ಕುಚೇಲ(ಸುಧಾಮ)ನ ಭಾಗ್ಯ- ಮಾಸ್ತಿಯವರ ಕಥೆ

ಕುಚೇಲ(ಸುಧಾಮ)ನ ಭಾಗ್ಯ- ಮಾಸ್ತಿಯವರ ಕಥೆ

ಬರಹ

ಶ್ರೀ ಕೃಷ್ಣನ ಬಾಲ್ಯಗೆಳೆಯ ಸುಧಾಮನ ಕಥೆ ನಿಮಗೆ ಗೊತ್ತು. ಅದನ್ನು ಕಥೆಗಾರ ಮಾಸ್ತಿಯವರು ಹೇಗೆ ನೋಡುತ್ತಾರೆ ಗೊತ್ತೆ ?
ಶ್ರೀ ಕೃಷ್ಣ ಈಗ ರಾಜನಾಗಿದ್ದಾನೆ . ಆದರೆ ಬದಲಾಗಿಲ್ಲ , ಬಾಲ್ಯದ ಗೆಳೆತನ ಮರೆತಿಲ್ಲ . ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಸುಧಾಮ ಹೆಂಡತಿಯ ಒತ್ತಾಯಕ್ಕೆ ಮಣಿದು ಸಹಾಯ ಯಾಚಿಸಿ ಬಂದಿದ್ದಾನೆ . ಆದರೆ ಸ್ವಾಭಿಮಾನಿಯಾದ ಆತ ಗೆಳೆಯನನ್ನು ಬೇಡಲೊಲ್ಲ . ಆತ ಗೆಳೆಯನ ಎಳೆತನದ ಮೆಚ್ಚಿನ ತಿಂಡಿಯಾದ ಒಣ ಅವಲಕ್ಕಿಯನ್ನು ಕಟ್ಟಿಕೊಂಡು ಬಂದಿದ್ದಾನೆ . ಗೆಳೆಯನ ರಾಜ ವೈಭವ ಕಂಡು ಸಂಕೋಚದಿಂದ ಅದನ್ನು ಕೊಡದೆ ಇದ್ದಾನೆ. ಆದರೆ ಕೃಷ್ಣ ಬಿಡದೆ ಕಸಿದು ತಿಂದು ತನ್ನ ಹೆಂಡತಿಯರಿಗೆ ತಿನ್ನಿಸಿ ಸಂತೋಷಪಡುತ್ತಾನೆ . ಗೆಳೆಯನಿಗೆ ಬಹಳಷ್ಟು ಆದರ ಆತಿಥ್ಯ ಮಾಡುತ್ತಾನೆ . ಸುಧಾಮ ಏನೂ ಸಹಾಯ ಬೇಡುವದಿಲ್ಲ. ಹಾಗೆಯೇ ಮರಳುತ್ತಾನೆ .
ವಾಪಸು ತನ್ನ ಮನೆಯ ಹತ್ತಿರ ಹೋದಾಗ ಅಲ್ಲಿ ಅರಮನೆ ಸಕಲ ಸಮಗ್ರಿ , ವೈಭೋಗ ಕಂಡು ಬರುತ್ತದೆ . ಶ್ರೀ ಕೃಷ್ಣನ ಕಡೆಯವರು ಇದನ್ನೆಲ್ಲ ವ್ಯವಸ್ಥೆ ಮಾಡಿರುವದು ಅವನಿಗೆ ತಿಳಿಯುತ್ತದೆ. ಹೆಂಡತಿಯ ಆಸೆ ಈಡೇರಿದುದು , ಅವಳ ಕಷ್ಟ ದೂರವಾದುದು ಸಂತೋಷ . ಅವನ ಗುಡಿಸಲನ್ನು ಅವರು ಉಳಿಸಿದ್ದಾರೆ . ಇದನ್ನು ನೋಡಿ ಸುಧಾಮ ಅನ್ನುತ್ತಾನೆ - "ಒಳ್ಳೆಯದಾಯಿತು . ನಿನ್ನ ಆಸೆ ಈಡೇರಿತು . ನನ್ನ ಆಸೆ ಒಂದಿದೆ . ಅರಮನೆ ಕಟ್ಟಿದ ಮಹಾರಾಯರು ನನ್ನ ಗುಡಿಸಲನ್ನು ಉಳಿಸಿದ್ದಾರೆ . ಗೆಳೆಯನ ಪ್ರೀತಿಯ ಗುರುತು ಅಂತ ಈ ಅರಮನೇನ , ಅದರಲ್ಲಿ ನಿನ್ನನ್ನ , ನೋಡುತ್ತ ಹಿರಿಯರಿಂದ ಬಂದದ್ದು ಅಂತ ನಾನು ಆ ಗುಡಿಸಲಲ್ಲಿ ಬಾಳಬೇಕು ಅನ್ನೋದು ನನ್ನ ಆಸೆ . "
ಸುಧಾಮ ಅಂತೆಯೇ ಬಾಳಿದ. ಅರಮನೆಯನ್ನು ಬೇಡ ಎನ್ನಲಿಲ್ಲ , ತನ್ನ ಗುಡಿಸಲನ್ನು ಬಿಡಲಿಲ್ಲ . ಎರಡನ್ನೂ ತನ್ನ ಮನೆಯೆಂದೇ ಕಂಡ. ಎರಡರಲ್ಲಿ ಗುಡಿಸಲನ್ನು ಸ್ವಲ್ಪ ಮಾತ್ರ ಹೆಚ್ಚು ಇಷ್ಟವಾದ ಮನೆಯಾಗಿ ಮಾಡಿಕೊಂಡ .
ಈ ಸುದ್ದಿ ಶ್ರೀಕೃಷ್ಣನಿಗೆ ಈ ಸುದ್ದಿ ತಿಳಿದಾಗ " ಅದು ಅವನ ಭಾಗ್ಯ " ಎನ್ನುತ್ತಾನೆ.