ಕುಟುಕಿ ಆದ ಗಾಯವನ್ನು ನೀವೂ ನೋಡಿಕೊಳ್ಳಿ...!
ಆವತ್ತು ಮಂಗಳವಾರ ಅಂತ ನೆನೆಪು. ಬೇಸಿಗೆ ಆಗತಾನೆ ಶುರುವಾಗಿತ್ತಾದ್ರೂ ಅದರ ಪ್ರತಾಪ ಆಗ್ಲೇ ಅನುಭವಕ್ಕೆ ಬರ್ತಾಯಿತ್ತು. ಏರಿದ ತಾಪಕ್ಕೆ ಸೋರುವ ಬೆವರಿಗೆ ರಾಚಿದ ಧೂಳೂ ಸೇರಿ ಮೈಗೆ ಅಂಟಿದರೆ ನಮ್ಮ ಮೈ ನಮಗೇ ಅಸಹ್ಯ.
ಅಲ್ಲಿ ಆಡುವ ಮಕ್ಕಳ ಕೇಕೆ ಇತ್ತು, ಆಗದ ಅಜ್ಜನ ಏದುಸಿರಿತ್ತು, ತಾಳದ ಹಸುಗೂಸಿನ ಅಳುವಿತ್ತು, ತಣ್ಣನೆಯ ಅಮ್ಮನ ಸಾಂತ್ವನವಿತ್ತು
... ತಪ್ಪಿ ಹೋದ ಬೇಸರ ; ಕಾಯುವ ನಿಟ್ಟುಸಿರು; ಗಂಟೆಗಳ ಲೆಕ್ಕಾಚಾರ; ದಾಹಕ್ಕೆ ನೀರಿನ ಬಾಟಲ್ಲು ; ಹಸಿವಿಗೆ ಖಾರದ ಚಿಪ್ಸು ; ಅರೆ ಅಲ್ಲಿ ಕೂಗಿದ್ರು... ಎಳೆ ಸೌತೆಕಾಯ್... ಸೌತೆಕಾಯ್ ರೀ... ಯಾವತ್ತೂ ಹಿಂಗದ ಹಸಿವಿನ ... ಮತ್ತಷ್ಟು ಮಗದಷ್ಟು ಅತಿರೂಪವಾಗಿ ಆಕ್ರಮಿಸುತ್ತಿರುವ ನಗರವೊಂದರ ಬಸ್ಸು ನಿಲ್ದಾಣ ನನ್ನ ಕಣ್ಣಿಗೆ ಕಟ್ಟಿಕೊಟ್ಟ ಚಿತ್ರಣವಿದು.
ಮೂರು ಜನ ಕೂರಬಹುದಾದ ಪಚ್ಚೆ ಬಣ್ಣದ ಕಲ್ಲು ಬೆಂಚದು. ನಾನು ಒಂದು ಬದಿಯಲ್ಲಿ ಸ್ಠಾಪಿತವಾದೆ. ನನ್ನ ದಾರಿಯನ್ನ ಎದುರುನೋಡುತ್ತಾ.. ಒತ್ತರಿಸಿ ಬರುತ್ತಿದ್ದ ಆಲೋಚನೆಯನ್ನ ಹತ್ತಿಕ್ಕುವ ಉದ್ದೇಶದಿಂದ ಆ ಕಡೆ ಈ ಕಡೆ ನೋಡಿದ್ರೆ... ಅಲ್ಲ್ಯಾರೋ ತಮ್ಮ ಮೂಗಲ್ಲಿ ಬಾವಿ ತೋಡ್ತಾ ಇದ್ರು.. ಪಕ್ಕದಲ್ಲಿ ಇನ್ನೊಬ್ರು ಕಿವಿಯಲ್ಲಿ ಸುರಂಗ ಮಾಡ್ತಾ ಇದ್ರು. ಮಗುವೊಂದು ಬಣ್ಣದ ಬಾಂಬೆ ಮಿಠಾಯಿಗಾಗಿ ರಚ್ಚೆ ಹಿಡಿದು ತನ್ನೆಲ್ಲಾ ವಿದ್ಯೆಯನ್ನ ಪ್ರಯೋಗಿಸ್ತಾ ಇದ್ರೆ.. ಅಜ್ಜಿ ಬಾಯಿ ತುಂಬಾ ವಿಳ್ಯಾ ತುಂಬಿ ಜಗಿತಾ ಇದ್ರು. ಇಂತಿಪ್ಪ ಹೊತ್ತಲ್ಲಿ ನನ್ನ ಪಕ್ಕಕ್ಕೆ ಇಬ್ಬರು ಹಿರಿಕರು ಬಂದು ಕುತ್ಕೊತಾರೆ.
