ಕಿಸೆಯಲ್ಲಿರುವ ಡೇರಿ ಮಿಲ್ಕ್ ಚಾಕಲೇಟ್ ಕರಗುವುದೇಕೆ?

ಕಿಸೆಯಲ್ಲಿರುವ ಡೇರಿ ಮಿಲ್ಕ್ ಚಾಕಲೇಟ್ ಕರಗುವುದೇಕೆ?

ಸೂರಿ ಆ ದಿನ ಆಫೀಸು ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ. ದಾರಿ ಮಧ್ಯದಲ್ಲಿ ಆತನಿಗೆ “ಅಪ್ಪಾ, ಸಂಜೆ ಬರುವಾಗ ಡೇರಿ ಮಿಲ್ಕ್ ಚಾಕಲೇಟ್ ತನ್ನಿ “ ಎಂದು ಹೇಳಿದ ತನ್ನ ಮಗನ ಮಾತು ನೆನಪಾಯಿತು. ಹಾಗೇ ಅಂಗಡಿಯಲ್ಲಿ ಚಾಕಲೇಟು ತೆಗೆದುಕೊಂಡು ಜೇಬಿಗೆ ಹಾಕಿಕೊಂಡು ಮನೆಗೆ ಬಂದ. ಮನೆಯ ಒಳಗೆ ಬಂದೊಡನೆಯೇ ಆತನ ಮಗ “ಅಪ್ಪಾ , ಚಾಕಲೇಟ್, ಚಾಕಲೇಟ್..." ಎಂದು ಓಡಿ ಬಂದ. ಆತನನ್ನು ಮುದ್ದಿಸಿ ಕಿಸೆಯಿಂದ ಡೇರಿ ಮಿಲ್ಕ್ ಚಾಕಲೇಟ್ ತೆಗೆದುಕೊಟ್ಟ. ಅದನ್ನು ತೆಗೆದುಕೊಂಡವನೇ ಸಂತಸದಿಂದ ಓಡಿದ. ಹಾಗೆ ಓಡಿದ ಮರುಕ್ಷಣವೇ ಬಂದ ಮಗರಾಯ ಅಪ್ಪನಲ್ಲಿ ಹೇಳಿದ “ಈ ಚಾಕಲೇಟ್ ಬೇಡ ಅಪ್ಪಾ, ಇದು ಮೆದು ಆಗಿದೆ". ಸೂರಿಯೂ ಅದನ್ನು ಮುಟ್ಟಿ ನೋಡಿದಾಗ ಮೆದುವಾಗಿತ್ತು. ಏಕೆ ಹೀಗಾಯಿತು? 

ಕಿಸೆಯಲ್ಲಿರಿಸಿದ ಚಾಕಲೇಟ್ ಕರಗಲು ಕಾರಣ ಒಂದು ವಿಜ್ಞಾನ ಸಂಬಂಧೀ ವಿಷಯ. ನೀವು ನಿಮ್ಮ ಕೈಯಲ್ಲೋ, ಕಿಸೆಯಲ್ಲೋ ಬಹಳ ಸಮಯ ಡೇರಿ ಮಿಲ್ಕ್ ನಂತಹ ಚಾಕಲೇಟ್ ಗಳನ್ನು ಇರಿಸಿದಾಗ ಗಟ್ಟಿಯಾಗಿದ್ದ ಚಾಕಲೇಟ್ ನಿಧಾನವಾಗಿ ಕರಗಿ ಮೆದುವಾಗಿ ಅಂಟಂಟಾಗುತ್ತದೆ. ಕೆಲವು ಮಕ್ಕಳು ಈ ಮೆದುವಾದ ಚಾಕಲೇಟ್ ಅನ್ನೇ ಬಾಯಿ ಮುಖಕ್ಕೆ ಮೆತ್ತಿಕೊಂಡು ತಿಂದು ಬಿಡುತ್ತಾರೆ. ನಿಜಕ್ಕೂ ಆಗುವುದು ಏನೆಂದರೆ ನಿಮ್ಮ ಕೈ ಮತ್ತು ಮೈಯ ಬಿಸಿಯಿಂದಾಗಿ ಚಾಕಲೇಟ್ ಮೆದುವಾಗುತ್ತೆ ಎನ್ನುವುದೇ ಸತ್ಯ. ಈ ಬದಲಾವಣೆಗೆ ಕಾರಣಗಳೇನು?

