ಕೃತಕ ಮಳೆ: ಏನಿದರ ಗುಟ್ಟು?

ಕೃತಕ ಮಳೆ: ಏನಿದರ ಗುಟ್ಟು?

ಈ ಮಳೆಯನ್ನೂ ಕೃತಕವಾಗಿ ಬರಿಸಬಹುದು ಎಂಬ ಸತ್ಯ ಈ ಆಧುನಿಕ ಯುಗದಲ್ಲಿ ಆಶ್ಚರ್ಯಕರ ವಿಷಯವೇನಲ್ಲ. ಇದನ್ನು ಕ್ಲೌಡ್ ಸೀಡಿಂಗ್ ಎಂದೂ ಕರೆಯುತ್ತಾರೆ; ಅಂದರೆ ಮಳೆ ಬಿತ್ತನೆ. ಇಲ್ಲಿ ಇಡೀ ವಾತಾವರಣದ ಕೃತಕ ಬದಲಾವಣೆ. ಇದು ವಾತಾವರಣದಲ್ಲಿ ಕೃತಕವಾಗಿ ಬದಲಾಯಿಸಿ ಮಳೆ ಬರುವಂತೆ ಮಾಡುವ ವಿಧಾನ. ಇಲ್ಲಿ ವಾತಾವರಣದ ಮೋಡಗಳಲ್ಲಿ ನೀರಿನ ಅಣುಗಳ ಸೆಲೆ ಉಕ್ಕುವಂತೆ ಮಾಡಿ ಮಳೆ ಬರಿಸುತ್ತಾರೆ.

ಈ ಕೃತಕ ಮಳೆ ಬರಿಸುವ ವಿಧಾನದಲ್ಲಿ ವಾತಾವರಣದ ಮೋಡಗಳನ್ನು ತಣಿಸುವುದರ ಮೂಲಕ ಮಳೆ ಬರುವ ಹಾಗೆ ಮಾಡುತ್ತಾರೆ. ಇದಕ್ಕಾಗಿ ಮೋಡಗಳ ಮೇಲೆ ಲವಣ ರಾಸಾಯನಿಕಗಳಾದ ಸಿಲ್ವರ್ ಐಯೋಡೈಡ್, ಪೊಟ್ಯಾ ಷಿಯಂ ಐಯೋಡೈಡ್ ಡ್ರೈ ಐಸ್ ( ಘನ ರೂಪದ ಕಾರ್ಬ ನ್ ಡೈ ಆಕ್ಸೆಡ್) ದ್ರವ ರೂಪದ ಪ್ರೊಪೇನ್ ಗಳನ್ನು ಆಕಾಶದ ಮೋಡಗಳ ಮೇಲೆ ಸಿಂಪಡಿಸುವುದರ ಮೂಲಕ, ನೀರಿನ ಹನಿಗಳು ಮೋಡಗಳಲ್ಲಿ ಹೆಪ್ಪುಗಟ್ಟುವಂತೆ ಮಾಡಿ ಕೃತಕ ಮಳೆ ಬರಿಸುತ್ತಾರೆ.

ಇದೊಂದು ಮೋಡ ಬಿತ್ತನೆ ಕಾರ್ಯ! ಈ ರೀತಿಯ ರಾಸಾಯನಿಕ ವಸ್ತುಗಳನ್ನು ಮೋಡಗಳ ಮೇಲೆ ಸಿಂಪಡಿ ಸುವುದರಿಂದ ಮೋಡಗಳ ತಾಪಮಾನ -20 ಡಿಗ್ರಿ ಸೆಂ.ನಿಂದ -7 ಡಿಗ್ರಿ.ಸೆಂ ಗೆ ಇಳಿದು ಬಿಡುತ್ತದೆ. ಇಲ್ಲಿ ಸಂಗ್ರಹಗೊಂಡ ನೀರಿನ ಹನಿಗಳ ಒತ್ತಡ ಹೆಚ್ಚಾದ ಮೇಲೆ ಭಾರವಾದ ನೀರಿನ ಹನಿಗಳು ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತವೆ; ಇದನ್ನೇ ಕೃತಕ ಮಳೆ ಎನ್ನುತ್ತಾರೆ.ಮುಖ್ಯವಾಗಿ ಈ ಲವಣಗಳನ್ನು ಮೋಡಗಳ ಮೇಲೆ ಸಿಂಪಡಿಸಲು, ವಿಮಾನಗಳನ್ನು ಅಥವಾ ಡ್ರೋನ್‌ಗಳನ್ನು ಬಳಸುತ್ತಾರೆ. 

ವಿದ್ಯುತ್ ಅಂಶಗಳಿಂದಲೂ ಕೃತಕ ಮಳೆ: 2021ರಿಂದ ಈಚೆಗೆ ಯು ಎ ಇ ಸಂಸ್ಥಾನದಲ್ಲಿ ಡ್ರೋನ್ ಗಳನ್ನು ಬಳಸಿ ವಿದ್ಯುತ್ ಅಂಶಗಳನ್ನು ಮೋಡಗಳ ಮೇಲೆ ಸಿಂಪಡಿಸುವುದರಿಂದ ಅಲ್ಲಿಯ ಗಾಳಿಯ ಅಣುಗಳಲ್ಲಿ ಯಶಸ್ವಿಯಾಗಿ ಬರಿಸಲಾಗುತ್ತಿದೆ. ಇದರಿಂದ ಸುಮಾರು 6.9 ಮಿಲಿ ಮೀಟರ್ ಮಳೆಯನ್ನು ಬರಿಸಲಾಯಿತು!

