ಕಾಲಕ್ಕೆ ಕೊಂಕದ ಕೊಂಕಿ ಕೋಟೆ (ಭಾಗ ೧)

ಕಾಲಕ್ಕೆ ಕೊಂಕದ ಕೊಂಕಿ ಕೋಟೆ (ಭಾಗ ೧)

ತುಂಬಾ ವರ್ಷಗಳ ಹಿಂದೆ, ಯಾರೋ ಕೆಲವರು ಕೊಂಕಿ ಕೋಟೆಗೆ ಹೊರಟಿದ್ದರು. ನಾನೂ ಬರುವುದಾಗಿ ಹಠ ಹಿಡಿದೆ. ಚಿಕ್ಕವರು ಹೋಗುವ ಜಾಗ ಅದಲ್ಲವೆಂದು ಹೇಳಿ ಬಿಟ್ಟು ಹೋಗಿದ್ದರು. ಅಂದಿನಿಂದ 'ಕೊಂಕಿ ಕೋಟೆ' ಹೋಗಲೇಬೇಕಾದ ಸ್ಥಳವಾಗಿ ಮನಸ್ಸಲ್ಲಿ ಉಳಿದಿತ್ತು. ಈ ವರ್ಷ ಅಂತೂ ಕೊಂಕಿಕೋಟೆಗೆ ಹೋಗುವಷ್ಟು ದೊಡ್ಡವನಾದೆ!
 
ಕೊಂಕಿ ಕೋಟೆ ಎಲ್ಲಿದೆ? ಬಹಳ ಜನಕ್ಕೆ ಗೊತ್ತಿಲ್ಲ. ಕೋಟೆಯ ಬಗ್ಗೆ ಹಾಗಂತೆ, ಹೀಗಂತೆ ಅಂತ ಬಣ್ಣ ಕಟ್ಟಿ ಹೇಳುವುದು ಬಿಟ್ಟರೆ ಬಹಳ ಜನ ಅದನ್ನು ನೋಡಿದವರಲ್ಲ. ಅದರ ಬಗ್ಗೆ ಚೆನ್ನಾಗಿ ಪರಿಚಯವಿದ್ದ ಗುಂಡಾ ಭಟ್ಟರೂ ಹಿಂದಿನ ವರ್ಷ ನಿಖಾಲಿ ಆದರಂತೆ. ಅಂತೂ ಅಲ್ಲಿ-ಇಲ್ಲಿ ಕೇಳುವ ಹೊತ್ತಿಗೆ ಅದಕ್ಕೆ ಹತ್ತಿರದ ಸ್ಥಾನ 'ಬನಗೆರೆ' ಎಂಬ ಊರೆಂದು ಗೊತ್ತಾಯ್ತು. ಸಿರ್ಸಿ ತಾಲೂಕಿನಲ್ಲಿ ಒಂದೂ ಮೂಲೆ ಹಳ್ಳಿ ಬನಗೆರೆ. ನಮ್ಮ ವಾನಳ್ಳಿಯಂಥ ಮೂಲೆ ಹಳ್ಳಿಯ ಆಚೆ ಹತ್ತು ಕಿ.ಮೀ. ನಡೆದು ಹೋಗಬೇಕು. ರಗಳೆಯೇ ಬೇಡವೆಂದು ಹಿಂದಿನ ರಾತ್ರಿಯೇ ಅಲ್ಲಿ ಹೆಗಡೇರ ಮನೆಗೆ ನಾವು ನಾಲ್ವರು ಹೋದೆವು. ಮರುದಿನ ನಸುಕಿನಲ್ಲಿ ಅವರ ಮನೆಯವರನ್ನು ಕರೆದುಕೊಂಡು ಕೊಂಕಿಯ ದಿಕ್ಕಿಲ್ಲಿ ಹೊರೆಟೆವು.
 
ಗದ್ದೆ ಹಾಳಿಗಳ ಮೇಲೆ ಮೊದಲ ನಡಿಗೆ.
 
ಬೆಳ್ಳಕ್ಕಿ ಸಾಲುಗಳ ಭೇಟಿ. ಗದ್ದೆ ದಾಟಿ ಕಾಡು ಹಾದಿ. ಬೇಸಿಗೆಗೆ ಮರಗಳೆಲ್ಲ ಪೊರೆ ಕಳಚಿವೆ. ಅದಕ್ಕೇ ನೆಲವೇ ಕಾಣದ ಹಾಗೆ ಎಲೆಗಳ ಹಾಸು. ಮರಗಳು ಈ ಕಾಲದ್ದಲ್ಲ ಎನ್ನುವ ಹಾಗೆ ಅವುಗಳ ಗಾತ್ರ. ಅಂತೂ ನಾವು ಕಂಡಿರದ ಕಾಡಲ್ಲಿ ದಾರಿ ಮಾಡಿಕೊಂಡು ನಡೆದಿದ್ದೆವು.
 
