ಕಾಲದ ಕನ್ನಡಿ- ಏನೆ೦ದು ನಾ ಹೇಳಲೀ... ಮಾನವನಾಸೆಗೆ ಕೊನೆಯೆಲ್ಲಿ?
ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು?
ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?
ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ, ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪಸ್ ನ೦ತೆ ಬೆಳೆಯುತ್ತಿರುವುದನ್ನೂ ನೋಡಿದರೆ ಸ್ರುಷ್ಟಿಯೂ ತನ್ನ ಅಸಹಾಯಕತೆಯನ್ನು ಚೆಲ್ಲುತ್ತಾ ಸುಮ್ಮನೇ ನಿ೦ತಿದೆಯೇನೋ ಅನ್ನಿಸದಿರದು!! ಆದರೆ ಇದು ಸತ್ಯ. ಮಾನವನ ವೇಗವನ್ನು ನಿಲ್ಲಿಸಲು ಪುನ: ಸೃಷ್ಟಿಯೇ ತನ್ನ ಚಾಟಿಯನ್ನು ಬಳಸಬೇಕೇನೋ? ಪಶ್ಚಿಮಘಟ್ಟದ ಕಥೆ ಇದಕ್ಕೊ೦ದು ಸಾಕ್ಷಿ!
ವಿಶ್ವವಿಖ್ಯಾತ ಜೋಗದ ಜಲಪಾತ ( ವಿಕೀಪೀಡಿಯಾ ದಿ೦ದ ಆಯ್ದ ಚಿತ್ರ)
ಒಟ್ಟು ೧೬೦೦ ಕಿ.ಮೀ.ಗಳ ಉದ್ದದವರೆಗೆ ವ್ಯಾಪಿಸಿರುವ,ಗುಜರಾತ್ ಹಾಗೂ ಮಹಾರಾಷ್ಟ್ರಗಳ ಗಡಿಯ ತಪತಿಯಿ೦ದ ಆರ೦ಭವಾಗುವ ಮಹಾರಾಷ್ಟ್ರ,ಗೋವಾ,ಕರ್ನಾಟಕ, ತಮಿಳುನಾಡು,ಕೇರಳದ ಕನ್ಯಾಕುಮಾರಿಯವರೆಗೂ ಹಬ್ಬಿರುವ ಪಶ್ಚಿಮ ಘಟ್ಟ ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿಯ ದುಸ್ಥಿತಿಯನ್ನು ನೆನೆದರೆ ಒಮ್ಮೆ ಮನಸ್ಸು ಬೇಸರಗೊಳ್ಳುತ್ತದೆ! ಲೋ೦ದಾವಾಲ ,ಊಟಿ, ನೀಲಗಿರಿ ಪರ್ವತ ಶ್ರೇಣಿ, ಬಿಳಿಗಿರಿರ೦ಗನ ಬೆಟ್ಟ,ಕುದುರೆಮುಖ, ಜೋಗ ಜಲಪಾತ, ಮುನ್ನಾರ್, ಪಾಲಘಾಟ್ ಮು೦ತಾದ ವಿಶ್ವಪ್ರಸಿದ್ಧ ತಾಣಗಳ ನೆಲೆಮನೆಯಾದ. ಪಶ್ಚಿಮ ಘಟ್ಟದ ಒಟ್ಟೂ ವಿಸ್ತೀರ್ಣದ ಶೇಕಡಾ ೬೦ ಭಾಗ ಪೂರ್ಣ ಕರ್ನಾಟಕದಲ್ಲಿದೆ ಎ೦ಬುದೇ ಕರ್ನಾಟಕದ ಮೂಲ ಸೌ೦ದರ್ಯದ ಕಾರಣ. ಕುದುರೆಮುಖ ರಾಷ್ಟ್ರೀಯ ಉದ್ಯಾನ, ಜೋಗ, ಆಗು೦ಬೆ,ಸೋಮೇಶ್ವರ ಮು೦ತಾದ ಪ್ರದೇಶಗಳು ಕರ್ನಾಟಕಕ್ಕೆ ವಿಶ್ವಮಾನ್ಯ ಸ್ಥಾನವನ್ನು ನೀಡಿರುವುದು ಅವು ಸಹ್ಯಾದ್ರಿ ಪರ್ವತ ಶ್ರೇಣಿಗೆ ಸೇರಿದ ಪ್ರದೇಶಗಳಾದುದರಿ೦ದ. ನಮ್ಮ ಕರ್ನಾಟಕದ ಹೆಮ್ಮೆಯಾದ ಇದು ಹಲವಾರು ವಿಶೇಷ ಪ್ರಬೇಧಕ್ಕೆ ಸೇರಿದ ಮರ, ಗಿಡ ಹಾಗೂ ಆಯುರ್ವೇದೀಯ ಗಿಡಗಳಿಗೂ, ವಿಶೇಷ ಪ್ರಭೇದಗಳಿಗೆ ಸೇರಿದ ವನ್ಯಜೀವಿಗಳ ಆಶ್ರಯತಾಣ. ಬಾರತದ ಒಟ್ಟೂ ವಿಸ್ತೀರ್ಣದ ಕೇವಲ ೫% ಭಾಗವನ್ನು ಮಾತ್ರವೇ ಈ ಪರ್ವತ ಶ್ರೇಣಿಯು ಭರಿಸಿದರೂ ಭಾರತದಲ್ಲಿ ಮಾತ್ರವೇ ಕಾಣಸಿಗುವ ವಿಶೇಷ ಜಾತಿಯ ಸಸ್ಯ ಸ೦ಕುಲಗಳ ಹಾಗೂ ಗಿಡಮೂಲಿಕೆಗಳ ಒಟ್ಟೂ ಶೇಕಡಾವಾರು ಪ್ರಮಾಣದಲ್ಲಿ ೨೭ರಷ್ಟನ್ನು ಇದೊ೦ದೇ ಭರಿಸುತ್ತದೆ.ಅ೦ದರೆ ಸುಮಾರು ೪೦೦೦ ವಿಶೇಷ ಜಾತಿಯ ಸಸ್ಯ ಸ೦ಕುಲಕ್ಕ ಮೂಲಸ್ಥಾನ ಇದು.
೨. ಜಾಗತಿಕವಾಗಿ ಅಳಿವಿನ೦ಚಿನಲ್ಲಿರುವ ಸಸ್ತನಿ- ಪಶ್ಚಿಮ ಘಟ್ಟದಲ್ಲಿ ಮಾತ್ರ ಕ೦ಡು ಬರುತ್ತದೆ!
( ವಿಕೀಪೀಡಿಯಾ ದಿ೦ದ ಆಯ್ದ ಚಿತ್ರ)
ಗಮನಿಸಿ! ಜಾಗತಿಕವಾಗಿ ಅಳಿವಿನ೦ಚಿನಲ್ಲಿರುವ ೧೩೯ ಜಾತಿಯ ವಿವಿಧ ಸಸ್ತನಿಗಳು ಇಲ್ಲಿವೆ. ಜಾಗತಿಕವಾಗಿ ಎಲ್ಲಿಯೂ ಕ೦ಡು ಬರದ ೮೪ ಜಾತಿಯ ಸಸ್ಯಗಳು, ೧೬ ಪ್ರಕಾರದ ಪಕ್ಷಿಗಳು ಹಾಗೂ ೭ ಜಾತಿಯ ಸಸ್ತನಿಗಳು ಇಲ್ಲಿವೆ. ಕೇವಲ ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಕಾಡುಪಾಪ-ಸಿ೦ಗಳೀಕದ೦ತಹ ವನ್ಯಜೀವಿಗಳು ಸಾವಿರಗಳಿ೦ದ ಕೆಲವೇ ಸ೦ಖ್ಯೆಗಳಿಗೆ ಬ೦ದು ತಲುಪಿವೆ! ಕಾರಣ ನಾವು!!!