ಕುಶಲೋಪರಿಯಿಂದ ಮೊದಲಿಟ್ಟ ಅವರ ಸಂಭಾಷಣೆ ಬೇಡವೆಂದರೂ ಕಿವಿಗೆ ಬಂದು ಬೀಳುತ್ತದೆ. ಅಂದಾಜು ಮುಕ್ಕಾಲು ಶತಮಾನ ಸವೆದಿರುವ ಅವರದ್ದು ಇಂದಿಗೂ ಬತ್ತದ ಉತ್ಸಾಹ. ಅರ್ಧ ಶತಮಾನದ ಹಿಂದೆ ಬಾಂಬೆಗೆ ಹೋಗಿ ಏಲಕ್ಕಿಯ ಬೀಜ ತಂದು ನೆಟ್ಟ ಕತೆಯಿಂದ ಹಿಡಿದು ಮೊನ್ನೆ ಮೊನ್ನೆ ಕೊರಿಯರ್ ನಲ್ಲಿ ಕೋಲ್ಕತ್ತಾ ದಿಂದ ಕಾಳ್ ಮೆಣಸಿನ ಬೀಜ ತರಿಸಿ ನೆಟ್ಟ ಕತೆಯವರೆಗೆ ಒಂದಷ್ಟು ಹೊತ್ತು ಹರಟಿದರು. ಎದುರಿಗೆ ರಾಚುತ್ತಿದ್ದ ಬಿಸಿಲನ್ನ ಚೇಡಿಸಿ ; ಇದೆಂತ ಬಿಸಿಲು... ಇದರಪ್ಪನಂತ ರಣ ಬಿಸಿಲಲ್ಲಿ ನಾವು ಗೈಯ್ದಿಲ್ವಾ? ಅಂತ ಗರ್ವದಿಂದ ಅವರೇಳಿದ ಮಾತಿನ್ನು ಅಚ್ಚಾಗಿದೆ. ಅಷ್ಟರಲ್ಲಿ ಅವರು ಹೋಗಬೇಕಾದ ಬಸ್ ಬಂದು ಅವರಲ್ಲೊಬ್ಬರು ಹೊರಡುತ್ತಾರೆ.
ಬೆನ್ನಲ್ಲೇ ನನ್ನ ಮುಂದಿನ ಇನ್ನೊಂದು ಬೆಂಚಿನಲ್ಲಿ ಚಿಕ್ಕ ಸಂಸಾರವೂಂದು ಬಂದು ಕೂಡುತ್ತಾರೆ. Daddy, can’t bear this ಅಂತೇಳಿ ತೊಟ್ಟ ಮೇಲಂಗಿಯನ್ನ ಕಳಚಿದ ಮಗಳಿಂದ ಶುರುವಾದ ಅವರ ಗೋಳು ಸತತವಾಗಿ ಅರ್ಧ ಗಂಟೆ ನಿರಂತರವಾಗಿ ಮುಂದುವರೆಯುತ್ತದೆ. ತಾವು ಹಿಮ ದೇಶದಲ್ಲೇ ಹುಟ್ಟಿ ಬೆಳೆದವರಂತೆ ರಾಚುತ್ತಿದ್ದ ಬಿಸಿಲಿನಿಂದ ಶುರುವಿಟ್ಟು.. ಎದುರು ಕಸ ಗುಡಿಸಲು ಬಂದ ಪೌರನನ್ನು ಸೇರಿಸಿ ಎಲ್ಲವನ್ನೂ ಬಲ್ಲವರಂತೆ ಜಾಗತಿಕ ತಾಪಾಮಾನವನ್ನ ಅರಿದು ಕುಡಿದವರಂತೆ ಎಲ್ಲವನ್ನೂ ಎಲ್ಲರನ್ನೂ ದೂರಿದರು... ಅಂತೂ ಅವರಿಗೂ ಹೊರಡುವ ಸಮಯ ಬಂತು..
ಆವರೆಗೆ ಸುಮ್ಮನಿದ್ದ ನನ್ನ ಪಕ್ಕದಲ್ಲಿದ್ದ ಹಿರಿಕರು ತಮ್ಮಷ್ಟಕ್ಕೇ ಆಡಿಕೊಂಡ ಆ ಮಾತು ನನ್ನನ್ನು ಇನ್ನೂ ಕುಟುಕುತಿದೆ...
ಆವತ್ತು ಹಾಗಂದ ಅವರ ಮುಖ ನೋಡಲು ನನಗೆ ಧೈರ್ಯ ಸಾಲಿಲ್ಲ... ಆಗ್ಲೇ ನಾನೊಂದು ತೀರ್ಮಾನ ಮಾಡ್ದೆ... ಕುಟುಕಿ ಆದ ಗಾಯವನ್ನು ನೀವೂ ನೋಡಿಕೊಳ್ಳಿ... ಮತ್ತೂ ನಿಮ್ಮ ತೀರ್ಮಾನವನ್ನ ಬರೆದುಕೊಳ್ಳಿ...
ಬೋ...ಡಿ ಮಕ್ಳು.. ಸೀಮೆಗಿಲ್ಲದಂಗ್ ಆಡ್ತಾವೆ... ಅಷ್ಟೊಂದು ಮಾತಾಡ್ದೋರು ಒಂದ್ಕಿತ ಎದೆ ಮುಟ್ಕಂಡ್ ಹೇಳ್ಲಿ ನೋಡವ.. ಕೊನೆ ಸಾರಿ ತಾನ್ ಒಂದು ಗಿಡ ನೆಟ್ಟ್ ನೀರಾಕಿದ್ದು ಯಾವಾಗ ಅಂತ...!
- ಕೃ. ವಿಶಾಂತ್ ರಾವ್.
Comments
ಉ: ಕುಟುಕಿ ಆದ ಗಾಯವನ್ನು ನೀವೂ ನೋಡಿಕೊಳ್ಳಿ...!
ನಿಜ ಸರ್. ಎಲ್ಲರೂ ಎದೆ ಮುಟ್ಕೊಂಡು ಯೋಚಿಸಬೇಕಾದ ವಿಚಾರ.