ಕಸಿ ಕಟ್ಟುವುದು ಅಷ್ಟೇನೂ ಕಷ್ಟದ ಕೆಲಸವಲ್ಲ!

ಕಸಿ ಕಟ್ಟುವುದು ಅಷ್ಟೇನೂ ಕಷ್ಟದ ಕೆಲಸವಲ್ಲ!

ಕಸಿ ವಿಧಾನಗಳಲ್ಲಿ ಬೇರೆ ಬೇರೆ ಕ್ರಮಗಳಿದ್ದರೂ ಈಗ ಎಲ್ಲಕ್ಕಿಂತ ಹೆಚ್ಚಾಗಿ ಚಾಲನೆಯಲ್ಲಿರುವ ಕಸಿ ವಿಧಾನ ಬಡ್ಡಿಂಗ್. ಇದನ್ನು ಕಣ್ಣು ಕಸಿ ಅಥವಾ ಮೊಗ್ಗು ಕಸಿ ಎಂದು ಕರೆಯುತ್ತಾರೆ. ಕಣ್ಣು ಕಸಿ ಮಾಡುವುದು ಸುಲಭ. ಸಸ್ಯಗಳಲ್ಲಿ  ಚಿಗುರು ಮೂಡುವ ಭಾಗಕ್ಕೆ ಮೊಗ್ಗು ಎಂದು ಹೆಸರು. ಈ ಮೊಗ್ಗನ್ನು ತೆಗೆದು ಸ್ವಜಾತಿಯ ಸಸಿಯ ಭಾಗಕ್ಕೆ ವ್ಯವಸ್ಥಿತವಾಗಿ ಅಂಟಿಸಿ ವಂಶೋನ್ನತಿಗೊಳಿಸುವುದಕ್ಕೆ ಮೊಗ್ಗು ಕಸಿ ಎನ್ನುತ್ತಾರೆ. ರಬ್ಬರ್, ಮಾವು, ಗುಲಾಬಿ, ದ್ರಾಕ್ಷಿ, ಮೂಸಂಬಿ, ನಿಂಬೆ, ಜಾಯೀಕಾಯಿ, ಹೀಗೆ ಸಾಮಾನ್ಯವಾಗಿ ಎಲ್ಲವನ್ನೂ ಈಗ ಮೊಗ್ಗು ಕಸಿಯಿಂದಲೇ ಸಸ್ಯಾಭಿವೃದ್ಧಿ ಮಾಡುತ್ತಾರೆ. ತೋಟಗಾರಿಕೆಯಲ್ಲಿ ಸಸ್ಯಗಳ ತಳಿ ಉನ್ನತೀಕರಣಕ್ಕೆ ಈ ಕಸಿ ವಿಧಾನ ಭಾರೀ ಕೊಡುಗೆ ನೀಡಿದೆ ಎನ್ನಬಹುದು. ಈ ವಿಧಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಕಸಿ ಮಾಡಿಕೊಳ್ಳಬಹುದು. ಯಶಸ್ಸೂ ಜಾಸ್ತಿ. ಸಮಯವೂ ಕಡಿಮೆ. ಸಾಮಾನ್ಯವಾಗಿ ಎಲ್ಲಾ ಸಸ್ಯಗಳಲ್ಲೂ ಎಲೆ ಕಂಕುಳಲ್ಲಿ ಮೊಗ್ಗು ಇರುತ್ತದೆ. ಅದು ಅನುಕೂಲ ಸ್ಥಿತಿಯಲ್ಲಿದ್ದಾಗ ಮೊಳಕೆಯೊಡೆದು ಚಿಗುರಿಕೊಳ್ಳುತ್ತದೆ. ಸಸ್ಯವೊಂದರ ಗೆಲ್ಲನ್ನು ಬಾಗಿಸಿ ಎಳೆದು ಕಟ್ಟಿದರೆ ಕಮಾನಿನಂತಾದ ಭಾಗದಲ್ಲಿ ಕೆಲವೇ ಸಮಯದಲ್ಲಿ ಸುಪ್ತಾವಸ್ಥ್ತೆಯಲ್ಲಿದ್ದ ಮೊಗ್ಗುಗಳು ಚಿಗುರೊಡೆಯಲು ಪ್ರಾರಂಭಿಸುತ್ತದೆ. ಹಾಗೆಂದು ಕಸಿಗೆ ಎಲ್ಲಾ ಮೊಗ್ಗುಗಳೂ ಸೂಕ್ತವಲ್ಲ.

