ಕಾರಿಗೆ ‘ಬ್ರೇಕ್' ಯಾಕೆ?

ಕಾರಿಗೆ ‘ಬ್ರೇಕ್' ಯಾಕೆ?

ಭೌತಶಾಸ್ತ್ರದ ತರಗತಿ ನಡೆಯುತ್ತಿತ್ತು. ಉಪನ್ಯಾಸಕರು ತೂಕಡಿಸುತ್ತಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸಲು ಅವರತ್ತ ಒಂದು ಪ್ರಶ್ನೆಯನ್ನು ಎಸೆದರು. “ಕಾರ್ ಗಳಿಗೆ ಬ್ರೇಕ್ ಯಾಕೆ ಇರುತ್ತದೆ?”

ಸಹಜವಾಗಿಯೇ ಉತ್ತರ ಬಂತು “ ಕಾರ್ ನಿಲ್ಲಿಸುವುದಕ್ಕೆ" ಎಂದು. ಆದರೆ ಅದರಲ್ಲೂ ಕೆಲವು ಚಾಲಾಕಿ ಕಿಲಾಡಿ ವಿದ್ಯಾರ್ಥಿಗಳು ಬೇರೆಯೇ ರೀತಿಯ ಉತ್ತರ ನೀಡಿದರು.

ಒಬ್ಬ ಹೇಳಿದ “ಸರ್, ಅದು ಕಾರ್ ನ ವೇಗವನ್ನು ಕಡಿಮೆ ಮಾಡುವುದಕ್ಕೆ"

ಮತ್ತೊಬ್ಬ ಹೇಳಿದ “ ಸರ್, ನಮ್ಮ ಕಾರ್ ಬೇರೆ ವಾಹನಗಳ ಜೊತೆ ಅಪಘಾತವಾಗದೇ ಇರುವುದಕ್ಕೆ"

ಹೀಗೆ ವಿವಿಧ ರೀತಿಯ ಉತ್ತರಗಳು ವಿದ್ಯಾರ್ಥಿಗಳಿಂದ ಸಿಕ್ಕಿದವು. ಆದರೆ ಉಪನ್ಯಾಸಕರಿಗೆ ಬೇಕಾದ ಸೂಕ್ತ ಉತ್ತರ ಸಿಗಲಿಲ್ಲ. ಅದಕ್ಕೆ ಅವರೇ ಮುಂದುವರೆದು “ ನೀವು ಹೇಳಿದ ಉತ್ತರಗಳು ತಾಂತ್ರಿಕವಾಗಿ ಸರಿಯಾಗಿಯೇ ಇವೆ. ನೀವು ವಿವಿಧ ರೀತಿಯ ಉತ್ತರ ನೀಡಲು ಪ್ರಯತ್ನ ಪಟ್ಟದ್ದಕ್ಕೆ ನನ್ನ ಅಭಿನಂದನೆಗಳು. ಆದರೆ ನಾವು ವಿಜ್ಞಾನದ ವಿದ್ಯಾರ್ಥಿಗಳು, ಇನ್ನಷ್ಟು ಆಳವಾಗಿ ನಾವು ಯೋಚಿಸಿ ಬೇರೇ ವಿಧದ ಯಾರೂ ಯೋಚನೆ ಮಾಡಿರದ ಉತ್ತರವನ್ನು ಕಂಡು ಹಿಡಿಯಬೇಕು ಅಲ್ಲವೇ?” ಎನ್ನುತ್ತಾರೆ. ಆದರೆ ಯಾವ ವಿದ್ಯಾರ್ಥಿಯಿಂದಲೂ ಬೇರೆ ರೀತಿಯ ಉತ್ತರ ಬಾರದೇ ಇದ್ದುದನ್ನು ನೋಡಿ ಅವರೇ ನಸು ನಕ್ಕು ಉತ್ತರಿಸುತ್ತಾರೆ.

“ ನಾವು ವೇಗವಾಗಿ ಚಲಿಸಲು ಅನುಕೂಲವಾಗುವಂತೆ ಮಾಡಲು ಬ್ರೇಕ್ ಅಳವಡಿಸಿರುತ್ತಾರೆ" ತರಗತಿಯಲ್ಲಿ ನಿಶ್ಯಬ್ಧ. ಅವರು ಯಾರೂ ಈ ಉತ್ತರವನ್ನು ನಿರೀಕ್ಷೆ ಮಾಡಿರುವುದಿಲ್ಲ. ಎಲ್ಲರೂ ವಾಹನವನ್ನು ನಿಲ್ಲಿಸಲು ಮಾತ್ರ ಬ್ರೇಕ್ ಬಳಸುತ್ತಾರೆ ಎಂಬ ನಿಟ್ಟಿನಲ್ಲೇ ಉತ್ತರ ನೀಡಿದ್ದರು. ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲೂ ಪ್ರಶ್ನಾರ್ಥಕ ಚಿನ್ಹೆ ಮೂಡಿದ್ದು ಉಪನ್ಯಾಸಕರಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. 

