ಕೂಲ್ ಕೂಲ್ ಕನ್ನಡಕಗಳು ಕಣ್ಣಿಗೆ ಎಷ್ಟು ಸುರಕ್ಷಿತ?
ಕಪ್ಪನೆಯ ಕೂಲಿಂಗ್ ಗ್ಲಾಸ್ ಹಾಕಿಕೊಂಡ ಚಲನ ಚಿತ್ರದ ನಾಯಕ, ಬಿರು ಬಿಸಿಲಿನಲ್ಲಿ ಆಟವಾಡುತ್ತಿರುವ ಕ್ರಿಕೆಟ್ ಆಟಗಾರ ಇವರನ್ನೆಲ್ಲಾ ನೋಡುವಾಗ ನಮಗೂ ಕೂಲಿಂಗ್ ಗ್ಲಾಸ್ ಅಥವಾ ತಂಪು ಕನ್ನಡಕಗಳನ್ನು ಹಾಕಿ ಮಿರ ಮಿರನೇ ಮಿಂಚುವ ಆಸೆಯಾಗುವುದು ಸಹಜ. ೫೦-೧೦೦ ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವ ಕನ್ನಡಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕೂಲಿಂಗ್ ಗ್ಲಾಸ್ ಧರಿಸುವುದರಿಂದ ನಿಜಕ್ಕೂ ನಮ್ಮ ಕಣ್ಣುಗಳಿಗೆ ತಂಪಾಗುವುದೇ? ಇದನ್ನು ನಿರಂತರವಾಗಿ ಧರಿಸುವುದರಿಂದ ಕಣ್ಣುಗಳಿಗೆ ತೊಂದರೆಯಾಗಿ ದೃಷ್ಟಿ ದೋಷಗಳು ಬರುವ ಸಾಧ್ಯತೆಗಳಿವೆಯೇ? ಈ ಸಾಧ್ಯತೆಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ…
ಬೇಸಿಗೆ ಕಾಲ ಬಂತು ಎಂದೊಡನೆಯೇ ತಂಪು ಕನ್ನಡಕಗಳಿಗೆ ಬೇಡಿಕೆ ಶುರುವಾಗುತ್ತದೆ. ಕೆಲವರಿಗೆ ಇದು ನಿಜವಾಗಿಯೂ ಅಗತ್ಯವಿದ್ದು ಮತ್ತು ಕೆಲವರಿಗೆ ಕೇವಲ ಫ್ಯಾಷನ್. ಈ ತಂಪು ಕನ್ನಡಕಗಳಲ್ಲಿ ವಿವಿಧ ಬಗೆಗಳಿವೆ. ಬೇರೆ ಬೇರೆ ಬಣ್ಣದ, ಪ್ರತಿಫಲಿಸುವ, ಬೆಳಕಿಗೆ ಅನುಸಾರವಾಗಿ ಬಣ್ಣ ಬದಲಾಯಿಸುವ, ಬೆಳಕನ್ನು ಶೋಧಿಸುವ ಕನ್ನಡಕಗಳು ಮಾರುಕಟ್ಟೆಯಲ್ಲಿ ಲಭ್ಯ. ಹಣವಂತರು ತಮಗೆ ಬೇಕಾದ ರೀತಿಯ ಮಸೂರ ಹಾಗೂ ಅದಕ್ಕೆ ಬೇಕಾದ ಫ್ರೇಮ್ (ಚೌಕಟ್ಟು) ಸಹಾ ದುಬಾರಿ ದರ ನೀಡಿ ಮಾಡಿಸಿಕೊಳ್ಳುತ್ತಾರೆ. ತಮ್ಮ ಪತ್ನಿ ಅಥವಾ ಪ್ರೇಯಸಿಗಾಗಿ ಆ ಫ್ರೇಮ್ ಗೆ ಮುತ್ತುಗಳನ್ನು ಅಳವಡಿಸಿ, ಬಂಗಾರದ ಚೈನ್ ಸೇರಿಸಿ ಅದನ್ನು ಇನ್ನಷ್ಟು ದುಬಾರಿಯನ್ನಾಗಿಸುತ್ತಾರೆ. ಇವೆಲ್ಲಾ ಅವರವರ ಅಂತಸ್ತನ್ನು ತೋರಿಸುವ ನಾನಾ ವಿಧಗಳು ಮಾತ್ರ.