ಬಂದು ನಿಂತದ್ದು ಕೋಟೆಯ ಬಾಗಿಲಿಗೆ. ಕಲ್ಲಿನ ಮೆಟ್ಟಿಲುಗಳೋ ಹುಗಿದುಹೋದ ಶಾಸನಗಳೋ ಗೊತ್ತಾಗದ ಹತ್ತಾರು ಕಲ್ಲುಗಳನ್ನು ಏರಿ ಬಂದರೆ ಅದೇನೂ ಹೆಬ್ಬಾಗಿಲಲ್ಲ!! ಗೋಡೆ ನಡುವೆ ಒಬ್ಬಮಾತ್ರ ನುಸುಳಲು ಇರುವ ಓಬ್ಬವ್ವನ ಕಿಂಡಿ. ದಾಟಿಬಂದರೆ ಅಂಥದ್ದೇ ಗೋಡೆಗಳು ಮೂರು ಸುತ್ತು. ಒಂದು ಏರಿ ಬಂದರೆ ಸುಮಾರು ಅರವತ್ತು ಅಡಿ ಮೇಲಕ್ಕೆ ಇನ್ನೋಂದು. ಎರಡು ಗೋಡೆಗಳ ನಡುವೆ ಇದ್ದದ್ದು ಹೆದ್ದಾರಿಯೋ, ನೀರು ಹೋಗುವ ನಾಲೆಯೋ ಈಗ ಅರ್ಥವಾಗುವುದಿಲ್ಲ.
 
ಕೋಟೆ ಆಗಿನ ಕಾಲದ ಗಾರೆಯದು. ಅದಕ್ಕೇ ಇಂದಿಗೂ ಅಲ್ಲಲ್ಲಿ ಕುಸಿದ ಗಾರೆಯ ಗುಡ್ಡೆಗಳನ್ನು ನೋಡಬಹುದು. ಸುಣ್ಣ, ಮರಳು ಬೆಲ್ಲದ ಮಿಶ್ರಣ ಅದು. ಬಿಸಿಲು-ಮಳೆ-ಗಾಳಿ ಈ ಗಾರೆಯನ್ನು ಏನೂ ಮಾಡಲಾಗಿಲ್ಲ! ಕೋಟೆಯ ನಾಲ್ಕು ದಿಕ್ಕಿಗೆ ಗೋಲ ಮಂಟಪದಂತೆ ಇರುವ ಎತ್ತರದ ಸ್ಥಳ-ಬಹುಶಃ ವೀಕ್ಷಣಾ ತಾಣವಿರಬೇಕು. ಹಾಗೇಯೇ ಗೋಡೆಗಳಲ್ಲಿ ಗಮನಿಸಿದರೆ ಸಣ್ಣ ಸಣ್ಣ ತೂತುಗಳು. ವಿಶೇಷವೆಂದರೆ ಗೋಡೆಯ ಹೊರ ಪದರದಿಂದ ಎರಡು. ಕಿಂಡಿಗಳಂತಿರುವವು. ಒಳ ಬಂದರೆ ಒಂದೇ. ಈ ತೂತುಗಳಲ್ಲಿ ಬಂದೂಕನ್ನಿಟ್ಟು ಎರಡೂ ಕೋನಗಳಲ್ಲಿ ಗುಂಡು ಹಡೆಯಬಹುದಿತ್ತು! ಈ ಮೂರುಸುತ್ತಿನ ಗೋಡೆಗಳನ್ನೂ ದಾಟಿ, ಮತ್ತೆ ಕಡಿದಾದ ಬೆಟ್ಟವನ್ನು ಏರಿ ಬಂದರೆ ಇದು ಕೊಂಕಿ ಕೋಟೆ. ಹತ್ತಿ ನಿಂತರೆ ಗೊತ್ತಾಗುತ್ತದೆ. ಅದೊಂದು ಅದ್ಭುತ ಸೃಷ್ಟಿ. ಅಸಮಾನ ಪ್ರಾಕೃತಿಕ ಗಟ್ಟಿ ಯಾವ ವೈರಿಗಳು ಈ ಕೋಟೆಯನ್ನು ಭೇದಿಸಿ ಬಂದಾರು?
 
