ಕಾಣದ ನಾಡಲ್ಲಿ ಹೀಗೊ೦ದು ದಿನ..

ಕಾಣದ ನಾಡಲ್ಲಿ ಹೀಗೊ೦ದು ದಿನ..

ಬರಹ

ಹದಿನೇಳು, ಏಪ್ರಿಲ್ ೨೦೦೪ ಬೆಳಿಗ್ಗೆ. ಬಿಡಲಾರೆ ಎ೦ದು ಅಳುತ್ತಿದ್ದ ಕಣ್ರೆಪ್ಪೆಗಳಿಗೆ ಬಲವ೦ತ ಮಾಡಿ ಬಿಡಿಸಿ ಕಣ್ಣು ಬಿಟ್ಟಾಗ ಬೆಳಿಗ್ಗೆ ೫ ಗ೦ಟೆ. ಸ್ವಲ್ಪ ಹೊತ್ತಿಗೇ ವಿಮಾನದವರು ಮಲೇಶಿಯಾದಲ್ಲಿ ಸಮಯ Actually ೭.೩೦ ಎ೦ದು ಬದಲಿಸಿದರು. ಎಲ್ಲಾ ಲಗ್ಗೇಜು ತೆಗೆದುಕೊ೦ಡು ಹೊರಗೆ ಬ೦ದು ಅದೊ೦ದು ಟ್ರೈನ್ ಹತ್ತಿ ಮಲೇಶಿಯಾದ ಏರ್ ಪೋರ್ಟ್ ಹೊರವಲಯಕ್ಕೆ ಬ೦ದೆವು. ಆಗ ಬಹುಶಃ ೮ ಗ೦ಟೆ.
ನಾನು ಒ೦ದೇ ವಾಕ್ಯದಲ್ಲಿ ಟ್ರೈನ್ ಹತ್ತಿ ಬ೦ದೆವು ಅ೦ದರೆ ಅಷ್ಟೇ ಸಲೀಸಾಗಿ ಬ೦ದೆವು ಅ೦ದುಕೊಳ್ಳಬಾರದು. ಅಲ್ಲಿ ಬರೆದು ತೂಗಿದ್ದ ಬೋರ್ಡ್‘ಗಳ Arrow mark ಗಳನ್ನು, ಅದರ ಮೇಲಿದ್ದ ಸೂಟ್ ಕೇಸ್ ಚಿತ್ರವನ್ನು ನೆಚ್ಚಿಕೊ೦ಡು ನಡೆಯುತ್ತಿದ್ದ ನಮಗೆ ಇದ್ದಕ್ಕಿದ್ದ೦ತೆ ಅದು ಮರೆಯಾಗಿ ನಮ್ಮ ಮುಖಗಳ ಮೇಲೆ ‘ಕ೦ಗಾಲು ಕಳೆ’ ಆವರಿಸುತ್ತಿದ್ದ೦ತೆ, ಅಲ್ಲೊಬ್ಬಳು ತಿಳಿನೀಲಿ ಸ್ಕಾರ್ಫ್ ಹಾಗೂ ನಿಲುವ೦ಗಿ ಧರಿಸಿದ ಪರಿಚಾರಿಕೆ ಹತ್ತಿರ ಬ೦ದು ‘ತ್ರೇನ್ ತ್ರೇನ್’ ಎ೦ದು ತೋರಿಸಿದಳು. (ಕ೦ಗಾಲು ಕಳೆ ಇರುವ ಮೂತಿಗಳನ್ನು ನೋಟದಲ್ಲೇ ಗುರುತಿಸಿ ಸಹಾಯ ಮಾಡಲೆ೦ದೇ ನಿಯಮಿತಳಾಗಿದ್ದಳೇನೋ!) ಇಷ್ಟು ಬುದ್ಧಿ ಪ್ರದರ್ಶನದ ನ೦ತರ ‘ತ್ರೇನ್’ ಹತ್ತಿ ಬ೦ದೆವು.

ಇಮಿಗ್ರೇಷನ್ ಸ೦ಸ್ಕಾರಗಳೆಲ್ಲ್ಶಾ ಆದ ಮೇಲೆ ನಮ್ಮ ಸೂಟ್ ಕೇಸ್‘ಗಳನ್ನು ತೆಗೆದುಕೊ೦ಡು, ‘ಇವೆಲ್ಲಾ ಯಾವ ಮಹಾ’ ಅನ್ನೋ ಭಾವ ಮುಖದಲ್ಲಿ ಧರಿಸಿ ಹೊರಗೆ ಬ೦ದೆವು. ಹೊರಗೆ ಬ೦ದಾಕ್ಷಣ ಅನೇಕ ಟ್ಯಾಕ್ಸಿ ಡ್ರೈವರುಗಳು ಕೈಯ್ಯಲ್ಲಿ ಹೆಸರು ಬರೆದ ಬೋರ್ಡುಗಳನ್ನು ಎತ್ತಿ ಎತ್ತಿ ಮುಖಕ್ಕೆ ಹಿಡಿಯುತ್ತಿದ್ದರು. ಶುರುಶುರುವಿನಲ್ಲಿ MG Road ನಲ್ಲಿ FM Radio ಮಾರ್ಕೊ೦ಡು ಬರೋರಿಗೆ "ಬೇಡ ಪ್ಲೀಸ್" ಅ೦ತೀವಲ್ಲಾ, ಅದೇ ಗತ್ತಲ್ಲಿ ‘ಅಲ್ಲ ಅಲ್ಲ’ ಅ೦ದ್ವಿ..ನೋಡ್ತ ನೋಡ್ತ ಎಲ್ಲೂ, ಯಾವ ಬೋರ್ಡ್ ನಲ್ಲೂ ನಮ್ಮ ಹೆಸರೇ ಇಲ್ಲ!! ಒ೦ದೊ೦ದು ಸಾರಿ ಅಲ್ಲ ಅಲ್ಲ ಅ೦ದಾಗ್ಲೂ ನಮ್ಮ ಗತ್ತು ಇಳೀತಾ ಇಳೀತಾ ಬ೦ದು ಕೊಟ್ಟ ಕೊನೆ ಬೋರ್ಡಿನಲ್ಲೂ ನಮ್ಮ ಹೆಸರಿಲ್ಲದಾಗ ನಾವೇ ಮಾರ್ಕೊ೦ಡು ಬ೦ದೋರ ಭಾವದಲ್ಲಿ ‘ಇದೂ ಅಲ್ಲ’ ಅ೦ದ್ವಿ. ಸರಿ ನಮ್ಮ ಮಾಮೂಲು ಕ೦ಗಾಲು ಕಳೆ ಹಾಕ್ಕೊ೦ಡು, ನಾನು ಅಮ್ಮ ನಮ್ಮ ಲಗ್ಗೇಜ್ ಗಾಡಿ ಹತ್ರ ನಿ೦ತ್ವಿ. ಅಣ್ಣ - ಅರ್ಥಾತ್ ನಮ್ಮಪ್ಪ ಅದೇ ಸೇಮ್ ಕಳೆ ಹಾಕ್ಕೊ೦ಡು ಏರ್ಪೋರ್ಟ್ ನ ಒಬ್ಬ ಸೂಟುಧಾರಿ ಸಿಬ್ಬ೦ದಿಗೆ ನಮ್ಮ ಟೂರ್ ವ್ಯವಸ್ಥಾಪಕರ ಪತ್ರ ತೋರಿಸಿ ಕೈ ಸನ್ನೆ ಬಾಯಿ ಸನ್ನೆ ಶುರು ಮಾಡಿದರು. ನಾವು ಶಿಸ್ತಾಗಿ ಕೂತು ಆಗೀಗ ಅಲ್ಲಿ೦ದಿಲ್ಲಿಗೆ, ಇಲ್ಲಿ೦ದಲ್ಲಿಗೆ ಠಳಾಯಿಸುತ್ತಿದ್ದ ಸೂಟುಧಾರಿಯನ್ನೂ, ಅವನ ಹಿ೦ದೆ ಫಾಲೋ ಮಾಡ್ತಿರೋ ಕಳ್ಳ ಎಲ್ಲಿ ತಪ್ಪಿಸಿಕೊ೦ಡು ಹೋಗಿಬಿಟ್ಟಾನೋ ಅ೦ತ ಓಡೋಡಿ ಫಾಲೋ ಮಾಡೋ ಮಫ್ತಿಲಿರೋ ಪೋಲೀಸ್ ಪೇದೆ ಥರ ಓಡ್ತಿರೋ ಅಣ್ಣನ್ನ ನೋಡ್ತಾ ಇದ್ವಿ. ಕೊನೆಗೆ ಅಣ್ಣ ಬ೦ದು ಸರಿಯಾಯ್ತು ಹೊರಡೋಣ ಅ೦ದ್ರು. ನಾವು ಮುಖದ ಮೇಲಿದ್ದ ಕ೦ಗಾಲು ಕಳೆ ತೆಗೆದು ‘?’ ಕಳೆ ಹಾಕ್ಕೊ೦ಡ್ವಿ.
ಆದದ್ದಿಷ್ಟು. ಬೆ೦ಗಳೂರಿನ ನಮ್ಮ ಪ್ರವಾಸ ವ್ಯವಸ್ಥಾಪಕರು ೧೭ ಏಪ್ರಿಲ್ ಅ೦ತ ಬರೆಯೋ ಬದಲು ೧೮ ಏಪ್ರಿಲ್ ಅ೦ತ ಬರೆದು ಬಿಟ್ಟಿದ್ದರು. ಹಾಗಾಗಿ ಇಲ್ಲಿನವರು ನಾಳೆಗಾಗಿ ಪುರುಸೊತ್ತಾಗಿ ಹೆಸರಿನ ಬೋರ್ಡ್ ಬರೆಯಣ ಅ೦ದ್ಕೊ೦ಡ್ಡಿದ್ರು..ಒಟ್ಟಿನಲ್ಲಿ ನಾವು ತಬ್ಬಲಿ ಅಬ್ಬೇಪಾರಿಗಳು ಮಲೇಶಿಯಾದ ಏರ್ ಪೋರ್ಟಿನಲ್ಲಿ ಕಣ್ಣು ಬಾಯಿ ಬಿಡ್ತಾ ಕೂತಿದ್ವಿ..ಅವರ ಕಡೆಯವರು ಯಾರೋ ಅವಸರ ಅವಸರವಾಗಿ ಬ೦ದು ಯಾರ ಜೊತೆಗೋ ‘ಚಿ೦ಗ್ ಮಿ೦ಗ್’ ಅ೦ತ ಮಾತಾಡಿ ಒ೦ದು ಟ್ಯಾಕ್ಸಿ ಮಾಡಿ, ನಮ್ಮ ಹತ್ತಿರ ಬ೦ದು ಕ್ಷಮಾ ಯಾಚಕ ಧ್ವನಿಯಲ್ಲಿ " ಪ್ಲೀಸ್ ಗೊ ತು ಹೋತಲ್ ಮಲಯಾ ವಿ ವಿಲ್ ಬೆ ತೇರ್ ಅತ್ ೧ ತು ಪಿಕ್ ಯು ಅಪ್" ಎ೦ದರು. ನಾವೂ ಹಲ್ಲು ಬಿಡುತ್ತಾ ಹೇ..ಹೇ.. ಎನ್ನುತ್ತಾ ತ್ಯಾಕ್ಸಿ ಹತ್ತಿದೆವು..
ಅಲ್ಲಿ೦ದ ಸುಮಾರು ಒ೦ದು ಗ೦ಟೆ ಪ್ರಯಾಣ. ಆ ಬಿಸಿಲು ಸುರಿಯುತ್ತಿದ್ದ ರಸ್ತೆಗಳಲ್ಲಿ ತಣ್ಣನೆಯ ಎಸಿ ಕಾರಲ್ಲಿ ಕೂತು ನನ್ನ ಕಣ್ಣುಗಳಿಗೆ ಪಾಠ ಹೇಳತೊಡಗಿದೆ.." ಎಲವೋ ಗೂಬೆ, ನೋಡು..ಹೊಸ ದೇಶ, ಹೊಸ ಹಾದಿ, ಹೊಸ ನೋಟ, ಹೊಸ ಅನುಭವ, ಹೊಸ..ಹೊಸ..ನೋಡು..ನೋಡು.." ನನ್ನ ಕಣ್ಣಿಗೆ ಯಾವ ಪಾಠವೂ ರುಚಿಸಲಿಲ್ಲ (ಎಷ್ಟಾದರೂ ನನ್ನ ಕಣ್ಣಲ್ಲವೇ?) ಅವು ಮುಷ್ಕರ ಹೂಡಿ ಮುಚ್ಚಿಕೊ೦ಡೇ ಬಿಟ್ಟವು.
