ಕಾಗದ ಕಾರ್ಖಾನೆಗಳಿಗಾಗಿ ಕೃಷಿಕಾಡು

ಕಾಗದ ಕಾರ್ಖಾನೆಗಳಿಗಾಗಿ ಕೃಷಿಕಾಡು

ತೆಲಂಗಾಣದ ಕಮ್ಮಂ ಜಿಲ್ಲೆಯ ಚೋಡಾವರಂ ಗ್ರಾಮದ ಕರಿ ಪಾಪ ರಾವ್ ನೀಲಗಿರಿ ಮರಗಳನ್ನು ಬೆಳೆಸುತ್ತಿರುವುದು 28 ಹೆಕ್ಟೇರ್ ಕೃಷಿ ಜಮೀನಿನಲ್ಲಿ. 2001ರಲ್ಲಿ ಕೃಷಿಕಾಡು ಬೆಳೆಸಲು ಶುರು ಮಾಡಿದ ಪಾಪ ರಾವ್, ಹಲವು ಸಲ ಮರಗಳನ್ನು ಕಡಿದು ಮಾರಿದ್ದಾಗಿದೆ. ನಾಲ್ಕು ವರುಷಗಳಿಗೊಮ್ಮೆ ಮರ ಕಟಾವು ಮಾಡಿ ಮಾರಿದಾಗ ಅವರು ಗಳಿಸುವ ಆದಾಯ ರೂ.50 ಲಕ್ಷಗಳಿಗಿಂತ ಜಾಸ್ತಿ.
2001ಕ್ಕಿಂತ ಮುಂಚೆ ಕರಿ ಪಾಪ ರಾವ್ ಆ ಜಮೀನಿನಲ್ಲಿ ಬೆಳೆಸುತ್ತಿದ್ದದ್ದು ಮೆಣಸು. “ಮೆಣಸಿನ ಬೆಳೆಯಿಂದಲೂ ಒಳ್ಳೇ ಲಾಭ ಸಿಗುತ್ತಿತ್ತು. ಆದರೆ ಅದನ್ನು ಬೆಳೆಸಲು ಬಹಳ ಖರ್ಚು; ಬಹಳ ಕೆಲಸ. ಅದರ ಮಾರುಕಟ್ಟೆ ದರದಲ್ಲಿ ಭಾರೀ ಏರುಪೇರು. ನೀಲಗಿರಿ ಹಾಗಲ್ಲ. ಇದಕ್ಕೆ ಬೇಡಿಕೆ ಇದ್ದೇ ಇದೆ. ಅದಲ್ಲದೆ, ಬೇರೆ ಬೆಳೆಗಳಿಗೆ ಬೇಕಾದಂತೆ, ನೀಲಗಿರಿಗೆ ನಿರಂತರ ಗಮನ ಬೇಕಾಗಿಲ್ಲ” ಎನ್ನುತ್ತಾರೆ ಪಾಪ ರಾವ್.
ಹೈಬ್ರಿಡ್ ನೀಲಗಿರಿಯ ಸಸಿಗಳನ್ನು ಇವರು ಖರೀದಿಸುವುದು ಭದ್ರಾಚಲಂನಲ್ಲಿರುವ ಐಟಿಸಿ ಕಂಪೆನಿಯ ನರ್ಸರಿಯಿಂದ. ಇವರು ಬೆಳೆಸಿದ ನೀಲಗಿರಿ ಮರಗಳನ್ನು ಖರೀದಿಸುವುದು ಕಾಗದ ಉತ್ಪಾದನೆಯಲ್ಲಿ ನಮ್ಮ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಐಟಿಸಿ ಲಿಮಿಟೆಡ್.
ಐಟಿಸಿ ಕಂಪೆನಿಗಾಗಿ ಕೃಷಿಕಾಡು ಬೆಳೆಸುತ್ತಿರುವ 80,000 ಕೃಷಿಕರಲ್ಲಿ ಕರಿ ಪಾಪ ರಾವ್ ಒಬ್ಬರು. 1992ರಿಂದ ಶುರು ಮಾಡಿ, ಲಕ್ಷಗಟ್ಟಲೆ ಸಸಿಗಳನ್ನು ಕೃಷಿಕರಿಗೆ ಒದಗಿಸಿ, 1.8 ಲಕ್ಷ ಹೆಕ್ಟೇರು ಮಿಕ್ಕಿದ ಪ್ರದೇಶದಲ್ಲಿ ನೀಲಗಿರಿ ತೋಪು ಬೆಳೆಸಲು ಪ್ರೋತ್ಸಾಹಿಸಿದೆ ಐಟಿಸಿ ಕಂಪೆನಿ. ಆ ನೀಲಗಿರಿ ತೋಪುಗಳು ಹಬ್ಬಿರುವುದು ಅವಿಭಜಿತ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಚತ್ತಿಸ್-ಘಡ, ಒರಿಸ್ಸಾ, ಕೇರಳ, ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ.
ಈ ತೋಟಗಳಿಂದಲೇ, ಭದ್ರಾಚಲಂನಲ್ಲಿರುವ ದೇಶದ ಅತಿ ದೊಡ್ಡ ಕಾಗದ ಕಾರ್ಖಾನೆಗೆ ಶೇಕಡಾ 95 ಕಚ್ಚಾಮಾಲು (ನೀಲಗಿರಿ ಮರ) ಪಡೆಯುತ್ತಿದೆ ಐಟಿಸಿ ಕಂಪೆನಿ. ಜೆ.ಕೆ. ಪೇಪರ್ ಲಿಮಿಟೆಡ್ ಮತ್ತಿತರ ಕಂಪೆನಿಗಳ ಕಾಗದ ಕಾರ್ಖಾನೆಗಳೂ ತಮಗೆ ಬೇಕಾದ ಬಹುಪಾಲು ಕಚ್ಚಾಮಾಲನ್ನು ಕೃಷಿಕಾಡುಗಳಿಂದಲೇ ಪಡೆಯುತ್ತಿವೆ.
ಇದೆಲ್ಲ ಶುರುವಾದದ್ದು 1988ರ ನಂತರ. ಆ ವರುಷ ಕೇಂದ್ರ ಸರಕಾರ ರಾಷ್ಟ್ರೀಯ ಅರಣ್ಯ ನೀತಿ ಜ್ಯಾರಿ ಮಾಡಿತು. ಆ ನೀತಿಯ ಪ್ರಕಾರ, ಅರಣ್ಯಪ್ರದೇಶದಲ್ಲಿ ವಾಣಿಜ್ಯಕಾಡು ಬೆಳೆಸುವುದಕ್ಕೆ ಮಿತಿಗಳನ್ನು ಹೇರಲಾಯಿತು; ಕಂಪೆನಿಗಳು ಕೃಷಿಕಾಡುಗಳಿಂದ ಮರಗಳನ್ನು ಪಡೆಯಬಹುದೆಂದು ನಿರ್ದೇಶಿಸಲಾಯಿತು. ಕಾಗದ ಉತ್ಪಾದನಾ ಕಂಪೆನಿಗಳಿಗೆ 1980ರ ದಶಕದ ವರೆಗೆ ಅರಣ್ಯದಿಂದ ಅಗ್ಗದ ಬೆಲೆಗೆ ಮರಗಳನ್ನು ಖರೀಸುವುದು ಅಭ್ಯಾಸವಾಗಿತ್ತು; ಹಾಗಾಗಿ ಮರಗಳಿಗಾಗಿ ತಮ್ಮ ಬೇಡಿಕೆ ಪೂರೈಸಲು ಕೃಷಿಕಾಡುಗಳಿಂದ ಸಾಧ್ಯವಿಲ್ಲವೆಂದು ವಾದಿಸಿದವು. ಆದರೆ, ಕೇಂದ್ರ ಸರಕಾರ ಅರಣ್ಯ ನೀತಿಯನ್ನು ಬದಲಾಯಿಸಲಿಲ್ಲ. ಅನಿವಾರ್ಯವಾಗಿ, ಕಾಗದ ಉತ್ಪಾದನಾ ಕಂಪೆನಿಗಳು ತಮಗೆ ಬೇಕಾದ ಮರಗಳಿಗಾಗಿ ಕೃಷಿಕರನ್ನೇ ಅವಲಂಬಿಸ ಬೇಕಾಯಿತು.
ಇದರಿಂದಾಗಿ ಕಾಗದ ಉತ್ಪಾದನೆಯಲ್ಲಿ ಹೊಸಶಕೆಯ ಆರಂಭ. ಈ ಬೆಳವಣಿಗೆಯಿಂದ ಕೃಷಿಕರಿಗೂ ಕಾಗದ ಕಾರ್ಖಾನೆಗಳಿಗೂ ಅನುಕೂಲ. ಕೃಷಿಕರಿಗೆ ನಿಶ್ಚಿತ ಆದಾಯ ಕೈಸೇರುತ್ತಿದ್ದರೆ, ಕಾಗದ ಕಾರ್ಖಾನೆಗಳಿಗೆ ಕಚ್ಚಾಮಾಲು ನಿಶ್ಚಿತವಾಗಿ ಸರಬರಾಜಾಗುತ್ತಿದೆ.
ಇದೆಲ್ಲ ಸುಲಭದಲ್ಲಿ ಸಾಧ್ಯವಾಗಿಲ್ಲ. “ನಮ್ಮ ಕಂಪೆನಿ 1982ರಿಂದ 1989ರ ತನಕ ನಡೆಸಿದ ಸಂಶೋಧನೆಯಿಂದಾಗಿ ಅಧಿಕ ಇಳುವರಿ ನೀಡುವ, ಬರ ಸಹಿಸುವ ಮತ್ತು ರೋಗ ನಿರೋಧಕ ಗುಣವುಳ್ಳ 107 ನೀಲಗಿರಿ ತಳಿಗಳನ್ನೂ, ವಿವಿಧ ಮಣ್ಣುಗಳಿಗೆ ಸೂಕ್ತವಾದ 12 ಸುಬಾಬುಲ್ ಹಾಗೂ 15 ಕ್ಯಾಸುರಿನಾ (ಸರ್ವೆ) ತಳಿಗಳನ್ನೂ ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು” ಎನ್ನುತ್ತಾರೆ ಐಟಿಸಿ ಕಂಪೆನಿಯ ಉಪಾಧ್ಯಕ್ಷ ಎಚ್.ಡಿ. ಕುಲಕರ್ಣಿ. ಇದರಿಂದಾಗಿ ಕೃಷಿಕಾಡುಗಳ ಉತ್ಪಾದಕತೆ ಹೆಕ್ಟೇರಿಗೆ ಮೂರರಿಂದ ಆರು ಟನ್ ಇದ್ದದ್ದು ಈಗ ಸರಾಸರಿ 80 ಟನ್ನುಗಳಿಗೆ ಏರಿದೆಯೆಂದು ಅವರು ವಿವರಿಸುತ್ತಾರೆ.
ಭಾರತದಲ್ಲಿ 2019-20ರಲ್ಲಿ 861 ಪೇಪರ್ ಮಿಲ್ಲುಗಳಿದ್ದರೂ 526 ಮಾತ್ರ ಪೇಪರ್ ಉತ್ಪಾದಿಸುತ್ತಿವೆ; ಇವುಗಳ ಉತ್ಪಾದನಾ ಸಾಮರ್ಥ್ಯ ವರುಷಕ್ಕೆ 27 ದಶಲಕ್ಷ ಟನ್. 2024-25ರಲ್ಲಿ ನಮ್ಮ ದೇಶದ ವಾರ್ಷಿಕ ಪೇಪರ್ ಬಳಕೆ  23.5 ದಶಲಕ್ಷ ಟನ್ನುಗಳಿಗೆ ಹಾಗೂ ವಾರ್ಷಿಕ ಉತ್ಪಾದನೆ 22 ದಶಲಕ್ಷ ಟನ್ನುಗಳಿಗೆ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.  
ಆದ್ದರಿಂದ ಕೃಷಿಕಾಡಿನ ಮರಗಳಿಗೆ ಪೇಪರ್ ಮಿಲ್ಲುಗಳ ಬೇಡಿಕೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ. ಇದನ್ನು ಪೂರೈಸಲು 2025ರ ಹೊತ್ತಿಗೆ ಹೆಚ್ಚುವರಿ 2.5 ದಶಲಕ್ಷ ಹೆಕ್ಟೇರಿನಲ್ಲಿ ಕೃಷಿಕಾಡು ಬೆಳೆಸಬೇಕಾಗುತ್ತದೆ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಸುತ್ತಿರುವ ಕೃಷಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಂದ ಪಾರಾಗಲು ಅವಕಾಶವೊಂದು ಇಲ್ಲಿದೆ.
ಫೋಟೋ: ಕೃಷಿ ಕಾಡು ... ಕೃಪೆ: ಡ್ರೀಮ್ಸ್ ಟೈಮ್