ಸುತ್ತ ನೋಡಿ- ಎಲ್ಲೆಲ್ಲೂ ಪಶ್ಚಿಮ ಘಟ್ಟಗಳು. ನಡುವೆ ಗೊಮ್ಮಟನಂತೆ ನಿಂತಿದೆ ಕೋಟೆ ಈ ಘಟ್ಟಗಳ ಕೆಳಗೆ ಕೋಟೆಯ ಮೂರು ದಿಕ್ಕಿಗೂ ನೀರು. ಬಲದಿಂದ ಶಿವಗಂಗಾ ಜಲಪಾತದ ಖ್ಯಾತಿಯ ಶ್ಯಾಮಲಾ ವರ್ಣೆಯಾಗಿ ಹರಿದು ಬಂದರೆ, ಎಡಗಡೆಯಿಂದ ಕಕ್ಕಳ್ಳಿಯ ಕಗ್ಗಾಡ ಒಟಲಿಂದ ಗಂಭೀರ ವದನೆಯಾಗಿ ಹರಿದುಬರುವ ಬಿಳಿ ಹೊಳೆ ಕೋಟೆಯ ಕಣ್ಣೆದಿರಿಗೇ ಒಂದಾಗಿ ಮುಂದೆ ಗಂಗಾವಳಿಯಾಗಿ ಘಟ್ಟ ಇಳಿಯುತ್ತದೆ.
 
ಹೀಗಾಗಿ 'ಕೊಂಕಿ' ಭೌಗೋಳಿಕವಾಗಿ ತುಂಬಾ ರಕ್ಷಣಾತ್ಮಕ ಪ್ರದೇಶ. ಮೂರು ದಿಕ್ಕುಗಳಿಂದಲೂ ನೀರು. ನೀರು ದಾಟಿ ಬಂದರೂ ಕಟ್ಟ ಕಡಿದಾದ ಮಲುಗಟ್ಟಲೆ ಗುಡ್ಡವನ್ನು ಏರಬೇಕು. ಕಾಡು ಕೋಣ, ಹಂದಿ, ಕರಡಿ, ಹುಲಿ, ಚಿರತೆಗಳ ಬೀಡಾಗಿರುವ ಈ ಘಟ್ಟವನ್ನು ಹತ್ತಿ ಬರುವ ಎಂಟೆದೆ ಯಾರಿಗಿದೆ? ಕೊಂಕಿಗೆ ಬರಲು ಇನ್ನುಳಿದದ್ದು ಒಂದೇ ದಾರಿ - ಅದು ನಾವು ಕಡಿಯುತ್ತ ಬಂದದ್ದು! ಆ ದಾರಿಯೂ ಹೇಗಿದೆಯೆಂದರೆ ಕೋಟೆಯ ಮೇಲಿಂದ ಒಂದೇ ಒಂದು ಕಲ್ಲೆಸೆದರೂ ಅದು ಉರುಳಿ, ಸಿಡಿದು ಸ್ಫೋಟಗೊಳ್ಳುತ್ತಾ ಮೇಲೆ ಯಾರೂ ಹತ್ತಬಾರದ ಪರಿಸ್ಥಿತಿಯನ್ನು ನಿರ್ಮಿಸಬಲ್ಲುದು.
 
ಇಂಥ ರಕ್ಷಣಾತ್ಮಕ ಪ್ರದೇಶದಲ್ಲಿ ಕೋಟೆ ಕಟ್ಟಿದ್ದು ಯಾರು? ಯಾಕೆ? ಹೇಳುತ್ತಾರೆ. ಇದು ಸೋದೆ ಅರಸರ ಕೋಟೆಯಂತೆ. ಸೋದೆಯಲ್ಲಿ ನಾಯಕ ವಂಶಸ್ಥರು ಸೋಲುವ ಸಂದರ್ಭ ಬಂದಾಗ ಇಲ್ಲಿಗೆ ಬಂದು ಅವಿತುಕೊಳ್ಳತ್ತಿದ್ದರಂತೆ. ಉಡಲು-ಉಣಲು ಇದ್ದರೆ ಎಷ್ಟು ದಿನವೂ ನಿರ್ಭಯವಾಗಿ ಬದುಕಲು ಸಾಧ್ಯವಿರುವ ಈ ಸ್ಥಳ ವೈರಿಯ ಕಣ್ಣು ತಪ್ಪಿಸಿ ಆಡಗಿರಲು ಪ್ರಶಸ್ತವೇ. ನಮ್ಮ ಎಂ.ಎಲ್‌.ಎ.ಗಳನ್ನು ಹಾರಿಸುವ ಅಭ್ಯಾಸವಿರುವವರೂ ಈ ಕೋಟೆಯನ್ನು ಚೆನ್ನಾಗಿ ಬಳಸಿಕೊಳ್ಳಬಹುದು!