ಕಾಂಗ್ರೆಸ್ಸಿನ ಪಾದಯಾತ್ರೆ ಮುಗಿಯಿತು....ನಂತರ?

ಕಾಂಗ್ರೆಸ್ಸಿನ ಪಾದಯಾತ್ರೆ ಮುಗಿಯಿತು....ನಂತರ?

ಬರಹ

ಕಾಂಗ್ರೆಸ್ಸಿನ ಪಾದಯಾತ್ರೆ ಯಶಸ್ವಿಯೇ?

ಅಂತೂ ಕಾಂಗ್ರೆಸ್ಸಿನ ಪಾದಯಾತ್ರೆ ಮುಗಿದಿದೆ. ಇದೊಂದು ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಏರ್ಪಟ್ಟ ಕಾರ್ಯಕ್ರಮ. ಹಾಗೆ ನೋಡಿದರೆ ಕಾಂಗ್ರೆಸ್ಸಿಗೆ ಈ ಗಣಿಗಾರಿಕೆ ನಿಜವಾಗಿ ಗೊತ್ತಾಗಿದ್ದೇ ಈಗ ಸ್ವಲ್ಪ ದಿನಗಳ ಕೆಳಗೆ. ಕಾರವಾರದ ಬೇಲೀಕೇರಿ ಬಂದರಿನಲ್ಲಿ ನಡೆದ ಘಟನೆ ಮತ್ತು ಅದಕ್ಕೆ ಮನನೊಂದು ಲೋಕಾಯುಕ್ತರು ಸಲ್ಲಿಸಿದ ರಾಜಿನಾಮೆಯ ನಂತರ ಏರ್ಪಟ್ಟ ಸನ್ನಿವೇಶ. ನಮ್ಮ ಪುಣ್ಯಕ್ಕೆ ಶ್ರೀ. ಸಂತೋಷ್ ಹೆಗ್ಡೆಯವರು ಇಲ್ಲೂ ಚಾರಿತ್ರಿಕ ಕೆಲಸ ಮಾಡಿಬಿಟ್ಟರು. ಇಡೀ ರಾಜ್ಯ ಅವರಿಗೆ ಸ್ಪಂದಿಸಿದ್ದನ್ನು ಕಂಡು ಸ್ಪೂರ್ತಿಗೊಂಡ ಕಾಂಗ್ರೆಸ್ ತನ್ನ ಜಡ್ಡುಗಟ್ಟಿದ ಪರಿಸ್ಥಿತಿಯನ್ನು ಮೀರಿ ತನ್ನ ಎಂದಿನ ಸಾಮರ್ಥ್ಯವನ್ನೂ ಮೀರಿ ಈ ಅಕ್ರಮ ಗಣಿಗಾರಿಕೆಯನ್ನು ತನ್ನ ಎದೆಯಮೇಲೆ ಇಟ್ಟುಕೊಂಡಿತು. ಶ್ರೀಮಾನ್ ದೇವೇಗೌಡರ ಜನತಾದಳವೂ ಇದಕ್ಕೆ ಕೈಜೋಡೀಸಿತು. ಇವರೆಲ್ಲಾ ಎಷ್ಟೇ ಗಲಾಟೆ ಮಾಡಿದರೂ, ರಾತ್ರಿಗಳನ್ನು ವಿಧಾನಸೌಧದಲ್ಲಿ ಕಳೆದರೂ ನಿಜವಾಗಿ ಇವರೆಲ್ಲ ಈ ಗಣಿಗಾರಿಕೆಯನ್ನು ಮತ್ತು ಇದರಿಂದಾಗುವ ನೈಸರ್ಗೀಕ ಸಂಪತ್ತಿನ ಲೂಟಿಯನ್ನೂ ಕಂಡು ಮನನೊಂದಿದ್ದಾರೆಂದು ನಮಗೆ ಅನ್ನಿಸಲಿಲ್ಲ. ಸೋಮಾರಿ ರಾಜಕಾರಣಿಗಳಿಗೆ ಸುದ್ದಿಯಾಗಲು ಇದೊಂದು ನೆಪವಿರಬಹುದು ಎಂಬಂತೆ ತಿನ್ನುತ್ತಾ, ಹಾಡುತ್ತಾ ಇದ್ದ ಇವರನ್ನು ಟೀವಿಯಲ್ಲಿ ನೋಡುತ್ತಿದ್ದ ನಮಗೆ ಅನ್ನಿಸಿದ್ದರಲ್ಲಿ ಅತಿಶಯೋಕ್ತಿಯೇನಿಲ್ಲ.

