ಕವಿಸಮಯ
"ಇಂದು ಜನರು ಸಂಗೀತವನ್ನು ನೋಡುತ್ತಾರೆ , ಕೇಳೋದಿಲ್ಲ" ಹೀಗೆ ನೊಂದು ನುಡಿದವರು ಸಂಗೀತ ನಿರ್ದೇಶಕ ಮನ್ನಾ ಡೆ. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂಗೀತದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಮೇಲಿನ ಮಾತನ್ನು ಹೇಳಿದ್ದರು.ಪ್ರಾಚೀನ ಕಲೆ,ಪರಂಪರೆಗಳ ಸುವರ್ಣಯುಗವನ್ನು ವರ್ಣಿಸುತ್ತಾ,ಇಂದಿನ ಅವುಗಳ ಅವಸಾನದ ಬಗ್ಗೆ ಗೊಣಗಾಡುವ ಇನ್ನೊಬ್ಬ 'ಮುತ್ಸದ್ದಿ'ಗಳೆನ್ದುಕೊಂಡು ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೇರೆ ಸುದ್ದಿಗಳನ್ನು ಗಮನಿಸುತ್ತ ಹೋದೆ. ರೇಡಿಯೋದಲ್ಲಿ ಕೇಳಿದ ಕಿಶೋರಿ ಅಮೋನ್ಕರ್ ಅವರ ಗಾಯನವು ಮೇಲಿನ ಮಾತನ್ನು ಎರಡು ವರ್ಷದ ನಂತರ ಮತ್ತೆ ನೆನಪಿಸಿತು. ಅಂದು ಅವರು ರಾಗ 'ಮಿಯನ್ ಕೆ ಮಲ್ಹರ್" ವನ್ನು ಹಾಡಿದ್ದು , ಶಾಸ್ತ್ರೀಯ ಸಂಗೀತದ ಒಂದು ಆಯಾಮವನ್ನು ಪರಿಚಯಮಾಡಿಕೊಟ್ಟಿತು. ವಿಶೇಷವೆಂದರೆ ಈ ರಾಗಕ್ಕೆ ಸಮಾನಾಂತರವಾಗಿ "Largo Moderato" ಎಂಬ ರಾಗವು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲೂ ಇದೆ.
ಸಂಗೀತದ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲ, ಕೆಲವರು ಪ್ರಖ್ಯಾತ ಗಾಯಕರ, ವಾದಕರ ಧ್ವನಿಮುದ್ರಿಕೆಗಳನ್ನು ಕೇಳಿದ್ದೇನೆ.
ರಾಗದ ಪರಿಚಯವಾಗಲಿ, ಸ್ವರಜ್ಞಾನವಾಗಲಿ ಇಲ್ಲ.ಆದರೂ ಅಮೋನ್ಕರ್ ಅವರ ಹಾಡುಗಾರಿಕೆ ನೆನಪಿನಲ್ಲಿ ಉಳಿಯುವ ಆಲಿಕೆಯಾಯಿತು.
ಗಾಯನ ಪ್ರಾರಂಭವಾಗುವ ಮುನ್ನ ರಾಗದ ಪರಿಚಯವನ್ನು ನಿರೂಪಕಿಯು ಮಾಡಿಕೊಟ್ಟರು. ಅವರು ಹೇಳಿದ ರಾಗದಲ್ಲಿನ ಗಾಂಧಾರ, ಮಧ್ಯಮಗಳ ಪ್ರಯೋಗ ಏನೇನೂ ಅರ್ಥವಾಗಲಿಲ್ಲ್ಲ.ಆದರೆ ಆಲಾಪದಲ್ಲಿ ಚಲಿಸುವ ಮೋಡಗಳ ಕಲ್ಪನೆ ಇದೆಯೆಂದೂ, ತಾನದಲ್ಲಿ ಗುಡುಗು-ಮಿಂಚುಗಳ ಕಲ್ಪನೆಯಿದೆಯೆಂದು ಹೇಳಿದರು.ಇಂತಹ ಕಲ್ಪನೆ ಹಾಡಿನಲ್ಲಿ ಹೇಗೆ ಕಲ್ಪಿಸಿಯಾರು ? ಎಂಬ ಕುತೂಹಲ ಉಂಟಾಗಿ, ಮುಂದಿನ ಎಫ್ ಎಂ ಸ್ಟೇಷನ್ನಿಗೆ ಬದಲಾಯಿಸದೆ ಹಾಡನ್ನು ಕೇಳಲು ಆರಂಭಿಸಿದೆ.
