ಕೃಷ್ಣಂ ವಂದೇ ಜಗದ್ಗುರುಮ್!

ಕೃಷ್ಣಂ ವಂದೇ ಜಗದ್ಗುರುಮ್!

‘ಕೃಷ್ಣ’  ಹೆಸರೇ ಒಂದು ರೀತಿಯ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ.

ಶ್ರಾವಣ ಮಾಸದ ಕೃಷ್ಣ ಪಕ್ಷದ ಸಿಂಹಮಾಸ ರೋಹಿಣಿ ನಕ್ಷತ್ರದ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನ ಜನನ ಮಥುರಾದ  ಕಾರಾಗೃಹದಲ್ಲಿ  ಕಾವಲುಗಾರರ ಬಂಧನದಲ್ಲಿ. ಆದರೇನಂತೆ ಪವಾಡವೆಂಬಂತೆ ಕ್ರೂರ ಕಂಸನಿಗೆ ತಿಳಿಯದಂತೆ ಶಿಶುವನ್ನು ಗೋಕುಲದ ನಂದರಾಜನ ಅರಮನೆಗೆ ಒಯ್ದು, ಅಲ್ಲಿದ್ದ ಯಶೋದೆಯ ಮಡಿಲಲ್ಲಿದ್ದ ಪುಟ್ಟ ಹಸುಳೆಯನ್ನು ದೇವಕಿಯ ಮಗ್ಗುಲಲ್ಲಿ ಮಲಗಿಸಲಾಯಿತು. ಅದೇ ಶಿಶು ಕಂಸನ ಖಡ್ಗದ ಬಾಯಿಂದ ತಪ್ಪಿಸಿ ಆಗಸಕ್ಕೆ ನೆಗೆದು, ಎಚ್ಚರಿಕೆಯ ಸಂದೇಶ ನೀಡಿದ ದುರ್ಗೆಯ ಅಂಶ.

ಕೃಷ್ಣನ ಅವತಾರಗಳು ಲೀಲಾವಿನೋದಗಳು ಹೇಳಿದಷ್ಟು ಮುಗಿಯದು. ಸುಧಾಮ ಕೃಷ್ಣರ ಗೆಳೆತನ ಹೃದಯ ಶ್ರೀಮಂತಿಕೆಯ ಪ್ರತೀಕ. ರಾಧಾ ಮಾಧವನಾಗಿ ಪ್ರಿಯ ಸಖನಾಗಿ, ನಂಬಿದ ಭಕ್ತರನ್ನು ಕಾಯುವ ದಿವ್ಯಶಕ್ತಿಯಾಗಿ, ಭಕ್ತರ ದೇವನಾಗಿ, ರುಕ್ಮಿಣಿ ವಲ್ಲಭನಾಗಿ ಜಗತ್ತನ್ನು ಕಾಯುವ ತಂದೆಯಾಗಿ ಸಕಲರ ಗುರುವಾಗಿ ‘ದೇವನೊಬ್ಬ ನಾಮಹಲವು’ ಶ್ರೀಕೃಷ್ಣನ ವೈಶಿಷ್ಟ್ಯ.

ಜೀವರಾಶಿಗೆ ಚೈತನ್ಯ ಸ್ವರೂಪಿಯಾಗಿ ಮೆರೆದವನೆಂದರೆ ಗೋಕುಲಬಾಲ ಕೃಷ್ಣ. ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಗುರುವಾದವ, ಕಣ್ಣಾದವ. ಕಾಯಕದ ಶ್ರಮಕ್ಕೆ ಸರಿಯಾದ ಕರ್ಮಫಲ ನೀಡುವವ. ವೇದಾಂತಿ, ