ಕಸಬ್ ತಪ್ಪಿತಸ್ಥ ಅಲ್ಲ

ಕಸಬ್ ತಪ್ಪಿತಸ್ಥ ಅಲ್ಲ

Comments

ಬರಹ

ಇಂದು ನರಹಂತಕ ಕಸಬನಿಗೆ ನಮ್ಮ ನ್ಯಾಯಾಲಯ ಒಂದು ಗುಟ್ಟನ್ನು ಹೇಳಿತು. ವಿಶ್ವವೆ ಬೆರಗಾಗಿ, ಭಯಗ್ರಸ್ಥವಾಗಿ ನೋಡಿದ ನರಹತ್ಯೆ ಯ ರೂವಾರಿ ನೀನು. ಅಂದರೆ ಈ ಮಾರಣಹೋಮಕ್ಕೆ ನೀನು ತಪ್ಪಿತಸ್ಥ ಎಂದು. ಸಾಗರದ ಅಲೆಗಳ ಮೇಲಿಂದ ತೇಲಿ ಬಂದ ಪಾಕಿ ಕಟುಕರ ದಂಡು ಪ್ರಶಾಂತ ನಿದ್ದೆಯ ನಿರೀಕ್ಷೆಯಲ್ಲಿದ್ದ  ಮುಂಬೈ ನಗರವನ್ನು ತಮ್ಮ ಕ್ರೌರ್ಯದಿಂದ ರೌದ್ರವಾಗಿಸಿ ರಾತ್ರಿಯಿಡೀ ರಕ್ತ ಒರೆಸುವ ಕೆಲಸಕ್ಕೆ ಹಚ್ಚಿತು. ಬಂದವರು ಪಾಕಿಸ್ತಾನದಿಂದ ಎಂದು ಮನವರಿಕೆ ಆದ ಕೂಡಲೇ ಪಾಕಿಗಳ ನಿದ್ದೆಗೆಡಿಸುವುದನ್ನು ಬಿಟ್ಟು ನಾವು ಮಾಡಿದ್ದು ಪಾಕಿಗಳು ಕೇಳಿದಂತೆ ಅವರಿಗೆ ದಾಖಲೆಗಳನ್ನ ರವಾನಿಸಿ ಈ ಕಟುಕನಿಗೆ ನೇಣಿನ ದಾರಿ ತೋರಿಸುವುದಕ್ಕೆ ಸಮಯ ತೆಗೆದುಕೊಂಡಿದ್ದು ನಾವು ಮಾಡಿದ ತಪ್ಪು. ಪಾಕಿಸ್ತಾನದಿಂದ ನಮಗೆ ಎಂದೂ ನ್ಯಾಯ ಸಿಕ್ಕಿಲ್ಲ ಅಂತ ಇನ್ನು ಆ ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದು ಹೇಳಿದರೂ ನಾವು ಒಪ್ಪೋಲ್ಲ. ಇದಕ್ಕೆ ನಾವೇ ತಪ್ಪಿತಸ್ಥರು.


ಕಸಬ್ನಂಥವರು ಇಷ್ಟು ಲೀಲಾಜಾಲವಾಗಿ, ರಾಜಾರೋಷವಾಗಿ ನಮ್ಮ ಮೇಲೆ ಆಕ್ರಮಣ ಮಾಡಬೇಕೆಂದರೆ ವ್ಯವಸ್ಥೆಯಲ್ಲೇ ಇದೆ ಎಡವಟ್ಟು. ನಮಗೆ ಸಿನಿಮಾ ಡ್ರಾಮ ನೋಡುವ ಹುಚ್ಚು ಬಹಳ ಎಂದು ಅರಿತುಕೊಂಡ  ಅಮೇರಿಕಾ - ಪಾಕಿಸ್ಥಾನ ಇವೆರಡೂ ಸೇರಿ ಕೊಂಡು ಚೆನ್ನಾಗಿಯೇ ತೋರಿಸಿದರು ಡ್ರಾಮಾವನ್ನು. ನಾನು ಹೊಡೆದಂತೆ ಮಾಡುತ್ತೇನೆ, ನೀನು ಅಳುವಂತೆ  ಮಾಡು, ಈ ಮಧ್ಯೆ ಭಾರತೀಯರು ಪರಸ್ಪರ ಕಿತ್ತಾಡಿಕೊಳ್ಳಲು ಯಾವುದಾದರೂ ಒಂದು ವಿವಾದ, ತಗಾದೆ ತೆಗೆದು ಈ ರಕ್ತದೋಕುಳಿಯನ್ನು ಮರೆಯುತ್ತಾರೆ. ಇದು ಪಾಕಿಸ್ತಾನ, ಅಮೆರಿಕೆಯ ಸ್ಕ್ರಿಪ್ಟು. ಈ ಸ್ಕ್ರಿಪ್ಟ್ಟಿಗೆ ನಾವು ನಟರು. ಇನ್ನಾದರೂ ನಾವು ಎಚ್ಚತ್ತುಕೊಳ್ಳಬೇಕು. ಬದಲಾಗುತ್ತಿರುವ ಆಧುನಿಕ ವಿಶ್ವದಲ್ಲಿ ನಯವಂತಿಕೆ ಎನ್ನುವುದು ಪ್ರಾಚೀನ ನಡವಳಿಕೆ. ಶತ್ರು ಕೆನ್ನೆಗೆ ಬಾರಿಸಿದರೆ ಊದಿದ ಕೆನ್ನೆಗೆ ಮಲಾಮನ್ನು ಸವರುತ್ತಾ ಕೂರುವುದಲ್ಲ, ಅದಕ್ಕೆ ಬೇಕಾದ ಮದ್ದನ್ನು ಶತ್ರುವಿಗೆ ಅತಿ ಶೀಘ್ರದಲ್ಲೇ ಅರೆಯುವುದು. ಈ ವಿದ್ಯೆ ನಾವು ಆದಷ್ಟು ಬೇಗ ಕರಗತ ಮಾಡಿಕೊಳ್ಳದಿದ್ದರೆ ಕೊಲೆಗಡುಕರನ್ನು ಕರೆದು ಗುಟ್ಟನ್ನು ಹೇಳುತ್ತಾ ಕೂರಬೇಕಾಗುತ್ತದೆ.         

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet