ಕವಿ ಕಂಡಂತೆ

ಕವಿ ಕಂಡಂತೆ

(ಕವನ ಗಜಪ್ರಾಸದಲ್ಲಿ) 

ಹಾಸಿದೆ ಹಸಿರ ರಂಗು ಈ ನೆಲವ ತಬ್ಬಿ

ಸೂಸಿದೆ ಸೊಬಗ ಆ ಬಾನ ತಲುಪುವಂತೆ 

ಮೂಸಿದೆ ಬಾನು ಹಸಿರ ಘಮಮ ದುಂಬಿಯಾಗಿ 

ಕಾಸಿರದ ಕವಿಮನ ಕಂಡ ಸಗ್ಗವಿದು.

 

ಮೋಡದ ಚಿತ್ತಾರ ಶ್ವೇತ ಹಕ್ಕಿ ಗರಿಯಂತೆ

ಕಾಡದಿರದು ರಸಿಕನೆದೆಯ ಭಾವಲಹರಿ

ಆಡಲು ಬಾನ ತುಂಬಾ ತಿಳಿಯ ನೀಲಿ 

ಬೇಡಲು ನಾ, ಆಗಿ ತೀರಿದೆ ನೀಲಿ-ಹಸಿರ ಹಂಚಿಕೆ.

 

ಸಾಲಲಿ ನಿಂತ ಆ ಗಿರಿಗಳ ಬೆರಗ ಸಾಲು

ಸೋಲಲು ಒಲ್ಲದೇ ನಿಂತಿದೆ ಬಿಸಿಲಲಿ ಎದೆಯುಬ್ಬಿಸಿ 

ಕಾಲದಿ ಕುಗ್ಗಿ ಕರಗದ ಆ ಗಿರಿಯ ಸಾಲ ಕಾಣು 

ಬಾಲಕ ನಾನು, ಸೌಂದರ್ಯದಿ ಹುದುಗಿತ್ತು ಪಾಠ.

 

ನೋಟವ ಸೆಳೆದ ಪ್ರಕೃತಿಯ ಪರಿಯಿದು

ಮಾಟವ ಮಾಡಿದೆ ರಂಗೆರಡರ ಉಡುಗೆಯಲಿ

ಕಾಟವ ಕೊಟ್ಟು ಕಾಡದು ಮನುಜನ ಕೃತಕ ಸೃಷ್ಟಿ

ಪೇಟವದು ಭುವಿಗೆ ಪ್ರಕೃತಿಯದೇ ರಮ್ಯ ಪ್ರಭಾವಳಿ.

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಅಂಕೋಲಾ

ಚಿತ್ರ ಕೃಪೆ: ಇಂಟರ್ನೆಟ್ ತಾಣ