ಕೃಷಿಗೆ ಪೂರಕವಾದ ಪಂಚಾಯತು ವ್ಯವಸ್ಥೆ ಬರಲಿ...

ಕೃಷಿಗೆ ಪೂರಕವಾದ ಪಂಚಾಯತು ವ್ಯವಸ್ಥೆ ಬರಲಿ...

ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ಬಲವಾಗಿ ನಂಬಿದ್ದರು. ಈ ಕಾರಣದಿಂದಲೇ ಅವರು ತಮ್ಮ ಭಾಷಣ ಹಾಗೂ ಬರಹಗಳಲ್ಲಿ ಗ್ರಾಮೀಣ ಭಾಗದ ಸುಧಾರಣೆಗಾಗಿ ಒತ್ತು ನೀಡುತ್ತಿದ್ದರು. ಭಾರತ ಕೃಷಿ ಪ್ರಧಾನ ದೇಶವೇನೋ ನಿಜ. ಆದರೆ ವಿಪರೀತವಾಗಿ ಬೆಳೆಯುತ್ತಿರುವ ನಮ್ಮ ಜನಸಂಖ್ಯೆ ನಮಗೆ ವರವಾಗುವ ಬದಲು ಶಾಪವಾಗುತ್ತಿದೆ. ಎಲ್ಲರಿಗೂ ‘ವೈಟ್ ಕಾಲರ್ ಜಾಬ್’ ಬೇಕು. ಮಣ್ಣಿಗೆ ಇಳಿಯಲು ಯಾರೂ ಮನಸ್ಸು ಮಾಡುತ್ತಿಲ್ಲ. ಡಿಗ್ರಿ, ಡಬಲ್ ಡಿಗ್ರಿ ಎಲ್ಲವನ್ನೂ ಮಾಡಿದ ಬಳಿಕ ಕೃಷಿಗೆ ಬರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೃಷಿಯಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದನ್ನು ಅಳವಡಿಸಿಕೊಳ್ಳುವುದರಲ್ಲಿ ನಾವೆಲ್ಲಾ ಹಿಂದೆ ಇದ್ದೇವೆ. ಬಹಳ ಕೃಷಿಕರು ಈಗಲೂ ತಮ್ಮ ಹಿರಿಯರು ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಳ್ಳುವ ಯೋಚನೆಯಲ್ಲೇ ಇದ್ದಾರೆ. ಇರಲಿ, ಕೃಷಿ ಕ್ಷೇತ್ರಕ್ಕೆ ಕಲಿತ ಯುವಕರು ಬಂದರೆ ನಿಜಕ್ಕೂ ದೇಶದಲ್ಲಿ ಕೃಷಿ ಉತ್ಪನ್ನಗಳ ಪ್ರಮಾಣ ಅಧಿಕವಾಗುವುದರಲ್ಲಿ ಸಂಶಯವಿಲ್ಲ. ಈಗ ಪಂಚಾಯತ್ ವ್ಯವಸ್ಥೆಯಲ್ಲಿ ಕೃಷಿಗೆ ಪೂರಕ ವ್ಯವಸ್ಥೆಗಳ ಬಗ್ಗೆ ಒಂದಿಷ್ಟು ತಿಳೀಯೋಣ...