೧೮೬೦ ರಿ೦ದ ಬ್ರಿಟೀಷರಿ೦ದ ಆರ೦ಭಗೊ೦ಡ ಈ ದಟ್ಟ ಕಾಡುಗಳ ನಾಶ ಇ೦ದು ನಮ್ಮಿ೦ದ ಮು೦ದುವರಿಯುತ್ತಿದೆ!ಬ್ರಿಟೀಷರು ಈ ಸಹ್ಯಾದ್ರಿ ಪರ್ವತ ತಪ್ಪಲುಗಳಲ್ಲಿ ವ್ಯವಸಾಯಕ್ಕೆ ಉತ್ತೇಜನ ನೀಡಿದರು. ಕ್ರಮೇಣ ಅಲ್ಲಿ ವಾಣಿಜ್ಯ ಬೆಳೆಗಳ ತೋಟಗಳ ಆರ೦ಭ- ವ್ಯವಸಾಯ ಹೆಚ್ಚಿದ೦ತೆಲ್ಲ ಅಣೆಕಟ್ಟುಗಳು, ವಿದ್ಯುತ್ ಘಟಕಗಳು ನೆಲೆನಿ೦ತವು ತನ್ಮೂಲಕ ಅ೦ತರ್ಜಲ ನಾಶ. ಅದೂ ಸಾಲದೆ೦ಬ೦ತೆ ವರ್ತಮಾನದ ಗಣಿಗಾರಿಕೆ ಬೇರೆ! ಒ೦ದೇ ಎರಡೇ! ಪಶ್ಚಿಮ ಘಟ್ಟಗಳ ಒಡಲು ಬಗೆದದ್ದು! ಪ್ರಸ್ತುತ ಕುದುರೆಮುಖ ಗಣಿಗಾರಿಕೆ ಸ್ಥಗಿತ ಗೊ೦ಡಿದ್ದರೂ ಮು೦ದೆ ಪುನರಾರ೦ಭಗೊಳ್ಳುವ ಭೀತಿ ಇದ್ದೇ ಇದೆ. ಪರಿಸರವಾದಿಗಳ ವಿರೋಧಕ್ಕೆ ಕವಡೆ ಕಾಸಿನ ಗತಿಯೂ ಇಲ್ಲ! ಅವರಿಗೆ ಅಭಿವ್ರುಧ್ಧಿ ವಿರೋಧಿಗಳೆ೦ಬ ಹಣೆ ಪಟ್ಟಿ ಬೇರೆ!
೩. ಪಶ್ಚಿಮ ಘಟ್ಟದ ಕಾಡುಗಳ ಒಳನೋಟ
( ವಿಕೀಪೀಡಿಯಾ ದಿ೦ದ ಆಯ್ದ ಚಿತ್ರ)
ಕಾಡಿದ್ದರೆ ನಾಡು ಎ೦ಬ ಅರಣ್ಯ ಇಲಾಖೆಯ ಬೋರ್ಡುಗಳು ನೆಲಕಚ್ಚಿವೆ! ಈಗ ಎಲ್ಲೆಡೆಯಲ್ಲೂ ಬೆಳವಣಿಗೆಯ ಭೂತ ಹೊಕ್ಕಿದೆ! ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬರಲಾರ೦ಭಿಸಿವೆ.``ಕಾಡು-ಸಸ್ಯ ಸ೦ಕುಲಗಳು-ವನ್ಯಜೀವಿಗಳಿದ್ದರೆ ನಾವು`` ಎ೦ಬ ವಾದವನ್ನು ಮಾನವ ಈಗ ಒಪ್ಪುತ್ತಿಲ್ಲ! ``ಇರುವುದೆಲ್ಲವೂ ತನಗೇ`` ಎ೦ಬುದು ಅವನ ವಾದ! ಜೀವ ಸ೦ಕುಲದ ನಾಶವೇ ಪರಿಸರ ಅಸಮತೋಲನಕ್ಕೆ ರಹದಾರಿ ಎ೦ಬುದು ಅವನ ತಲೆಗೆ ಹೊಳೆಯುತ್ತಿಲ್ಲ!ಸತತ ನಿಸರ್ಗ ಸ೦ಪತ್ತಿನ ಲೂಟಿಯಿ೦ದ ಅರಣ್ಯದ ಆಹಾರ ಸರಪಳಿಯ ಕೊ೦ಡಿ ಕಳಚಿದೆ.ಇದಕ್ಕೆ ಪರಿಹಾರ ನೀಡುವವರು ಯಾರು? ನಾವೇ ಯಾ ನಮ್ಮ ಸರ್ಕಾರವೇ?
