ಕಾಡು ಹಾಗಲಕಾಯಿ ಪಲ್ಯ

ಕಾಡು ಹಾಗಲಕಾಯಿ ಪಲ್ಯ

ಬೇಕಿರುವ ಸಾಮಗ್ರಿ

ಕಾಡು ಹಾಗಲ ಕಾಯಿ (ಮಡಾಗಲ, ಪಗಿಳ) ೨, ಟೊಮ್ಯಾಟೊ ೨, ನೀರುಳ್ಳಿ ಮಧ್ಯಮ ಗಾತ್ರದ್ದು ೧, ಬೆಳ್ಳುಳ್ಳಿ ೫ ಎಸಳು, ಎಣ್ಣೆ, ರುಚಿಗೆ ಉಪ್ಪು, ಹಸಿ ಮೆಣಸು ೨, ಅರಸಿನ ಹುಡಿ ಕಾಲು ಚಮಚ, ಗರಂ ಮಸಾಲೆ ಹುಡಿ ೧ ಚಮಚ, ಜೀರಿಗೆ ಹುಡಿ ೨ ಚಮಚ, ಕೊತ್ತಂಬರಿ ಹುಡಿ ೩ ಚಮಚ, ಕೆಂಪು ಮೆಣಸಿನ ಹುಡಿ ೨-೩ ಚಮಚ, ಹುಣಸೇ ಹುಳಿಯ ರಸ ೧ ಚಮಚ, ಕರಿ ಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು 

 

ತಯಾರಿಸುವ ವಿಧಾನ

ಮೊದಲು ಕಾಡು ಹಾಗಲಕಾಯಿಯನ್ನು ಸಣ್ಣಗೆ ತುಂಡರಿಸಿಕೊಳ್ಳಬೇಕು. ತುಂಡು ಮಾಡುವಾಗ ಹಾಗಲಕಾಯಿಯ ಒಳಗಡೆಯ ಬೀಜ ಬೆಳೆದಿದ್ದರೆ ಅದನ್ನು ತೆಗೆದುಹಾಕಿ.  ನೀರುಳ್ಳಿ ಹಾಗೂ ಟೊಮ್ಯಾಟೋಗಳನ್ನೂ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದಾಗ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿಯ ಎಸಳುಗಳನ್ನು ಹಾಕ ಬೇಕು. ಸ್ವಲ್ಪ ಬಣ್ಣ ಬದಲಾಗುವಾಗ ಮೊದಲು ಕತ್ತರಿಸಿಟ್ಟುಕೊಂಡ ನೀರುಳ್ಳಿಯನ್ನು ಹಾಕಬೇಕು. ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ. ಉಪ್ಪು ಸೇರಿಸಿದಾಗ ನೀರುಳ್ಳಿಯ ನೀರಿನ ಅಂಶ ಹೊರಬಂದು ಸ್ವಲ್ಪ ಬೇಗನೇ ಬೇಯುತ್ತದೆ. ನೀರುಳ್ಳಿ ಬಣ್ಣ ಬದಲಾಯಿಸಲು ಪ್ರಾರಂಭವಾದಾಗ ಅದಕ್ಕೆ ಮೊದಲೇ ತುಂಡರಿಸಿಟ್ಟ ಟೊಮ್ಯಾಟೋ ಹಾಕಿ. ಅದಕ್ಕೆ ಉದ್ದಕ್ಕೆ ಎರಡು ತುಂಡು ಮಾಡಿದ ಹಸಿ ಮೆಣಸನ್ನು ಹಾಕಿ. ಸ್ವಲ್ಪ ಬೆಂದ ನಂತರ ಅದಕ್ಕೆ ಮೊದಲು ಕತ್ತರಿಸಿಟ್ಟ ಕಾಡು ಹಾಗಲಕಾಯಿಯ ತುಂಡುಗಳನ್ನು ಸೇರಿಸಿ. ಇದಕ್ಕೆ ಅರಸಿನ ಹುಡಿಯನ್ನು ಸೇರಿಸಿ. ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಬೇಯಲು ಬಿಡಿ. ಮುಚ್ಚಳವನ್ನು ಮುಚ್ಚಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದಕ್ಕೆ ಗರಂ ಮಸಾಲೆ ಹುಡಿ, ಜೀರಿಗೆ ಹುಡಿ, ಕೊತ್ತಂಬರಿ ಹುಡಿ, ಖಾರಕ್ಕೆ ತಕ್ಕಂತೆ ಮೆಣಸಿನ ಹುಡಿ, ಹುಣಸೇ ಹುಳಿ ರಸ ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೊದಲಿನ ಸಣ್ಣ ಉರಿಯಲ್ಲೇ ಒಂದೆರಡು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಬೆಂದ ಬಳಿಕ ಬಾಣಲಿಯನ್ನು ಒಲೆಯಿಂದ ಕೆಳಗಿಳಿಸಿ ದೋಸೆ, ಚಪಾತಿ, ಅನ್ನದ ಜೊತೆಗೆ ತಿನ್ನಿ. 

-ವಾಣಿಶ್ರೀ ವಿನೋದ್, ಪೇರ್ಲಗುರಿ, ಮಂಗಳೂರು