ನನ್ನೆದೆ ನಿಗಿ ನಿಗಿ ಕೆಂಡವಾಗಿ
ಉರಿದು ಪ್ರಜ್ವಲಿಸಿದ ನೆನಪು, ನೆನಪಿನ ಚೆಲುವು ಮಾಸದಿದೆ.
ಕರುಣೆ ಇರಲಿ, ಚೆಲುವೆ! ಯುವಕನಿಗೋ ನೆಲ ತಿವಿಯುವ ಬಲ
ಧನಿಕನಿಗೋ ತೀರದ ಧನ, ಕೋಮಲೆಯ ಮೈತುಂಬ ಮುಖದ ತುಂಬ
ಗಂಭೀರ ಚೆಲುವು. ವಸಂತ ಪುಷ್ಪಗಳರಳಿದ ಮುಖವ ಹೊತ್ತು
ಎಂಜಿ ರೋಡಿನಲ್ಲಿ ಕೈ ಕೈ ಹಿಡಿದು, ಮೈ ಮೈ ತಾಗಿ ಸುಳಿವ ಯುವ ಸಮೂಹ
ಅಲ್ಲೆ, ಥಳಥಳಿಸುವ ಜಗಮಗಿಸುವ ದೀಪದ ನೆರಳಲ್ಲೆ ಸಿಲಾವರ್ ತಟ್ಟೆ ಹಿಡಿದು
ಕಾಸು ಬೇಡುವ ಭಿಕ್ಷುಕನ ಕಾಣಲಾರದು. ಎಲ್ಲರಿಗೂ ಧಾವಂತ, ಹಿಡಿಯಲಾಗದುದ
ಹಿಡಿದು ತಬ್ಬಿ ಉಬ್ಬುವ ಬಯಕೆ. ಯಶಸ್ಸಿನ ಕವಾಯತು, ಕೊಳ್ಳುವ ರಿವಾಯತು.
ಚೆಲುವೇ, ನನಗಿಷ್ಟು ವಿವೇಕವಿರಲಿ. ವಿವೇಕದೊಡನೆ ಭಾವ ತೀವ್ರವಾಗಿ ಉಳಿಯಲಿ.
ಒಣ ಬೇಸಗೆಯ ಧಗೆಯಲ್ಲಿಯೂ ಮನಸು ಚೆಲುವಿನ ತುತ್ತಿನ ಸವಿಯ ಮರೆಯದಿರಲಿ.
ಅಷ್ಟಾದರೆ ನೋಡು, ಈ ಕಗ್ಗತ್ತಲ ಎದೆಯೂ ಅರಳೀತು ಗುಲಾಬಿಯಂತೆ
[ಇದು ಜಾನ್ ಮೇಸ್‌ಫೀಲ್ಡ್ ಕವಿಯ ಆನ್ ಗ್ರೋಯಿಂಗ್ ಓಲ್ಡ್ ಕವಿತೆ ನನ್ನ ಮನಸ್ಸಿಗೆ ಇಳಿದ ಒಂದು ರೂಪ.]