ಮಂದಗತಿಯಲ್ಲಿದ್ದ ಆಲಾಪವು ,ಆಲಿಕೆಯನ್ನು ಸ್ವಲ್ಪ ಕಷ್ಟಕರವಾಗೇ ಮಾಡಿತ್ತು. ಆದರೂ ಕೇಳುತ್ತ ಮುಂದುವರಿದಾಗ, ಮಂದಗತಿಯಲ್ಲಿ ಚಲಿಸುವ ಮೇಘಗಳ ಕಲ್ಪನೆ ಮನಸ್ಸಿಗೆ ಬರತೊಡಗಿತು. ಭೂಮಿಯಿಂದ ಎತ್ತರದಲ್ಲಿ ಮೋಡಗಳ ಚಲನೆಯ ಶಾಂತತೆಯನ್ನು ,ಆಲಾಪದ ಶಾಂತತೆಯಲ್ಲಿ ಹಿಡಿದಿಟ್ಟಿದ್ದರು. ಜೊತೆಗೆ ಹಾಡಿನ ನುಡಿಯು, ತನ್ನಿಂದ ದೂರವಾಗಿರುವ ಪ್ರಿಯಕರನ ನೆನಪಿಸಿಕೊಳ್ಳುತ್ತಿರುವ ಹೆಣ್ಣೊಬ್ಬಳ ಚಿತ್ರವನ್ನು ಮೂಡಿಸತೊಡಗಿತು. ಮನೆಯ ಎತ್ತರದ ಅಂತಸ್ತಿನ ಕಿಟಕಿಯಿಂದ ಮೋಡಗಳನ್ನು ಕಂಡೊಡನೆ ಚಲಿಸುವ ಮೋಡದಂತೆ ದೂರವಾಗುತ್ತಿರುವ ಪ್ರಿಯಕರನ ನೆನಪು ಆಲಾಪನೆಯ ನಿಧಾನ ಗತಿಯಿಂದ ,ಏಕತಾನತೆಯಿಂದ, ಚಿತ್ರಿತವಾಗುತ್ತಿತು.
ಬಹಳ ಹೊತ್ತು ಸಾಗಿದ ಆಲಾಪನೆಯಿಂದ ಬೇಸರ ಉಂಟುಮಾಡುವಂತೆ ತಡೆದದ್ದು , ಮೇಲೆ ಕಲ್ಪಿಸಿದ ಚಿತ್ರವೊಂದೇ.ಆಂತೂ ಆಗ ರೇಡಿಯೋ ಟ್ಯೂನ್ ಮಾಡದೇ ಸುಮ್ಮನಿದ್ದೆ.
ಆಲಾಪನೆಯ ಗತಿಯೇರತೊಡಗಿತು, ಆದರೆ ಈ ಗತಿ ಬದಲಾವಣೆ, ಪಾದರಸವೇರಿದನಂತೆ ಕ್ಷಣಮಾತ್ರದಲ್ಲಾಗದೇ,ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರಬಂದು ಮೇಲಕ್ಕೆ ಹರಿಯಲು ಪ್ರಯತ್ನಿಸುತ್ತಿರುವ ಆಕಾಶಗಂಗೆಯಂತೆ ಅಮೋನ್ಕರ್ ರವರ ಧ್ವನಿಯ ಏರಿಳಿತಗಳು, ಪ್ರತಿ ಏರಿಕೆಯಲ್ಲೂ ಹಿಂದಿನ ಮಟ್ಟವನ್ನು ಹಿಂದೆಹಾಕಿ ಇಳಿಕೆಯಲ್ಲಿ ಮತ್ತೆ ಅದೇ ಕೆಳಮಟ್ಟವನ್ನು ತಲುಪುತ್ತಿತ್ತು.ಕಿಟಕಿಯಿಂದ ಹೊರನೋಡುತ್ತಿರುವ ಆ ಹೆಣ್ಣಿನ ಮನಸ್ಸಿನಲ್ಲಿ ವಿವಿಧ ಭಾವನೆಗಳ ಏರಿಳಿತವಾಗಿ, ವಿರಹವು ಮನಸ್ಸನ್ನು ದಾಟಿ ಮೇಲೇಳಲು ಪ್ರಯತ್ನಿಸುವಂತಿತ್ತು.
