ಕೂರ್ಗ್ ರೆಜಿಮೆಂಟ್ -ಬಂದೂಕು ಹಿಡಿದವರ ನಾಡಿಮಿಡಿತ

ಕೂರ್ಗ್ ರೆಜಿಮೆಂಟ್ -ಬಂದೂಕು ಹಿಡಿದವರ ನಾಡಿಮಿಡಿತ

ಪುಸ್ತಕದ ಲೇಖಕ/ಕವಿಯ ಹೆಸರು
ಮೇಜರ್ ಡಾ. ಕುಶ್ವಂತ್ ಕೋಳಿಬೈಲು (ನಿ)
ಪ್ರಕಾಶಕರು
ಮೈತ್ರಿ ಪ್ರಕಾಶನ, ಬನಶಂಕರಿ, ಬೆಂಗಳೂರು-೫೬೦೦೫೦
ಪುಸ್ತಕದ ಬೆಲೆ
ಬೆಲೆ: ರೂ. 100.00 ಮುದ್ರಣ: ಸೆಪ್ಟೆಂಬರ್ 2020

‘ಕೂರ್ಗ್ ರೆಜಿಮೆಂಟ್’ ಕಥಾ ಸಂಕಲನವು ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಇವರ ಮೊದಲ ಕೃತಿ. ಕೊಡಗಿನ ಭಾಗಮಂಡಲದಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಭಾಗಮಂಡಲದಲ್ಲೇ ಕಳೆದರು. ನಂತರದ ಶಾಲಾ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮುಗಿಸಿದರು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಕುಶ್ವಂತ್, ೨೦೦೯ರಲ್ಲಿ ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕೋರ್ ವಿಭಾಗಕ್ಕೆ ಸೇರಿಕೊಳ್ಳುತ್ತಾರೆ. ಭಾರತದ ಗಡಿಭಾಗಗಳಲ್ಲಿ ಇವರು ಸಲ್ಲಿಸಿದ ಸೇವೆ ಅನನ್ಯ. ೨೦೧೯ರಲ್ಲಿ ಮಕ್ಕಳ ತಜ್ಞರ ಕಲಿಕೆಯನ್ನು ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಪ್ರಸ್ತುತ ಪುಣೆಯಲ್ಲಿನ ಖಾಸಗಿ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕಥೆ, ಕವಿತೆಗಳ ಬಗ್ಗೆ ಆಸಕ್ತಿ ಇದ್ದು, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದ ಬಗ್ಗೆಯೂ ಇವರು ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.

ಕೂರ್ಗ್ ರೆಜಿಮೆಂಟ್ ಪುಸ್ತಕಕ್ಕೆ ಹಿರಿಯ ಸಾಹಿತಿ ಡಾ. ಎಲ್. ಸಿ. ಸುಮಿತ್ರಾ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಮುನ್ನುಡಿಯ ಶೀರ್ಷಿಕೆಯಲ್ಲೇ ‘ಸಂವೇದನಾಶೀಲ ಕಥೆಗಳು' ಎಂದು ಬರೆದು ಪುಸ್ತಕದ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಕೆರಳಿಸಿದ್ದಾರೆ. ಕಥಾ ಸಂಕಲನದಲ್ಲಿರುವ ಕೆಲವೊಂದು ಕಥೆಗಳ ಬಗ್ಗೆ ಪುಟ್ಟ ಪುಟ್ಟ ಮಾಹಿತಿ ನೀಡುತ್ತಾ ಹೋಗುತ್ತಾರೆ. ಕೂರ್ಗ್ ರೆಜಿಮೆಂಟ್ ಪುಸ್ತಕದ ಕತೆಗಳು ಲೇಖಕರ ವಿಸ್ತಾರವಾದ ಅನುಭವ, ಮಾನವೀಯ ಕಾಳಜಿ, ಮನುಷ್ಯ ಸಂಬಂಧಗಳ ಮಹತ್ವವನ್ನು ಹೇಳುವಂತೆ ರೂಪುಗೊಂಡಿದೆ. ಕಥನ ಕಲೆ ಲೇಖಕರಿಗೆ ಸಿದ್ಧಿಸಿದೆ ಎನ್ನುವುದು ಡಾ. ಎಲ್. ಸಿ. ಸುಮಿತ್ರಾ ಇವರ ಮನದಾಳದ ಮಾತುಗಳು. 

