ಕೃಷಿಯಲ್ಲಿಯೇ ಜೀವನ ಕಳೆದು ಯಶಸ್ವಿಯಾದ ಪ್ರೇಮಲತಾ

ಕೃಷಿಯಲ್ಲಿಯೇ ಜೀವನ ಕಳೆದು ಯಶಸ್ವಿಯಾದ ಪ್ರೇಮಲತಾ

ಶ್ರೀಮಂತಿಕೆಯ ಜೊತೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಕೃಷಿಗೆ ಹೆಸರಾದ ಬೆಳಗಾವಿ ಜಿಲ್ಲೆಯಲ್ಲಿ ಭೂಮಿಯನ್ನು ಪ್ರೀತಿಸುವ, ಪೂಜಿಸುವ ಅಪರೂಪದ ಕೃಷಿ ಮಹಿಳೆಯೊಬ್ಬರ ಯಶೋಗಾಥೆಯಿದು. ಹೆಣ್ಣು ಮನಸ್ಸು ಮಾಡಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂದು ತೋರಿಸಿಕೊಟ್ಟ ಆಡಂಬರವಿಲ್ಲದ ಶರಣ ಕಾಯಕದ ಪ್ರತಿನಿಧಿಗಳಾದ ಶ್ರೀಮತಿ ಪ್ರೇಮಲತಾ ಬಾಬುರಾವ ರೆಡ್ಡಿಯವರು ತಮ್ಮ ಜೀವನದ ೩೦ ವರ್ಷಗಳನ್ನು ಕೃಷಿಯಲ್ಲಿಯೇ ತೊಡಗಿಸಿ, ಆಧುನಿಕ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಹೆಚ್ಚು ಲಾಭ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಐನಾಪೂರ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಸುತ್ತಲೂ ಬರಗಾಲ ನಡುವೆ ನೀರಿನ ಬುಗ್ಗೆಯಂತೆ ಇವರ ಕ್ಷೇತ್ರ ಮಾತ್ರ ಹಸಿರಿನಿಂದ ಕಂಗೋಳಿಸುವAತೆ ಮಾಡಿರುವ ಶ್ರೇಷ್ಠ ಕೃಷಿ ಮಹಿಳೆ. ಒಟ್ಟು ೭.೨೦ ಎಕರೆ ಸಾಗುವಳಿ ಕ್ಷೇತ್ರವನ್ನು ಹೊಂದಿರುವ ಇವರು ೪.೦೦ ಎಕರೆ ಜಮೀನನ್ನು ಸಮಪಾತಳಿ ಮಾಡಿಸಿ ಸರಿಯಾದ ಇಳಿಜಾರನ್ನು ಕೊಟ್ಟು ವಿವಿಧ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಮೂಲತಹಃ ಕಬ್ಬು ಬೆಳೆಗಾರರಾದ ಇವರು ಬೆಳೆ ವೈವಿಧ್ಯದ ಜೊತೆಗೆ ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ತಮ್ಮ ಹೊಲದಲ್ಲಿ ಏಕ ಬೆಳೆಗಳಾಗಿ ಸೋಯಾ ಅವರೆ, ಸೂರ್ಯಕಾಂತಿ, (ಉ-೯) ಬಾಳೆ, ಉದ್ದು ಮತ್ತು ಸೆಣಬನ್ನು ಬೆಳೆದಿರುತ್ತಾರೆ. ಬಹು ಬೆಳೆಗಳಾಗಿ ಕಬ್ಬು + ಒಂದು ಸಾಲು ಸೋಯಾ ಅವರೆ, ಕಬ್ಬು + ಮೆಣಸಿನಕಾಯಿ, ಕಬ್ಬು + ಕೋತಂಬರಿ ಹಾಗೂ ಇನ್ನಿತರ ತರಕಾರಿಗಳನ್ನು ಬೆಳೆದಿರುತ್ತಾರೆ. ಮಿಶ್ರಬೆಳೆಯಾಗಿ ಕಡಲೆ + ಹಿಂಗಾರಿ ಜೋಳವನ್ನು ಬೆಳೆದಿರುತ್ತಾರೆ. ಕೃಷಿ ಭೂಮಿ ಸುತ್ತಲೂ ೬೦ ತೆಂಗು, ೪೦ ಚಿಕ್ಕು, ೩೦ ಮಾವು, ಲಿಂಬೆ, ೬೦ ನೀಲಗಿರಿ ಮತ್ತು ಹುಣಸೆ ಹೀಗೆ ಹತ್ತು ಹಲವು ಉಪಯುಕ್ತ ಹಣ್ಣಿನ ಮತ್ತು ಅರಣ್ಯ ಮರಗಳನ್ನು ಬೆಳೆಸಿದ್ದಾರೆ. ಪ್ರತಿ ವರ್ಷ ತೋಟಗಾರಿಕೆ ಬೆಳೆಗಳಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುತ್ತಾರೆ.

ಸಾವಯವ ಕೃಷಿಗೆ ಅನುಕೂಲವಾಗುವಂತೆ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರವಾಗಿ ಸೆಣಬನ್ನು, ಜೈವಿಕ ಗೊಬ್ಬರಗಳಾಗಿ ರೈಜೋಬಿಯಂ, ರಂಜಕ ಕರಗಿಸುವ ಜೀವಾಣು ಮತ್ತು ಜೈವಿಕ ಪೀಡೆನಾಶಕಗಳಾದ ಎನ್.ಪಿ.ಕೆ ನಂಜಾಣು, ಟ್ರೈಕೋಡರ್ಮಾ ಮತ್ತು ಮೆಟಾರೈಜಿಯಂನ್ನು ಬಳಸುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ವೃದ್ಧಿಸಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಅಲ್ಲದೇ ಕೃಷಿಯ ಜೊತೆಗೆ ೨ ಆಕಳು, ೧ ಎಮ್ಮೆ ಮತ್ತು ೨ ಎತ್ತುಗಳನ್ನೊಳಗೊಂಡ ಹೈನುಗಾರಿಕೆ ಘಟಕ ಮತ್ತು ಜೈವಿಕ ಅನಿಲ ಘಟಕವನ್ನು ಹೊಂದಿದ್ದು ಸಾವಯವ ಕೃಷಿಗೆ ಅನುಕೂಲವಾಗಿದೆ.

ನೀರಿನ ಸಂರಕ್ಷಣೆ: ಬೇಸಿಗೆಯಲ್ಲಿ ನೀರಿನ ಸಮಸ್ಯೆಯು ಈ ಗ್ರಾಮವನ್ನು ಅತ್ಯಂತ ಹೆಚ್ಚು ಕಾಡುತ್ತದೆ. ಇದನ್ನು ಬಗೆಹರಿಸಲು ಏಕಾಂಗಿಯಾಗಿ ಯಾರ ಸಹಾಯವು ಇಲ್ಲದೆ ಸ್ವಂತ ಹೊಲದಲ್ಲಿ ೨.೨೦ ಎಕರೆ ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿಯನ್ನು ಅಳವಡಿಸಲಾಗಿದ್ದು ೮೫ ಟನ್ ಇಳುವರಿಯನ್ನು ಗಳಿಸಿದ್ದಾರೆ. ಸಿಂಚನ ನೀರಾವರಿಯನ್ನು ೨.೨೦ ಎಕರೆ ಜಮೀನಿನಲ್ಲಿ ಕಬ್ಬು ಮತ್ತು ಸೋಯಾ ಅವರೆ ಬೆಳೆಗಳಲ್ಲಿ ಅಳವಡಿಸಿ ಬೆಳೆಗಳಿಗೆ ಬರುವ ರೋಗ ಮತ್ತು ಕೀಟ ಬಾಧೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಹತೋಟಿ ಮಾಡಿದ್ದಲ್ಲದೆ, ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡಿದ್ದಾರೆ.  ತಮ್ಮ ಹೊಲದಲ್ಲಿ ಸಮಸ್ಯಾತ್ಮಕ ಮಣ್ಣನ್ನು ಹತೋಟಿ ಮಾಡಲು ಬಸಿಗಾಲುವೆಗಳನ್ನು ನಿರ್ಮಿಸಿ ಭೂಮಿಯ ಸವಳು ಜವಳು ಆಗುವುದನ್ನು ತಪ್ಪಿಸಿದ್ದಾರೆ.