ಪ್ರತೀ ಗ್ರಾಮ ಪಂಚಾಯತಿನ ವ್ಯಾಪ್ತಿಯಲ್ಲಿ ಯಾವ ಯಾವ  ಬೆಳೆಗಳನ್ನು ಬೆಳೆಸಲಾಗುತ್ತದೆ, ಎಷ್ಟು ಉತ್ಪಾದನೆ ಇದೆ? ಇಲ್ಲಿನ ಪ್ರದೇಶವಾರು ಮಣ್ಣಿನ ಗುಣ ಹೇಗೆ? ಇಲ್ಲಿ ಯಾವ ಬೆಳೆ ಉತ್ತಮವಾಗಿ ಬೆಳೆಸಲ್ಪಡುತ್ತದೆ? ಏನು ತೊಂದರೆ ಇದೆ? ಎಂಬ ಎಲ್ಲಾ ಕರಾರುವಕ್ಕಾದ ದಾಖಲೆಗಳು ಪ್ರತೀ ಪಂಚಾಯತಿನಲ್ಲಿ ಇದ್ದರೆ, ಸದ್ರಿ ಪಂಚಾಯತಿನಿಂದ ಸಂಬಂಧಿಸಿದ ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಅದರ ಕೊಡುಗೆ ಏನು -ಎಷ್ಟು ಎಂಬುದು ಗೊತ್ತಾಗುತ್ತದೆ ? ಇದನ್ನು ದೇಶದಾದ್ಯಂತ ಮಾಡಿದರೆ ಯಾವ ಬೆಳೆಯನ್ನು ಎಲ್ಲಿ, ಎಷ್ಟು ಪ್ರಮಾಣದಲ್ಲಿ ಬೆಳೆಸಲಾಗುತ್ತದೆ? ಎಲ್ಲೆಲ್ಲಿ ಏನೇನು ಇದೆ? ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಕೃಷಿಯಿಂದ ಉತ್ಪಾದಿಸಲಾಗುವ ಆಯಾಯಾ ಉತ್ಪನ್ನಕ್ಕೆ  ಒಟ್ಟಾರೆ ಎಷ್ಟು ಬೇಡಿಕೆ ಇದೆ, ಎಷ್ಟು ಮಿಗತೆ ಯಾ ಕೊರತೆ ಇದೆ ಎಂಬುದರ ಲೆಕ್ಕಾಚಾರ ಪಡೆಯುವುದಕ್ಕೆ ಯಾವುದೇ ಕಷ್ಟ ಇಲ್ಲ. ನೇರ ಮಾರುಕಟ್ಟೆ ಅಥವಾ ಮಧ್ಯವರ್ತಿಗಳಿಂದ ಮುಕ್ತವಾದ ಮಾರುಕಟ್ಟೆ ಪಡೆಯುವುದಕ್ಕೂ ಇದು ಸಹಕಾರಿಯಾಗಬಲ್ಲುದು. ಇದನ್ನೆಲ್ಲಾ ಗ್ರಾಮ ಪಂಚಾಯತುಗಳು ಸುಲಭವಾಗಿ ಮಾಡಬಹುದು. ಗ್ರಾಮ ಪಂಚಾಯತುಗಳೆಂದರೆ ಆ ಗ್ರಾಮದ ಪೂರ್ಣ ಚಿತ್ರಣವನ್ನು ನೀಡುವ ಕನ್ನಡಿಯಂತಿರಬೇಕು. ಒಂದು ಊರಿನ ಪೂರ್ಣ ಚಿತ್ರಣ ಸಿಗಬೇಕಾದರೆ ಅಲ್ಲಿ ಮನೆ ಮನೆ ಮನೆಗೆ ಹೋಗಬೇಕಾಗಿಲ್ಲ. ಸ್ಥಳೀಯ ಗ್ರಾಮ ಪಂಚಾಯತಿಗೆ ಭೇಟಿ ಕೊಟ್ಟರೆ ಎಲ್ಲವೂ ದೊರೆಯುವಂತಿದ್ದರೆ ಎಷ್ಟು ಉತ್ತಮ ಅಲ್ಲವೇ?  

ಸದ್ಯದ ಪರಿಸ್ಥಿತಿಯಲ್ಲಿ ಈ ಗ್ರಾಮ ಪಂಚಾಯತುಗಳು ಕೇವಲ ತಳಮಟ್ಟದ ಜನರಿಗೆ ರಾಜಕೀಯ ಅವಕಾಶಕ್ಕೆ ಅಥವಾ ರಾಜಕೀಯದಲ್ಲಿ ಪ್ರಾವಿಣ್ಯತೆ ಹೊಂದುವುದಕ್ಕಾಗಿ ಒಂದು ವೇದಿಕೆಯಂತೆ ಆಗಿದೆ. ಇಲ್ಲಿ ಬಡವರು, ಅತೀ ಬಡವರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡುವುದು, ಗ್ರಾಮೀಣ ರಸ್ತೆ, ಮೋರಿ, ಚರಂಡಿ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆ ಅನುಷ್ಟಾನ ಮತ್ತು ತೆರಿಗೆ ಸಂಗ್ರಹ ಇಷ್ಟನ್ನೇ ಮಾಡುತ್ತಾ ಇವೆ.

