ಕೃಷಿ ಸಿರಿ - 2022

ಕೃಷಿ ಸಿರಿ - 2022

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು
ರಾಜ್ಯ ಮಟ್ಟದ ಕೃಷಿ ಮೇಳ 2022 ಆಯೋಜನಾ ಸಮಿತಿ, ℅. ಪ್ರಣವ ಸೌಹಾರ್ದ ಸಹಕಾರಿ, ಯೆಯ್ಯಾಡಿ, ಮಂಗಳೂರು-575008.
ಪುಸ್ತಕದ ಬೆಲೆ
ರೂ.100.00. ಮುದ್ರಣ: 2022

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಯಾವುದೇ ಕೃಷಿ ಮೇಳಗಳು ನಡೆದಿರಲಿಲ್ಲ. ಕೃಷಿಕರೂ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ಅನ್ವೇಷಣೆ, ಮಾಹಿತಿಗಳಿಂದ ದೂರವೇ ಉಳಿದುಹೋಗಿದ್ದರು. ಈ ಕಾರಣದಿಂದ ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳವನ್ನು ಆಯೋಜನೆ ಮಾಡಬೇಕೆಂದು ಯೋಚನೆ ಮಾಡಿ ‘ಕೃಷಿ ಸಿರಿ- 2022’ ಎಂದು ಹೆಸರಿಸಿದರು. ‘ಕೃಷಿ ಸಿರಿ’ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ.ಆರ್. ಪ್ರಸಾದ್, ಅಧ್ಯಕ್ಷರಾಗಿ ವಿನಯ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಲ್ನಾಡು ಇವರುಗಳು ತಮ್ಮ ತಂಡದ ಜೊತೆ ಸೇರಿ ಕೃಷಿ ಮೇಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿಯ ಕೊಲ್ನಾಡ್ ಗ್ರಾಮದಲ್ಲಿ ಆಯೋಜನೆ ಮಾಡಿದರು. ರಾಷ್ಟೀಯ ಹೆದ್ದಾರಿಗೆ ಸಮೀಪವೇ ಇರುವ ವಿಸ್ತಾರವಾದ ಜಾಗದಲ್ಲಿ ೨೦೨೨ ಮಾರ್ಚ್ ೧೧, ೧೨ ಮತ್ತು ೧೩ರಂದು ಮೂರು ದಿನಗಳ ಕಾಲ ಕೃಷಿ ಸಂಬಂಧಿ ಚಟುವಟಿಕೆಗಳನ್ನು ನಡೆಸುವ 'ಕೃಷಿ ಸಿರಿ' ಅನ್ನು ಆಯೋಜಿಸಲಾಯಿತು. 

ಕೃಷಿ ಮೇಳದ ಈ ಸುಸಂದರ್ಭದಲ್ಲಿ ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕು ಎಂಬ ಒತ್ತಾಸೆಯಂತೆ ಹಿರಿಯ ಲೇಖಕರಾದ ಶ್ರೀ ಅಡ್ದೂರು ಕೃಷ್ಣ ರಾವ್ ಅವರ ಸಂಪಾದಕತ್ವದಲ್ಲಿ ‘ಕೃಷಿ ಸಿರಿ 2022’ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂಪಾದಕೀಯ ಸಮಿತಿಯ ಸದಸ್ಯರಾಗಿ ಸರ್ವಶ್ರೀ ಅರೆಹೊಳೆ ಸದಾಶಿವ ರಾವ್, ಡಾ. ಅಣ್ಣಯ್ಯ ಕುಲಾಲ್, ಜಿ.ಆರ್.ಪ್ರಸಾದ್, ಸಂತೋಷ್ ಶೆಟ್ಟಿ ಇವರು ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದರು. 

ಕೃಷಿ ಸಂಬಂಧಿ ೩೧ ಲೇಖನಗಳು ಈ ಪುಸ್ತಕದಲ್ಲಿದೆ. ಸಂಪಾದಕರಾದ ಅಡ್ಡೂರು ಕೃಷ್ಣ ರಾವ್ ಅವರು ತಮ್ಮ ಸಂಪಾದಕೀಯವಾದ ‘ಕೃಷಿರಂಗದ ನವಯುಗದ ಮುನ್ನುಡಿ’ಯಲ್ಲಿ ಹೀಗೆ ಬರೆಯುತ್ತಾರೆ. “ಭಾರತದ ಕೃಷಿ ರಂಗ ಚರಿತ್ರೆಯಲ್ಲೇ ಕಂಡು ಕೇಳರಿಯದ ಸಂಧಿಕಾಲವನ್ನು ಎದುರಿಸುತ್ತಿದೆ. ಒಂದೆಡೆ ಹವಾಮಾನದ ವೈಪರಿತ್ಯಗಳು ಸ್ಪೋಟಕ ಸ್ಥಿತಿ ತಲುಪಿದ್ದು, ಕೃಷಿಕರ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡುತ್ತಿವೆ. ಇನ್ನೊಂದೆಡೆ, ಕೊರೋನಾ ವೈರಸ್ (ಕೋವಿಡ್ ೧೯) ಹೊಸ ಹೊಸ ರೂಪಾಂತರಿಗಳ ಮೂಲಕ ಮತ್ತೆ ಮತ್ತೆ ದಾಳಿ ಮಾಡುತ್ತಿದೆ. ಇದರಿಂದಾಗಿ ಭಾರತ ಸಹಿತ ಇಡೀ ಜಗತ್ತು ತಲ್ಲಣಿಸಿದೆ.

ಭಾರತದ ಜನಸಂಖ್ಯೆ ೧೪೦ ಕೋಟಿ ದಾಟಿದೆ. ಇಂತಹ ಅಗಾಧ ಜನಸಾಗರಕ್ಕೆ ಆಹಾರ ಒದಗಿಸುವ ಪುಣ್ಯ ಕಾಯಕವನ್ನು ಮಾಡುತ್ತಿರುವವರು ಕೃಷಿಕರು. ಅವರನ್ನು ಅನ್ನದಾತರೆಂದು ಗೌರವಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಆದರೆ, ಕೃಷಿಕರಿಗೆ ಸಿಗೋದು ಹೀನಾಯ ಮಾತ್ರವಲ್ಲ ವಿವಿಧ ರೀತಿಯ ಶೋಷಣೆ. ಇದರಿಂದಾಗಿಯೇ ೨೦೦೧-೨೦೧೧ರ ದಶಕದಲ್ಲಿ ೮೫ ಲಕ್ಷ ಜನರು ಕೃಷಿ ತೊರೆದಿದ್ದಾರೆ ಮಾತ್ರವಲ್ಲ ಕೃಷಿಕರ ಮಕ್ಕಳು ಕೃಷಿಯಿಂದ ದೂರ ಸರಿದಿದ್ದಾರೆ.

ಭಾರತದ ಅಪರಾಧ ದಾಖಲೆ ಬ್ಯೂರೋ (ಎನ್ ಸಿ ಆರ್ ಬಿ) ಪ್ರಕಟಿಸಿದ ಅಂಕೆ ಸಂಖ್ಯೆಗಳ ಅನುಸಾರ ೧೯೯೫ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೨,೯೬,೪೩೮. ಇದು ರೈತರ ಹತಾಶೆಯ ಸೂಚಕ ಅಲ್ಲವೇ?”

ಕೃಷಿ ರಂಗದ ಬಹುತೇಕ ಸಮಸ್ಯೆಗಳು, ಉತ್ಪನ್ನಗಳು ಹಾಗೂ ವೈವಿಧ್ಯತೆಗಳನ್ನು ಈ ಪುಸ್ತಕದ ಲೇಖನಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಬಹಳ ಪ್ರಚಾರ ಪಡೆಯುತ್ತಿರುವ ಔಷಧೀಯ ಸಸ್ಯಗಳ ಬಗ್ಗೆ ಸವಿವರವನ್ನು ಮುನಿಯಾಲ್ ಗಣೇಶ್ ಶೆಣೈ ಅವರು ಬರೆದಿದ್ದಾರೆ. ಇದರ ಜೊತೆ ಜೇನು ಸಾಕಣೆ, ಬಿದಿರು, ನುಗ್ಗೆ, ಪುಷ್ಪ ಕೃಷಿ, ಚಿಪ್ಪು ಅಣಬೆ ಬಗ್ಗೆಯೂ ಸೊಗಸಾದ ಮಾಹಿತಿ ನೀಡಿದ್ದಾರೆ. ಸಾವಯವ ಕೃಷಿಯ ಗುಟ್ಟನ್ನು ಸಾವಯವ ಕೃಷಿ ಸಾಧಕರಾದ ನಾಡೋಜ ಡಾ.ಎಲ್. ನಾರಾಯಣ ರೆಡ್ಡಿಯವರು ತೆರೆದಿಟ್ಟಿದ್ದಾರೆ. ಎ ಪಿ. ಸದಾಶಿವರ ಮಣ್ಣಿಗೆ ಮರುಜೀವ, ಕಾಲಮಾನ ಆಧಾರಿತ ಸಾವಯವ ಕೃಷಿ (ಪಿ.ಶಿವಪ್ರಸಾದ್ ವರ್ಮುಡಿ), ಹಲಸಿನ ಸಂಸ್ಕರಣೆ ಹಾಗೂ ಮೌಲ್ಯಯುತ ಉತ್ಪನ್ನಗಳ ಬಗ್ಗೆ ನಾ ಕಾರಂತ ಪೆರಾಜೆ, ಈಗೀಗ ಖ್ಯಾತಿ ಪಡೆಯುತ್ತುರುವ ಬಾಳೆ ಕಾಯಿ ಹುಡಿಯ (ಬಾಕಾಹು) ಬಗ್ಗೆ, ಅಪರೂಪದ ಸೊಪ್ಪಿನ ಗಿಡ ಚಾಯಾ ಮಾನ್ಸಾ ಗಿಡದ ಬಗ್ಗೆ, ಪ್ರದೀಪ್ ಸೂರಿಯವರ ತಾರಸಿ ಕೃಷಿ ಮಾಡುವ ಬಗ್ಗೆ, ಶಿವರಾಂ ಪೈಲೂರು ಅವರ ಮುಜಂಟಿ ಜೇನು ಸಾಕಣೆ ಬಗ್ಗೆ, ಕೃಷಿಕರೇ ರೂಪಿಸಿದ ಕೃಷಿ ಉಪಕರಣಗಳ ಬಗ್ಗೆ, ಬಹು ಉಪಯೋಗಿ ಔಷಧೀಯ ಸಸ್ಯಗಳ ಬಗ್ಗೆ (ಎಚ್ ಪಿ ನಾಡಿಗ್), ಮನೆಮದ್ದು, ಜಲ ಸಂರಕ್ಷಣೆ ಬಗ್ಗೆಲ್ಲಾ ಸವಿವರವಾದ ಮಾಹಿತಿಗಳಿವೆ.

ಅದೇ ರೀತಿ ಸುಸ್ಥಿರ ಕೃಷಿಯ ಹರಿಕಾರರಾದ ಚೇರ್ಕಾಡಿ ರಾಮಚಂದ್ರ ರಾಯರ ಬಗ್ಗೆ, ಭತ್ತದ ತಳಿ ಸಂರಕ್ಷಣೆಯ ತಪಸ್ವಿಯಾದ ಬಿ.ಕೆ.ದೇವರಾಯರ ಬಗ್ಗೆ, ಸೋನ್ಸ್ ಫಾರಂ ಎಂಬ ಕೃಷಿ ಲೋಕದ ಬಗ್ಗೆ, ‘ಪದ್ಮಶ್ರೀ’ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರ ಬಗ್ಗೆ, ಕೀಟ ನಾಶಕಗಳ ಹಾವಳಿಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ, ಡಾ. ಅಣ್ಣಯ್ಯ ಕುಲಾಲ್ ಅವರ ಕೃಷಿಯೇ ಆರೋಗ್ಯದ ಬಟ್ಟಲಿನ ಗುಟ್ಟು ಎಂಬ ಲೇಖನ, ವಿವೇಕಾನಂದ ಎಚ್ ಕೆ ಅವರ ಅನ್ನದಾತ ಅನಾಥನಾಗುವ ಮುನ್ನ ಮೊದಲಾದ ಸಂಗ್ರಹ ಯೋಗ್ಯ ಲೇಖನಗಳು ಈ ಸಂಪುಟದಲ್ಲಿವೆ. 

‘ಕೃಷಿ ಸಿರಿ’ ಸಂಪುಟಕ್ಕೆ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾದ ಮುಲ್ಕಿ-ಮೂಡಬಿದರೆ ಶಾಸಕರಾದ ಶ್ರೀ ಉಮಾನಾಥ ಎ.ಕೋಟ್ಯಾನ್, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕೃಷಿ ಸಿರಿ ಆಯೋಜನಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಇವರು ತಮ್ಮ ಶುಭ ಸಂದೇಶಗಳನ್ನು ನೀಡಿದ್ದಾರೆ. ಇವರೆಲ್ಲರ ಕಳಕಳಿ ಒಂದೇ, ಇನ್ನಷ್ಟು ಜನ ಕೃಷಿಗೆ ಬರಬೇಕು. ಕನಿಷ್ಟ ಪಕ್ಷ ತಮ್ಮ ಮನೆಯಲ್ಲಾದರೂ ಪುಟ್ಟದಾದ ತೋಟವನ್ನು ಬೆಳೆಸಬೇಕು. ಕೃಷಿಕರಾಗುವ ಕಷ್ಟ-ಸುಖವನ್ನು ಖುದ್ದು ಅನುಭವಿಸಿಬೇಕು. ಕೃಷಿ ಮೇಳವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ ರೀತಿಯಲ್ಲಿಯೇ ‘ಕೃಷಿ ಸಿರಿ' ಸಂಪುಟವನ್ನೂ ಸಂಗ್ರಾಹ್ಯ ಯೋಗ್ಯ ಕೃತಿಯಾಗಿ ಓದುಗರ ಕೈಗೆ ಇರಿಸಿದ್ದಾರೆ. ಸೊಗಸಾದ ಆಕರ್ಷಕ ಮುಖಪುಟವನ್ನು ಹೊಂದಿದ ನೂರು ಪುಟಗಳ ಈ ಪುಸ್ತಕ ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಹೊಸ ಆಯಾಮವನ್ನು ತೆರೆದಿಡಲು ಸಹಕಾರಿಯಾಗಿದೆ.