ಅದನ್ನು ಕಂಡು ಅವರೇ ತಮ್ಮ ಮಾತುಗಳನ್ನು ಮುಂದುವರೆಸಿದರು. “ಕಾರ್ ನಲ್ಲಿರುವ ಬ್ರೇಕ್ ನಮಗೆ ವೇಗವಾಗಿ ಹೋಗಲು ಧೈರ್ಯ ನೀಡುತ್ತದೆ ಎಂಬುದು ಸತ್ಯ ಅಲ್ಲವೇ? ನಿಮ್ಮ ಕಾರ್ ಗೆ ಬ್ರೇಕ್ ಇಲ್ಲದೇ ಹೋಗಿದ್ದರೆ ನೀವು ವೇಗವಾಗಿ ಚಲಿಸುತ್ತಲೇ ಇರುತ್ತಿರಲಿಲ್ಲ. ನಿಮ್ಮ ಬ್ರೇಕ್ ಮೇಲೆ ನಿಮಗಿರುವ ನಂಬಿಕೆ ನಿಮ್ಮಿಂದ ಕಾರ್ ವೇಗವಾಗಿ ಚಲಿಸುವಂತೆ ಮಾಡುತ್ತದೆ ಅಲ್ಲವೇ?” 

ಎಲ್ಲಾ ವಿದ್ಯಾರ್ಥಿಗಳು ಉಪನ್ಯಾಸಕರ ಈ ಉತ್ತರದ ಬಗ್ಗೆ ಚಿಂತಿಸತೊಡಗಿದರು. ನಮ್ಮ ಜೀವನದಲ್ಲೂ ಹಾಗೆಯೇ ಅಲ್ಲವೇ? ನಾವು ಯಾವುದೇ ಸಮಸ್ಯೆ ಬಂದಾಗ ಅದನ್ನು ನಿವಾರಣೆ ಮಾಡಲು ನಮ್ಮ ಜೊತೆ ಯಾರಾದರೂ ಇದ್ದಾರೆ ಎಂಬ ಆತ್ಮಸ್ಥೈರ್ಯವು ನಮ್ಮಿಂದ ದೊಡ್ದ ದೊಡ್ದ ಕೆಲಸವನ್ನು ಮಾಡಲು ಪ್ರೇರೇಪಿಸುತ್ತದೆ. ಉದಾಹರಣೆಗೆ ನೀವು ಯಾವುದಾದರೂ ತಪ್ಪು ಕೆಲಸ ಮಾಡಲು ಹೊರಟಾಗ ನಿಮ್ಮ ಹೆತ್ತವರು, ಗೆಳೆಯರು, ಸಂಬಂಧಿಕರು ನಿಮ್ಮನ್ನು ‘ಬ್ರೇಕ್' ನಂತೆ ತಡೆಯುತ್ತಾರೆ. ಇದು ಆ ಕ್ಷಣಕ್ಕೆ ನಿಮಗೆ ಕಿರಿಕಿರಿಯಂತೆ ಕಂಡರೂ ನಿಮಗೆ ಮುಂದಿನ ದಿನಗಳಲ್ಲಿ ಆ 'ಬ್ರೇಕ್' ನಿಮ್ಮನ್ನು ತಡೆಯದೇ ಇದ್ದಲ್ಲಿ ನೀವು ಸರ್ವನಾಶವಾಗಿ ಹೋಗುತ್ತಿದ್ದಿರಿ ಎಂದು ಅರಿವು ಮೂಡುತ್ತದೆ.

ನಿಮ್ಮ ಜೊತೆ ಇರುವ ಸಹೃದಯರಿಂದಲೇ ನಿಮಗೆ ಜೀವನದಲ್ಲಿ ‘ರಿಸ್ಕ್' ತೆಗೆದುಕೊಳ್ಳಲು ಧೈರ್ಯ ಬರುತ್ತದೆ. ಈ ಸಹೃದಯ ಜೊತೆಗಾರರು ನಿಮ್ಮ ಜೀವನದಲ್ಲಿ ‘ಬ್ರೇಕ್' ನಂತೆ ಕೆಲಸ ಮಾಡುತ್ತಾರೆ. ಅವರೆಲ್ಲಾ ಇದ್ದಾರೆ ಎಂಬ ಧೈರ್ಯದಲ್ಲಿ ನೀವೂ ಜೀವನದಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳುತ್ತೀರಿ. ನಾವು ತಪ್ಪಾದ ದಾರಿಯಲ್ಲಿ ವೇಗವಾಗಿ ಹೋಗುವಾಗಲೂ ಈ ರೀತಿಯ ‘ಬ್ರೇಕ್' ಗಳು ನಿಮ್ಮನ್ನು ಸರಿದಾರಿಯತ್ತ ತಿರುಗಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಿಮ್ಮ ಜೀವನದಲ್ಲಿ ಇರುವ ಇಂತಹ ಸಂಬಂಧಿಕರನ್ನು ಗೆಳೆಯರನ್ನು ಕಳೆದುಕೊಳ್ಳಬೇಡಿ. 

ನಡೆಯಲು ಕಲಿಯುವಾಗ ಮಗು ಪದೇ ಪದೇ ಬೀಳುತ್ತದೆ. ಹಾಗೆ ಬಿದ್ದು, ಎದ್ದು ಅದು ನಡೆಯಲು ಕಲಿಯುತ್ತದೆ. ಜೀವನದಲ್ಲಿ ಬೀಳದೇ ಇರುವ ಮನುಷ್ಯ ಎದ್ದು ನಿಲ್ಲಲಾರ. ಆದುದರಿಂದ ಬಿದ್ದವರನ್ನು ತುಳಿಯದೇ ಮತ್ತೆ ಎದ್ದು ನಿಲ್ಲುವಂತೆ ಮಾಡುವುದೇ ಮಾನವೀಯತೆ.

(ಆಂಗ್ಲ ಬರಹವೊಂದರ ಅನುವಾದ)

ಚಿತ್ರ ಕೃಪೆ: ಅಂತರ್ಜಾಲ ತಾಣ