ಕುಸುಮ ಬಾಲೆ

ಕುಸುಮ ಬಾಲೆ

ಕವನ

ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ

ನನ್ನೊಳಗೆ ನೀನೆಯೆಂದೂ

ನಿನ್ನ ರೂಪದ ಒಳಗೆ ನನ್ನ ಭಾವನೆಯುರಿಸಿ

ಮಧುವನ್ನು ಪಡೆದೆಯಿಂದೂ

 

ಮೋಹಕದ ನಗೆಯೋಳೆ ವೈಯಾರ ನುಡಿಯೊಳೆ

ಭಿನ್ನಾಣ ಚೆಲುವ ಬೀರಿ

ಅತ್ತಿತ್ತ ಓಡುತಲಿ ಕಣ್ಮುಂದೆ ಸುಳಿವವಳೆ

ಗೆಲುವಿಂದ ಮನವ ಸೇರಿ

 

ಕಾಲ್ಗೆಜ್ಜೆ ನಾದದಲಿ ಹೃದಯವನು ಕದ್ದೋಳೆ

ಕೈಹಿಡಿದು ನಗುವು ಸೇರೆ

ಹೊಂಗನಸ ದೋಣಿಯಲಿ ಕುಳ್ಳಿರುತ ಸಾಗುತಲಿ

ಮೈ ಸವರೆ ಒಲವ ಧಾರೆ

 

ಹತ್ತೂರ ಸುತ್ತುತಲೆ ಕುಳಿತಿಹೆವು ಒಂದು ಕಡೆ

ಬೆಸುಗೆಯೊಳು ಮುದವ ನೀಡಿ

ಹೀಗೆ ಸಾಗಲಿ ಬದುಕು ನಮ್ಮಿಬ್ಬರಾ ಜೊತೆಯು

ಕೊನೆತನಕ ಮಧುರ ಬೇಡಿ

***

ಬದುಕು ಸುಂದರವಾಗಲಿ

ಕರುಣೆಯದು ಬಾರದೆಯೆ ಗೆಳೆಯ ನೀ ಹೊರಟಿರಿವೆ

ವಿರಹದೊಳು ದಹಿಸಿ ಹೋಗಿದೆಯೊ ಮನವಿಂದು

ಬರಸೆಳೆದುಯೆನ್ನ ಸಂತೈಸೊ

 

ಜನಮನದಿ ಹೆಸರಿಹುದು ಗೆಳೆತನದ ಸವಿಯಿಹುದು

ಗುಣವಿಹುದು ತನುವ ಬನದೊಳಗೆ ಹೂವಾಗಿ

ಘನಮಹಿಮಯೆನ್ನ ಜೊತೆಯಾಗು

 

ಚೆಂದದಲಿ ಚೆಲುವಿಹುದು ಬಂಧನದಿ ಗೆಲುವಿಹುದು

ಗಂಧದಲಿ ಹೊಸತು ಪರಿಮಳವು ತುಂಬಿಹುದು

ಸುಂದರವು ನಮ್ಮ ಬದುಕಾಗಲಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್