ತಂಪು ಕನ್ನಡಕಗಳನ್ನು ಧರಿಸುವವನಿಗೆ ಹಲವಾರು ಬಗೆಯಲ್ಲಿ ಪ್ರಯೋಜನವಾಗುತ್ತದೆ. ಸೂರ್ಯನಿಂದ ಭೂಮಿಗೆ ಬರುವ ಅತಿನೇರಳೆ ಕಿರಣಗಳು (Ultra Violet Ray) ನಮ್ಮ ಕಣ್ಣಿಗೆ ತೊಂದರೆಯನ್ನುಂಟು ಮಾಡಬಲ್ಲವು. ಅವುಗಳಿಂದ ನಮ್ಮ ಕಣ್ಣುಗಳ ರಕ್ಷಣೆಗಾಗಿ ನಾವು ತಂಪು ಕನ್ನಡಕಗಳನ್ನು ಬಳಕೆ ಮಾಡುವುದು ಸೂಕ್ತ. ಆದರೆ ಉತ್ತಮ ದರ್ಜೆಯ ಕನ್ನಡಕಗಳನ್ನು ಖರೀದಿಸುವುದನ್ನು ಮಾತ್ರ ಮರೆಯಬಾರದು. ಅದೇ ರೀತಿ ಪ್ರಖರ ಬೆಳಕಿನಿಂದ ಕಣ್ಣುಗಳ ರಕ್ಷಣೆ ಮಾಡಲೂ ಈ ಕೂಲಿಂಗ್ ಗ್ಲಾಸ್ ಗಳು ಹಿತಕಾರಿ. ಕಣ್ಣಿನ ಪಾಪೆಯು ಬೆಳಕಿಗನುಸಾರವಾಗಿ ಹಿಗ್ಗಿ-ಕುಗ್ಗಿ ಕಣ್ಣನ್ನು ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ಕಣ್ಣಿನ ಪಾಪೆಯು ತನ್ನ ಪೂರ್ಣ ಸಾಮರ್ಥ್ಯಕ್ಕೆ ಅನುಸಾರವಾಗಿ ಕಿರಿದಾದರೂ ಕೆಲವು ಬಾರಿ ಬೆಳಕಿನ ನಿಯಂತ್ರಣಕ್ಕೆ ಸಾಕಾಗುವುದಿಲ್ಲ. ಆಗ ರೆಪ್ಪೆಯನ್ನು ಕಿರಿದು ಮಾಡಿ ಕಣ್ಣನ್ನು ರಕ್ಷಿಸುವ ಪ್ರಯತ್ನ ಮಾಡುತ್ತೇವೆ. ಆದರೂ ಇದರಿಂದ ಕಣ್ಣಿನ ರೆಟಿನಾದ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಬೆಳಕಿನ ಪ್ರಖರತೆಯನ್ನು ೯೭ ಶೇಕಡಾ ತಗ್ಗಿಸುವ ಸಾಮರ್ಥ್ಯ ಹೊಂದಿರುವ ಮಸೂರ (ಲೆನ್ಸ್) ಗಳೂ ಇವೆ.
ಬೆಳಕಿನ ಮೂಲಕ್ಕೆ ನಿಮ್ಮ ದೃಷ್ಟಿಯು ನೇರವಾಗಿದ್ದಾಗ, ಅಂದರೆ ಸೂರ್ಯನನ್ನು ನೀವು ನೇರವಾಗಿ ದಿಟ್ಟಿಸಿ ನೋಡಿದರೆ ನಿಮ್ಮ ಕಣ್ಣಿನ ದೃಷ್ಟಿಗೆ ಸಮಸ್ಯೆಯಾಗುತ್ತದೆ. ಅದೇ ರೀತಿ ರಾತ್ರಿ ಹೊತ್ತು ವಾಹನ ಚಲಾಯಿಸುತ್ತಿರುವಾಗ ಎದುರುಗಡೆಯಿಂದ ಬರುವ ವಾಹನಗಳ ಬೆಳಕು ನಮ್ಮ ಕಣ್ಣಿಗೆ ಬಿದ್ದಾಗಲೂ ಇದೇ ರೀತಿಯ ಸಮಸ್ಯೆಯುಂಟಾಗುತ್ತದೆ. ಇವುಗಳ ತೊಂದರೆಯನ್ನು ನಿವಾರಿಸಲು ಈಗ ಹಲವಾರು ಮಸೂರಗಳು ಮಾರುಕಟ್ಟೆಗೆ ಬಂದಿವೆ.
ತಂಪು ಕನ್ನಡಕಗಳ ಆಯ್ಕೆ ಹೇಗೆ?: ಕನ್ನಡಕಗಳನ್ನು ಗಾಜು ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಲಾಗುತ್ತದೆ. ಸಿ ಆರ್ -೩೯ ಎನ್ನುವ ಅತ್ಯುತ್ತಮ ಗುಣಮಟ್ಟದ ಪಾಲಿ ಕಾರ್ಬೋನೇಟ್ ವಸ್ತುವಿನಿಂದ ತಯಾರಿಸಿದ ಮಸೂರಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳು ಪ್ಲಾಸ್ಟಿಕ್ ವಸ್ತುವಿನಿಂದ ಮಾಡಿದ್ದೇ ಆದರೂ ಇವುಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಇವುಗಳು ತುಸು ಭಾರವೆಂದು ಅನಿಸಿದರೂ ಈ ವಿಧದಮಸೂರಗಳಿಗೆ ಕಲೆ, ಗೀಚುಗಳು ಬೀಳುವುದಿಲ್ಲ.
ಕನ್ನಡಕಕ್ಕೆ ಬಳಸುವ ಮಸೂರಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದರೆ ಮಾತ್ರ ಅದು ಕಳಂಕ ರಹಿತ ನೋಟವನ್ನು ಒದಗಿಸಬಲ್ಲುದು. ಅಗ್ಗದ ಮಸೂರಗಳು ಅಸಹಜ ದೃಶ್ಯಗಳನ್ನು ನಿಮ್ಮ ಕಣ್ಣಿಗೆ ಒದಗಿಸಿಕೊಡುತ್ತವೆ. ಇದರಿಂದ ನಿಮ್ಮ ಕಣ್ಣಿನ ನೋಟಕ್ಕೂ ತೊಂದರೆಯಾಗಬಹುದು. ನೀವು ಕನ್ನಡಕವನ್ನು ಹಾಕಿ ಎಡ-ಬಲ, ಮೇಲೆ-ಕೆಳಗೆ ನೋಡಿದ ನಂತರ ಕನ್ನಡಕ ತೆಗೆದು ನೋಡುವಾಗಲೂ ಆ ದೃಶ್ಯಗಳಲ್ಲಿ ವ್ಯತ್ಯಾಸಗಳಿರಬಾರದು. ನಾವು ಕನ್ನಡಕ್ಕೆ ಬಳಸುವ ಮಸೂರಗಳ ಬಣ್ಣಗಳು ಬೇರೆ ಬೇರೆ ವಿಧದಲ್ಲಿರಬಹುದು. ಕನ್ನಡಕವು ಮಸೂರದ ಮೂಲಕ ಬೆಳಕು ಒಳಹರಿಯುವ ಪ್ರಮಾಣವನ್ನು ನಿಯಂತ್ರಿಸುವಂತಿರಬೇಕು.
ಕೆಲವು ಮಸೂರಗಳ ಮೇಲೆ ವಿವಿಧ ರೀತಿಯ ಲೇಪನಗಳಿರುತ್ತವೆ. ಕೆಲವು ಮಸೂರಗಳು ಪ್ರತಿಫಲಿಸಿದರೆ, ಕೆಲವು ಕಲೆ ನಿರೋಧಕ ಗುಣವನ್ನು ಹೊಂದಿರಬಹುದು. ಕೆಲವು ಮಸೂರಗಳು ನೀರು ನಿರೋಧಕ ಗುಣ ಹಾಗೂ ಕೆಳಗೆ ಬಿದ್ದರೆ ಒಡೆಯದೇ ಇರುವಂತವುಗಳಾಗಿರುತ್ತದೆ. ಅದೇ ರೀತಿ ಈ ಮಸೂರವನ್ನು ಬಂಧಿಸಿ ಇಡುವ ಚೌಕಟ್ಟು ಅಥವಾ ಫ್ರೇಮ್ ಸಹಾ ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವಂತಿರಬೇಕು. ಕಡಿಮೆ ದರದ ಚೌಕಟ್ಟಾದರೆ ಅತಿಯಾದ ಭಾರವೂ, ಬೇಗನೇ ತುಂಡಾಗುವಂಥದ್ದೂ ಆಗಿರುತ್ತದೆ. ಅದೇ ಉತ್ತಮ ದರ್ಜೆಯ ಬ್ರಾಂಡೆಡ್ ಫ್ರೇಮ್ ಗಳ ದರಗಳು ದುಬಾರಿಯಾಗಿದ್ದರೂ ಬಹುಕಾಲ ಬಾಳಿಕೆ ಬರುವುದರಲ್ಲಿ ಸಂಶಯವಿಲ್ಲ. ಒಂದೆರಡು ವರ್ಷಗಳ ಗ್ಯಾರಂಟಿ ಅಥವಾ ವಾರಂಟಿಯೂ ದೊರೆಯುತ್ತದೆ. ಈ ಸಮಯದಲ್ಲಿ ತುಂಡಾದರೆ ಅದನ್ನು ಬದಲಾಯಿಸಿಕೊಡುತ್ತಾರೆ. ಅಗ್ಗದ ಕನ್ನಡಕಗಳು ನೋಡಲು ಸೊಗಸಾಗಿಯೇ ಕಂಡರೂ ಅದು ನಮ್ಮ ಕಣ್ಣುಗಳ ದೃಷ್ಟಿಯನ್ನು ಹಾಳು ಮಾಡುವ ಸಾಧ್ಯತೆ ಇದೆ.