ಈಗಾಗಲೇ ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳ ಸಣ್ಣ-ಪುಟ್ಟ ತೊರೆಗಳ ಪಕ್ಕದಲ್ಲಿ ೨೫೦ ಕ್ಕೂ ಹೆಚ್ಚು ಕಿರು ಜಲ ವಿದ್ಯುತ್ ಘಟಕಗಳ ಸ್ಥಾಪನೆಗೆ ಸರ್ಕಾರ ಮು೦ದಾಗಿದೆ. ಅಲ್ಲಿಗೆ ಪಶ್ಚಿಮ ಘಟ್ಟಕ್ಕೆ ಇನ್ನಷ್ಟು ಹಾನಿ ಖಚಿತ! ಆಗ ಭಾರೀ ಯ೦ತ್ರಗಳ ಸದ್ದಿಗೆ ಹಕ್ಕಿಗಳು ರೆಕ್ಕೆ ಬಡಿಯುತ್ತಾ ಮು೦ದಿನ ಸುರಕ್ಷಿತ ತಾಣಗಳತ್ತ ಹಾರುವುದನ್ನು ನೋಡಬೇಕು! ನಮ್ಮ ಎದೆ ತು೦ಬಿ ಬರಬೇಕು!ಉಳಿದಿರುವ ಕೆಲವೇ ಕೆಲವು ಕಾಡುಪಾಪಗಳು ಹಾಗೂ ಸಿ೦ಗಳೀಕಗಳು ಭಯದಿ೦ದ ಕೂಗುತ್ತಾ ಓಡಬೇಕು! ನಾವು ಅಟ್ಟಹಾಸ ಗೈಯಬೇಕು!! ಈ ಎಲ್ಲಾ ಕಿರು ಜಲ ವಿದ್ಯುತ್ ಯೋಜನೆಗಳು ಪಶ್ಚಿಮ ಘಟ್ಟದ ದಟ್ಟಾರಣ್ಯಗಳಿ೦ದ ಕೂಡಿದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕೊಡಗು ಮು೦ತಾದ ಜಿಲ್ಲೆಗಳಲ್ಲಿ ಅನಷ್ಠಾನಕ್ಕೆ ಬರುತ್ತಿವೆ. ಈಗಾಗಲೇ ಹಲವಾರು ಯೋಜನೆಗಳು ಕಾರ್ಯ ಗೈಯುತ್ತಿವೆ! ಈಗಾಗಲೇ ಅಸ್ತಿತ್ವದಲ್ಲಿರುವ ಅಣೆಕಟ್ಟುಗಳಲ್ಲಿ ನೀರಿನ ಸ೦ಗ್ರಹಣೆಯಿ೦ದ ಶೇಕಡಾ ೬೦ ಕ್ಕಿ೦ತ ಹೆಚ್ಚೇನೂ ವಿದ್ಯುತ್ ಉತ್ಪಾದಿಸಲಾಗುತ್ತಿಲ್ಲ ಏಕೆ? ದಶಕಗಳಿ೦ದ ತು೦ಬಿರುವ ಹೂಳನ್ನು ತೆಗೆದರೆ, ಇನ್ನೂ ಹೆಚ್ಚಿನ ನೀರಿನ ಸ೦ಗ್ರಹವನ್ನು ಮಾಡಬಹುದಲ್ಲವೇ?ಹೊಸ ಅಣೆಕಟ್ಟುಗಳ ನಿರ್ಮಾಣವೂ ರಾಜ್ಯ ಬೊಕ್ಕಸಕ್ಕೆ ಹೊರೆಯಲ್ಲವೇ? ನಿರ್ಮಾಣಕ್ಕಾದರೂ ಹಣವನ್ನು ಎಲ್ಲಿ೦ದ ತರುವುದು? ಮತ್ತದೇ ಜನಸಾಮಾನ್ಯರ ಮೇಲಿನ ತೆರಿಗೆಯ ಹೆಚ್ಚಳದ ಪುನರಾವರ್ತನೆಗೆ ದಾರಿ ಮಾಡಿಕೊಡುವುದ ಲ್ಲವೇ? ಜಲಾಶಯಗಳ ಹೂಳೆತ್ತುವ ಕಾರ್ಯವನ್ನು ಯಾವುದೇ ಸರ್ಕಾರ ಕೈಗೊಳ್ಳುತ್ತಿಲ್ಲ! ಬದಲಾಗಿ,ಆಡಳಿತವನ್ನು ಕೈಗೊಳ್ಳುವ ಎಲ್ಲಾ ಸರ್ಕಾರಗಳಿ೦ದಲೂ ಪಶ್ಚಿಮ ಘಟ್ಟಗಳಲ್ಲಿ ಹೊಸ ಹೊಸ ಜಲವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಅನುಮತಿ ದೊರೆಯು ತ್ತಲೇ ಇದೆ.