ಇನ್ಫಾರೆಡ್ ಲೇಸರ್ ವಿಕಿರಣಗಳಿಂದಲೂ ಮಳೆ: ಎಲೆಕ್ಟ್ರಾನಿಕ್ ಉಪಕರಣವನ್ನು ಬಳಸಿ ಅವುಗಳಿಂದ ಇನ್ಫಾರೆಡ್ ವಿಕಿರಣಗಳನ್ನು ಮೋಡಗಳಲ್ಲಿ ಚಿಮ್ಮುವಂತೆ ಮಾಡಿ ಜರ್ಮನಿಯ ಬರ್ಲಿನ್‌ ನಲ್ಲಿ ಕೃತಕ ಮಳೆಯನ್ನು 2010 ರಲ್ಲಿ ಬರಿಸಲಾಯ್ತು. ಜತೆಗೆ ಮೋಡಗಳ ಮೇಲೆ ಸಲ್ಸರ್ ಡೈ ಆಕ್ಸೆಡ್ ಮತ್ತು ನೈಟ್ರೋಜನ್ ಗಳನ್ನು ಉದ್ದೀಪನ ಮಾಡಿ ಕೃತಕ ಮಳೆ ಉಂಟು ಮಾಡಲಾಯ್ತು.

ಕೃತಕ ಮಳೆ ಹಾನಿಕಾರಕವೇ? : ಇದರಲ್ಲಿ ಬಳಸುವ ಕೃತಕ ರಾಸಾಯನಿಕಗಳಾದ ಸಿಲ್ವರ್ ಅಯೋಡೈಡ್, ಪೊಟ್ಯಾಷಿಯಂ ಅಯೊಡೈಡ್, ಡ್ರೈ ಐಸ್ ಅಥವಾ ಉಪ್ಪು, ಸಲ್ಫರ್ ಡೈ ಆಕ್ಸೆಡ್ ಇವೂ ಕೂಡಾ ಭೂಮಿಯ ಮೇಲೆ ಬೀಳುವ ಸಾಧ್ಯತೆಗಳಿವೆ. ಈ ರೀತಿ ಭೂಮಿಯ ಮೇಲೆ ಬಿದ್ದ ಐಯೊಡೈಡ್‌ಗಳು ವಿಷಕಾರಿ ಪದಾರ್ಥಗಳು ಎಂದು ತಿಳಿದು ಬಂದಿದೆ. ಇನ್ನು ಡ್ರೈ ಐಸ್ ಅಥವಾ ಘನ ಕಾರ್ಬನ್ ಡೈ ಆಕ್ಸೆಡ್ ವಾತಾವರಣದಲ್ಲಿ ಹಸಿರು ಪರಿಣಾಮದ ಅನಿಲಗಳನ್ನು ಹೆಚ್ಚು ಮಾಡಿ ಭೂ ವಾತಾವರಣದ ಉಷ್ಣತೆಯನ್ನು (ಗ್ಲೋಬಲ್ ವಾರ್ಮಿಂಗ್) ಹೆಚ್ಚು ಮಾಡುವ ಸಾಧ್ಯತೆಗಳಿವೆ. ಏನೇ ಆಗಲಿ ಕೃತಕತೆ ಎನ್ನುವುದು ಮಾನವನಿಗೆ ಎಂದಿದ್ದರೂ ಅಪಾಯ ತರುವ ವಿಷಯವೇ. ಬನ್ನಿ ನಾವೆಲ್ಲರೂ ಸ್ವಾಭಾವಿಕ ಮಳೆಯ ಸಿಂಚನದ ಸವಿಯ ಸವಿದು ಆನಂದಿಸೋಣ.

ಕೃತಕ ಮಳೆಯ ಪ್ರಮುಖಾಂಶಗಳು:

* ಈ ಕೃತಕ ಮಳೆ ಬರಿಸಲು ಸುಮಾರು ನೂರು ಚದರ ಕಿಮೀಗೆ ತಗಲುವ ವೆಚ್ಚ ಸುಮಾರು ಒಂದು ಕೋಟಿ ರೂ.ಗಳು

* ಮೊಟ್ಟ ಮೊದಲ ಕೃತಕ ಮಳೆಯನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಸುರಿಸಲಾಯ್ತು.

* ಕರ್ನಾಟಕದಲ್ಲಿ 2017 ರಲ್ಲೇ 'ವರ್ಷಧಾರೆ' ಎಂಬ ಪ್ರಾಜೆಕ್ಟನ್ನು ಆರಂಭಿಸಿ ವಿಮಾನದ ಮೂಲಕ ರಸಾಯನಿಕಗಳನ್ನು ಸಿಂಪಡಿಸಿ ಕೃತಕ ಮಳೆಯನ್ನು ತರಿಸಲಾಗಿತ್ತು. ಇದು ಭಾರತದಲ್ಲೇ ಮೊಟ್ಟಮೊದಲ ಪ್ರಯತ್ನ!

* ದೆಹಲಿಯಲ್ಲಿ ಕಾನ್ಪುರ್ ಐಐಟಿಯವರು 2018ರಲ್ಲಿ ಕೃತಕ ಮಳೆಯನ್ನು ಬರಿಸಿದ್ದಾರೆ.

-ಕೆ.ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