ಕೃಷಿ ಯಂತ್ರಗಳ ಬಳಕೆ: ಇತ್ತೀಚಿನ ದಿನಗಳಲ್ಲಿ ಕೃಷಿ ಕೂಲಿ ಆಳುಗಳ ಸಮಸ್ಯೆಗಳಿಂದಾಗಿ ಹಲವರಲ್ಲಿ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗಿ ಇತರ ಉಪಕಸುಬುಗಳ ಕಡೆ ಒಲವು ತೋರುತ್ತಿದ್ದಾರೆ. ಆದರೆ ಈ ರೈತ ಮಹಿಳೆ ಸ್ವತಃ ಕೃಷಿ ಮಹಿಳೆಯಾಗಿರುವ ಇವರು ಬಿತ್ತನೆಗೆ ಕಳೆ ತೆಗೆಯಕ್ಕೆ ಹಾಗೂ ಕಟಾವುಗೆ ಉನ್ನತ ತಂತ್ರಜ್ಞಾನದ ಯಂತ್ರಗಳನ್ನು ಬಳಸಿ ಕೂಲಿ ಆಳುಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇವರ ಬಳಿ ಟ್ರ್ಯಾಕ್ಟರ್ (ಎಚ್.ಎಂ.ಟಿ. ೫೯), ವಿವಿಧ ರೀತಿಯ ಔಷಧಿ ಹೊಡೆಯುವ ಸಿಂಪರಕಗಳಿದ್ದು ರಾಶಿ ಮಾಡುವ ಯಂತ್ರ ಮತ್ತು ಮೇವು ಕತ್ತರಿಸುವ ಯಂತ್ರಗಳನ್ನು ಬಳಸುತ್ತಿದ್ದಾರೆ.

ವೈಜ್ಞಾನಿಕ ಮಾಹಿತಿಯನ್ನು ಕಾಲಕಾಲಕ್ಕೆ ಕೃಷಿ ಮಹಾವಿದ್ಯಾಲಯ, ವಿಜಯಪುರ, ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಅರಭಾವಿ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಅಭಿವೃದ್ಧಿ ಇಲಾಖೆಗಳು, ತಾಂತ್ರಿಕ ಪತ್ರಿಕೆಗಳು, ರೇಡಿಯೋ, ದೂರದರ್ಶನಗಳಿಂದ ಪಡೆದಿರುತ್ತಾರೆ. ಅಷ್ಟೇ ಅಲ್ಲದೇ ರಾಜ್ಯದ ಇತರೆ ಪ್ರಗತಿಪರ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿ ೨೦೨೩-೨೪ ನೇ ಸಾಲಿನಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳಿಂದ ಪ್ರತಿ ಹೆಕ್ಟೇರಿಗೆ ರೂ. ೫,೫೯,೭೫೦ ನಿವ್ವಳ ಆದಾಯ ಗಳಿಸಿರುತ್ತಾರೆ.

ಗಡಿನಾಡ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐನಾಪುರ ಗ್ರಾಮದ ಅನೇಕ ಸ್ಥಳಗಳಲ್ಲಿ ಜನಪ್ರತಿನಿಧಿಯಾಗಿ, ಹಲವು ಕೃಷಿ ವಿಚಾರ ಸಂಕೀರಣಗಳಲ್ಲಿ ಭಾಗವಹಿಸಿ, ಕೃಷಿ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿರುವ ಇವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ೨೦೧೬-೧೭ನೇ ಕೃಷಿ ಮೇಳದಲ್ಲಿ ಬೆಳಗಾವಿ ಜಿಲ್ಲೆಯ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ, ಬೆನಕಟ್ಟಿಯ ಹೇಮ ಮೇಮನ ಸದ್ಭೋಧನ ಪೀಠ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಂಗಾರದ ಪದಕ ಹಾಗೂ “ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ” ಪ್ರಶಸ್ತಿ ಲಭಿಸಿರುತ್ತದೆ.

ಅನೇಕ ಕೃಷಿ ಆಸಕ್ತರು, ಕೃಷಿ ವಿಜ್ಞಾನಿಗಳು, ರೈತರು ಇವರ ಹೋಲಕ್ಕೆ ಆಗಮಿಸಿ ಮಾಹಿತಿ ಪಡೆಯುತ್ತಾರೆ. ಮುಪ್ಪಿನ ವಯಸ್ಸಿನಲ್ಲಿಯೂ ಅತ್ಯಂತ ಆಸಕ್ತಿಯಿಂದ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಸಾಧಿಸಿರುವ ಇವರು, ಇತರ ರೈತ ಮಹಿಳೆಯರಿಗೆ ಮತ್ತು ಪುರುಷರಿಗೆ ಮಾದರಿಯಾಗಿದ್ದಾರೆ.

ಚಿತ್ರ ವಿವರ : ೧. ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿ ೨. ತೆರೆದ ಭಾವಿ ೩. ಹೈನುಗಾರಿಕೆ ಘಟಕ ೪. ಏಕ ಬೆಳೆಯಾಗಿ ಸೋಯಾ ಅವರೆ.

ಚಿತ್ರಗಳು ಮತ್ತು ಮಾಹಿತಿ : ದೀಪಾ ಸಿ. ರಾಠೋಡ, ಡಾ. ಲೋಕೇಶ. ಬಿ.ಕೆ., ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಧಾರವಾಡ