ಕುಶಲ ರಾಜತಾಂತ್ರಿಕ ನಡೆ
ಕೆಲದಿನಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ಅಫಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವರ ಜತೆ ದುಬೈಯಲ್ಲಿ ಮಾತುಕತೆ ನಡೆಸಿದರೆಂಬ ಸುದ್ದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿತು. ಇದು ಅಫಘಾನಿಸ್ಥಾನದ ತಾಲಿಬಾನ್ ಆಡಳಿತದೊಂದಿಗಿನ ಭಾರತದ ನಿಲುವಿನಲ್ಲಿ ಮತ್ತು ವ್ಯವಹಾರದಲ್ಲಿ ದೊಡ್ದದೊಂದು ಬದಲಾವಣೆಯನ್ನು ಸಂಕೇತಿಸಿತು. ಹಾಗೆಂದು ಇದು ಭಾರತವು ತಾಲಿಬಾನ್ ನ ಧೋರಣೆ, ಸಿದ್ಧಾಂತ, ನೀತಿಗಳನ್ನು ಮಾನ್ಯ ಮಾಡಿದೆಯೆಂದು ಅರ್ಥವಲ್ಲ. ಆದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಭಾರತವು ತನ್ನ ಹಿತಾಸಕ್ತಿಗಳನ್ನು ಕಾಯುವ ನಿಟ್ಟಿನಲ್ಲಿ ತನ್ನ ಧೋರಣೆಗಳನ್ನು ಬದಲಿಸಿಕೊಳ್ಳುವುದು ಅಗತ್ಯವೂ ಆಗಿದೆ. ಅದರನ್ವಯವೇ ಭಾರತವು ಈಗ ತಾಲಿಬಾನ್ ಆಡಳಿತದೊಂದಿಗೆ ಸೀಮಿತ ನೆಲೆಯಲ್ಲಿ ವ್ಯವಹಾರ ನಡೆಸಲು ನಿರ್ಧರಿಸಿರುವುದು ಸ್ಪಷ್ಟವಾಗಿದೆ.
ಭಾರತದ ಈ ನಡೆಯ ಹಿಂದೆ ಬಹುಆಯಾಮಗಳ ಉದ್ದೇಶವಿದೆ. ಒಂದನೆಯದಾಗಿ, ಪಾಕಿಸ್ತಾನ ಮತ್ತು ಅಫಘಾನಿಸ್ಥಾನಗಳ ನಡುವಿನ ಹದಗೆಟ್ಟ ಸಂಬಂಧವನ್ನು ತನಗೆ ಪೂರಕವಾಗಿ ಬದಲಿಸಿಕೊಳ್ಳುವುದು ಮತ್ತು ಎರಡನೆಯದಾಗಿ ಅಫಘಾನಿಸ್ಥಾನದಲ್ಲಿ ಚೀನಾ ತನ್ನ ನೆಲೆ ಸ್ಥಾಪಿಸಲು ನಡೆಸುತ್ತಿರುವ ಯತ್ನಗಳನ್ನು ಚೆಕ್ ಮೇಟ್ ಮಾಡುವುದು. ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬರಲು ಕಾರಣವಾದುದೇ ಪಾಕಿಸ್ತಾನ. ತಾಲಿಬಾನ್ ನ್ನು ಹುಟ್ಟಿಸಿ, ಬೆಳೆಸಿದ್ದೂ ಪಾಕಿಸ್ತಾನ. ಆದರೀಗ ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ವಿರಸ ಮೂಡಿದೆ. ಇದರ ಲಾಭ ಪಡೆಯಬಯಸಿರುವ ಭಾರತವು ತಾಲಿಬಾನ್ ಆಡಳಿತದ ಜತೆ ಸಂಬಂಧ ಕುದುರಿಸಲು ಯತ್ನಿಸಿದೆ. ತಾಲಿಬಾನ್ ಗೆ ಮಾನವೀಯ ನೆಲೆಯಲ್ಲಿ ನೆರವು ನೀಡಲು ಉದ್ದೇಶಿಸಿದೆ. ಆ ಮೂಲಕ ಪಾಕಿಸ್ತಾನವು ತನ್ನ ಪೂರ್ವದ ಗಡಿಯ ಜತೆಗೇ ಪಶ್ಚಿಮದ ಗಡಿಯಲ್ಲೂ ಆತಂಕಕಾರಿ ಪರಿಸ್ಥಿತಿ ಎದುರಿಸುವಂತೆ ಮಾಡಲಾಗಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ರೂಪುಗೊಂಡ ಕೂಡಲೇ ಚೀನಾ ಅದರೊಂದಿಗೆ ಸಖ್ಯ ಸಾಧಿಸಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಲ್ಲಿ ಪಾಲು ಪಡೆಯಲು ಯತ್ನಿಸುವುದು ರಹಸ್ಯವೇನಲ್ಲ. ತಾಲಿಬಾನ್ ಆಡಳಿತಕ್ಕಿಂತ ಮೊದಲು ಅಫಘಾನಿಸ್ತಾನದ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ಆರಂಭಿಸಿದ್ದ ಭಾರತವು ಬಳಿಕ ಅವುಗಳನ್ನು ಸ್ಥಗಿತಗೊಳಿಸಬೇಕಾಗಿತ್ತು. ಇದೀಗ ಈ ಕಾಮಗಾರಿಗಳನ್ನು ಮತ್ತೆ ಆರಂಭಿಸುವ ಒಪ್ಪಂದಕ್ಕೆ ಬರುವ ಮೂಲಕ ಭಾರತವು ಅಫಘಾನಿಸ್ತಾನದಲ್ಲಿ ತನ್ನ ನೆಲೆಯನ್ನು ಮರುಸ್ಥಾಪಿಸುವ ಪ್ರಯತ್ನ ನಡೆಸಿದೆ. ಇದರ ಜತೆಗೇ ವಾಣಿಜ್ಯ ಉದ್ದೇಶಗಳಿಗಾಗಿ ಚಾಬಹಾರ್ ಬಂದರನ್ನು ಬಳಸಿಕೊಳ್ಳುವ ಕುರಿತಂತೆಯೂ ಭಾರತ ಮತ್ತು ಅಫಘಾನಿಸ್ತಾನಗಳು ನಿರ್ಧರಿಸಿವೆ.
ತಾಲಿಬಾನ್ ಮಾನವ ವಿರೋಧಿ ನಿಲುವುಗಳಿಗೆ ಭಾರತದ ವಿರೋಧವಿದ್ದೇ ಇದೆ. ಆದರೆ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ತಾಲಿಬಾನ್ ಆಡಳಿತದೊಂದಿಗೆ ವ್ಯವಹಾರ ಆರಂಭಿಸಿರುವುದು ಒಂದು ಜಾಣ ರಾಜತಾಂತ್ರಿಕ ನಡೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೬-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