ಕುಟುಂಬ
‘ಕುಟುಂಬ' ಎಂಬ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ ಶೈಲಜಾ ಸುರೇಶ್ ಇವರು. ೧೬೦ ಪುಟಗಳ ಈ ಸಂಕಲನದ ಪ್ರಾರಂಭದ ಕತೆಗಳಾದ ಮಮತಾಮಯಿ, ವರ್ಜಿನ್ ಬೇಬಿ ಇಂತಹ ದಿಟ್ಟ ಮನೋಭಾವದ ಮುಟ್ಟುವಿಕೆಯಾಗಿದೆ. ಯೋಧನ ಮಡದಿ, ಕಡಲಿನಾಚೆಯ ಕುಡಿಗಳು... ಮೊದಲಾದವು ಪ್ರಸ್ತುತ ವಿಷಯಗಳೇ, ಉಳಿದ ಕೆಲವು ಕತೆಗಳಲ್ಲೂ ಪ್ರಕೃತಿ ವರ್ಣನೆ ಸೂರೆಯಾಗಿರುವುದನ್ನು ನೋಡಿದರೆ ಮಹಿಳಾ ಸಾಹಿತ್ಯಕ್ಕಿದ್ದ ಒಂದು ಅಪವಾದ ದೂರವಾದಂತೆನಿಸಿತು" ಎನ್ನುತ್ತಾರೆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಲೇಖಕಿ ಎಸ್.ವಿ. ಪ್ರಭಾವತಿ. ಅವರು ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ...
“ಪ್ರಗತಿಶೀಲ ಪಂಥದ ಒಂದು ಹಂತದಲ್ಲಿ ಒಂದು ಉದ್ದೇಶದಿಂದ ಅನಕೃ ಪ್ರಾರಂಭಿಸಿದ 'ಕನ್ನಡ ಕಾದಂಬರಿ ಓದುವ ಪ್ರಕಾರವಾಗಬೇಕು' ಎಂಬ ಉದ್ದೇಶದ ಫಲಶೃತಿಯೇ ನಮ್ಮ ಲೇಖಕಿಯರ ಸಮೃದ್ಧ ಕಾದಂಬರಿ ಸೃಷ್ಟಿ. ಇದರಲ್ಲಿ 50ರ ದಶಕದ ಕೊಡುಗೆ ಗಮನಾರ್ಹ, ಎಂ.ಕೆ. ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ಉಷಾ ನವರತ್ನರಾಂ ಅಂಥವರ ಬರವಣಿಗೆ ಕೊಂಚ ಮಟ್ಟಿಗೆ ಪ್ರಗತಿಪರವಾಗಿದ್ದವು. ಅದರಲ್ಲಿ ವಾಣಿಯವರ ದಾರಿ ಸ್ವಲ್ಪಮಟ್ಟಿಗೆ ಭಿನ್ನ. ಅವರ 'ಶುಭಮಂಗಳ' ಕಾದಂಬರಿಯ ಸಂಯಮದ ನಡೆಯನ್ನು ಗಮನಿಸಿದರೆ ಇದು ತಿಳಿಯುತ್ತದೆ. ವಾಣಿ ಮತ್ತು ಸಮಕಾಲೀನ ಲೇಖಕಿಯರ ಮೊದಲ ಆದ್ಯತೆ ಕುಟುಂಬವೇ ಆಗಿದ್ದುದರಿಂದ ಈ ಸಂಕಲನಕ್ಕೆ 'ಕುಟುಂಬ' ಎಂದು ಶೀರ್ಷಿಕೆ ಕೊಟ್ಟಿರುವುದು ಸೂಕ್ತವಾಗಿದೆ.
