ಕಾಯಕ ಯೋಗಿ ಹುಲಿಕೆರೆಯ ಎಂ.ಷಡಕ್ಷರಿ
ವಯಸ್ಸಿರುವಾಗ ವೃತ್ತಿಯನ್ನು ಕೈಗೊಂಡು ಕಾಯಕ ನಡೆಸುವುದು ಸಾಮಾನ್ಯ ಸಂಗತಿ. ವಯಸ್ಸಾದ ನಂತರ ಮೊದಲಿನ ಉತ್ಸಾಹ ಕಳೆದುಕೊಳ್ಳುವುದು, ನಿವೃತ್ತಿಯಾದ ನಂತರವಂತೂ ಜೀವನ ನಶ್ವರ ಎಂಬ ಸ್ಥಿತಿಗೆ ತಲುಪುವುದೂ ಸಾಮಾನ್ಯವೇ. ಆದರೆ ೮೦ರ ಇಳಿವಯಸ್ಸಿನಲ್ಲೂ ಅದೇ ಉತ್ಸಾಹ, ನಿವೃತ್ತಿಯಾದ ನಂತರವೂ ಅದೇ ಕಾಯಕನಿಷ್ಠೆಯನ್ನಿರಿಸಿಕೊಂಡವರು ವಿರಳ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಎಂ.ಷಡಕ್ಷರಿಯವರು ನಿವೃತ್ತ ಶಿಕ್ಷಕ. ಇದೀಗ ೮೦ರ ಇಳಿವಯಸ್ಸು. ಆದರೂ ಕಾಯಕ ಮಾಡಬೇಕೆಂಬ ಅದಮ್ಯ ಉತ್ಸಾಹ. ಆಯ್ಕೆ ಮಾಡಿಕೊಂಡಿರುವ ಕಾಯಕವೂ ವಿಶೇಷವಾದುದೇ. ಕನ್ನಡ ಪುಸ್ತಕಗಳನ್ನು ಮನೆಮನೆಗಳಿಗೆ ಹೊತ್ತೊಯ್ದು ಮಾರಾಟ ಮಾಡುವುದು ಇವರ ಅತ್ಯಂತ ಪ್ರೀತಿಯ ಕಾರ್ಯ. ೧೯೬೯ರಿಂದ ನಿರಂತರ ೩೭ ವರ್ಷ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಷಡಕ್ಷರಿಯವರಿಗೆ ನಿವೃತ್ತಿಯ ನಂತರ ಏನಾದರೂ ಕಾಯಕ ಮಾಡಲೇಬೇಕೆಂಬ ಹಂಬಲ ಇದ್ದೇ ಇತ್ತು. ಒಮ್ಮೆ ಕ್ಷಣಹೊತ್ತು, ಆಣಿಮುತ್ತು ಎಂಬ ಪುಸ್ತಕವನ್ನು ಓದಿ, ಅದನ್ನು ತಮ್ಮ ಪರಿಚಯದವರಿಗೆ ಓದಲು ಕೊಟ್ಟರು. ಅವರು ‘ನನಗೂ ಒಂದು ಪುಸ್ತಕ ಬೇಕು ತಂದುಕೊಡುವಿರಾ?’ ಎಂಬ ಮಾತೇ ಇವರ ಪುಸ್ತಕ ಮಾರಾಟ ಕಾಯಕಕ್ಕೆ ಕಾರಣವಾಯಿತು. ಬೆಂಗಳೂರು, ಹುಬ್ಬಳ್ಳಿ, ಧಾರವಾಡಗಳ ಪುಸ್ತಕಾಲಯಗಳಿಗೆ ಭೇಟಿ ನೀಡಿ ಹೊಸದಾಗಿ ಬಿಡುಗಡೆಯಾದ, ಓದುಗರ ಅಭಿರುಚಿಯ ಪುಸ್ತಕಗಳನ್ನು ಆಯ್ದು ತರತೊಡಗಿದರು. ನಂತರ ತಾವೇ ಅವುಗಳನ್ನು ಹೊತ್ತು ತಾಲೂಕಿನಾದ್ಯಂತ ಮಾರಾಟ ಮಾಡತೊಡಗಿದರು. ಇದೀಗ ಪುಸ್ತಕಗಳನ್ನು ಹೊತ್ತೊಯ್ಯುವ ಶಕ್ತಿ ಸಾಲದಾಗಿ, ಪುಸ್ತಕಗಳನ್ನು ಹೊತ್ತು ತರಲು ತಮ್ಮ ಸಂಬಂಧಿಕರನ್ನು ಕರೆತರುತ್ತಾರೆ. ಬಿಸಿಲು, ಗಾಳಿ, ಚಳಿಗೆ ಕುಂದದೆ ನಿರಂತರವಾಗಿ ಶಾಲಾ, ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿಯ ಮುಖ್ಯಸ್ಥರನ್ನು, ಶಿಕ್ಷಕರನ್ನು, ಉಪನ್ಯಾಸಕರನ್ನು ಕಂಡು ಪುಸ್ತಕಗಳನ್ನು ಪ್ರದರ್ಶಿಸುತ್ತಾರೆ. ಕೊಂಡರೆ ಸರಿ, ಇಲ್ಲವಾದರೆ ಇಲ್ಲ.