ಕೃಷಿ ವ್ಯವಸ್ಥೆಯನ್ನು ಮೇಲೆತ್ತುವಲ್ಲಿ ಗ್ರಾಮ ಪಂಚಾಯತುಗಳ ಪಾತ್ರ ಮಹತ್ವದ್ದು. ಗ್ರಾಮ ಪಂಚಾಯತು ಸದಸ್ಯರು ಮನಸ್ಸು ಮಾಡಿದರೆ ದೇಶದಲ್ಲಿ ಕೃಷಿ ಅರ್ಥ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸಲು ಸಾಧ್ಯ. ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಬಹುಸಂಖ್ಯೆಯ ಜನ ಕೃಷಿಯನ್ನು  ಅವಲಂಭಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಕ್ಷೇತ್ರಕ್ಕೆ  ಗ್ರಾಮ ಪಂಚಾಯತುಗಳ  ಕೊಡುಗೆ ಕನಿಷ್ಟ ಎಂದರೂ ತಪ್ಪಾಗಲಾರದು. ಇದು ಹಾಗೆ ಆಗಬಾರದು. ಬದಲಿಗೆ  ಇಲ್ಲಿನ ಅರ್ಥ ವ್ಯವಸ್ಥೆಗೆ ಪೂರಕವಾಗಿ ಪಂಚಾಯತುಗಳು ಕೆಲಸ ಮಾಡಬೇಕು.

