ಕಾಂಗ್ರೆಸ್ ನ ಸ್ವಾರ್ಥ-ಮೋಸಕ್ಕೆ ಐ.ಎನ್. ಡಿ.ಐ.ಎ. ಪಕ್ಷಗಳ ಕಿಡಿ
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷ ಸಾಧನೆಗೆ ಯಾವ ಮಟ್ಟಕ್ಕೆ ಇಳಿಯಲೂ ಹೇಸದ ಕಾಂಗ್ರೆಸ್ ನ ಸ್ವಾರ್ಥ-ಮೋಸದ ಒಂದೊಂದೇ ವರಸೆಗಳು ಈಗ ಐ ಎನ್ ಡಿ ಐ ಎ ಘಟಕ ಪಕ್ಷಗಳಿಗೂ ಅರಿವಾಗಲಾರಂಭಿಸಿದೆ. ಇದೇ ಕಾರಣಕ್ಕೆ ಒಂದೊಂದೇ ಪಕ್ಷಗಳೀಗ ಕಾಂಗ್ರೆಸಿನ ವಿರುದ್ಧ ತಿರುಗಿ ಬೀಳುತ್ತಿವೆ. ಈಗ ಹೊಸ ಸರದಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ್ದು. ಜೊತೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆಯೂ, ಕಾಂಗ್ರೆಸ್ ನ ವಂಚನೆಯಿಂದ ಅವರೂ ಮೋಸಹೋಗಿರುವುದನ್ನು ಪರೋಕ್ಷವಾಗಿ ವ್ಯಕ್ತಗೊಳಿಸಿದೆ.
ಐ ಎನ್ ಡಿ ಐ ಎ ವಾಸ್ತವವಾಗಿ ಕಾಂಗ್ರೆಸ್ಸೇತರ ಪಕ್ಷಗಳ ಕಲ್ಪನೆಯ ಕೂಸು. ಆದರೆ ಇದ್ದಕ್ಕಿದ್ದಂತೆ, ಕಾಂಗ್ರೆಸ್ ಇದನ್ನು ಹೈಜಾಕ್ ಮಾಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಐ ಎನ್ ಡಿ ಐ ಎ ಕೂಟವನ್ನು ತನ್ನ ಹಿತಾಸಕ್ತಿ ಸಾಧನೆಗೆ ಬಳಸಿಕೊಳ್ಳಲು ಮುಂದಾಯಿತು. ಇದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷೆಗೆ ತಣ್ಣೀರೆರಚಿತ್ತು. ಆದರೆ ಅಷ್ಟೇ ಅಲ್ಲ, ಐ ಎನ್ ಡಿ ಐ ಎ ಅಂಗಪಕ್ಷಗಳಿಗೂ ಕಾಂಗ್ರೆಸ್ ‘ಸೆಕ್ಯುಲರ್' ಘೋಷಣೆಯೊಂದೇ ಅಂಟಾಗಿತ್ತು. ಆದರೆ ಇದು ಕೂಡ ಸುಳ್ಳು ಎಂಬುದೀಗ ವ್ಯಕ್ತಗೊಳ್ಲಲಾರಂಭಿಸಿದೆ. ದಿಲ್ಲಿಯ ಆಡಳಿತಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ನಿಲುವನ್ನು ವಿರೋಧಿಸುವಲ್ಲಿ ತನ್ನನ್ನು ಬೆಂಬಲಿಸಬೇಕೆಂಬ ಷರತ್ತನ್ನು ಒಡ್ಡಿದ್ದ ದಿಲ್ಲಿಯ ಆಳುವ ಆಮ್ ಆದ್ಮಿ ಪಕ್ಷದ ಷರತ್ತಿಗೆ ಒಪ್ಪಿದಂತೆ ಮಾಡಿ ಐ ಎನ್ ಡಿ ಐ ಎ ಸಭೆಯಲ್ಲಿ ಆಪ್ ಪಾಲ್ಗೊಳ್ಳುವಂತೆ ಮಾಡಿತ್ತು ಕಾಂಗ್ರೆಸ್. ಆದರೆ ಸಭೆಯ ಬಿಸಿ ಇನ್ನೂ ಆರುವ ಮೊದಲೇ ದಿಲ್ಲಿಯ ಎಲ್ಲ ಏಳು ಲೋಕಸಭಾ ಸ್ಥಾನಗಳಿಗೂ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ತೀರ್ಮಾನಿಸುವ ಮೂಲಕ ಆಪ್ ನ ಕೆಂಗಣ್ಣಿಗೆ ಗುರಿಯಾಗಿತ್ತು. ವಾಸ್ತವ ಎಂದರೆ ದಿಲ್ಲಿಯ ಆಡಳಿತಕ್ಕೆ ಸಂಬಂಧಿಸಿ ಆಪ್ ನ ನಿಲುವಿಗೆ ದಿಲ್ಲಿ ಕಾಂಗ್ರೆಸ್ ಘಟಕದ ಆಕ್ಷೇಪವಿತ್ತು. ರಾಹುಲ್ ಗಾಂಧಿ ಮೋದಿಗೆ ಪರ್ಯಾಯ ನಾಯಕ ಎಂದು ಬಿಂಬಿಸುವ ಹಲವು ಪ್ರಯತ್ನ -ತಂತ್ರ- ಪ್ರಯೋಗಗಳು ವಿಫಲವಾದ ಬಳಿಕ ಲಾಂಚಿಂಗ್ ಪ್ಯಾಡ್ ಆಗಿ ಐ ಎನ್ ಡಿ ಐ ಎ ಯನ್ನು ಬಳಸಿಕೊಳ್ಳುವ ಕಾಂಗ್ರೆಸ್ ಯತ್ನವೂ ಈಗ ಅರಗಿನ ಅರಮನೆಯಂತಾಗಿದೆ. ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಅಪೇಕ್ಷಿಸಿತ್ತು. ಕೇವಲ ೬ ಸ್ಥಾನಗಳನ್ನು ತನಗೆ ಬಿಟ್ಟುಕೊಡುವಂತೆ ಕೇಳಿತ್ತು. ಆದರೆ ಕಾಂಗ್ರೆಸ್ ಕ್ಯಾರೇ ಮಾಡಲಿಲ್ಲ. ಇದರಿಂದ ಕೆರಳಿರುವ ಅಖಿಲೇಶ್ ಕಾಂಗ್ರೆಸ್ ನಮಗೆ ಮೋಸ ಮಾಡಿದೆ, ವಂಚಿಸಿದೆ ಎಂದು ಆಕ್ರೋಶದಿಂದ ಹೇಳಿದ್ದಾರೆ. ಕಾಂಗ್ರೆಸ್ ನಮಗೆ ಏನು ಮಾಡಿದೆಯೋಅದನ್ನೇ ನಾವು ಅವರಿಗೆ ಮಾದಲಿದ್ದೇವೆ ಎಂದಿದ್ದಾರೆ. ಕಾಂಗ್ರೆಸನ್ನು ಇಂದು ನಂಬುವ ಸ್ಥಿತಿಯಲ್ಲಿ ದೇಶದ ಯಾವುದೇ ರಾಜಕೀಯ ಪಕ್ಷವೂ ಇಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಯಾಕೆಂದರೆ ಯಾವುದೇ ಸಮಾನ ವಿಚಾರಗಳು, ಚಿಂತನೆಗಳು, ಆಸಕ್ತಿಗಳು ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳ ನಡುವೆ ಇಲ್ಲವೇ ಇಲ್ಲ. ದೇಶದ ಹಿತಕ್ಕೆ ಅತ್ಯಂತ ಮಾರಕವಾಗುತ್ತಿರುವ ಹುಸಿ ‘ಸೆಕ್ಯುಲರ್' ಎಂಬ ಕಪಟಾಸ್ತ್ರದೊಂದಿಗೆ ಎಷ್ಟು ಕಾಲ ಈ ಪಕ್ಷಗಳನ್ನು ವಂಚಿಸಲು ಸಾಧ್ಯ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೧-೧೦-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