ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಅಗತ್ಯ

ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಅಗತ್ಯ

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು,ಜೂನ್ ಮೊದಲ ವಾರ ಮುಗಿದರೂ ಬಿಸಿಲ ಧಗೆ ಆರುತ್ತಿಲ್ಲ. ಬಯಲುಸೀಮೆ, ಕರಾವಳಿ ಮಲೆನಾಡು ಎಂಬ ಭೇಧವಿಲ್ಲದೇ ಎಲ್ಲೆಡೆ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೇ ಕಂಗಾಲಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ ರಾಜ್ಯದ ೧೪ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಬಯಲುನಾಡಿನಲ್ಲಿ ಬಹುತೇಕ ಜಲಮೂಲಗಳು ಬತ್ತಿಹೋಗಿವೆ. ಕಲ್ಯಾಣ ಕರ್ನಾಟಕದ ಕೆರೆಗಳೆಲ್ಲ ಬರಿದಾಗಿವೆ. ಮಲೆನಾಡಿನ ನದಿಗಳೂ ತಳಕಂಡಿವೆ. ಹಲವೆಡೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಮಂಗಳೂರಿನಂಥ ಕರಾವಳಿಯ ಪ್ರದೇಶದಲ್ಲೇ ಕುಡಿಯುವ ನೀರಿಲ್ಲದೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ನಗರ ಪ್ರದೇಶಗಳಲ್ಲಿ ಟ್ಯಾಂಕರ್ ಗಳವರ ಲಾಬಿ ಹೆಚ್ಚಿದ್ದು, ದುಬಾರಿ ಬೆಲೆಗೆ ನೀರು ಬಿಕರಿಯಾಗುತ್ತಿದೆ. ರಾಜ್ಯದ ನೂರಾರು ಗ್ರಾಮಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬರ ಎದುರಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ನೀರಿನ ತತ್ವಾರ ಎದ್ದಿದ್ದರೂ ಅತ್ತ ಕಡೆ ಮುಖ ಮಾಡಲು ಗ್ಯಾರಂಟಿ ಗದ್ದಲದಲ್ಲಿ ಸರಕಾರಕ್ಕೆ ಪುರುಸೊತ್ತಿಲ್ಲವಾಗಿದೆ. ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇದ್ದಂತೆ ಅನಿಸುತ್ತಿದೆ. ಪರಿಣಾಮ ಜನಸಾಮಾನ್ಯರ ಕಷ್ಟವನ್ನು ಕೇಳುವವರೇ ಇಲ್ಲದಾಗಿದೆ. ಚುನಾವಣೆ ಹಾಗೂ ಚುನಾವಣೋತ್ತರ ಸರಕಾರ ರಚನೆ ಪ್ರಕ್ರಿಯೆಯ ಹಂತದಲ್ಲಿ ಆಡಳಿತ ಹಿನ್ನಡೆ ಅನುಭವಿಸುವುದು ಸಹಜ. ಅದರಲ್ಲೂ ಹೊಸ ಸರಕಾರಕ್ಕೆ ಟೇಕಾಫ್ ಆಗಲು ಸಮಯ ಬೇಕಾಗುತ್ತದೆ. ಆದರೆ ಕುಡಿಯುವ ನೀರಿನಂತ ಮಹತ್ವದ, ಮೂಲಭೂತ ಸಂಗತಿಯಲ್ಲಿ ಒಂದು ದಿನವೂ ವಿಳಂಬ ಸಲ್ಲದು. ಯಾವುದೇ ಭರಾಟೆಯಲ್ಲಿ ಕುಡಿಯುವ ನೀರಿನ ಕೊರತೆಯಂತಹ ಸಮಸ್ಯೆಯನ್ನು ಕಡೆಗಣಿಸಬಾರದು. ತಕ್ಷಣ ಆಡಳಿತ ಯಂತ್ರ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಹಳೆಯ ಕ್ರಿಯಾಯೋಜನೆಯನ್ನು ಆಧರಿಸಿಯಾದರೂ ಕ್ರಮ ಕೈಗೊಳ್ಳಬೇಕು. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳಿಗೆ ಸರಕಾರ ಚುರುಕು ಮುಟ್ಟಿಸಬೇಕು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮುತುವರ್ಜಿ ವಹಿಸಿ, ಸಮ್ಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಮುಂದಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಮಳೆ ನೀರು ಕೊಯ್ಲು, ತ್ಯಾಜ್ಯ ಸಂಸ್ಕರಣೆಯಂಥ ಶಾಶ್ವತ ಕ್ರಮಗಳ ಅನುಷ್ಟಾನಕ್ಕೆ ಕಡ್ಡಾಯ ನಿಯಮ ರೂಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ನೀರು ಪೂರೈಕೆ ಯೋಜನೆ ಅನುಷ್ಟಾನಕ್ಕೆ ತರುವುದು ಆದ್ಯತೆಯಾಗಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೯-೦೬-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