ತಾನದ ಆರೋಹಣ, ಅವರೋಹಣಗಳು ಆರಂಭವಾಯಿತು,ಆರೋಹಣವು ಮೆಟ್ಟಿಲು-ಮೆಟ್ಟಿಲಾಗಿ ಮೇಲೇರಿ,ಎತ್ತರದಲ್ಲಿ ಮಿಂಚಿನ ಬೆಳಕಂತೆ ಕ್ಷಣಮಾತ್ರ ನಿಂತು ಮರೆಯಾಗಿ, ಅವರೋಹಣವು ಗುಡುಗಿನಂತೆ ಗಂಭೀರ ಧ್ವನಿಯಲ್ಲಿ ಕೆಳಗಿಳಿಯುತ್ತಿತ್ತು.ಆಗಸದ ಮಿಂಚು-ಗುಡುಗುಗಳನ್ನು ಕಂಡ ಕಣ್ಣುಗಳು ಮನಸ್ಸಿನಲ್ಲಿ ವಿರಹದಿಂದ ಉಕ್ಕುವ ದುಃಖ-ಕೋಪಗಳ
ಮಿಂಚು-ಗುಡುಗನ್ನು ಅನುಭವಿಸತೊಡಗಿತು.ಪ್ರತಿ ಆರೋಹಣದಲ್ಲಿನ ಮಿಂಚಿನ ಬೆಳಕು ಹೆಚ್ಚು ಹೊತ್ತು ನಿಲ್ಲತೊಡಗಿತು, ಅಷ್ಟು ಮೇಲೇರಿದ್ದರಿಂದ ಅವರೋಹಣದಲ್ಲಿಳಿಯುವಾಗ
ಗುಡುಗಿನ ಧ್ವನಿಯ ಪ್ರಭಾವ ಪ್ರಖರವಾಗಿತ್ತು.ಪ್ರತಿ ಆರೋಹಣ-ಆವರೋಹಣ ಚಕ್ರದ ನಡುವೆ ಗುಡುಗಿನ ನಂತರದ ಶಾಂತಿ ಇರುತ್ತಿತ್ತು.
ಮಿಂಚು-ಗುಡುಗುಗಳನ್ನು ಆಹ್ವಾನಿಸಿದ್ದ ತಾನವು ಈಗ "ಉಮಡ್, ಉಮಡ್, ಆಯೋ ರೇ" ಎಂದು ಮಳೆಯನ್ನು ಆಹ್ವಾನಿಸತೊಡಗಿತು,ಜೊತೆಗೆ ಅವಳ ಕಣ್ಣುಗಳಲ್ಲಿ ಕಣ್ಣೀರಿನ ಮಳೆಯನ್ನು ತರಿಸಿತು. ಮಳೆ ಬಂದು ,ಚಲಿಸುವ ಮೋಡಗಳೆಲ್ಲ ಕರಗಿಹೋದವು.ಅವಳ ಮುಖದಲ್ಲಿ ಕಣ್ಣೀರು ಬಂದು ವಿರಹದ ಮೋಡವನ್ನು ಕರಗಿಸಿ ಸಮಾಧಾನ ತರಿಸಿತು.
ಈ ಸಮಾಧನದ ಭಾವದೊಂದಿಗೆ ಗಾಯನವು ಮುಕ್ತಾಯವಾಯಿತು.
ಒಂದು ಘಂಟೆ ನನ್ನನ್ನು ಕೇಳುವಂತೆ ಮಾಡಿದ್ದ ಈ ಸಂಗೀತದ ಅನುಭವವನ್ನು ಮರೆಯುವ ಮುನ್ನ ಬರೆದಿಡಬೇಕೆನ್ನಿಸಿತು.ಬಹುಶಃ ಮತ್ತೊಮ್ಮೆ ಇದೆ ಹಾಡನ್ನು ಕೇಳಿದರೂ ಈ ನೆನಪು ಮರುಕಳಿಸದಿದ್ದರೆ ?
ರೀಮಿಕ್ಸ್ ವಿಡಿಯೋಗಳಲ್ಲಿ ಕಟ್ಟುಮಸ್ತಾದ ಆಳೊಬ್ಬನ ಸುತ್ತ ಲಘುವಸ್ತ್ರಖಚಿತವಾಗಿ ನರ್ತಿಸುವ ಸುಂದರಿಯರು ಹಾಡುವ ಹಾಡುಗಳು, ಮಲ್ಹರ್ ನಂತೆ ಮನಸ್ಸಿನಲ್ಲಿ ಚಿತ್ರಗಳನ್ನು
ಕೆತ್ತುತ್ತವೋ? ತಿಳಿಯದು, ಪರದೆಯ ಮೇಲಂತೂ ಕೆತ್ತುತ್ತವೆ.
ಮನಸ್ಸಿನ ಚಿತ್ರಗಳು ಪರದೆಯ ಮೇಲೆ ಕಾಣತೊಡಗಿದಾಗ ಮನ್ನಾಡೆ ಅವರೂ ಸಂಗೀತವನ್ನು ನೋಡಲು ಕಲಿಯುತ್ತಾರೋ ಏನೋ ?