ಕವಿಶಿಷ್ಯರು
ದಕ್ಷಿಣ ಕನ್ನಡ ಪಂಜದ ಊರಿನವರು
ರಾಮಪ್ಪಯ್ಯ ಶಾಂತಾದುರ್ಗಾ ದಂಪತಿಗಳ ಕುವರರು
ಸಣ್ಣಕಥೆಗಳ ಅದ್ಭುತ ಪ್ರತಿಭಾ ಜನಕರು
ಶಿಶುಸಾಹಿತ್ಯ ನೀರು ಕುಡಿದಷ್ಟೇ ಸುಲಭವೆಂದವರು
ಮನೆಮಾತು ಕೊಂಕಣಿ ತುಳು ಕನ್ನಡ ಆಂಗ್ಲ ಭಾಷೆ ಪರಿಣತರು
ಭವಾನಿಬಾಯಿಯ ಸತಿಯಾಗಿ ಕೈಹಿಡಿದವರು
ಬಂಟವಾಳ ತಮ್ಮ ಕಲಿಕಾ ಕ್ಷೇತ್ರವಾಯಿತು
ಅಧ್ಯಾಪಕ ಹುದ್ದೆ ಅರಸಿ ಬಂದಿತು
‘ಕವಿಶಿಷ್ಯ’ ಕಾವ್ಯನಾಮದಲಿ ಮೆರೆದಿರಂದು
ಶಿಶುಗೀತೆ ಕಥನಕವನ ಮಕ್ಕಳಸಾಹಿತ್ಯ ಬರೆದಿರಂದು
ಐತಿಹಾಸಿಕ ಕಥಾವಳಿ ಪಂಚಕಜ್ಜಾಯ ಸಂಶೋಧನಾ ಗ್ರಂಥ
ತುಳುನಾಡಿನ ಕೋಟಿ-ಚೆನ್ನಯ ವೀರರ ಕಾದಂಬರಿ ವಿಶೇಷ
‘ನಾಗರಹಾವೆ ಹಾವೊಳು ಹೂವೆ’ ಮರೆಯಲು ಸಾಧ್ಯವೇ
‘ಎಲ್ಲಿ ಭೂರಮೆ ದೇವ ಸನ್ನಿಧಿ’ ಕೊಡಗಿನ ವೀರತ್ವದ ಝೇಂಕಾರ
‘ಹುತ್ತರಿ ಹಾಡು’ ಗುಣಕೆ ಮತ್ಸರವಿಲ್ಲವೆಂಬ ತಮ್ಮ ಮನಸ್ಸು
‘ಮೂಡುವನು ರವಿ ಮೂಡುವನು’ ಆಹಾ! ಎಂಥ ಸೊಬಗಿನ ಚಿತ್ರಣ
ಮಕ್ಕಳೊಂದಿಗೆ ಆಡಿ ನಲಿದ ಹೂವಿನಂಥ ಮೃದುತ್ವ
ಬಾಲಸಾಹಿತ್ಯ ಬಾಲಗೀತ ಕಥಾನಕಗಳ ಸೃಷ್ಟಿಯ ತತ್ವ
ತೆಂಕಣ ಗಾಳಿಯಾಟದಿ ಕಡಲ ವೈಭವ ದೃಶ್ಯ
ಗುಡುಗುಡು ಗುಮ್ಮಟ ದೇವರು ಮನದಲ್ಲಿ ರಿಂಗಣಿಸುತಿದೆ
ಶಬ್ದಮಣಿದರ್ಪಣ ಸಂಪಾದಿತ ಕೃತಿಯ ರಚಿಸಿದಿರಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಿರಿ
ಕೊನೆಗಾಲದಲಿ ಕೃಷ್ಣ ಎನದೆ ನಾಲಗೆಯು ‘ಕನ್ನಡ’ ಎನಲೆಂದರಿ
ಬರವಣಿಗೆಯಲಿ ಸತ್ಯ ದೃಶ್ಯಗಳು ಕಣ್ಣಿನೆದುರು ನಲಿದಾಡಬೇಕೆಂದಿರಿ
ಕನ್ನಡಮ್ಮನ ಕೈಂಕರ್ಯ ಕಾಯಾವಾಚಾಮನಸಾ ಗೈಯ್ದಿರಿ
ಮಂಗಳೂರಿನ ಅಗ್ರಗಣ್ಯ ಸಾಹಿತ್ಯ ಕಿರೀಟಿಯಾದಿರಿ
ಕನ್ನಡ ಭಾಷೆಯಲಿ ಪ್ರಾತ:ಸ್ಮರಣೀಯರೆನಿಸಿದಿರಿ
ತಮ್ಮ ಅಗಲಿಕೆ ತುಳುನಾಡಿಗೆ ತುಂಬಲಾರದ ನಷ್ಟವಾಯಿತು
ಹದಿನೆಂಟು ಶಿಶು ಸಾಹಿತ್ಯ ಇಪ್ಪತ್ತೆರಡು ಕಥೆಗಳು
ಹನ್ನೆರಡು ಬಾಲಸಾಹಿತ್ಯ ಕಥೆಗಳು ಹನ್ನೊಂದು ಬಾಲಗೀತೆಗಳ ಜನಕರು
ನವೋದಯ ಸಾಹಿತ್ಯ ಚಳುವಳಿಯಲಿ ಕೃಷಿ ಪರಿಣತರು
ತಮ್ಮ ನೆನಹು ಅಜರಾಮರ ಕೋಟಿ ಕೋಟಿ ಕನ್ನಡಿಗರಿಗೆ
-ರತ್ನಾ ಕೆ ಭಟ್ ತಲಂಜೇರಿ
(‘ಕವಿಶಿಷ್ಯ’ ಪಂಜೆ ಮಂಗೇಶರಾಯರ ಹುಟ್ಟಿದ ದಿನ--೨೨--೦೨--೧೮೭೪, ಆಕರ: ಪಂಜೆಯವರ ಜೀವನ ದಾರಿಗಳಿಂದ)