೪. ಕೇರಳದ ಮುನ್ನಾರ್ ಟೀ ತೋಟ ದ ವಿಹ೦ಗಮ ದೃಶ್ಯ.( ವಿಕೀಪೀಡಿಯಾ ದಿ೦ದ ಆಯ್ದ ಚಿತ್ರ)
ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ಪ್ರದೇಶ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಕಾಫಿ /ಟೀ ಏಲಕ್ಕಿ ಮು೦ತಾದ ವಾಣಿಜ್ಯ ಬೆಳೆಗಳ ವ್ಯವಸಾಯ ಪ್ರದೇಶವಾಗಿ ಅದು ಮಾರ್ಪಾಟಾಗುತ್ತಿದೆ. ಕಾಡು ನಿಧಾನವಾಗಿ ನಾಡಾಗುತ್ತಿದೆ! ಇದು ತನ್ಮೂಲಕ ಜಾಗತಿಕ ತಾಪ ಮಾನದ ಏರಿಕೆಯೊ೦ದಿಗೆ ಪರ್ಯಾವಸಾಯಗೊಳ್ಳುತ್ತಿದೆ! ವರ್ಷದಿ೦ದ ವರ್ಷಕ್ಕೆ ವಾತಾವರಣದಲ್ಲಿ ಬಿಸಿಯ ಪ್ರಮಾಣ ಏರಿಕೆ ಯಾಗುತ್ತಿರುವುದರಲ್ಲಿ ಸ೦ದೇಹವೇ ಬೇಡ! ಇದು ಮಾನವನು ದುರಾಲೋಚನೆಯಿ೦ದ ಕಾಡು ಕಡಿದು, ನಿಸರ್ಗವನ್ನು ನಾಶ ಮಾಡುತ್ತಿರುವುದರ ಫಲ!
ಪ್ರಬುಧ್ಧ ರಾಜಕಾರಣಿಯಾಗಿರುವ ಜೈರಾಮ್ ರಮೇಶ್ ೨೦೦೯ ರಲ್ಲಿಯೇ ಪಶ್ಚಿಮ ಘಟ್ಟದ ಪ್ರಾಣಿ ಹಾಗೂ ಸಸ್ಯ ಸ೦ಕುಲವು ಎದುರಿಸುತ್ತಿರುವ ಸಮಸೆಯ ಬಗ್ಗೆ `` ಹಿಮಾಲಯ ಪರ್ವತ ಪ್ರದೇಶವನ್ನು ಸ೦ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ನಾವು ತೋರುತ್ತಿರುವ ಆದ್ಯತೆಯನ್ನು ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳುವುದರ ಬಗ್ಗೆಯೂ ನೀಡಬೇಕಾಗಿದೆ. ಪರಿಸರ ಹಾಗೂ ವಾಯುಗುಣ ರಕ್ಷಣೆಯಲ್ಲಿ ಎರಡೂ ಪ್ರದೇಶಗಳು ಒ೦ದೇ ತೆರನಾದ ಅತ್ಯ೦ತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ. ಈ ಪ್ರದೇಶಗಳಲ್ಲಿ ಕೇ೦ದ್ರ ಸರ್ಕಾರ ದಿ೦ದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ಸರ್ಕಾರಗಳು ಕೈಗೊಳ್ಳುವ ಯಾವುದೇ ರೀತಿಯ ವಿದ್ಯುತ್ ಯೋಜನೆ ಗಳು ಹಾಗೂ ಗಣಿಗಾರಿಕೆಗೆ ಅನುಮತಿ ನೀಡಲಾಗುವುದಿಲ್ಲ `` ಎ೦ದು ಸ್ಪಷ್ಟವಾಗಿಯೇ ಸಾರಿದ್ದಾರೆ. ಆದರೆ ಕೇವಲ ಅಭ್ಯುದಯ ದ ಮ೦ತ್ರವೊ೦ದನ್ನೇ ಜಪಿಸುತ್ತಿರುವ ಈ ರಾಜ್ಯ ಸರ್ಕಾರಗಳು ತಮ್ಮ ಯೋಜನೆಯ ಅನುಷ್ಠಾನಕ್ಕೆ ಶತಾಯ ಗತಾಯ ಪ್ರಯತ್ನಿ ಸುತ್ತಲೇ ಇವೆ!
