ಕುಟಿಲೆಯ ಕುತಂತ್ರ
‘ಕುಟಿಲೆಯ ಕುತಂತ್ರ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು.
೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು ಹಲವಾರು ಕಾಲ್ಪನಿಕ ಪತ್ತೇದಾರರಿಗೆ ಜನ್ಮದಾತರು. ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಎಂಬೆಲ್ಲಾ ಹೆಸರಿನ ಪತ್ತೇದಾರರ ನೂರಕ್ಕೂ ಮಿಗಿಲಾದ ಸಾಹಸ ಕಥೆಗಳನ್ನು ಓದುಗರಿಗೆ ಉಣಬಡಿಸಿದ ಖ್ಯಾತಿ ಇವರದ್ದು.
‘ಕುಟಿಲೆಯ ಕುತಂತ್ರ' ಕಾದಂಬರಿಯು ಪತ್ತೇದಾರ ಅರಿಂಜಯನ ೨೨ನೆಯ ವಿಕ್ರಮ. ಪುಸ್ತಕದ ಪ್ರಾರಂಭಕ್ಕೆ ಮುನ್ನ ತಮ್ಮ ಮಾತಿನಲ್ಲಿ ಲೇಖಕರು ಹೇಳುವುದು ಹೀಗೆ “ಮಾನವನ ಹೃದಯವು ಚಿತ್ತಚಾಂಚಲ್ಯವುಳ್ಳದ್ದಾಗಿರುತ್ತೆ. ಈಗ ಇದ್ದ ಮನೋಭಿಪ್ರಾಯವು ಇನ್ನೊಂದು ಘಂಟೆಯ ನಂತರ ಇರುವುದಿಲ್ಲ. ಆಧುನಿಕ ಭೀಷ್ಮನಂತೆ ಪ್ರತಿಜ್ಞೆ ಮಾಡಿದವರೂ, ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ತಪ್ಪಿ ನಡೆದು, ಆದರೂ ಸಹ ತಾವೇನೂ ಅಸತ್ಯವಾದ ಹಾದಿಯಲ್ಲಿ ನಡೆಯದೆ, ನ್ಯಾಯ ಮಾರ್ಗದಲ್ಲಿಯೇ ನಡೆಯುತ್ತಿರುವುದಾಗಿ ಘೋಷಿಸುವರು.
ಕಾಮಾಂಧ ಪುರುಷರು ಹೆಣ್ಣಿನ ಮೋಹ ಜಾಲಕ್ಕೊಳಗಾದರೆ, ಯಾವ ತರಹದ ಹೀನಕೃತ್ಯ ಮಾಡುವುದಕ್ಕೂ ಹೇಸುವುದಿಲ್ಲ. ತಾವು ನಂಬಿದ ಹೆಣ್ಣೇ ತಮ್ಮ ಸರ್ವಸಂಪತ್ತೆಂದು ಭಾವಿಸಿ, ಅವಳಿಗಾಗಿ ಏನು ತ್ಯಾಗ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಹೆಣ್ಣು ಮಾಯಾಜಾಲದ ಮಾಯಾವಿನಿ. ಸಮಯ ಸಾಧಿಸಿ ಮಾತನಾಡುವುದರಲ್ಲಿ ಮಹಾ ನಿಪುಣೆ. ಹೆಣ್ಣಿನ ಮೋಹದ ಮಾತುಗಳಿಗೆ ಮರುಳಾಗದ ಮಾನವರಿಲ್ಲ.” ಎಂದಿದ್ದಾರೆ.
ನರಸಿಂಹಯ್ಯನವರ ಬರಹ ಬಹಳ ಸರಳ. ಆಗಿನ ಕಾಲದ ಓದುಗರಿಗೆ ಇದು ಬಹಳವಾಗಿ ರುಚಿಸಿದರೂ ಈಗಿನ ಜನಾಂಗಕ್ಕೆ ಇದು ಇಷ್ಟವಾಗುವುದು ಕಷ್ಟ. ಈಗಿನವರು ದೆವ್ವ-ಭೂತಗಳನ್ನು ನಂಬುವುದೂ ಕಷ್ಟ. ಆದರೂ ಹಿಂದಿನ ಓದಿನ ನೆನಪುಗಳನ್ನು ತಾಜಾ ಮಾಡಲು ಅಂದಿನ ಓದುಗರಿಗೆ ಇದೊಂದು ಸುವರ್ಣಾವಕಾಶ. ೨೦೧೦ರಲ್ಲಿ ಸಪ್ನ ಬುಕ್ ಹೌಸ್ ಅವರು ಎನ್.ನರಸಿಂಹಯ್ಯನವರ ಬಹಳಷ್ಟು ಕಾದಂಬರಿಗಳನ್ನು ಮರುಮುದ್ರಣ ಮಾಡಿರುವರು. ಸಾಹಿತಿ ಕುಂ.ವೀರಭದ್ರಪ್ಪನವರು ಬೆನ್ನುಡಿ ಬರೆದಿದ್ದಾರೆ. ೧೩೦ ಪುಟಗಳ ಈ ಕಾದಂಬರಿಯನ್ನು ಸರಾಗವಾಗಿ ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದು.