ಕಾಲಕ್ಕೆ ಸವಾಲೊಡ್ಡಿದ ಮೇಳದ ಬದುಕು

ಕಾಲಕ್ಕೆ ಸವಾಲೊಡ್ಡಿದ ಮೇಳದ ಬದುಕು

ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ.  ಕಲೆಯನ್ನು ಸಮೃದ್ಧಗೊಳಿಸಿವೆ. ಆದರೆ ಯಜಮಾನನ ಮುಖದಲ್ಲಿ ನಗು ಬಿಡಿ, ಕಿರುನಗುವನ್ನು ಮೂಡಿಸಿದ ಮೇಳಗಳು ತೀರಾ ವಿರಳ. ಕೀರ್ತಿಶೇಷ ಡಾ.ಶೇಣಿಯವರು ಒಂದೆಡೆ ಉಲ್ಲೇಖಿಸಿದ್ದರು, “ಮೇಳಗಳ ಯಜಮಾನನಾದರೆ ಬದುಕಿನ ಸುಖ ನೆಮ್ಮದಿಯು ಬಲಿಯಾದಂತೆ!” ಅವರ ಸ್ವಾನುಭವ ಕೂಡಾ.
ಅರುವತ್ತೈದರ ಕೆ.ಎಚ್.ದಾಸಪ್ಪ ರೈಗಳ ಕಲಾ ಯಾನ ಮತ್ತು ಮೇಳದ ಅನುಭವಗಳಿಗೆ ಕಿವಿಯಾಗುವ ಸಂದರ್ಭ ಒದಗಿತ್ತು. ಅವರು ಮಾತು ನಿಲ್ಲಿಸಿದಾಗ ನನಗನ್ನಿಸಿತು - “ಅಬ್ಬಾ.. ಗೆಲುವಿನ ರೇಖೆ ಯಾವಾಗಲೂ ಚಿಕ್ಕದು!” ಕಲಾವಿದನಾಗಿ ರೈಗಳದು ದೊಡ್ಡ ಹೆಸರು. ಕೀರ್ತಿಕಾಮಿನಿ ಅಪ್ಪಿದ, ಒಪ್ಪಿದ ಕಾಲಘಟ್ಟವು ಅವರ ಪಾತ್ರ ವೈಭವಗಳ ದಿನಮಾನಗಳು. ತುಳು, ಕನ್ನಡ ಎರಡರಲ್ಲೂ ಸಮಾನವಾದ ಛಾಪು ಒತ್ತಿದ ದಾಸಪ್ಪ ರೈಗಳ ಮೇಳದ ಬದುಕು ಮೇಲ್ನೋಟಕ್ಕೆ ಸುಂದರ ಹೂ. ಆ ಹೂವಿನಲ್ಲಿ ಮಾಧುರ್ಯವಿತ್ತು. ಸೆಳೆತವಿತ್ತು. ಉತ್ತಮ ನೋಟವಿತ್ತು. ಆದರೆ ತಾಳಿಕೆ ಕಡಿಮೆ.
1965ನೇ ಇಸವಿ. ಮಂಗಳೂರಿನ ನೆಹರೂ ಮೈದಾನಿನಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಸಭಾದ ಸೀನ್‍ಸೀನರಿ ಯಕ್ಷಗಾನ. ಟೆಂಟ್ ಬದಲಿಗೆ ಮುಳಿಹುಲ್ಲಿನ ಸೂರು. ದಿನಂಪ್ರತಿ ಆಟ. ಕಲಾವಿದ ಕೆ.ಎನ್.ಬಾಬು ರೈಗಳ ಮೂಲಕ ಬಣ್ಣದ ನಂಟು. ‘ಕಾಂತಾಬಾರೆ ಬೂದಾಬಾರೆ’ ಪ್ರಸಂಗದ ಮೂಲಕ ರಂಗಪ್ರವೇಶ. ಹಿರಿಯ ಕಲಾವಿದರ ಕೋಪ-ತಾಪ, ಪ್ರಸನ್ನತೆ-ಪ್ರಶಾಂತತೆ, ಸಿಡುಕು-ಮಂದಹಾಸಗಳ  ಜತೆ ಬದುಕು. ಸುಮಾರು ಎಂಟು ವರುಷ ತಿರುಗಾಟ. ಆಗ ಮೂರು ದಿವಸಕ್ಕೆ ಮೂರು ರೂಪಾಯಿ ಸಂಬಳ!
ನಾಲ್ಕು ವರುಷ ಕೌಟುಂಬಿಕ ಏಳುಬೀಳುಗಳಿಂದಾಗಿ ಮೇಳದ ಜೀವನಕ್ಕೆ ವಿದಾಯ. ಬದುಕಿಗಾಗಿ ಹೋಟೆಲ್ ಆರಂಭ. ಜತೆಗೆ ರಾಜಕೀಯ ಸ್ಪರ್ಶ. ಸಾರ್ವಜನಿಕ ಒಡನಾಟ. ನಿತ್ಯ ಓಡಾಟ-ತಿರುಗಾಟ. ಹೋಟೆಲ್ ವ್ಯಾಪಾರ ಕೈಕೊಟ್ಟಿತು. 1977ರ ಬಳಿಕ ಪುನಃ ಮೇಳದ ಸಹವಾಸ. ವೇಷಗಾರಿಕೆಯೊಂದಿಗೆ ಹೆಚ್ಚುವರಿಯಾಗಿ ವ್ಯವಸ್ಥಾಪಕ ಜವಾಬ್ದಾರಿ. ವೈಯಕ್ತಿಕ ಪ್ರತಿಷ್ಠೆ, ಭಿನ್ನಾಭಿಪ್ರಾಯ, ಮತ್ಸರ ಮೊದಲಾದ ಸಾಮಾಜಿಕ ಸಮಸ್ಯೆಗಳಿಂದ ರೋಸಿ ಮೇಳ ಬಿಟ್ಟರು. ಮುಂದೆ ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಿಂದ ತಿರುಗಾಟ. ಮೇಳದ ಜವಾಬ್ದಾರಿಯ ಭಾರ. ದಿನಗಳು ಸರಿಯುತ್ತಿದ್ದಂತೆ ಸ್ವಂತ ಮೇಳ ಮಾಡುವ ಯೋಚನೆಗೆ ಶ್ರೀಕಾರ.
ಸ್ವಂತದ್ದಾದ ಕುಂಬಳೆ ಮೇಳದ ಕನಸು. ಕೈಯಲ್ಲಿದ್ದ ಮೂಲ ಬಂಡವಾಳ ನಾಲ್ಕಂಕೆಯನ್ನು ಮೀರದ ಮೊತ್ತ. ಅಭಿಮಾನಿಗಳ ಸಹಕಾರ. ಬ್ಯಾಂಕಿನ ಸಾಲ. ಮೇಳದ ವೈಭವ ಸಂಪನ್ನತೆಯು ನಾಲ್ದೆಸೆ ಪ್ರಚಾರವಾಯಿತು. ಇನ್ನೇನು ಕ್ಲಿಕ್ ಆಯಿತು ಎನ್ನುವಾಗ ಚೋರಶಿಖಾಮಣಿ ‘ರಿಪ್ಪನ್ ಚಂದ್ರನ್ ಕಾಟ’ ಶುರುವಾಗಬೇಕೇ? ಎಲ್ಲೆಲ್ಲೂ ಗೊಂದಲ. ಟೆಂಟ್ ಊರಲಾಗದ ಸ್ಥಿತಿ. ಹೇಗೋ ಮೇಳದ ನಿಭಾವಣೆ. ಮೊದಲ ವರುಷದ ತಿರುಗಾಟ ಮುಗಿಯಿತು.
ಎರಡನೇ ವರುಷದಿಂದ ಮೇಳವು ದಾಸಪ್ಪ ರೈಗಳಿಗೆ ಅನುಕೂಲವಾಗಿ ವರ್ತಿಸಲಿಲ್ಲ. ಅಪಘಾತಗಳ ಮಾಲೆ. ಆರ್ಥಿಕ ಕಷ್ಟ-ನಷ್ಟ. ಮೇಳ ನಿರ್ವಹಣೆಗಾಗಿ ಕೂಡಿಟ್ಟ ಹಣ ಕರಗಿತು. “ನನ್ನ ಹೆಂಡತಿಯ ಕುತ್ತಿಗೆಯಲ್ಲಿ ನಾಲ್ಕೂವರೆ ಪವಿನ ಚಿನ್ನದ ಕರಿಮಣಿ ಸರ ಇತ್ತು. ಗಂಡ ಇರುವಲ್ಲಿಯವರೆಗೆ ಅದನ್ನು ತೆಗೆಯುವುದಿಲ್ಲ ಎಂದು ಹಠ ಹಡಿದಿದ್ದಳು. ಅವಳನ್ನು ಸಮಾಧಾನ ಪಡಿಸಿ ತೆಗೆದುಕೊಂಡು ಬಂದು ಹಣದ ವ್ಯವಸ್ಥೆ ಮಾಡಿಕೊಂಡೆ. ಅವಳಿಗೆ ಮುನ್ನೂರು ರೂಪಾಯಿಗಳ ಸರ ತೆಗೆದುಕೊಟ್ಟೆ,” ಎನ್ನುವಾಗ ದಾಸಪ್ಪಣ್ಣದ ಕಣ್ಣಲ್ಲಿ ಕಣ್ಣೀರು ಜಿನುಗಿತು.
ಏನು ಮಾಡಿದರೂ ಕಷ್ಟ ಪರಂಪರೆಗೆ ನಿಲುಗಡೆಯಿರಲಿಲ್ಲ. ಮನೆಯಲ್ಲಿ ಊಟಕ್ಕೆ ತತ್ವಾರವಾಯಿತು. “ಆಟದ ಯಜಮಾನನ ಮನೆಯಾಗಿದ್ದ ನನ್ನ ಮನೆಯಲ್ಲಿ ಎಲ್ಲರಿಗೂ ಊಟ ಕೊಡುತ್ತಿದ್ದೆ. ಆದರೆ ಆ ದಿವಸಗಳಲ್ಲಿ ನನಗೇ ಊಟಕ್ಕೆ ಗತಿಯಿಲ್ಲದಾಯ್ತು. ಹಾಲು ತರಲು ತೊಂದರೆಯಾಗಿ ಹಾಲಿನ ಹುಡಿ ಬಳಸುತ್ತಿದ್ದೆ...” ಸಂದು ಹೋದ ದಿವಸಗಳನ್ನು ನೆನಪಿಸಿಕೊಳ್ಳುತ್ತಾರೆ. ಅರುವತ್ತೈದು ಮಂದಿ ಸದಸ್ಯರಿದ್ದ  ಮೇಳದಲ್ಲಿ ಸಂಖ್ಯೆ ಏಳಕ್ಕೆ ಇಳಿದಾಗ ಮೇಳ ನಿಲ್ಲಿಸುವ ಯೋಚನೆಗೆ ಕಾಲವೂ ಸ್ಪಂದಿಸಿತು. ಹೆಸರಿನೊಂದಿಗೆ ‘ಮೇಳದ ಯಜಮಾನ’ ಎನ್ನುವ ಹೆಸರು ಹೊಸೆಯಿತಷ್ಟೇ ವಿನಾ ಬದಕು ಹಸನಾಗಲಿಲ್ಲ.
