ಕೃಷಿಕನ ಬಾಳಲಿ ಸುಖವಿರಲಿ
ಕವನ
ಹಸಿರಿನ ಗಿಡಮರ ನಶಿಸಲು ತೊಡಗಿವೆ
ಬಿಸಿಲಿನ ತಾಪ ಮಿತಿಮೀರಿ
ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ
ಮುಸುಕಿದೆ ಚಿಂತೆ ಬಾಯಾರಿ
ಮಾತಲಿ ನುಡಿವರು ರೈತಗೆ ಬೆಂಬಲ
ಕಾತರದಿಂದ ಕಾದಿಹನು
ಭೂತದ ಬಾಯಲಿ ಗೀತೆಯ ಕೇಳುತ
ಸೋತಿಹ ಕೃಷಿಕ ನೊಂದಿಹನು
ಮೋಡವು ಮಳೆಯನು ನೀಡದೆ ನಡೆದಿರೆ
ಕಾಡಿದೆ ಬುವಿಯ ನೀರಿರದೆ
ಮೋಡಿಯ ಮಾತಿಗೆ ಹಾಡಿತು ಹೃದಯವು
ತೋಡಿತು ಗುಂಡಿ ಅರಿವಿರದೆ
ಕೃಷಿಕನ ಬಾಳಲಿ ಖುಷಿಯದು ಮೂಡಲಿ
ನೊಸಲಲಿ ನೆರಿಗೆ ಬರದಿರಲಿ
ಕೆಸರಲಿ ಕರಗಳ ಬೆಸೆಯುವ ರೈತನ
ಮೊಸರಿನ ತಟ್ಟೆ ತುಂಬಿರಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
