ಕೃಷಿಕರಿಗೆ ನೆರವು ಅಗತ್ಯ

ಕೃಷಿಕರಿಗೆ ನೆರವು ಅಗತ್ಯ

ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರವಾಗಿದೆಯೇ? ಬರಗಾಲದ ಪರಿಸ್ಥಿತಿ ಮನೆ ಮಾಡಿದೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ, ಮುಂಗಾರು ಜೂಜಾಟ ಮುಂದುವರಿದಿದ್ದು, ಅನಿಶ್ಚಿತತೆ ಮನೆ ಮಾಡಿದೆ. ಜೂನ್ ತಿಂಗಳಲ್ಲಿ ಸರಾಸರಿಗಿಂತ ಶೇ. ೫೬ರಷ್ಟು ಮಳೆ ಕೊರತೆಯಾಗಿದ್ದರೆ, ಜುಲೈನಲ್ಲಿ ಈ ಕೊರತೆ ಶೇ. ೩ರಷ್ಟು ಮಾತ್ರ ಇದೆ. ಅಲ್ಲದೆ, ಈ ಪರಿಸ್ಥಿತಿ ಎಲ್ಲಾ ತಾಲೂಕುಗಳಲ್ಲಿ, ಜಿಲ್ಲೆಗಳಲ್ಲಿ ಒಂದೇ ತೆರನಾಗಿಲ್ಲ. ಮಲೆನಾಡು ಪ್ರದೇಶಗಳಲ್ಲಿ ಸರಾಸರಿಗಿಂತ ಶೇಕಡಾ ೨೪ರಷ್ಟು ಮಳೆ ಕೊರತೆಯಾಗಿದೆ. ಈ ಗೊಂದಲಕಾರಿ ಪರಿಸ್ಥಿತಿಯ ಕಾರಣದಿಂದಾಗಿ ಬರಗಾಲ ಘೋಷಿಸಬೇಕೇ ಬೇಡವೇ ಎಂಬ ಸಂದಿಗ್ಧತೆಯಲ್ಲಿ ರಾಜ್ಯ ಸರ್ಕಾರ ಸಿಲುಕಿದಂತಿದೆ. ಅಲ್ಲದೆ, ನಿಯಮಾವಳಿಗಳು, ಮಾನದಂಡಗಳನ್ನು ಅನುಸರಿಸಿ ಬರ ಘೋಷಣೆ ಮಾಡುವುದು ದುಸ್ತರ ಎಂಬಂತಾಗಿದೆ.

ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದಕ್ಕೆ ಕೇಂದ್ರ ಸರ್ಕಾರವು ಕೆಲವು ಕಠಿಣ ಮಾನದಂಡಗಳನ್ನು ವಿಧಿಸಿದೆ. ಶೇಕಡಾ ೬೦ರಷ್ಟು ಮಳೆ ಕೊರತೆ ಇರಬೇಕು ಹಾಗೂ ಮೂರು ವಾರ ಮಳೆ ಇರಬಾರದೆಂಬ ನಿಯಮವಿದೆ. ಈಗ ಎಲ್ಲೂ ಶೇ. ೬೦ರಷ್ಟು ಮಳೆ ಕೊರತೆಯಾಗಿಲ್ಲ. ಹೀಗಾಗಿ, ಮಾನದಂಡ ಮರುಪರಿಶೀಲನೆಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಳೆದ ತಿಂಗಳು ಹೇಳಿದ್ದರು. ಅದರನುಸಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಮಳೆ ಅಭಾವದಿಂದ ಪ್ರಸ್ತುತ ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟವು ಈ ಪತ್ರ ವ್ಯವಹಾರದಿಂದ ನಿವಾರಣೆಯಾಗುವಂಥದ್ದಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುವ ವಾಸ್ತವವಾಗಿದೆ. ಶೇಕಡಾ ೨೫ರಷ್ಟು ಮಳೆ ಕೊರತೆಯಾದ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಲು ಅವಕಾಶವಾಗುವಂತೆ ಮಾನದಂಡಗಳನ್ನು ಪರಿವರ್ತಿಸಲು ಪತ್ರದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಕೋರಿದೆ. ಈ ಪ್ರಕ್ರಿಯೆ ದೀರ್ಘಾವಧಿಯದ್ದಾಗಿದ್ದು, ಶೀಘ್ರದಲ್ಲಿ ಮಾನದಂಡ ಬದಲಾವಣೆ ಮಾಡುವುದು ದುಸ್ತರ.

ರಾಜ್ಯದಲ್ಲಿ ೮೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದ್ದು, ೫೬ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಕೈಕೊಟ್ಟರೆ ಉಳಿದ ಪ್ರದೇಶದಲ್ಲಿ ಬಿತ್ತನೆ ಸಾಧ್ಯವಾಗದು. ಮೇ ತಿಂಗಳಲ್ಲಿ ಚದುರಿದಂತೆ ಮಳೆಯಾದಾಗ ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ, ನಂತರ ಮಳೆ ಬಾರದ್ದರಿಂದ ಬೆಳೆ ಹಾಳಾಗಿದೆ. ಸಬ್ಸಿಡಿ ದರದಲ್ಲಿ ಮತ್ತೊಮ್ಮೆ ಬಿತ್ತನೆ ಬೀಜ ಕೊಡಿ ಎಂದು ರೈತರು ಕೃಷಿ ಇಲಾಖೆಗೆ ಬೇಡಿಕೆ ಮುಂದಿಟ್ಟಿದ್ದಾರೆ. ಬರ ಪೀಡಿತ ಘೋಷಣೆ ಜಂಜಾಟ ಏನೇ ಇದ್ದರೂ ಕನಿಷ್ಟ ಪಕ್ಷ ಇಂತಹ ಬೇಡಿಕೆಗಳನ್ನಾದರೂ ಈಡೇರಿಸುವತ್ತ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಧಾನ್ಯ ಉತ್ಪಾದನೆ ಹಾಗೂ ಆದಾಯ ಕುಸಿಯುವುದನ್ನು ತಪ್ಪಿಸಲು ಕೃಷಿಕರ ನೆರವಿಗೆ ಸರ್ಕಾರ ಧಾವಿಸಬೇಕಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೪-೦೮-೨೦೨೩  

ಚಿತ್ರ ಕೃಪೆ: ಅಂತರ್ಜಾಲ ತಾಣ