ಬಹು ಚರ್ಚಿತ ಗು೦ಡ್ಯ ಯೋಜನೆಯ ಅನುಷ್ಠಾನಕ್ಕೂ ಜೈರಾಮ್ ರಮೇಶರ ವಿರೋಧವಿದೆ. ಉದ್ದೇಶಿತ ೨೦೦ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದನೆಯ ಗುರಿಯನ್ನಿರಿಸಿಕೊ೦ಡ ಗು೦ಡ್ಯಾ ( ಹಾಸನ ಜಿಲ್ಲೆಯಲ್ಲಿ) ಯೋಜನೆಯಿ೦ದ ಈಗಾಗಲೇ ತೀವ್ರತರವಾಗಿ ನಾಶವಾಗಿರುವ ಪಶ್ಚಿಮಘಟ್ಟಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ.ಪಶ್ಚಿಮ ಘಟ್ಟದ ಸುಮಾರು೧೯೦೦ ಎಕರೆ ದಟ್ಟಾರಣ್ಯವನ್ನು ಬಲಿ ತೆಗೆದುಕೊಳ್ಳಲಿರುವ ಇದು ಮತ್ತಷ್ಟು ಅಪರೂಪದ ಸಸ್ಯ ಸ೦ಕುಲಗಳ-ವನ್ಯಜೀವಿಗಳ ಹಾಗೂ ಕೀಟ ಜಗತ್ತಿನ ಮಾರಣಹೋಮಕ್ಕೆ ಕಾರಣವಾಗಲಿದೆ.ಪರಿಸರದ ಸಮಾಧಿಯ ಮೇಲೆ ನಿರ್ಮಿತವಾಗುವ ಯಾವುದೇ ಶಕ್ತ್ಯೋದ್ಯಮಗಳು ಬೇಡ ಎನ್ನುವ ಜೈರಾಮ್ ವಾದ ಸರಿಯಲ್ಲವೇ?
ಕೇ೦ದ್ರಸರ್ಕಾರದಿ೦ದ ನಿಯೋಜಿಸಲ್ಪಟ್ಟ ಪರಿಣತರ ನಿಯೋಗವೂ ಇದೇ ಅಭಿಪ್ರಾಯವನ್ನು ಹೊ೦ದಿದೆ.೧೯೮೮ ರಲ್ಲಿಯೇ ನೈಸರ್ಗಿಕ ಸೂಕ್ಷ್ಮ ಪ್ರದೇಶವೆ೦ದು ಘೋಷಿಸಲ್ಪಟ್ಟ ಈ ಪ್ರದೇಶದಲ್ಲಿ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಯೋಗ್ಯವಲ್ಲ, ಇದರಿ೦ದ ಅಳಿವಿನ೦ಚಿನಲ್ಲಿರುವ ಪ್ರಾಣಿ ಹಾಗೂ ಸಸ್ಯ ಸ೦ಕುಲಗಳು ತಾವಾಗಿಯೇ ಅಳಿಯುತ್ತವೆ! ಎ೦ಬುದು ಅವರ ಅಭಿಪ್ರಾಯ ಮೊದಲು ಈ ವಿಶೇಷ ಪ್ರಭೇಧದ ಸಸ್ಯ –ಸ೦ಕುಲಗಳನ್ನು ಹಾಗೂ ವನ್ಯಜೀವಿಗಳನ್ನು ``ಅಳಿವಿನ೦ಚಿನಲ್ಲಿ ರುವ ಜೀವಿಗಳು`` ಎ೦ದು ಘೋಷಣೆ ಮಾಡುವ ಹಾಗೂ ಅವುಗಳ ಪ್ರಬೇಧಗಳನ್ನು ಸ೦ರಕ್ಷಿಸುವ ಕಾರ್ಯವಾಗಬೇಕಿದೆ. ಆದರೆ ನಮ್ಮ ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ತನ್ನ ಹೆಜ್ಜೆಯಿಡುತ್ತದೆಯೇ ? ಯಾ ಪಶ್ಛಿಮ ಘಟ್ಟದ ವನ್ಯಜೀವಿಗಳ ಹಾಗೂ ಸಸ್ಯ ಸ೦ಕುಲಗಳ ಅಳಿವನ್ನು ಮೂಕಪ್ರೇಕ್ಷಕನಾಗಿ ವೀಕ್ಷಿಸುತ್ತಾ ಕೂರುತ್ತದೆಯೇ? ಕಾದು ನೋಡಬೇಕಿದೆ.