ಹದಿನೆಂಟು ವರುಷ ಕರ್ನಾಟಕ ಮೇಳ, ಎಂಟು ವರುಷ ಕದ್ರಿ ಮೇಳ, ಆರು ವರುಷ ಸ್ವಂತದ್ದಾದ ಕುಂಬಳೆ ಮೇಳ, ಹತ್ತು ವರುಷ ಮಂಗಳಾದೇವಿ ಮೇಳ.. ಹೀಗೆ ಸುಮಾರು ನಲವತ್ತೆರಡು ವರುಷಗಳ ಸೇವೆ. ಪ್ರಕೃತ ನಿವೃತ್ತ. ಕೋಟಿ ಚೆನ್ನಯ್ಯ ಪ್ರಸಂಗದ ‘ಕೋಟಿ’, ಕಾಂತಾಬಾರೆ, ದೇವುಪೂಂಜ, ಕೋಡ್ದಬ್ಬು, ಕೋಡ್ಯರಾಳ್ವ... ಹೀಗೆ ತುಳು ಪ್ರಸಂಗಗಳ ಪ್ರಮುಖ ಪಾತ್ರಗಳು ರೈಗಳಲ್ಲಿ ಮರುಹುಟ್ಟು ಪಡೆದಿವೆ. 2014ರಲ್ಲಿ ತನ್ನ ವೃತ್ತಿ ಬದುಕಿನ ಚಿನ್ನದ ಹಬ್ಬವನ್ನು ಪುತ್ತೂರಿನಲ್ಲಿ ಅದ್ದೂರಿಯಾಗಿ ಅಚರಿಸಿದ್ದಾರೆ. ಆ ಸಂದರ್ಭದಲ್ಲಿ ಜೀವನಗಾಥೆ ‘ಸ್ವರ್ಣ ಯಕ್ಷದಾ’ ಕೃತಿಯು ಅನಾವರಣಗೊಂಡಿತ್ತು.
ದಾಸಪ್ಪಣ್ಣದ ಕಲಾ ಜೀವನಕ್ಕೆ ಕಿವಿಯಾಗುತ್ತಿದ್ದಂತೆ ನಳ, ಹರಿಶ್ಚಂದ್ರಾದಿಗಳ ಕತೆ ನೆನಪಾಯಿತು. ಸತ್ಯಕ್ಕಾಗಿ ಈ ಮಹಾತ್ಮರು ಎಷ್ಟೊಂದು ಕಷ್ಟ ಪಟ್ಟರು ಅಲ್ವಾ. ಆದರೆ ಬದುಕು ಮತ್ತು ಕಲೆಯ ಉತ್ಕರ್ಷಕ್ಕಾಗಿ ಪಣತೊಟ್ಟ ದಾಸಪ್ಪಣ್ಣನ ಪಾಲಿಗೆ ಕಾಲ ಎಷ್ಟು ಕಟುವಾಗಿತ್ತು! ಕಷ್ಟದ ಬದುಕನ್ನು ಎದೆಯುಬ್ಬಿಸಿ ಸೈರಿಸಿ ಕಾಲವೇ ನಿಬ್ಬೆರಗಾಗುವಂತೆ ಮಾಡಿದ ದಾಸಪ್ಪ ರೈಗಳು ಹಲವು ಪುರಸ್ಕಾರ, ಸಂಮಾನ, ಪ್ರಶಸ್ತಿಗಳಿಂದ ಪುರಸ್ಕøತರು.
ಈಗ ‘ಬೊಳ್ಳಿಂಬಳ ಪ್ರಶಸ್ತಿ’ಯ ಸರದಿ. ಪ್ರಶಸ್ತಿಯನ್ನು ‘ಪಾಣಾಜೆ ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ’ವು ಆಯೋಜಿಸಿದೆ. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್.ಓಕುಣ್ಣಾಯರ ಹಿರಿತನದಲ್ಲಿ ನೀಡುವ ಈ ಪ್ರಶಸ್ತಿಯು ದಶಂಬರ 13ರಂದು ಪುತ್ತೂರಿನ ‘ನಟರಾಜ ವೇದಿಕೆ’ಯಲ್ಲಿ ನಡೆಯುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ‘ಶ್ರೀ ಆಂಜನೇಯ 47’ ಸಮಾರಂಭದಲ್ಲಿ ರೈಗಳಿಗೆ ಪ್ರದಾನಿಸಲಾಗುತ್ತದೆ.  (Photo : Facebook)