ಹೇಗೂ ತಪ್ಪನ್ನು ಮಾಡಿದ ಸರ್ಕಾರ ಹಾಗೆಂದೇ ಸದನದಲ್ಲೇ ಹೇಳಿಬಿಟ್ಟಿದೆ. ಇದು ಮುಖ್ಯಮಂತ್ರಿಗಳ ಹೇಳಿಕೆಯೂ ಆಗಿದೆ. ಇನ್ನೇನು ಹೆಚ್ಚಿನ ಶ್ರಮ ಬೇಕಿಲ್ಲ. ಸ್ವಲ್ಪ ಬೆವರಿಳಿಸಿದರೆ ಸಾಕು ಈ ಸರ್ಕಾರವನ್ನು ಇಕ್ಕಟ್ಟಿನಲ್ಲಿ ದೂಡಬಹುದು ಎಂಬ ಸುಲಭಮಾರ್ಗವನ್ನು ನಮ್ಮ ವಿರೋಧಿ ನಾಯಕರು ಅನುಸರಿಸಿದ್ದರಲ್ಲಿ ತಪ್ಪೇನಿಲ್ಲ.  ಆದರೆ ತಿಂದು - ಕುಡಿದು ದೇಹವನ್ನು ಉಬ್ಬಿಸಿಕೊಂಡು ಅನೇಕ ರೋಗಗಳಿಂದ ಕೂಡಿದ, ಹಣವನ್ನು ಮಾಡುವ ಒಂದೇ ಯೋಚನೆಯಲ್ಲಿ ಮೆದುಲನ್ನು ಸವೆಸಿಕೊಂಡ, ಜನರಿಂದ ಆಯ್ಕೆಗೊಳ್ಳಲು ಓಟ್ ಬ್ಯಾಂಕ್ ರಾಜಕಾರಣ ಮಾಡುವುದೊಂದೇ ಮಾರ್ಗವೆಂದು ನಂಬಿದ ರಾಜಕಾರಣಿಗಳು ಹೀಗೆ ರಾಜ್ಯದ ಸಂಪತ್ತಿನ ರಕ್ಷಣೆಯನ್ನು ಕುರಿತು ತೋರುತ್ತಿದ್ದ ಅತೀವ ಕಾಳಜಿಯನ್ನು ನಾವು ಅನುಮಾನದಿಂದಲೇ ನೋಡಿದ್ದರಲ್ಲಿ ಏನು ತಪ್ಪಿದೆ?

ಇಲ್ಲಿ ಏರ್ಪಟ್ಟ ಎಲ್ಲ ಸನ್ನಿವೇಶಗಳೂ ಅದಾಗಿಯೇ ಏರ್ಪಟ್ಟವುಗಳು. ಇಲ್ಲಿ ಯಾವರೀತಿಯ ಚಿಂತನೆ ಅಥವ ಮಂಥನಗಳು ನಡೆದಿಲ್ಲ. ಕೇಂದ್ರ ಸರ್ಕಾರ ಕೂಡ ಕಾದುನೋಡಿ ಕ್ರಮ ಕೈಗೊಳ್ಳುವ ಉಪಾಯದಲ್ಲಿದೆ. ಹೇಗೂ ರಾಜ್ಯದ ಬಿ.ಜೆ.ಪಿ. ತನ್ನ ನೈತಿಕತೆಯಲ್ಲಿ ಅಧಮ ಸ್ಥಿತಿಯನ್ನು ದಿನೇದಿನೇ ತಲುಪುತ್ತಿದೆ. ರಾಜ್ಯದ ನಿಜವಾದ ಮುಖ್ಯಮಂತ್ರಿ ಗಣಿದೊರೆಗಳೇ ಆಗಿಬಿಟ್ಟಿದ್ದಾರೆ. ನಾಳೆ ಸುಶ್ಮಾ ಸ್ವರಾಜ್ ಅವರನ್ನು ಪ್ರಧಾನಿ ಮಾಡಲು ಈಗಾಗಲೇ ಸಾವಿರಾರು ಕೋಟಿಹಣವನ್ನು ತೆಗೆದಿಟ್ಟಿದ್ದಾರೆಂಬ ಸುದ್ದಿಯೂ ಇದೆ. ಈ ನವ ಕೋಟ್ಯಾಧೀಶರಿಗೆ ತಮ್ಮ ಹಣವನ್ನು ಹಳ್ಳಿಗಳ ಕೊನೆಯ ಮತದಾರರಿಗೆ ತಲುಪಿಸಲು ಒಂದು ರಾಜಕೀಯ ಪಕ್ಷಬೇಕು. ತಮ್ಮ ಅಂಕೆಗೆ ಒಳಪಡುವ ಸರ್ಕಾರ ಮತ್ತು ಈಮೂಲಕ ತಮ್ಮ ಸಾಮ್ರಾಜ್ಯದ ಭದ್ರತೆ ಬೇಕು. ಇಲ್ಲಿ ಈ ಗಣಿ ಮಾಲೀಕರು ಮಾಡುವ ಪ್ರತಿಯೊಂದೂ ಕ್ರಿಯೆಗಳೂ ಅದನ್ನು ಆಧರಿಸಿದ ಸರ್ಕಾರ ಅನುಸರಿಸಿ ತಪ್ಪನ್ನು ಮಾಡುವಂತಿರುವಾಗ ವಿರೋಧಪಕ್ಷಗಳಿಗೆ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಕೊರತೆಯೇನಿದೆ?

ಇಲ್ಲಿ ನಾನು ಬೇಕೆಂದೇ ಬಿ.ಜೆ.ಪಿ. ಸರ್ಕಾರವನ್ನು ವ್ಯಂಗ್ಯವಾಡಲು ಬಳಸುತ್ತಿಲ್ಲ. ಏಕೆಂದರೆ ಈ ಆರ್.ಎಸ್.ಎಸ್ ಮತ್ತು ಅದರ ಅನೇಕ ಶಾಖೆಗಳು ಈಗಾಗಲೇ ತಾವೆಷ್ಟು ಅಪ್ರಾಮಾಣಿಕರೆಂದೂ, ಸಮಯಸಾಧಕರೆಂದೂ ಸಾಬೀತುಪಡಿಸಿದ್ದಾರೆ. ಇವರ ದೇಶಭಕ್ತಿ ಕೇವಲ ದ್ವೇಶಭಕ್ತಿ ಎಂಬುದೂ ತಿಳಿದಿದೆ. ನಮ್ಮ ದೇಶದ ನಾಗರೀಕತೆಯ ಹಾದಿಯಲ್ಲಿ ಇಂಥಹವರು ಎನನ್ನೂ ಸಾಧಿಸದ ಆದರೆ ಸಾಧನೆಗಳಮೇಲೆ ತಮ್ಮ ಹೆಸರನ್ನು ಅಂಟಿಸಿಕೊಳ್ಳುವ ಮತ್ತು ಈ ಮೂಲಕವಾಗಿ ಯಜಮಾನಿಕೆಯನ್ನು ಹೊಂದುವ ಪ್ರಯತ್ನವಷ್ಟೇ ಇವರದ್ದು ಎಂದು ಗೊತ್ತಾಗಿದೆ. ನಮ್ಮ ಮುಂದಿನ ಇತಿಹಾಸದ ಭವ್ಯ ಹಾದಿಯಲ್ಲಿ ಇವರೆಲ್ಲ ನೆನಪಾಗಿ ಕೂಡ ಉಳಿಯಲಾರರು ಎಂದು ನನ್ನ ಭಾವನೆ. ಏಕೆಂದರೆ ಬುದ್ದ, ಮಹಾವೀರ,ಬಸವಣ್ಣ, ಅಕ್ಭರ್, ಅಶೋಕ, ಗಾಂಧೀಜಿ ಇಂಥಹವರನ್ನು ಮಾತ್ರವಲ್ಲದೇ ತಮ್ಮ ಸಾಧನೆಗೆ ಜೀವನವನ್ನೇ ಮುಡಿಪಾಗಿಟ್ಟ ಅಸಂಖ್ಯ ನೇಕಾರರೂ, ಕಲಾವಿದರೂ, ಶಿಲ್ಪಿಗಳೂ ಕವಿಗಳೂ, ರೈತರೂ ಮುಂತಾದ ಸಾಧಕರ ಮೂಲಕವಾಗಿ ರೂಪುಗೊಂಡ ಭಾರತದ ಪರಂಪರೆಯನ್ನು ಈ ಗಣಿಲೂಟಿಕೋರರ ಹಣವನ್ನು ನೆಚ್ಚಿದ ಸಂಘಟನೆ ಪ್ರತಿನಿಧಿಸಲು ಸಾಧ್ಯವೇ? ಇವರ ಮುಖವಾಡಗಳ ಹಿಂದಿನ ನಿಜವನ್ನು ತಿಳಿಯಲು ಯಾರಿಗೆ ಸಾಧ್ಯವಿಲ್ಲ?

ಮತ್ತೆ ಕಾಂಗ್ರೆಸ್ಸಿನ ಪಾದಯಾತ್ರೆಗೆ ಬರುವುದಾದರೆ - ಅಚಾನಕ್ಕಾಗಿ ಎಚ್ಚರಗೊಂಡ ಇವರು ನೀಡಿದ ಪ್ರತಿಕ್ರಿಯೆ ಹೇಗಿತ್ತೆಂದರೆ ನಿದ್ರೆಯಲ್ಲಿರುವವರನ್ನು ಹಠಾತ್ತನೆ ಎಬ್ಬಿಸಿದಾಗ ಬಡಬಡಾಯಿಸಿದಂತಿತ್ತು. ಆದರೆ ಕ್ರಮೇಣ ಇವರೆಲ್ಲ ತಮ್ಮ ಸ್ಥಿತಿಗೆ ಒಂದು ತಾರ್ಕಿಕತೆಯನ್ನು ಕೊಟ್ಟುಕೊಳ್ಳುವ ಅಗತ್ಯ ಮೂಡಿತು. ರಾಜ್ಯದ ಸಂಪತ್ತಿನ ಲೂಟಿಎಂದರೆ ಅದು ಸಕ್ರಮವಾಗಿ ನಡೆದರೂ ಹೌದಲ್ಲವೇ ಎಂಬ ವಿಚಾರವನ್ನೂ ಎದುರಿಸಬೇಕಾಯಿತು. ಆದರೆ ಈ ಪಕ್ಷದಲ್ಲಿರುವ ಅನೇಕರು ಗಣಿಲೂಟಿಯಲ್ಲಿ ತಮ್ಮ ಪಾಲನ್ನು ಪಡೆದಿದ್ದರು ಮಾತ್ರವಲ್ಲ ಇಲ್ಲೂ ಅದರ ಹಣ ತನ್ನ ಪಕ್ಷಕ್ಕೆ ಬೇಕಾಗುವಂತೆ ಅವಲಂಬಿತರಾಗಿದ್ದರು. ಇಲ್ಲಿ ಬಿ.ಜೆ.ಪಿ ಜೊತೆಗೆ ಇವರೆಲ್ಲ ಭಿನ್ನವಾಗಿದ್ದು ಹೇಗೆಂದರೆ ಅಲ್ಲಿದ್ದಂತೆ ಗಣಿ ಹಣಕ್ಕೆ ಇಡೀ ಪಕ್ಷ ಒಳಗಾಗಿರಲಿಲ್ಲ. ಮತ್ತು ಕಾಂಗ್ರೆಸ್ಸ್ ಪಕ್ಷವೆಂದರೆ ಅದು ಎಲ್ಲ ಜಾತಿಗಳ, ವರ್ಗಗಳ, ಧರ್ಮಗಳ ಒಂದು ಸಂಘಟನೆಯಾಗಿ ಇನ್ನೂ ಇರುವುದರಿಂದ ಅದನ್ನು ಆಕ್ರಮಿಸಲು ಈ ನವ ಗಣಿದೊರೆಗಳಿಗೆ ಸಮಯದ ಅಭಾವವಿತ್ತು. ಒಂದು ಗಮನಾರ್ಹ ವಿಚಾರವೆಂದರೆ ನಿಜಕ್ಕೂ ನಮ್ಮ ಯಡಿಯೂರಪ್ಪ ಇನ್ನೂ ಆ ಸ್ಥಾನದಲ್ಲಿ ಉಳಿಯಲು ಸಾಧ್ಯವಾಗಿದ್ದು ಅವರು ರಾಜ್ಯದ ಬಹುಸಂಖ್ಯಾತರಿರುವ ಲಿಂಗಾಯತರಾಗಿರುವುದರಿಂದ. ರಾಜಕೀಯದಲ್ಲಿ ಹಣಕ್ಕಿಂತ ಜಾತಿಯೇ ಇನ್ನೂ ಮುಖ್ಯವಾಗಿರುವುದು ಸಧ್ಯಕ್ಕೆ ಸಮಾಧಾನಕರ ಸಂಗತಿ.

ಈಗ ಪಾದಯಾತ್ರೆ ಮುಗಿದಿದೆ. ಇದನ್ನು ಮಾಡುತ್ತಲೇ ಕಾಂಗ್ರೆಸ್ಸಿನ ನಾಯಕರುಗಳು ಆರೋಗ್ಯವಂತರಾಗಿದ್ದಾರೆ. ಅವರ ಕೊಬ್ಬೂ, ಮನಸ್ಸೂ ಕರಗಿದೆ ಎಂದು ಭಾವಿಸುವ. ನಡೆಯುವಾಗ ಜನರಿಗೆ ಇವರೆಲ್ಲ ಸಹಜ ಸಾಮಾನ್ಯ ಪ್ರಜೆಗಳು ಅನ್ನಿಸಿದೆ. ಕುಣಿದಿದ್ದಾರೆ, ಹಾಡಿದ್ದಾರೆ. ಗಂಭೀರವಾಗಿ ಸಿಡಿದಿದ್ದಾರೆ. ಒಂದು ಗೊತ್ತು ಗುರಿಯನ್ನು ತೋರ್ಪಡಿಸಿದ್ದಾರೆ. ಒಟ್ಟಿಗೆ ಸಾಗಿದ್ದಾರೆ. ಸಿದ್ದರಾಮಯ್ಯ ಜನರ ನಾಯಕನಂತೆ ಮೂಡಿಬಂದಿದ್ದಾರೆ.

ಸರಿ ಆಮೇಲೆ ಏನು? ಬಳ್ಳಾರಿಯಲ್ಲಿ ಸಭೆ ಮಾಡಿದ್ದಾಯಿತು. ಅಲ್ಲೂ ಒಂದು ಸ್ಪಷ್ಟವಾದ ಘೋಷಣೆ ಆಗಲಿಲ್ಲ. ನಿಜವಾಗಿ ಆಗಬೇಕಾಗಿದ್ದು ಈಗ ನಡೆದಿರುವ ಅಕ್ರಮವನ್ನು ಸರಿಯಾದ ತನಿಖೆಗೆ ಒಳಪಡಿಸುವುದರ ಜೊತೆಗೆ ಈ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಗೊಳಿಸಬೇಕಾದ್ದು. ಇದಿಲ್ಲದೇಹೋದರೆ ನಾಳೆ ಕಾಂಗ್ರೆಸ್ಸು ಅಧಿಕಾರಕ್ಕೆ ಬಂದರೂ ಈ ಲೂಟಿಯನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯದ ಸಂಪತ್ತಿನ ಸಮರ್ಪಕ ಬಳಕೆ ಸಾಧ್ಯವಿಲ್ಲ. ಆದರೆ ಈ ಪಾದಯಾತ್ರೆಯು ನಿಜವಾಗಿ ಸ್ಪಷ್ಟ ಸಂದೇಶವನ್ನು ಜನತೆಗೆ ತಿಳಿಸಲು ಸೋತಿದೆ ಎಂದೇ ಭಾವಿಸುತ್ತೇನೆ. ಲಕ್ಷಾಂತರ ಜನರ ನಡುವೆ ತೆಗೆದುಕೊಳ್ಳಬಹುದಾಗಿದ್ದ ಈ ಪ್ರಮುಖ ನಿರ್ಣಯವನ್ನು ಮಾಡದೇ ಬಹುದೊಡ್ಡ ಅವಕಾಶವನ್ನು ವ್ಯರ್ಥಮಾಡಿದ್ದಾರೆಂದು ಅನ್ನಿಸುತ್ತಿದೆ.

 ಸಿದ್ದರಾಮಯ್ಯ, ಕೃಷ್ಟ್ನ ಭೈರೇಗೌಡ, ಮೋಟಮ್ಮ ಮುಂತಾದವರು ತಮ್ಮ ಸಾಮರ್ಥ್ಯದ ಮಿತಿಯಲ್ಲಿ ಇಷ್ಟನ್ನು ಮಾಡಿದ್ದಾರೆ. ಜನರು ಒಳ್ಳೆಯ ಉದ್ದೇಶವನ್ನು ಬೆಂಬಲಿಸುತ್ತಾರೆಂದು ಈ ಮೂಲಕ ನಾವು ತಿಳಿಯಬಹುದು. ಆದರೆ ಮುಂದಿನ ಗೊತ್ತು - ಗುರಿಯಲ್ಲಿ ಸಮರ್ಪಕವಾಗಿ ವ್ಯಕ್ತವಾಗದಿದ್ದರೆ ಈ ಕಾಂಗ್ರೆಸ್ಸಿನ ಪಾಡು ಇಂದಿನಕ್ಕಿಂತ ಭಿನ್ನವಾಗಲಾರದು. ಹಳ್ಳಿ ಹಳ್ಳಿಗಳಲ್ಲಿ ತಮ್ಮ ಕೇಡರ್ ಗಳನ್ನು ಹೊಂದಿರುವ ಬಿಜೆಪಿಯೇ ಇವೆಲ್ಲದರ ಲಾಭವನ್ನು ಪಡೆದು ನಮ್ಮ ನಾಗರೀಕತೆಯನ್ನು ಪಥನದ ಹಾದಿಯಲ್ಲಿ ಮುನ್ನೆಡಸಲು, ಪ್ರಜಾಪ್ರಭುತ್ವವನ್ನು ಅಧಿಕಾರಕ್ಕಾಗಿ, ಹಣಕ್ಕಾಗಿ ಮಾರಿಕೊಳ್ಳಲು ಅವಕಾಶಮಾಡಿಕೊಟ್ಟಂತೆ ಆಗುತ್ತದೆ ಅಷ್ಟೆ.

ಕೆ.ಜಿ.ಶ್ರೀಧರ್
ತೀರ್ಥಹಳ್ಳಿ  
೯/೮/೨೦೧೦