ಪುಸ್ತಕಗಳ ಬಗ್ಗೆ ಒಲವು ಮೂಡಿದ್ದು ಹೇಗೆಂದು ಪ್ರಶ್ನಿಸಿದರೆ, ‘ಹೈಸ್ಕೂಲನಾಗಿಂದನ ಪುಸ್ತಕಗಳನ್ನ ಒದೋ ಹವ್ಯಾಸ ಇತ್ತು. ಕಾನಾಮಡುಗಿನಾಗ ಕೋ.ಚೆನ್ನಬಸಪ್ಪ, ಡಾ.ಎಸ್.ಎಂ.ವೃಷಭೇಂದ್ರಸ್ವಾಮಿಯವರು ವಿದ್ಯಾರ್ಥಿಗಳಾಗಿದ್ದಾಗಿನ ಸ್ನೇಹಿತರು, ಅವರ ಒಡನಾಟಾನೂ ಒಳ್ಳೆಯ ಪುಸ್ತಕಗಳನ್ನ ಓದ್ಲಿಕ್ಕೆ ಹಚ್ಚಿತು’ ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚುತ್ತಾರೆ. ಚಿತ್ರದುರ್ಗದ ಮುರುಘಾಮಠದ ನಾಡಹಬ್ಬದಲ್ಲಿಯೂ ಇವರು ಪುಸ್ತಕಗಳನ್ನು ಮಾರಾಟ ಮಾಡಿದ್ದಾರೆ. ಸಾಮಾಜಿಕ ಕಳಕಳಿ, ಹಳಗನ್ನಡ ಕಾವ್ಯ ಪುಸ್ತಕಗಳಿಗೆ ಬೇಡಿಕೆಯಿದೆ ಎಂಬುದು ಇವರ ಅಭಿಪ್ರಾಯ. ಆದರೂ ಇತ್ತೀಚಿನ ಯುವಜನಾಂಗದಲ್ಲಿ ಓದುವ ಹವ್ಯಾಸವಿಲ್ಲ ಎಂಬುದು ಇವರ ಕೊರಗು. ಅಷ್ಟೇ ಅಲ್ಲದೆ ಶಿಕ್ಷಕರಲ್ಲಿಯೂ ಸಾಹಿತ್ಯಾಭ್ಯಾಸವಿಲ್ಲ, ತಿಂಗಳ ಕೊನೆಗೆ ಸಂಬಳಕ್ಕಾಗಿ ಕಾಯುವವರೇ ಹೆಚ್ಚು ಎಂದು ಮನನೊಂದು ಹೇಳುತ್ತಾರೆ. ಇನ್ನಷ್ಟು ದಿನ ಶಕ್ತಿ ಇರುವವರೆಗೆ ಸಂಚರಿಸಿ, ಕೊನೆಯಲ್ಲಿ ಹುಲಿಕೆರೆಯಲ್ಲಿ ಸಿದ್ಧಗೊಳ್ಳುತ್ತಿರುವ ಪ್ರೌಢಶಾಲೆಯ ಗ್ರಂಥಾಲಯಕ್ಕೆ ತಮ್ಮ ಎಲ್ಲ ಪುಸ್ತಕಗಳನ್ನು ಕೊಡುವ ಯೋಚನೆಯಿದೆ ಎಂದು ಷಡಕ್ಷರಿಯವರು ತಿಳಿಸಿದರು. ಈ ಇಳಿವಯಸ್ಸಿನಲ್ಲೂ ಹಿರಿಯ ಜೀವ ಪುಸ್ತಕ ಮಾರಾಟ ಮಾಡುವುದು ಅಪರೂಪ ಹಾಗೂ ವಿಶೇಷವೆನಿಸದೇ ಇರದು.
-ಸಿದ್ಧರಾಮ ಹಿರೇಮಠ ಕೂಡ್ಲಿಗಿ