ಒಂದು ವಸ್ತುವು ಮೂಲದಲ್ಲಿ ಯಾವುದೇ ಸ್ಥಿತಿಯಲ್ಲಿದ್ದರೂ ಅದು ಘನ, ದ್ರವ, ಅನಿಲ ಹೀಗೆ ಬೇರೆ ಬೇರೆ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿರಬಹುದು. ಒಂದು ವಸ್ತುವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾದಾಗ ಅದನ್ನು ಸ್ಥಿತಿಯಲ್ಲಿನ ಬದಲಾವಣೆ ಎಂದು ಕರೆಯಲಾಗುತ್ತದೆ. ಹಾಗಿದ್ದರೆ ಸ್ಥಿತಿಯ ಬದಲಾವಣೆಯಾದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆಯೇ? ಇಲ್ಲ. ಡೇರಿ ಮಿಲ್ಕ್ ಚಾಕಲೇಟ್ ಕರಗಿದಾಗ ರಾಸಾಯನಿಕ ಕ್ರಿಯೆಯಲ್ಲಿ ಆಗುವಂತೆ ಅಣುಗಳ ನಡುವಿನ ಬಂಧಗಳು ವಿಭಜನೆಯಾಗುವುದೂ ಇಲ್ಲ ಮತ್ತು ಪರಮಾಣುಗಳು ಹೊಸ ಅಣುಗಳಾಗಿ ರೂಪುಗೊಳ್ಳುವುದೂ ಇಲ್ಲ. ಘನದಿಂದ ದ್ರವಕ್ಕೆ ಚಾಕಲೇಟ್ ಬದಲಾಗಿರುವುದು ಯಾವಾಗ? ನಿಮ್ಮ ಕೈಯ ಅಥವಾ ಮೈಯ ಬಿಸಿಯನ್ನು ಚಾಕಲೇಟ್ ಹೀರಿಕೊಂಡಾಗ, ಅಂದರೆ ಘನ ವಸ್ತುಗಳು ಸಾಕಷ್ಟು ಶಾಖವನ್ನು ಹೀರಿಕೊಂಡಾಗ ದ್ರವವಾಗಿ ಬದಲಾಗುತ್ತವೆ ಎಂದಾಯಿತು. ಈ ಉದಾಹರಣೆಯಲ್ಲಿ ನಿಮ್ಮ ಕೈಯ ಶಾಖವು ಅಣುಗಳ ನಡುವಿನ ಬಲವಾದ ಬಂಧಗಳನ್ನು ಬೇರ್ಪಡಿಸುವಂತೆ ಮಾಡುತ್ತವೆ. ಹೀಗಾಗಿ ಅಣುಗಳು, ಒಂದರ ಮೇಲೊಂದು ಜಾರಬಹುದು. ಅಣುಗಳು ತಮ್ಮಷ್ಟಕ್ಕೆ ತಾವೇ ಬದಲಾಗುವುದಿಲ್ಲ. ಯಾವುದೇ ಹೊಸ ಪದಾರ್ಥವೂ ರೂಪುಗೊಳ್ಳುವುದಿಲ್ಲ. ನೀವು ಅದೇ ಕರಗಿದ ಚಾಕಲೇಟ್ ಅನ್ನು ಫ್ರಿಡ್ಜ್ ನಲ್ಲಿಟ್ಟರೆ ಅದು ಮತ್ತೆ ಗಟ್ಟಿಯಾದ ರೂಪಕ್ಕೆ ಮರಳುತ್ತದೆ. ಇದು ಕೆಲವು ವಸ್ತುಗಳು ತಮ್ಮ ಸ್ಥಿತಿಯನ್ನು ಬದಲಾಯಿಸಿಕೊಳ್ಳುವ ರೀತಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