ಕಸದ ರಾಶಿಯಿಂದ ಪಾರಾದ ಟೆಡ್ಡಿ ಕರಡಿ

ಕಸದ ರಾಶಿಯಿಂದ ಪಾರಾದ ಟೆಡ್ಡಿ ಕರಡಿ

“ಇಲ್ಲಿನ ಕಸದ ರಾಶಿಯನ್ನು ಒಮ್ಮೆ ದಾಟಿ ಹೋದರೆ ಸಾಕಾಗಿತ್ತು" ಎನ್ನುತ್ತಾ, ಮೂಗು ಮುಚ್ಚಿಕೊಂಡು ಆಕಾಶದಲ್ಲಿ ಮಾಯಾ ಕಿನ್ನರಿ ಹಾರಿ ಹೋಗುತ್ತಿದ್ದಳು. ಆಗ ಅವಳಿಗೆ ಆ ಕಸದ ರಾಶಿಯಿಂದ ಒಂದು ಸದ್ದು ಕೇಳಿಸಿತು - ಯಾರೋ ಅಳುತ್ತಿರುವ ಸದ್ದು.

“ಅಯ್ಯೋ, ಇದೊಂದು ಟೆಡ್ಡಿ ಕರಡಿ ಅಳುವ ಸದ್ದು. ನನ್ನಿಂದ ಏನಾದರೂ ಸಹಾಯ ಮಾಡಲಾದೀತೇ ನೋಡುತ್ತೇನೆ” ಎಂದು ಕಿನ್ನರಿ ಅತ್ತ ಹಾರಿದಳು. ಆಕೆ ಕೆಳಕ್ಕೆ ಹಾರುತ್ತಾ ಅತ್ತಿತ್ತ ನೋಡಿದಳು. ನಿಜಕ್ಕೂ ಅಲ್ಲೊಂದು ಹಳೆಯ ಟೆಡ್ಡಿ ಕರಡಿ ಕುಳಿತಿತ್ತು!ಅದು ಆಲೂಗಡ್ಡೆ ಮತ್ತು ಬಾಳೆಹಣ್ಣಿನ ಸಿಪ್ಪೆ ಇತ್ಯಾದಿ ಕಸದ ರಾಶಿಯ ಮೇಲೆ ಕುಳಿತು ಅಳುತ್ತಿತ್ತು.

ಟೆಡ್ಡಿ ಕರಡಿ ಮಾಯಾ ಕಿನ್ನರಿಗೆ ತನ್ನ ಗೋಳಿನ ಕತೆಯನ್ನೆಲ್ಲ ಹೇಳಿತು, "ನನ್ನ ಒಡತಿ ಆಶಾಳಿಗೆ ಅವಳ ಅಮ್ಮ ಕೋಣೆಯನ್ನು ಸ್ವಚ್ಚ ಮಾಡಲು ಹೇಳಿದಳು. ಆಶಾ ಕರುಣೆತುಂಬಿದ ಹುಡುಗಿ. ಆದರೆ ಅವಳು ವಸ್ತುಗಳನ್ನೆಲ್ಲ ಸಿಕ್ಕಸಿಕ್ಕಲ್ಲಿ ಎಸೆಯುತ್ತಾಳೆ.” ಟೆಡ್ಡಿ ಕರಡಿ ಕಣ್ಣೀರು ಹಾಕುತ್ತಾ ತನ್ನ ಕತೆ ಮುಂದುವರಿಸಿತು, "ಅವಳು ನನ್ನನ್ನೂ ಒಂದು ಹಳೆಯ ಬೆಡ್-ಷೀಟಿನ ಜೊತೆಗೆ ಕಸದಬುಟ್ಟಿಗೆ ಎಸೆದು ಬಿಟ್ಟಳು. ಪಾಪ, ನಾನು ಬೇಡವೆಂದು ಅವಳು ನನ್ನನ್ನು ಎಸೆದದ್ದಲ್ಲ; ಆ ಬೆಡ್-ಷೀಟಿನ ಒಳಗೆ ನಾನು ನಿದ್ದೆ ಮಾಡುತ್ತಿದ್ದೆ ಅನ್ನೋದು ಅವಳಿಗೆ ಗೊತ್ತಾಗಲಿಲ್ಲ. ಅನಂತರ, ದೊಡ್ಡ ಕೊಳಕು ಟ್ರಕ್ಕಿನಲ್ಲಿ ಕೆಲವರು ಬಂದು, ಕಸದಬುಟ್ಟಿಯ ಕಸದೊಂದಿಗೆ ನನ್ನನ್ನೂ ಅವರ ಟ್ರಕ್ಕಿಗೆ ಎಸೆದು, ಇಲ್ಲಿಗೆ ತಂದು ಹಾಕಿದ್ದಾರೆ. ಆದರೆ, ನನಗೆ ಮನೆಗೆ ಹೋಗಬೇಕಾಗಿದೆ.”

“ನೀನು ನಿನ್ನ ಮನೆ ಸೇರಲಿಕ್ಕಾಗಿ ನಾನು ಸಹಾಯ ಮಾಡುತ್ತೇನೆ. ಅದಕ್ಕಾಗಿ ನನಗೆ ನಿನ್ನ ಎರಡು ತೊಟ್ಟು ಕಣ್ಣೀರು ಬೇಕಾಗಿದೆ" ಎನ್ನುತ್ತಾ ಮಾಯಾ ಕಿನ್ನರಿ ಒಂದು ಪುಟ್ಟ ಜಾರಿನ ಮುಚ್ಚಳ ತೆರೆದು, ಟೆಡ್ಡಿ ಕರಡಿಯ ಕೆನ್ನೆಯಿಂದ ಎರಡು ತೊಟ್ಟು ಕಣ್ಣೀರನ್ನು ಅದರಲ್ಲಿ ಬಾಚಿ ತೆಗೆದಳು.

"ನಿನಗೆ ನನ್ನ ಕಣ್ಣೀರು ಯಾಕೆ?" ಎಂದು ಕೇಳಿತು ಟೆಡ್ದಿ ಕರಡಿ. “ಮ್ಯಾಜಿಕ್ ಮಾಡಲಿಕ್ಕಾಗಿ. ಇಲ್ಲೇ ಕಾಯುತ್ತಿರು, ನಾನು ಇಲ್ಲಿಗೆ ವಾಪಾಸು ಬಂದೇ ಬರುತ್ತೇನೆ” ಎಂದು ತನ್ನ ಮ್ಯಾಜಿಕ್ ದಂಡವನ್ನು ಬೀಸಿ, ಮಾಯವಾದಳು ಮಾಯಾ ಕಿನ್ನರಿ.

ಟೆಡ್ಡಿ ಕರಡಿ ಬೆಡ್-ಷೀಟನ್ನು ಹೊದ್ದುಕೊಂಡು ಕಸದ ರಾಶಿಯ ಮೇಲೆ ಕುಳಿತಿತು. ಅಳಬಾರದು ಎಂದುಕೊಂಡರೂ ಅದಕ್ಕೆ ಮತ್ತೆಮತ್ತೆ ಅಳು ಬರುತ್ತಿತ್ತು. ರಾತ್ರಿಯಿಡೀ ಅಲ್ಲಿನ ಚಳಿಯಲ್ಲಿ ಒಬ್ಬಂಟಿಯಾಗಿ ಕುಳಿತ ಅದಕ್ಕೆ ಹೆದರಿಕೆಯಾಯಿತು.

ಅತ್ತ ಮಾಯಾ ಕಿನ್ನರಿ ಆಶಾಳ ಮನೆ ಹುಡುಕುತ್ತಿದ್ದಳು. ಪಕ್ಕದ ಊರಿನ ಹಲವು ಬೀದಿಗಳಲ್ಲಿ ಅವಳು ಹಾರಾಡುತ್ತಾ ಹುಡುಕಿದಳು. ಕೊನೆಗೆ ಒಂದು ಮನೆಯ ತೆರೆದ ಕಿಟಕಿಯಿಂದ ಮಾಯಾ ಕಿನ್ನರಿಗೆ ಅಳುವ ಸದ್ದು ಕೇಳಿಸಿತು. ಅದೇನೆಂದು ಆಕೆ ಕೆಳಕ್ಕೆ ಹಾರಿ ಕಿಟಕಿಯಿಂದ ನೋಡಿದಾಗ, ಹಾಸಿಗೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಅಳುತ್ತಿದ್ದದ್ದು ಕಾಣಿಸಿತು. ಅವಳ ಪಕ್ಕದಲ್ಲಿ ಅವಳ ಅಮ್ಮ ಕುಳಿತಿದ್ದಳು. “ನನಗೆ ನನ್ನ ಟೆಡ್ಡಿ ಕರಡಿ ಬೇಕು” ಎಂದು ಆ ಪುಟ್ಟ ಹುಡುಗಿ ಬಿಕ್ಕುತ್ತಿದ್ದಳು. “ಆಶಾ, ನೀನು ಸಿಕ್ಕಸಿಕ್ಕಲ್ಲಿ ನಿನ್ನ ವಸ್ತುಗಳನ್ನು ಎಸೆಯದಿದ್ದರೆ, ನೀನು ಟೆಡ್ಡಿ ಕರಡಿಯನ್ನು ಕಳೆದುಕೊಳ್ಳುತ್ತಿರಲಿಲ್ಲ” ಎಂದು ಅಮ್ಮ ಸಮಾಧಾನ ಪಡಿಸುತ್ತಿದ್ದಳು.

