ಕೂಡಿ ಬಾಳಿದರೆ ಸ್ವರ್ಗ ಸುಖವಿದೆ

ಕೂಡಿ ಬಾಳಿದರೆ ಸ್ವರ್ಗ ಸುಖವಿದೆ

‘ಒಗ್ಗಟ್ಟಿನಲ್ಲಿ ಬಲವಿದೆ, "ಹತ್ತು ಕೈಗಳು ಸೇರಿದಾಗ ಒಂದು ಕೆಲಸವನ್ನು ಹೂವೆತ್ತಿದಂತೆ ಸುಲಭವಾಗಿ ಮಾಡಿ ಮುಗಿಸಬಹುದು ಆದರೆ "ಗುಂಪಿನಲ್ಲಿ ಗೋವಿಂದ ,ಹತ್ತರೊಟ್ಟಿಗೆ ಹನ್ನೊಂದು" ಆಗಬಾರದು. ನಾವು ಯಾವುದೇ ಕೆಲಸಕಾರ್ಯವನ್ನು ಕೈಗೆತ್ತಿಕೊಂಡಾಗ ಅದನ್ನು ಪೂರ್ತಿಯಾಗಿ ಮಾಡುವ ಗುಣವಿರಬೇಕು. ನಾನು ಕೆಲವರನ್ನು ನನ್ನ ಜೀವನಾನುಭವದಲ್ಲಿ ನೋಡಿದಂತೆ, ಒಂದು ಕೆಲಸಕ್ಕೆ ಕೈಹಚ್ಚಿ ಅನಂತರ ಬೇರೆ ಕಡೆಗೆ ಹೋಗುವುದೋ, ಯಾರಲ್ಲೋ ಮಾತನಾಡುವುದೋ, ಮೊಬೈಲ್ ಪ್ರಪಂಚದೊಳಗೆ ಪರಿವೆಯೇ ಇಲ್ಲದ ಹಾಗೆ ಮಾತನಾಡುವುದೋ ಮಾಡುತ್ತಿರುತ್ತಾರೆ. ಈ ಕಡೆ ಹಿಡಿದ ಕೆಲಸ ಅರ್ಧಂಬರ್ಧ ಅಥವಾ ಒಲೆಯ ಮೇಲಿಟ್ಟ ಪದಾರ್ಥಗಳು ಸುಟ್ಟು ಕರಕಲಾಗುವುದೂ ಇದೆ. ಪ್ರಾರಂಭಿಸಿದ್ದನ್ನು ಪೂರ್ಣಗೊಳಿಸುವ ಬುದ್ಧಿ ಹಿರಿಯರಿಗೂ ಇರಲಿ, ಕಿರಿಯರಿಗೆ ಕಲಿಸಿಕೊಡೋಣ. ಮನೆಯ ವಾತಾವರಣವನ್ನು ಚೆನ್ನಾಗಿಡುವುದು ಮನೆಯ ಎಲ್ಲಾ ಸದಸ್ಯರ  ಹೊಣೆಗಾರಿಕೆ. ಪ್ರತಿಯೊಬ್ಬರೂ ದೃಢಸಂಕಲ್ಪ ಕೈಗೊಳ್ಳಬೇಕು. ಒಬ್ಬೊಬ್ಬರಿಂದ ಯಾವುದೂ ಸಾಗದು. 'ಒಗ್ಗೂಡಿದ ಕೆಲಸದಲ್ಲಿ ಸಂತಸವಿದೆ, ಸಂಭ್ರಮವಿದೆ. ಆಸ್ವಾದಿಸೋಣ. ಮನೆಯಲ್ಲಿ ಒಂದು ಸಮಾರಂಭವಿದೆ ಎಂದಾದರೆ ಎಷ್ಟು ಕೆಲಸವಿರುತ್ತದೆ? ಆದರೆ ಕೆಲವು ಜನ ಮನೆಯ ಸದಸ್ಯರೇ ಮನೆಗೆ ಬಂದ ನೆಂಟರ ಹಾಗಿದ್ದು, ಹೋಗುವವರಿದ್ದಾರೆ.ಇದು ಸಲ್ಲದು. ಮನೆ ಎಂದ ಮೇಲೆ ಕೂಡಿ ದುಡಿಯುವುದರಲ್ಲಿ ಸೊಗಸಿದೆ, ಆನಂದವಿದೆ. ಕೆಲಸಕಾರ್ಯಗಳೂ ಸಮಯಕ್ಕೆ ಸರಿ ಆಗಬೇಕಲ್ಲ? ಅರ್ಥಮಾಡಿಕೊಂಡು ಅವರವರೇ ವ್ಯವಹರಿಸಬೇಕು.

ಸೂರ್ಯ ಚಂದ್ರರ ದಿನಚರಿ'ಯನ್ನು ನೋಡಿ ಕಲಿಯುವುದು ಬಹಳವಿದೆ. ಮಳೆ ಬಿಸಿಲು ಚಳಿಗಂಜದೆ ಹಿಡಿದ ಕೆಲಸ, ತಮ್ಮ ದಿನನಿತ್ಯದ ಕಾರ್ಯವನ್ನು ತಪ್ಪದೆ ಮಾಡುವ ದಿನಕರನ, ಶಶಿಯ ಉದಾಹರಣೆಯಾಗಿ, ಮಾದರಿಯಾಗಿಟ್ಟು ದುಡಿಯೋಣ. ನಮ್ಮ ಮನೆಯ ಮಕ್ಕಳು ನಮ್ಮಚಲನವಲನಗಳನ್ನೆಲ್ಲ ಗಮನಿಸುವರೆಂಬ ಪ್ರಜ್ಞೆ ನಮ್ಮಲ್ಲಿರಲಿ.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