ಅಮ್ಮ ನನ್ನ ತಿವಿದು ‘ಹೋಟೆಲ್ ಬ೦ತು ಏಳು’ ಅ೦ದಾಗ ೧೦.೦೦ -೧೦.೩೦ ಆಗಿತ್ತು. ಕಾರಿನಿ೦ದ ಕೆಳಗಿಳಿದೆ. ಇನ್ನೂ ಮ೦ಪರು ಹರಿಯದ ನನ್ನ ಕಣ್ಣುಗಳಿಗೆ ಕ೦ಡದ್ದು - ಅದೊ೦ದು ಚಿಕ್ಕ ರಸ್ತೆ. ಬದಿಯಲ್ಲೆಲ್ಲ ಹಣ್ಣು ತರಕಾರಿ ಮಾರುವ ಗಾಡಿಗಳು. ಅವುಗಳ ಹಿ೦ದೆ ನಮ್ಮ ತರಕಾರಿ ಹೆ೦ಗಸರಷ್ಟೇ ಗಲಾಟೆ ಮಾಡುತ್ತಿರುವ ಮಲಯಾ ಗ೦ಡಸರು, ಅವರ ಹಿ೦ದೆ ಸುಣ್ಣ ಬಣ್ಣವಿಲ್ಲದೆ ನಿ೦ತ ಒ೦ದು ದೊಡ್ಡ ಕಟ್ಟಡ. ಇದಕ್ಕಿ೦ತ ನಿದ್ದೇನೇ ಚೆನ್ನಾಗಿತ್ತು ಅ೦ತ ನಾನು ತೀರ್ಮಾನಕ್ಕೆ ಬರುವಷ್ಟರಲ್ಲಿ ಅಮ್ಮ ಬೇಗ ಬಾರೇ ಎ೦ದು ತಿವಿದರು. ಆ ಧ್ವನಿಯಲ್ಲಿದ್ದ irritation ಕೇಳಿ ತಿರುಗಿದರೆ, ಅಮ್ಮ ಮೂಗಿಗೆ ಸೆರಗು ಮುಚ್ಚಿ ಸರ ಸರ ಬಾಗಿಲೊಳಗೆ ನುಗ್ಗುತ್ತಿದ್ದರು. ಆಗಲೇ ನನ್ನ ನೀಳ ನಾಸಿಕಕ್ಕೆ ಎಚ್ಚರ! ಸುತ್ತೆಲ್ಲ ಅದೇನೋ ಹಳೇ ಹಣ್ಣಿನ ಅಥವಾ ಮೀನಿನ ಅಥವಾ ಅದೇನೋ ತಿಳಿಯದ ಒ೦ಥರಾ ವಾಸನೆ - ನಮ್ಮ ಅರಿವಿಗೆ ಬರುತ್ತಿದ್ದ ಪ್ರತಿಯೊ೦ದೂ ನಮ್ಮಲ್ಲಿ ಅದೊ೦ದು ಬಗೆಯ ಅನಾಥ ಪ್ರಜ್ನೆಯನ್ನು ಮೊಡಿಸುತ್ತಿದ್ದವು - ನಾನೂ ಅಮ್ಮನ ಹಿ೦ದೇ ಒಳಗೆ ನುಗ್ಗಿದೆ.
ಹೋಟೆಲ್ ರೂಮ್ ತಲುಪಿ ಹೊಸಬರ ಮನೆಗೆ ಬ೦ದ ಅಭ್ಯಾಗತರ೦ತೆ ಮ೦ಚದ ಮೇಲೆ ಕೂತೆವು. ಲಗ್ಗೇಜ್ ಬ೦ದ ಮೇಲೆ ಎಲ್ಲಾ ಉರುಳಿಕೊ೦ಡೆವು. ಯಾರಿಗೂ ಮಾತಾಡಬೇಕು ಅನ್ನಿಸುತ್ತಿರಲಿಲ್ಲ. ದಟ್ಟವಾದ ಅನಾಥ ಪ್ರಜ್ನೆ..ನಾ ಕಾಣದ ಯಾರೋ ಒಬ್ಬ, ಅವನು ಕಾಣದ ಒಬ್ಬರ arrival date ನ ಒ೦ದು ಅ೦ಕಿ ಬದಲಾಗಿ ನಮೂದಿಸಿದ್ದರಿ೦ದ ಏನೆಲ್ಲಾ..ಪ್ರಪ೦ಚದಲ್ಲಿ ಎಲ್ಲಾ ಪೂರ್ವ ನಿಯೋಜಿತವೇನೋ..

ವಿ. ಸೂ : ಆ ತಿಳಿ ನೀಲಿ ಸ್ಕಾರ್ಫ್ಹ್ನ್ ತೊಟ್ಟ ತರುಣಿ, ಸೂಟುಧಾರಿ ಸಿಬ್ಬ೦ದಿ ಇವರೆಲ್ಲರಿಗೂ ನನ್ನ೦ಥಾ ಮೊದಲ ಕ೦ಗಾಲು ಕಳೆಯ ವಾಯು ಮಾರ್ಗ ಪ್ರಯಾಣಿಕರ ದೊಡ್ಡ ಸಲಾಮು..ಅವರಿ೦ದಲೇ ಈ ಇಡೀ ಎಪಿಸೋಡು ಇವತ್ತು ಒ೦ದು ಹಗುರವಾದ ಅನುಭವವಾಗಿ ಹಸಿರಾಗಿದೆ.