ಕಾರಣ !

ಕಾರಣ !

ಒಬ್ಬ ಭಿಕ್ಷುಕ ಅಳುತ್ತ ಕುಳಿತ್ತಿದ್ದ. ‘ಯಾಕೆ ಅಳುತ್ತಿರುವೆ?’ ಎಂದು ಕೇಳಿದಾಗ...

‘ಯಾರೋ ಒಬ್ಬ ಹಣ ಇರುವವ ಬಂದು ನನಗೆ ಹೊಸ ಬಟ್ಟೆಯ ಕೊಡಿಸಿದ ಮತ್ತೆ ಅದರ ಜೊತೆಗೆ ನನ್ನ ಮೈಯಲ್ಲಿ ಇದ್ದ ಕೊಳೆಯನ್ನು ತೊಳೆದ. ನನ್ನನ್ನು ಎಲ್ಲರಂತೆಯೇ ಸಾಮಾನ್ಯ ಮಾನವನಂತೆ ಬದಲು ಮಾಡಿದ.’ ಎಂದು ಬಿಕ್ಕಳಿಸಿ ಅಳುತ್ತ ಹೇಳಿ ಕೊಂಡನು.

ನನಗೆ ಆಶ್ಚರ್ಯವಾಯಿತು ‘ಇದಕ್ಕೆ ನೀ ಅಳಬಾರದು ಖುಷಿ ಪಡಬೇಕು’ ಎಂದು ನಗುತ್ತ ಹೇಳಿದೆ.

ಅದಕ್ಕೆ ಪ್ರತಿಯಾಗಿ ಭಿಕ್ಷುಕ ಕೊಟ್ಟ ಉತ್ತರ ನನ್ನನ್ನು ಗಾಢವಾದ ಚಿಂತೆಗೆ ತಳ್ಳಿತು. ಆ ಭಿಕ್ಷುಕನ ಉತ್ತರ ಹೀಗಿತ್ತು " ಈ ನನ್ನ ಹೊಸ ವೇಷ ನನಗೂ ಇಷ್ಟವೇ ಆಯಿತು. ಆದರೆ ಈಗ ನಾನು ಭಿಕ್ಷೆ ಬೇಡಲು ಹೋದರೆ ಯಾರು ಕೂಡ ನನಗೆ ಭಿಕ್ಷೆ ನೀಡುತ್ತಿಲ್ಲ ಎಂದು ಬೇಜಾರು." ಎಂದು ಹೇಳಿದ.

ಸ್ನೇಹಿತರೇ, ನನಗೆ ಈ ಭಿಕ್ಷುಕನ ಮಾತು ಕೇಳಿ ಅನಿಸಿದ್ದು. ‘ವೇಷ ಬದಲಾದರೂ ಅವನ ಮನಸ್ಸು ಬದಲಾಗಿಲ್ಲ, ಭಿಕ್ಷೆಯೊಂದೇ ನನ್ನ ಕಸುಬು ಎಂದು ಬಾಳುತ್ತಿರುವನಿಗೆ ನಾನು ಕೂಡ ದುಡಿದು ತಿನ್ನ ಬಲ್ಲೆ ಎಂಬ ಅರಿವಿಲ್ಲದೆ ಅಳುವ ಪರಿ ಅವನ ಸಣ್ಣತನ, ಕೀಳರಿಮೆ ಮತ್ತು ಅಲ್ಪಜ್ಞಾನಕ್ಕೆ ಸಾಕ್ಷಿಯಾಗಿದೆ’

ಓಮ್ಮೆ ಯೋಚಿಸಿ ನೋಡಿ ಈ ಭಿಕ್ಷುಕನ ಮನಸ್ಥಿತಿ. ಅವನಂತೆಯೇ ಅಳುಕು ನಮ್ಮಲ್ಲಿಯೂ ಇದೆ ಅಲ್ಲವೇ? ನಾ ಮಾಡುತ್ತಿರುವ ಕೆಲಸ, ನಾ ಇರುವ ಜಾಗವ ಬಿಟ್ಟು ಬೇರೆಲ್ಲೂ ಬದುಕುಲಾರೆ ಎಂಬ ಕೀಳರಿಮೆ ಮತ್ತು ಒಂದು ಮೂರ್ಖತನ ನಮ್ಮೊಳಗೆಯೂ ಇದೆ ಅಲ್ಲವೇ…?

-ಕೃತನ್ ವಕ್ಕಲಿಗ, ಬೆಂಗಳೂರು