ಕುರು ದ್ವೀಪ

`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ. ‘ಕುರುದ್ವೀಪ’ದಲ್ಲಿ ಕೇವಲ ಜನರ ಬದುಕು ಮಾತ್ರ ‘ದ್ವೀಪ’ವಾಗುವುದಿಲ್ಲ; ಪ್ರಕೃತಿ ಕೂಡ ಅಂತಹ ಒಂದು ಆತಂಕಕಾರೀ ದ್ವೀಪವೊಂದನ್ನು ಸೃಷ್ಟಿಸಿ ಮಾನವನ ಇಚ್ಛಾಶಕ್ತಿಯ ಪರಮೋಚ್ಛ ಬಳಕೆಯ ಬಗ್ಗೆ ಕರೆಕೊಟ್ಟು ಅದರಿಂದ ಹೊರಬರುವ ಮಾರ್ಗವನ್ನು ಅವರೇ ಸೃಷ್ಟಿಸಿಕೊಳ್ಳುವಂತೆ ಮಾಡುವಲ್ಲಿ ತಾನು ಸೂತ್ರಧಾರಿಯಾಗಿ ಆಟವಾಡುತ್ತಾ ಸಾಗುತ್ತದೆ. ಈಗಲೂ ಮುಳುಗುವ ಆತಂಕವನ್ನು ಹೊತ್ತು ನಿಂತ ಜನರ, ಅಂದರೆ ಕುಂದಾಪುರದ ಸಮೀಪದಲ್ಲಿರುವ ‘ಕುರುದ್ವೀಪ’ದ ಜನರ ಕಥೆಯಿದು. ಇಲ್ಲಿಯ ಜನರ ನಿತ್ಯ ಬವಣೆಯನ್ನು ಚಿತ್ರಿಸಿ ಅದರ ಬಗ್ಗೆ ಗಮನ ನೀಡುವಂತೆ ಅವರನ್ನೂ ಅವರ ಬದುಕನ್ನೂ ಜೊತೆಗೆ ಕುರುದ್ವೀಪವನ್ನೂ ರಕ್ಷಿಸಿಕೊಳ್ಳುಚ ಹಂಬಲವನ್ನು ಇದರಲ್ಲಿ ಲೇಖಕಿ ವ್ಯಕ್ತಪಡಿಸುತ್ತಾರೆ.
ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಪರ್ವತಿ ಜಿ ಐತಾಳ್. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ,
“"ಕುರುದ್ವೀಪ" ಕಥೆಗಾರ್ತಿ ವೀಣಾ ರಾವ್ ಅವರ ಎರಡನೆಯ ಕಾದಂಬರಿ. “ಮಧುರ ಮುರಳಿ" ಎಂಬ ತಮ್ಮ ಮೊದಲನೆಯ ಕಾದಂಬರಿಯ ಭರ್ಜರಿ ಜನಪ್ರಿಯತೆಯ ನಂತರ ಅವರು ತುಸು ಬೌದ್ಧಿಕತೆಗೂ ಗ್ರಾಸ ಕೊಡುವ ಈ ಕಾದಂಬರಿಯನ್ನು ಬರೆದಿದ್ದಾರೆ. ಮೂಲತಃ ಕುಂದಾಪುರದ ಕಂಬದಕೋಣೆಯ ವೀಣಾ ನನ್ನ ವಿದ್ಯಾರ್ಥಿನಿ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೂ ವಾರ್ಷಿಕ ಸಂಚಿಕೆ 'ದರ್ಶನ'ದಲ್ಲಿ ಉತ್ತಮ ಗುಣಮಟ್ಟದ ಲೇಖನ-ಕಥೆ-ಕವನಗಳನ್ನು ಬರೆಯುತ್ತಿದ್ದರು. ಕೌಟುಂಬಿಕ ಕರ್ತವ್ಯಗಳ ವ್ಯಸ್ತತೆಯಲ್ಲಿ ಹಲವು ಕಾಲ ಮೌನವಾಗಿದ್ದು ಈಗ ಪುನಃ ಲೇಖನಿಯನ್ನು ಕೈಗೆತ್ತಿಕೊಂಡದ್ದು ನೋಡಿ ನನಗೆ ತುಂಬಾ ಸಂತೋಷವಾಯಿತು. ಹಾಗೆ ತಮ್ಮ ಈ ಕೃತಿಗೆ ಮುನ್ನುಡಿ ಬರೆಯಲು ಕೇಳಿದಾಗ ತಕ್ಷಣವೇ ಒಪ್ಪಿಕೊಂಡೆ.
ಕುರುದ್ವೀಪದ ಓದು ಇತರ ಸಾಮಾನ್ಯ ಜನಪ್ರಿಯ ಕಾದಂಬರಿಗಳಿಗಿಂತ ಭಿನ್ನವಾದ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಇದು ಒಂದು ಅಪ್ಪಟ ಗ್ರಾಮೀಣ ಪ್ರದೇಶದ ಕಥೆ. ಆದ್ದರಿಂದ ಇಲ್ಲಿ ಹಸಿರು ಗಿಡ ಮರಗಳು, ನದಿಗಳು, ಪ್ರಾಣಿ-ಪಕ್ಷಿಗಳು, ದೋಣಿ ವಿಹಾರಗಳು, ಸಮುದ್ರ, ಬಯಲು, ಕೃಷಿ ವಿವರಗಳು ಸಮೃದ್ಧವಾಗಿ ಸಿಗುತ್ತವೆ.
ಶ್ರೇಯಸ್ ಇಲ್ಲಿನ ಕಥಾನಾಯಕ. ಸದಾ ಮೌನಿ ಮತ್ತು ಅಂತರ್ಮುಖಿ. ಅವನ ಈ ಸ್ವಭಾವವನ್ನು ತಪ್ಪಾಗಿ ತಿಳಿದುಕೊಂಡು ಅವನ ಅಪ್ಪ ನಾಗೇಂದ್ರ ಅವನನ್ನು ಪೆದ್ದ, ಅಪ್ರಯೋಜಕನೆಂದು ಸದಾ ಹೀಯಾಳಿಸುತ್ತ ಇರುತ್ತಾನೆ. ಅವನು ಪ್ರೀತಿಸಿದ ಹುಡುಗಿ ಸ್ವಾತಿ ಕೂಡಾ ಅವನ ಸರಳತೆಯನ್ನು ನೋಡಿ ಅವನನ್ನು ಕಡೆಗಣಿಸಿ ಬೇರೆ ಮದುವೆಯಾಗುತ್ತಾಳೆ. ಅಮ್ಮ ಮತ್ತು ತಾತ ಜಗನ್ನಾಥ ಮಾತ್ರ ಶ್ರೇಯಸ್ಸನನ್ನು ಬೆಂಬಲಿಸುತ್ತಾರೆ. ತಾತನ ಪ್ರೋತ್ಸಾಹದಿಂದಲೇ ಶ್ರೇಯಸ್ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಮನೆ ಬಿಟ್ಟು ಹೋಗುತ್ತಾನೆ. ಸೌಪರ್ಣಿಕಾ ನದಿಯಲ್ಲಿ ದೋಣಿಯಲ್ಲಿ ಹೋಗಿ ಅವನು ತಲುಪುವುದು ಮೂರು ಮೈಲುಗಳಷ್ಟು ದೂರದಲ್ಲಿರುವ ಕುರುದ್ವೀಪ. ಅದೊಂದು ನಾಲೈದು ಮನೆಗಳಷ್ಟೇ ಇರುವ ಪುಟ್ಟ ದೀಪ, ಅಲ್ಲಿರುವ ಜನರು ಕಷ್ಟಜೀವಿಗಳು, ಬದುಕಲು ಬೇಕಾದ ಮೂಲಭೂತ ಸೌಕರ್ಯಗಳ ಅಭಾವವಿರುವ ಸ್ಥಿತಿ ಮತ್ತು ಪ್ರಾಕೃತಿಕ ವಿಕೋಪಗಳಿಂದಾಗಿ ಇತರ ಸಾಮಾನ್ಯರಂತೆ ಜೀವನ ಸಾಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿಗೆ ಹೋಗಿ ಸೇರಿದ ಶ್ರೇಯಸ್ ಅಲ್ಲಿ ವಾಸಿಸುವ ಹಿರಿಯ ವ್ಯಕ್ತಿ ರಮಾನಂದ ರಾಯರು, ಅವರ ಹೆಂಡತಿ ದೇವಿಕಾ, ಕೆಲಸದ ಹೆಂಗಸು ದ್ಯಾವಮ್ಮ, ಅವಳ ಮಗಳು ಸಾರಿಕಾ ಜೊತೆಗೆ ಹೇಗೆ ಬದುಕುತ್ತಾನೆ, ಜಾಣೆಯಿಂದ ವ್ಯವಹರಿಸಿ ಅಪೂರ್ವ ಯಶಸ್ಸು ಸಾಧಿಸುತ್ತಾನೆ ಅನ್ನುವುದನ್ನು ಕಥೆ ಹೇಳುತ್ತದೆ.
ಕಲಿತದ್ದು ಬಿ.ಕಾಂ ಆದರೂ ಶ್ರೇಯಸ್ ಬುದ್ದಿವಂತನೂ ಹೌದು, ಅಧ್ಯಯನಶೀಲನೂ ಹೌದು. ತೋರಿಸಿಕೊಳ್ಳದೆ ಇದ್ದರೂ ಅವನಲ್ಲಿ ಈಗಾಗಲೇ ಬಹಳಷ್ಟು ಲೋಕಜ್ಞಾನವಿದೆ. ಮರವಂತೆಯ ಮಹಾರಾಜ ವರಾಹಸ್ವಾಮಿ ದೇವಾಲಯದ ಸಂಪೂರ್ಣ ಇತಿಹಾಸ- ಐತಿಹ್ಯಗಳ ಬಗ್ಗೆ ತಾನು ಭೇಟಿಯಾದ ವಿದೇಶೀಯನೊಬ್ಬನಿಗೆ ಅವನು ಬಹಳ ಚೆನ್ನಾಗಿ ವಿವರಿಸುತ್ತಾನೆ. ಕುರುದ್ವೀಪದಲ್ಲಿ ಅಪಾರ ಸಂಖ್ಯೆಯ ನವಿಲುಗಳನ್ನು ನೋಡಿ ರಾಷ್ಟ್ರೀಯ ಪಕ್ಷಿಯ ಉಳಿವಿಗಾಗಿ ತಾನೇನಾದರೂ ಮಾಡಬೇಕೆಂದು ಅವನಿಗೆ ಅನ್ನಿಸುವುದು ಮತ್ತು ಅದಕ್ಕಾಗಿ ನವಿಲು ಹಿಡಿಯುವ ಬೋನುಗಳನ್ನು ತಯಾರಿಸುವುದು ವನ್ಯಮೃಗಗಳ ಸಂರಕ್ಷಣೆಯ ಬಗ್ಗೆ ಅವನಿಗಿರುವ ಕಾಳಜಿಯನ್ನು ತೋರಿಸುತ್ತದೆ. ನವಿಲುಗಳನ್ನು ಸಂರಕ್ಷಿಸುವ ಬಂಕಾಪುರ ಅಭಯಾರಣ್ಯಕ್ಕೆ ಹೋಗಿ ಹಲವು ವಿಷಯಗಳನ್ನು ತಿಳಿದುಕೊಳ್ಳುವುದು ಅವನ ಜ್ಞಾನ ದಾಹಕ್ಕೆ ನಿದರ್ಶನ. ತನಗೆ ಆಶ್ರಯ ಕೊಟ್ಟ ಕುರುದ್ವೀಪದ ಸರ್ವತೋಮುಖ ಅಭಿವೃದ್ಧಿಗಾಗಿಯೂ ಅವನು ದುಡಿಯುತ್ತಾನೆ. ಅಲ್ಲಿಯ ಜನರು ವಿದ್ಯಾವಂತರಾಗಬೇಕು, ಅರ್ಥಹೀನ ಸಂಪ್ರದಾಯಗಳನ್ನು ಬಿಟ್ಟು ಬದುಕಬೇಕು, ಜಾತಿ ಧರ್ಮಗಳ ಭೇದವನ್ನು ಮರೆತು ಒಗ್ಗಟ್ಟಾಗಿ ಇರಬೇಕು ಎಂದು ಅವನು ಬಯಸುತ್ತಾನೆ. ಅದಕ್ಕಾಗಿಯೇ ಬ್ರಾಹ್ಮಣನಾದ ಅವನು ಕೆಳ ಜಾತಿಯ ಸಾರಿಕಾಳನ್ನು ಮದುವೆಯಾಗುತ್ತಾನೆ. ಅವನ ತಿಳಿವಳಿಕೆ, ಮಾನವೀಯತೆ, ಪ್ರಾಮಾಣಿಕತೆ, ಪರಿಶ್ರಮ ಪಡುವ ಬುದ್ಧಿ, ಮೌನವಾಗಿ ಕಾರ್ಯನಿರ್ವಹಿಸುವ ಚಾಕಚಕ್ಯತೆ-ಎಲ್ಲದಕ್ಕೂ ಸರಿಯಾದ ಪ್ರತಿಫಲ ಸಿಕ್ಕಿ ಕಾದಂಬರಿ ಸುಖಾಂತವಾಗುತ್ತದೆ.
ಇಲ್ಲಿ ದ್ಯಾವಮ್ಮನ ಪಾತ್ರಕ್ಕೆ ಲೇಖಕಿ ಜೀವ ತುಂಬಿದ್ದಾರೆ. ಅನಕ್ಷರಸ್ಥಳಾದರೂ ಅವಳಲ್ಲಿ ಸ್ತ್ರೀ ಬದುಕಿನ ಕುರಿತಾದ ಗಂಭೀರ ಚಿಂತನೆಗಳಿವೆ. ಮುಟ್ಟಾದಾಗ ಯಾರು ಸಂಪರ್ಕಕ್ಕೂ ಬಾರದೆ ಮೂರು ದಿನ ದೂರ ಕುಳಿತುಕೊಳ್ಳಬೇಕು ಅನ್ನುವ ಸಾಂಪ್ರದಾಯಿಕ ಆಚರಣೆ ಅರ್ಥಹೀನ ಅನ್ನುತ್ತಾಳೆ.
'ನನಗೆ ಇದೆಲ್ಲ ಸುತರಾಂ ಇಷ್ಟವಾಗಲ್ಲ. ಹೆಣ್ಣನ್ನು ಪ್ರಕೃತಿ ಎನ್ನುತ್ತಾರೆ. ನಿಸರ್ಗ ಸಹಜವಾದ ಪ್ರಕ್ರಿಯೆ ಸರಿಯಾಗಿದ್ದು ಆಗಲೇ ಹೆಣ್ಣು ಆರೋಗ್ಯವಾಗಿರುತ್ತಾಳೆ. ಮೈಲಿಗೆ ಅಂದುಕೊಂಡು ಸ್ವಚ್ಛತೆ ಇಲ್ಲದಲ್ಲಿ ಋತುಚಕ್ರದ ಸಮಯದಲ್ಲಿ ಹೆಣ್ಣನ್ನು ಒಂದು ಮೂಲೆಯಲ್ಲಿ ಮೂರು ದಿನ ಕೂರಿಸುವುದನ್ನು ತಡೆಯಬೇಕು. ಆ ದಿನಗಳಲ್ಲಿ ಪೌಷ್ಟಿಕ ಆಹಾರವನ್ನೂ ನೀಡಿದರೆ ಮನಸ್ಸಿಗಿಷ್ಟು ಸಮಾಧಾನ. ಎಲ್ಲರೊಡನೆ ಕಲೆತಾಗ, ಇರುವಂತಹ ಹೊಟ್ಟೆ ನೋವನ್ನೂ ಅವಳು ಮರೆತು ಹೋಗುತ್ತಾಳೆ. ಮೈಲಿಗೆ ಎಂದು ಮೂಲೆ ಗುಂಪಾಗಿಸುವುದಾದರೆ ಅವಳನ್ನೇಕೆ ಸ್ತ್ರೀ ಎಂದು ಕರೆಯಬೇಕು? ಅದರಿಂದಲೇ ತಾನೇ ಅವಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುವುದು? ನನ್ನಂಥ ಹಳೆಯ ಕಾಲದವಳಿಗಿರುವಷ್ಟು ಜ್ಞಾನ ನೀವು ಓದಿದವರಿಗೆ ಇಲ್ಲವಾಯಿತಲ್ಲ? (ಪುಟ-೯೯)'
ಔಷಧೀಯ ಸಸ್ಯಗಳ ಬಗ್ಗೆ ಕೂಡಾ ದ್ಯಾವಮ್ಮನಿಗೆ ತುಂಬಾ ತಿಳುವಳಿಕೆ ಇದೆ. ಮರ್ಮ ಚಿಕಿತ್ಸೆಯನ್ನು ಮಾಡಿ ಸ್ವಾತಿ ಎಂಬ ಹುಡುಗಿಯ ಹುಚ್ಚನ್ನು ಅವಳು ಗುಣಪಡಿಸುತ್ತಾಳೆ. ಜಾತಿ ಭೇದವನ್ನು ಮರೆತು ಶ್ರೇಯಸ್ ಅವಳ ಮಗಳು ಸಾರಿಕಾಳನ್ನು ಮದುವೆಯಾದಾಗ ಸಂತೋಷ ಪಡುತ್ತಾಳೆ. ಇಂದಿನ ಸಂದರ್ಭಕ್ಕೆ ಪ್ರಸ್ತುತವಾದಂತಹ ಒಂದು ವಸ್ತುವನ್ನು ವೀಣಾ ಆಯ್ದುಕೊಂಡಿದ್ದಾರೆ. ಕಾದಂಬರಿಯ ರಚನಾ ಬಂಧ ಬಿಗಿಯಾಗಿದ್ದು ಎಲ್ಲೂ ಸಡಿಲ ತುದಿಗಳು ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ, ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ಅನ್ನುವ ಸಾಂಪ್ರದಾಯಿಕ ಕಾವ್ಯ ನ್ಯಾಯವನ್ನು ಲೇಖಕಿ ಪಾಲಿಸಿದ್ದಾರೆ. ಕಥನದ ವಿನ್ಯಾಸ ಮತ್ತು ನಿರೂಪಣೆಯ ಶೈಲಿ ಆಕರ್ಷಕವಾಗಿದ್ದು ಕಾದಂಬರಿಗೆ ಮೆರುಗನ್ನಿತ್ತಿವೆ.”