ಪುಸ್ತಕದ ಬೆನ್ನುಡಿಯಲ್ಲಿ ತಮ್ಮ ಎರಡು ಮಾತುಗಳನ್ನು ಹೇಳಿದ್ದಾರೆ, ನಿವೃತ್ತ ಎಸಿಪಿ ಟೈಗರ್ ಅಶೋಕ್ ಕುಮಾರ್ ಇವರು. ಇವರು ಹೇಳುವಂತೆ ಲೇಖಕರಾದ ಕುಶ್ವಂತ್ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿ, ಅಲ್ಲಿಯ ವಾತಾವರಣವನ್ನು ಹತ್ತಿರದಿಂದ ನೋಡಿರುವ ಕಾರಣ ಅವರ ಈ ಕಥೆಗಳು ನಿಜ ಜೀವನಕ್ಕೆ ಬಹಳ ಹತ್ತಿರವೆನಿಸುತ್ತವೆ. ಕೊಡಗಿನ ಜೀವನ ಮತ್ತು ಅಲ್ಲಿ ಕಂಡು ಬರುವ ಕೆಲವು ಪಾತ್ರಗಳನ್ನು ವರ್ಣಿಸುತ್ತಾ ಲೇಖಕರು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಲ್ಲಿ ಸಫಲರಾಗಿದ್ದಾರೆ ಎನ್ನುತಾರೆ ಟೈಗರ್ ಅಶೋಕ್ ಕುಮಾರ್.

ಪುಸ್ತಕದಲ್ಲಿ ೧೨ ಕಥೆಗಳಿವೆ. ಲೇಖಕರೇ ತಮ್ಮ ಮನದಾಳದ ಮಾತಿನಲ್ಲಿ ಹೇಳುವಂತೆ ‘ನನ್ನ ಕಥೆಗಳಲ್ಲಿ ಬರುವ ಅನೇಕ ಪಾತ್ರಗಳಿಗೆ ನಾನು ಹತ್ತಿರದಿಂದ ನೋಡಿದ ವ್ಯಕ್ತಿಗಳು ಸ್ಪೂರ್ತಿಯಾಗಿದ್ದಾರೆ. ನನ್ನ ಮನಸ್ಸನ್ನು ಕಾಡಿದ ಹಲವಾರು ಘಟನೆಗಳ ಛಾಯೆ ನನ್ನ ಕಥೆಗಳಲ್ಲಿ ಅಡಕವಾಗಿದೆ. “ಅವ್ವ" ಕಥೆ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಎತ್ತಿಕೊಂಡ ವಿಷಯ. “ಕೂರ್ಗ್ ರೆಜಿಮೆಂಟ್" ಕಥೆ ಸೇನಾ ಪರಂಪರೆಯಿರುವ ಕೊಡಗಿನ ಬಹುತೇಕ ಕುಟುಂಬಗಳ ಆತ್ಮಕಥೆ. ನಿವೃತ್ತಿಯ ನಂತರ ಸಾಮಾಜಿಕ ಬದುಕಿಗೆ ಹೊಂದಿಕೊಳ್ಳದೆ ಒದ್ದಾಡುವ ಅನೇಕ ಮಾಜಿ ಸೈನಿಕರು ನನ್ನ “ಗಣಿ ಬೋಪಣ್ಣ" ಕಥೆಗೆ ಪ್ರೇರಣೆ'. ಕಥೆಗಳಿಗೆ ಆಕರ್ಷಕ ರೇಖಾ ಚಿತ್ರಗಳನ್ನು ರೇಡಿಯಂ ಆರ್ಟ್ ಇದರ ಕಲಾವಿದರು ಬಿಡಿಸಿದ್ದಾರೆ. ಸುಮಾರು ೯೦ ಪುಟಗಳಿರುವ ಈ ಪುಸ್ತಕಕ್ಕೆ ಮುಖಪುಟ ರಚಿಸಿದ್ದಾರೆ ಅಜಿತ್ ಕೌಂಡಿನ್ಯ ಇವರು. ಕಥೆಗಳು ಚುಟುಕಾಗಿದ್ದು ಸರಾಗವಾಗಿ ಓದಿಸಿಕೊಂಡು ಹೋದರೂ, ಕಥೆಗಳು ಮರೆತುಹೋಗದೇ ಬಹುಕಾಲ ಕಾಡುವುದರಲ್ಲಿ ಸಂಶಯವಿಲ್ಲ.