ನಮ್ಮ ದೇಶದಲ್ಲಿ ಕೃಷಿ ಉತ್ಪನಕ್ಕೆ ಬೆಲೆ ಅನಿಶ್ಚಿತತೆ ದೊಡ್ದ ತೊಂದರೆ. ಕೃಷಿ ಹೊರತಾಗಿ ಉಳಿದೆಲ್ಲಾ ಉತ್ಪಾದನಾ ಕ್ಷೇತ್ರದಲ್ಲಿ  ಉತ್ಪಾದಕ ತಾನು ಉತ್ಪಾದಿಸುವ ವಸ್ತುವಿನ ಉತ್ಪಾದನಾವೆಚ್ಚ ಮತ್ತು ಅವನ ಲಾಭ  ಸೇರಿಸಿ ಬೆಲೆ ನಿಗದಿ ಮಾಡಲಿಕ್ಕಾಗುತ್ತದೆ. ಆದರೆ ಕೃಷಿಯಲ್ಲಿ  ಹಾಗೆ ಆಗುವುದೇ ಇಲ್ಲ. ಇದಕ್ಕೆ ಕಾರಣ ನಮ್ಮಲ್ಲಿ ಉತ್ಪಾದನೆಯ ಲೆಕ್ಕಾಚಾರ ಇಲ್ಲದಿರುವುದು. ಎಷ್ಟು ಬೇಡಿಕೆ ಇದೆ, ಎಷ್ಟು ಪೂರೈಕೆ ಇದೆ ಎಂಬುದರ ಲೆಕ್ಕಾಚಾರ ನಮ್ಮಲ್ಲಿಲ್ಲ. ಆದ ಕಾರಣ ಬೆಲೆ ಅನಿಶ್ಚಿತತೆ ಉಂಟಾಗುತ್ತದೆ. ಸರಕಾರ ಕೆಲವು ಗಣತಿಗಳ ಮೂಲಕ ಉತ್ಪಾದನೆಯನ್ನು ಲೆಕ್ಕಾಚಾರ ಹಾಕುತ್ತದೆಯಾದರೂ ಅದು ಕರಾರುವಕ್ಕಾಗಿರುವುದಿಲ್ಲ. ಸರಕಾರದ ವ್ಯವಸ್ಥೆಗೆ ನಿಖರ ಲೆಕ್ಕಾಚಾರ ಕೊಡಲು  ನಮ್ಮ ದೇಶದ ಜನರ ಮೊನೋಸ್ಥಿತಿ ಸಜ್ಜಾಗಿಲ್ಲ. ನಿಖರ ಲೆಕ್ಕಾಚಾರ ಕೊಡುವುದರಿಂದ ತನಗೆ ನಾಳೆ ಸರಕಾರದ ಸವಲತ್ತುಗಳು  ವಂಚಿತವಾದರೆ, ಅಥವಾ ಇನ್ನೇನಾದರೂ ಸಮಸ್ಯೆಗಳಾದರೆ ಎಂಬ ಅಂಜಿಕೆ ಇರುತ್ತದೆ. ಆದ ಕಾರಣ ಕಡಿಮೆ ಲೆಕ್ಕಾಚಾರವನ್ನೇ ನೀಡುವುದು ನಮ್ಮ ಅಭ್ಯಾಸ. ಸರಕಾರದ ಅಂಕಿ ಅಂಶಗಳ ಮೂಲಕ ದೊರೆಯುವ ಲೆಕ್ಕಾಚಾರಗಳು ಹೆಚ್ಚಿನವು ತಪ್ಪು ಹೇಳಿಕೆಗಳ ಆಧಾರದಲ್ಲಿ ಪಡೆದವುಗಳು. ಇದನ್ನು ಸರಿಪಡಿಸಬೇಕಾದರೆ ಜನರ ಮನೋಸ್ಥಿತಿಯನ್ನು  ಬದಲಾಯಿಸುವ ಕೆಲಸ ಮುಂಚಿತವಾಗಿ ಆಗಬೇಕು. ಇದನ್ನು ಗ್ರಾಮ ಪಂಚಾಯತುಗಳು ಮಾಡಬಹುದು. ಇಲ್ಲಿ ಗರಿಷ್ಟ ೫೦೦ ಮನೆಗೆ ಒಬ್ಬ ಪಂಚಾಯತು ಪ್ರತಿನಿಧಿ ಇರುತ್ತಾನೆ. ಇವರಿಗೆ ಸ್ಥಳೀಯರೆಲ್ಲರ ಪರಿಚಯ ಮತ್ತು ಅವರ ವೃತ್ತಿಯ ಬಗ್ಗೆ ಗೊತ್ತಿರುತ್ತದೆ. ಈ ಸದಸ್ಯರು ಯಾವ ರೀತಿ ಚುನಾವಣೆ ಸಮಯದಲ್ಲಿ ಮನೆ ಮನೆಗೆ ತೆರಳಿ ಅವರ ಕ್ಷೇಮ ವಿಚಾರಿಸಿ ಮತ ಯಾಚನೆ ಮಾಡುತ್ತಾರೆಯೋ ಅದೇ ರೀತಿಯಲ್ಲಿ ಅವರಿಗೆ ಬೆಳೆ ದಾಖಲೀಕರಣದ ಮಹತ್ವ ಮತ್ತು ಅದರಿಂದ ನಮಗೆ ಆಗುವ ಪ್ರಯೋಜನವನ್ನು  ಮನವರಿಕೆ ಮಾಡಿ ಲೆಕ್ಕಾಚಾರವನ್ನು ಪಡೆಯಲು ಸಾಧ್ಯವಿದೆ.

ಈ ದಿಶೆಯಲ್ಲಿ ದೇಶದ ಯಾವುದೇ ಗ್ರಾಮ ಪಂಚಾಯತುಗಳೂ ಕೆಲಸ ಮಾಡಿದಂತಿಲ್ಲ. ಇದನ್ನು ಯಾವುದಾದರೂ ಒಂದು ಗ್ರಾಮ ಪಂಚಾಯತು ಪ್ರಥಮವಾಗಿ ಮಾಡಿದ್ದೇ ಆದರೆ ಅದರ ಹೆಗ್ಗಳಿಕೆಯೂ ಅವರಿಗೆ ದೊರೆಯಬಲ್ಲುದು. ಅದಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆಯೂ ದೊರೆಯುವುದರಲ್ಲಿ ಅಚ್ಚರಿ ಇಲ್ಲ. ನಮ್ಮ ರಾಜ್ಯದ  ಯಾವುದಾದರೂ  ಗ್ರಾಮ ಪಂಚಾಯತು ಈ ಕಾರ್ಯವನ್ನು ಕೈಗೆತ್ತಿಗೊಳ್ಳುವಲ್ಲಿ ಮುಂದಡಿ ಇಡಲಿ ಎಂದು ಆಶಿಸುವ… ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