ತಂಪು ಕನ್ನಡಕದ ಅಗತ್ಯತೆ: ತಂಪು ಕನ್ನಡಕದ ಅಗತ್ಯ ಇದೆಯೇ ಇಲ್ಲವೇ ಎನ್ನುವುದಕ್ಕೆ ಬಹುತೇಕರ ಉತ್ತರ ಇದೆ ಎಂದೇ ಇರುತ್ತದೆ. ಏಕೆಂದರೆ ತಂಪು ಕನ್ನಡಕಗಳು ಕೇವಲ ಮುಖದ ಅಂದವನ್ನು ಹೆಚ್ಚಿಸಿಸಲು ಮಾತ್ರವಲ್ಲದೇ ಕಣ್ಣನ್ನು ತೀಕ್ಷ್ಣವಾದ ಬೆಳಕಿನಿಂದ, ಧೂಳಿನಿಂದ ರಕ್ಷಿಸಲು ಬಳಸಬಹುದಾಗಿದೆ. ಅದೇ ರೀತಿ ಈಜಾಡುವಾಗ ನೀರು ಕಣ್ಣಿನ ಒಳಗಡೆ ಹೋಗಿ ತೊಂದರೆ ನೀಡಬಾರದು ಎಂದು ಬಳಸುವ ಕನ್ನಡಕವೂ ಇದೆ. ಕಣ್ಣಿನ ಶಸ್ತ್ರ ಚಿಕಿತ್ಸೆಯ ಬಳಿಕ ನೀಡುವ ಕಪ್ಪು ಕನ್ನಡಕ, ಪಾರದರ್ಶಕ ಕನ್ನಡಕವೂ ಇದೆ. ಹಿಮಾಲಯದಂತಹ ಮಂಜು ಕವಿದ ಪ್ರದೇಶಗಳಿಗೆ ಚಾರಣ ಹೋಗುವಾಗ, ಅಲ್ಲಿ ಗಡಿಯನ್ನು ಕಾಯುವ ಸೈನಿಕರಿಗೆ ವಿಶೇಷ ರೀತಿಯ ಕನ್ನಡಕಗಳು ಇರುತ್ತವೆ. ಕೆಲವು ಬಗೆಯ ಕನ್ನಡಕಗಳ ಮೂಲಕ ರಾತ್ರಿಯಲ್ಲೂ ನೋಡಬಹುದಾಗಿದೆ. ಹೀಗೆ ವಿವಿಧ ರೀತಿಯ ಕನ್ನಡಕಗಳು ಮಾರುಕಟ್ಟೆಯಲ್ಲಿವೆ.
ದೃಷ್ಟಿ ದೋಷ ಇದ್ದವರೂ ಬಳಸಬಹುದಾದ ತಂಪು ಕನ್ನಡಕಗಳಿವೆ. ತಂಪು ಕನ್ನಡಕ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಕಣ್ಣಿನ ಆರೋಗ್ಯ ಕಾಪಾಡುವುದರಲ್ಲೂ ಬಹಳ ಪ್ರಯೋಜನಕಾರಿ. ಪ್ರಮುಖವಾಗಿ ನಾವು ಗಮನದಲ್ಲಿಡಬೇಕಾದ ಸಂಗತಿ ಎಂದರೆ ಉತ್ತಮ ದರ್ಜೆಯ ತಂಪು ಕನ್ನಡಕಗಳನ್ನು ಖರೀದಿಸಿದರೆ ನಮ್ಮ ಕಣ್ಣೂ ಕೂಲ್ ಕೂಲ್ ಆಗಿರುತ್ತದೆ.
ಚಿತ್ರ ೧, ರೂಪದರ್ಶಿಗಳು: ರಿತೇಶ್ ಶೆಟ್ಟಿ, ವಿನಯ್, ನಂದಕಿಶೋರ್ ಎಂ.
ಚಿತ್ರ ೨ ಕೃಪೆ: ಅಂತರ್ಜಾಲ ತಾಣ