ವಾಣಿಯವರ ಜನ್ಮದಿನದ ಪ್ರಯುಕ್ತ ಲೇಖಿಕಾ ಸಾಹಿತ್ಯ ವೇದಿಕೆ ನಡೆಸಿದ ಕಥಾಸ್ಪರ್ಧೆಯಲ್ಲಿ 55 ಕತೆಗಳು ಬಂದಿದ್ದುವಂತೆ. ಬಹುಮಾನ ಪಡೆದ ಕತೆಗಳ ಜೊತೆಗೆ ಉಳಿದ ಒಂದಷ್ಟು ಕತೆಗಳನ್ನು ಸೇರಿಸಿ ಈ ಸಂಕಲನ ಹೊರತರಲಾಗಿದೆ. ಇಂತಹ ಅನೇಕ ಸ್ಪರ್ಧೆಗಳಲ್ಲಿ ತೀರ್ಪುಗಾರಳಾಗಿ ಭಾಗವಹಿಸಿರುವ ನನಗೆ ಕತೆಗಳ ಗುಣಮಟ್ಟದ ಬಗ್ಗೆ ತೀವ್ರವಾದ ನಿರಾಸೆ ಕಾಡುತ್ತಿತ್ತು. ಅದೇ ಅದೇ ಕೌಟುಂಬಿಕ ಸಮಸ್ಯೆಗಳು.. ಬದಲಾಗುತ್ತಿರುವ ಜೀವನ ಶೈಲಿಯ ಬಗ್ಗೆ ಅತಿಯಾದ ಅಜ್ಞಾನ ಅಥವಾ ಅವಜ್ಞೆ,
ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿನ ದಿನಗಳಲ್ಲಿ ಬಹು ಮುಖ್ಯವಾದ ತೀರ್ಪುಗಳನ್ನು ನೀಡಿದೆ. ಅವು ಬದಲಾಗುತ್ತಿರುವ ಭಾರತದ ಕೌಟುಂಬಿಕ ಮೌಲ್ಯಗಳನ್ನು ಚಿತ್ರಿಸುತ್ತವೆ. ಸಮಾಜವು ತುಚ್ಚವಾಗಿ ಕಾಣುತ್ತಿದ್ದ ತೃತೀಯ ಲಿಂಗಿಗಳಿಗೆ ನೀಡಿದ ಮೀಸಲಾತಿಯಿಂದ ಮಂಜಮ್ಮ ಜೋಗತಿಯಂಥವರು ಅಕಾಡೆಮಿ ಅಧ್ಯಕ್ಷರಾದುದನ್ನು ನಾವು ನೋಡಿದೆವು. ಸಿಂಗಲ್ ಪೇರಂಟ್ಹುಡ್ ಆಗಬಹುದು, ಬಾಡಿಗೆ ತಾಯ್ತನ ಆಗಬಹುದು. ಕೃತಕ ಗರ್ಭಧಾರಣಾ ವಿಧಾನ(IVF) ಆಗಬಹುದು, living together ಸಂಬಂಧವಾಗಬಹುದು. ಒಂದು ಕಾಲದಲ್ಲಿ ಸಂಪ್ರದಾಯವಾದಿಗಳು ಹುಬ್ಬೇರಿಸುತ್ತಿದ್ದ ಇಂತಹ ವಿಷಯಗಳು ಇಂದು ಕಾನೂನುಬದ್ಧವಾಗಿವೆ. ಒಂದು ಕಾಲದಲ್ಲಿ ಬಂಜೆಯರು, ಮದುವೆಯಾಗದವರು, ಮಾನಗೆಟ್ಟವರು (?) ಎಂದು ಹೆಣ್ಣುಮಕ್ಕಳು ಎದುರಿಸುತ್ತಿದ್ದ ನರಕ ಮೊನ್ನೆ ಮೊನ್ನೆ ಎಂಬಂತೆ ನೆನಪಿದೆ. ಇದೀಗ ಇಂತಹ ಸಮಸ್ಯೆಗಳನ್ನು ವಸ್ತುವಾಗಿಟ್ಟುಕೊಂಡು ಕತೆ ಬರೆಯುವವರು ಇಲ್ಲಿ ಕಾಣಿಸಿದ್ದು ನನಗೆ ಆಶ್ಚರ್ಯ, ಸಮಾಧಾನ ಎರಡನ್ನೂ ತಂದವು. ಆಶ್ಚರ್ಯ ಏಕೆಂದರೆ ಇಂಥವು ಸಮಾಜದಲ್ಲಿ ನಡೆಯುತ್ತಿದೆ ಎಂಬ ಅರಿವು ಬರಹಗಾರರಿಗೆ ಇದೆಯಲ್ಲಾ ಎಂದು. ಸಮಾಧಾನ ಏಕೆಂದರೆ ಇಂತಹ ವಸ್ತುಗಳನ್ನು ಮುಟ್ಟುವ ಧೈರ್ಯ ಅವರಿಗೆ ಬಂದಿತಲ್ಲಾ ಎಂದು. ಇದು ಯುದ್ಧವನ್ನು ಅರ್ಧ ಗೆದ್ದಂತೆ. ಮುಂದಿನದೇನಿದ್ದರೂ ಸುಧಾರಣೆಯ ಕಡೆಗಿನ ಜಿಗಿತ.
ಯೋಧನ ಮಡದಿ, ಕಡಲಿನಾಚೆಯ ಕುಡಿಗಳು... ಮೊದಲಾದವು ಪ್ರಸ್ತುತ ವಿಷಯಗಳೇ, ಉಳಿದ ಕೆಲವು ಕತೆಗಳಲ್ಲೂ ಪ್ರಕೃತಿ ವರ್ಣನೆ ಸೂರೆಯಾಗಿರುವುದನ್ನು ನೋಡಿದರೆ ಮಹಿಳಾ ಸಾಹಿತ್ಯಕ್ಕಿದ್ದ ಒಂದು ಅಪವಾದ ದೂರವಾದಂತೆನಿಸಿತು (ಲೇಖಕರ ಕತೆಗಳೂ ಇಲ್ಲಿವೆ. ಅವರು ನನ್ನನ್ನು ಕ್ಷಮಿಸಬೇಕು). ಈ ಸಂಕಲನಕ್ಕೆ ಮುನ್ನುಡಿ ರೂಪದ ನನ್ನ ಕೆಲವು ಕಾಳಜಿಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆಗಳು.”