“ಇವತ್ತು ನಾನು ನನ್ನ ಕೋಣೆಯನ್ನು ಸ್ವಚ್ಚ ಮಾಡಿದ್ದೆನಲ್ಲ" ಎಂದು ಆಶಾ ಪುನಃ ಬಿಕ್ಕಿದಳು. "ಇರಲಿ, ಈಗ ಮಲಗಿಕೋ. ನಾಳೆ ಬೆಳಗ್ಗೆ ನಿನ್ನ ಟೆಡ್ಡಿ ಕರಡಿಯನ್ನು ಹುಡುಕೋಣ" ಎನ್ನುತ್ತಾ ಅಮ್ಮ ಆಶಾಳಿಗೆ ಬ್ಲಾಂಕೆಟ್ ಹೊದೆಸಿ ಕೋಣೆಯಿಂದ ಹೊರ ನಡೆದಳು.

ತಲೆದಿಂಬಿನಲ್ಲಿ ತಲೆಯಿಟ್ಟು ಕಣ್ಣೀರು ಹಾಕುತ್ತಿದ್ದ ಆಶಾಳಿಗೆ ನಿದ್ದೆ ಬರುವ ತನಕ ಮಾಯಾಕಿನ್ನರಿ ಕಾದಳು. ಅನಂತರ ಮಾಯಾ ಕಿನ್ನರಿ ಕಿಟಕಿಯಿಂದ ಕೋಣೆಯೊಳಕ್ಕೆ ಹಾರಿ ಹೋಗಿ, ಆಶಾಳ ಕಣ್ಣು ರೆಪ್ಪೆಗಳಿಗೆ ಟೆಡ್ಡಿ ಕರಡಿಯ ಕಣ್ಣೀರನ್ನು ಸವರಿದಳು. ತಕ್ಷಣವೇ ಮಾಯಾ ಕಿನ್ನರಿಯ ಮ್ಯಾಜಿಕ್ ಕೆಲಸ ಮಾಡಲು ಶುರು ಮಾಡಿತು. ಆಶಾ ಕನಸು ಕಾಣ ತೊಡಗಿದಳು. ಒಂದು ಹಳೆಯ ಟಯರ್, ವಾರ್ತಾಪತ್ರಿಕೆಗಳು, ಟಿನ್ ಕ್ಯಾನುಗಳು, ಕಿತ್ತಳೆ ಮತ್ತು ಬಾಳೆಹಣ್ಣಿನ ಸಿಪ್ಪೆಗಳು, ಒಂದು ಬೆಡ್-ಷೀಟ್ - ಇವೆಲ್ಲ ಅವಳಿಗೆ ಕನಸಿನಲ್ಲಿ ಕಾಣಿಸಿತು. ಓ, ಅದು ನನ್ನದೇ ಬೆಡ್-ಷೀಟ್ ಎಂದು ಅವಳು ಕನವರಿಸುತ್ತಿದ್ದಾಗ, ಆ ಬೆಡ್-ಷೀಟ್ ಸುತ್ತಿಕೊಂಡು ತನ್ನ ಪ್ರೀತಿಯ ಟೆಡ್ಡಿ ಕರಡಿ ಕುಳಿತದ್ದು ಅವಳಿಗೆ ಕನಸಿನಲ್ಲಿ ಕಾಣಿಸಿತು.

ಮರುದಿನ ಬೆಳಗ್ಗೆ ಆಶಾ ನಿದ್ದೆಯಿಂದ ಎದ್ದಾಗ ಅವಳಿಗೆ ರಾತ್ರಿಯ ಕನಸು ನೆನಪಾಯಿತು. ಟೆಡ್ಡಿ ಕರಡಿ ಊರಿನ ಕಸದ ರಾಶಿಯಲ್ಲಿದೆ ಅನ್ನೋದು ಅವಳಿಗೆ ಅರ್ಥವಾಯಿತು. ತಕ್ಷಣವೇ ಅವಳು ಅಡುಗೆ ಕೋಣೆಗೆ ಓಡಿದಳು. ಅಲ್ಲಿ ಉಪಾಹಾರ ತಯಾರಿಸುತ್ತಿದ್ದ ಅಮ್ಮನಿಗೆ ತನ್ನ ಕನಸಿನ ಕತೆಯನ್ನೆಲ್ಲ ಹೇಳಿದಳು.

"ನಾವು ಊರಿನ ಕಸದ ರಾಶಿಗೆ ಹೋಗಲೇ ಬೇಕು; ಟೆಡ್ಡಿ ಕರಡಿಯನ್ನು ರಕ್ಷಿಸಲೇ ಬೇಕು” ಎಂದಳು ಆಶಾ. “ಅದೊಂದು ಕನಸು” ಎಂದು ಅಮ್ಮ ಎಷ್ಟು ಹೇಳಿದರೂ ಕೇಳಲು ಆಶಾ ತಯಾರಿರಲಿಲ್ಲ. ಕೊನೆಗೆ, ಅವರಿಬ್ಬರೂ ಕಸದ ರಾಶಿಯತ್ತ ನಡೆದರು.

ಅಲ್ಲಿ ಒಂದು ದೈತ್ಯ ಜೆಸಿಬಿ ಯಂತ್ರವು ಕಸವನ್ನು ಎತ್ತಿಎತ್ತಿ ಕ್ರಶರಿಗೆ ಹಾಕುತ್ತಿತ್ತು. ಇನ್ನೊಮ್ಮೆ ಅದು ತನ್ನ ದೊಡ್ಡ ತಟ್ಟೆಯಲ್ಲಿ ಕಸವನ್ನು ಎತ್ತಿದಾಗ, ಆ ತಟ್ಟೆಯ ಅಂಚಿನಲ್ಲಿ ನೇತಾಡುತ್ತಿದ್ದ ಟೆಡ್ಡಿ ಕರಡಿಯನ್ನು ಆಶಾ ಕಂಡಳು.

“ಅಮ್ಮಾ, ಅಲ್ಲಿದೆ ನನ್ನ ಟೆಡ್ಡಿ ಕರಡಿ” ಎಂದು ಅದನ್ನು ತೋರಿಸುತ್ತಾ ಚೀರಿದಳು ಆಶಾ. “ಅದನ್ನೀಗ ಜಜ್ಜಿ ಹಾಕುತ್ತಾರೆ. ಹೇಗಾದರೂ ಅದನ್ನು ಉಳಿಸು” ಎಂದು ಆಶಾ ಅಮ್ಮನನ್ನು ಬೇಡಿಕೊಂಡಳು. ಆಶಾಳ ಅಮ್ಮ ಜೆಸಿಬಿ ಯಂತ್ರದ ಹತ್ತಿರಕ್ಕೆ ಕೈಗಳನ್ನು ಮೇಲೆತ್ತಿ ಬೀಸುತ್ತಾ ಓಡಿದಳು. ಆ ಯಂತ್ರದ ಚಾಲಕ ಯಂತ್ರವನ್ನು ನಿಲ್ಲಿಸಿದ.

ಅಂತೂ ಸರಿಯಾದ ಸಮಯದಲ್ಲಿ ಅಲ್ಲಿಗೆ ಬಂದ ಆಶಾ ಮತ್ತು ಅವಳ ಅಮ್ಮ ಟೆಡ್ಡಿ ಕರಡಿಯನ್ನು ರಕ್ಷಿಸಿದರು. ಅದನ್ನು ಅಪ್ಪಿಕೊಂಡು ಆಶಾ ಪುನಃ ಕಣ್ಣೀರು ಹಾಕಿದಳು - ಇದು ಸಂತೋಷದ ಕಣ್ಣೀರು. ಮಾಯಾ ಕಿನ್ನರಿ ಆಕಾಶದಲ್ಲಿ ಹಾರುತ್ತಾ ಇದನ್ನೆಲ್ಲ ನೋಡುತ್ತಾ ಮುಗುಳ್ನಕ್ಕಳು. ಅವತ್ತಿನಿಂದ ಆ ಊರಿನಲ್ಲಿ ಅತ್ಯಂತ ಸ್ವಚ್ಚವಾದ ಕೋಣೆ ಆಶಾಳ ಕೋಣೆ!

ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