ಕಸಿ ವಿಧಾನ:  ಸಾಮಾನ್ಯವಾಗಿ ಮೊಗ್ಗು ಕಸಿಗೆ ಸಾಮಾನ್ಯ ಬೆಳೆದ ತೊಗಟೆಯನ್ನು ಮತ್ತು ತೀರಾ ಎಲೆ ತೊಗಟೆಯನ್ನು ಬಳಕೆ ಮಾಡುತ್ತಾರೆ. ಇದನ್ನು ಬ್ರೌನ್‌ಬಡ್ ಮತ್ತು ಗ್ರೀನ್‌ಬಡ್ ಎಂಬುದಾಗಿ ಕರೆಯುತ್ತಾರೆ. ಈಗ ಹೆಚ್ಚು ಚಾಲ್ತಿಯಲ್ಲಿರುವುದು ಗ್ರೀನ್‌ಬಡ್. ಅಂದರೆ ತೊಗಟೆಯು ಹಸುರು ಬಣದಲ್ಲಿ ಇರುವಾಗಲೇ ಅದನ್ನು ತೆಗೆದು ತಾಯಿ ಗಿಡಕ್ಕೆ (ರೂಟ್‌ಸ್ಟಾಕ್) ಅಂಟಿಸುವುದು.

ಸುಮಾರು ೧ ತಿಂಗಳು ಬೆಳೆದ ಎಳೆ ಗೆಲ್ಲಿನ ಎಲೆ ಕಂಕುಳನ್ನು ಚಿತ್ರದಲ್ಲಿ ತೋರಿಸಿರುವಂತೆ ಕತ್ತರಿಸಿ ತೆಗೆಯಿರಿ. (ಚಿತ್ರ ೨-೪) ತಕ್ಷಣ ಅದನ್ನು ಸಿದ್ದಪಡಿಸಿಟ್ಟುಕೊಂಡ ರೂಟ್‌ಸ್ಟಾಕ್ ಸಸಿಯಲ್ಲಿ ನೀವು ತೆಗೆದ ತೊಗಟೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶದಷ್ಟು ತೊಗಟೆಯನ್ನು ತೆಗೆದು (ಚಿತ್ರ ೫-೭) ಆ ಭಾಗಕ್ಕೆ ಇದನ್ನು ಇಟ್ಟು ಪಾಲಿತೀನ್ ಕಸಿ ಪಟ್ಟಿಯಿಂದ ಪೂರ್ತಿಯಾಗಿ ಗಾಳಿಯಾಡದಂತೆ ಬಿಗಿದು ಕಟ್ಟಿರಿ. (ಚಿತ್ರ ೮) ಹಾಗೇ ಅಲ್ಲೇ ಅದನ್ನು  ಬಿಡಿ. ಸುಮಾರು ಒಂದು ತಿಂಗಳಲ್ಲಿ ಎರಡೂ ತೊಗಟೆ ಇಟ್ಟು ಕಟ್ಟಿದ ಭಾಗದಲ್ಲಿ ಉಳಿದ ಸ್ಥಳಾವಕಾಶ ಕೂಡಿರುವುದು ಮತ್ತು ಹೊಸದಾಗಿ ಅಂಟಿಸಿದ ಭಾಗ ತನ್ನ ಬಣ್ಣ ಕಳೆದುಕೊಳ್ಳದೇ ಆರೋಗ್ಯವಾಗಿರುವುದು ಕಂಡು ಬಂದಾಗ (ಚಿತ್ರ ೯) ಕಸಿ ಮಾಡಿದ ಭಾಗಕ್ಕೆ ಗಾಳಿಯಾಡದಂತೆ ಕಟ್ಟಿದ ಪಾಲಿಥೀನ್ ಪಟ್ಟಿಯನ್ನು ಮೊಗ್ಗು ಭಾಗ ಇರುವಲ್ಲಿ ತೆರೆಯುವಂತೆ ಸಡಿಲಮಾಡಿ. ನಂತರ  ಒಂದು ವಾರದಲ್ಲಿ ಪೂರ್ತಿ ಬಿಚ್ಚಬಹುದು. ಕೆಲವೇ ದಿನಗಳಲ್ಲಿ ಆ ಭಾಗದಲ್ಲಿ ಹೊಸ ಚಿಗುರು ಮೊಳೆಯುತ್ತದೆ. ಇದು ಸುಮಾರು ೧/೨ ಅಡಿಯಷ್ಟು ಬೆಳೆದ ತರುವಾಯ ಮೂಲ ಸಸಿಯ (ರೂಟ್ ಸ್ಟಾಕ್) ತುದಿ ಭಾಗವನ್ನು ಕಸಿ ಮಾಡಿದ ಭಾಗದಿಂದ ಮೇಲೆ ಜಾಗರೂಕತೆಯಲ್ಲಿ ಸಿಗಿಯದಂತೆ ತುಂಡು ಮಾಡಿ. ಆಗ ಅದು ಹೊಸ ತಲೆಮಾರಿನ ಸಸ್ಯವಾಗುತ್ತದೆ.

ಇದನ್ನು ಎಲ್ಲಿ ಬೇರು ಸಸ್ಯ ಇದೆಯೋ ಅಲ್ಲೇ (ಇನ್ ಸಿಟು) ಮಾಡಿಕೊಳ್ಳಬಹುದು. ಒಂದು ಗಿಡದಲ್ಲಿ ಬೆರೆ ಬೇರೆ ಗುಣದ ಹಣ್ಣುಗಳನ್ನು ಬೇರೆ ಬೆರೆ ಸಸ್ಯದ ಕಣ್ಣನ್ನು ತಂದು ಕಸಿ ಮಾಡಿ ಪಡೆಯಬಹುದು. ರಬ್ಬರ್ ತೋಟ ಮಾಡುವವರು ರಬ್ಬರಿನ ಬೀಜಗಳನ್ನು ನೆಡುವ ಜಾಗದಲ್ಲೇ ನಿರ್ದಿಷ್ಟ ಅಂತರದಲ್ಲಿ ಬಿತ್ತಿ ಒಂದು ವರ್ಷದ ಸಸಿಯಾದ ಮೇಲೆ ಅದಕ್ಕೆ ಬೇಕಾದ ಕ್ಲೋನಿನ ಮೊಳಕೆ ತೊಗಟೆಯನ್ನು ಅಂಟಿಸಿ ಬಡ್ಡಿಂಗ್‌ ಮಾಡಿಕೊಳ್ಳಬಹುದು. ಇಂದು ಪ್ರತೀಯೊಂದೂ ತೋಟಗಾರಿಕಾ ಬೆಳೆಗಳಲ್ಲೂ ಕಣ್ಣು ಕಸಿಯೆ ಅಂತಿಮವಾಗಿದ್ದು ಮಾಡುವುದಕ್ಕೆ ಯಾವುದೇ ನೈಪುಣ್ಯದ ಅಗತ್ಯ ಇರುವುದಿಲ್ಲ. ಮುಖ್ಯವಾಗಿ ಕಸಿಗೆ ಬಳಸುವ ಕಣ್ಣನ್ನು ಆಯ್ಕೆ ಮಾಡುವುದೊಂದೇ ಇದರಲ್ಲಿ ಇರುವ ಜಟಿಲತೆ. ಎಲ್ಲಾ ಕಣ್ಣುಗಳೂ ಹೊಂದಿಕೆಯಾಗದು. ಕಣ್ಣು  ಕಸಿ ಕಡ್ಡಿಯಿಂದ ಪ್ರತ್ಯೇಕಿಸಿದಾಗ ಅದರ ಎಲೆ ಮೂಡಿದ ಭಾಗದಲ್ಲಿ ಅಕ್ಕಿಯಂಥಃ ರಚನೆ(ಭ್ರೂಣ)ಇರುತ್ತದೆ. ಇದು ಇಲ್ಲದ ಕಣ್ಣು ಜೀವ ಪಡೆದುಕೊಳ್ಳುವುದಿಲ್ಲ.

ತೀರಾ ಎಳೆಯದಾದ ಗುಲಾಬಿ ಇತ್ಯಾದಿ ಸಸಿಗಳಿಗೆ ಕಣ್ಣು ಕಸಿ ಮಾಡುವಾಗ, ಕಸಿ ಮಾಡುವ ರೂಟ್ ಸ್ಟಾಕ್‌ಗೆ ‘V’ ಆಕಾರದಲ್ಲಿ ತೊಗಟೆಗೆ ಗಚ್ಚು ಹಾಕಿ ಅದನ್ನು ತೆರೆದು ಆ ಭಾಗದೊಳಗೆ ಆಯ್ಕೆ ಮಾಡಿದ ಕಣ್ಣು ತೊಗಟೆಯನ್ನು ತುರುಕಿ ಪಾಲಿಥೀನ್ ಕಸಿ ಪಟ್ಟಿಯಲ್ಲಿ ಕಟ್ಟಲಾಗುತ್ತದೆ. ಸುಲಭದಲ್ಲಿ ತೊಗಟೆ ಬಿಡಿಸಿಕೊಳ್ಳುವ ಸಸ್ಯಗಳಿಗೆ ಇದು ಉತ್ತಮ. ಹೆಚ್ಚು ಚಳಿ ಇಲ್ಲದ ಸಮಯದಲ್ಲಿ ಕಸಿ ಕೂಡುವಿಕೆ ಪ್ರಮಾಣ ಜಾಸ್ತಿ.  

ಮಾಹಿತಿ ಮತ್ತು ಚಿತ್ರಗಳು :ರಾಧಾಕೃಷ್ಣ  ಹೊಳ್ಳ.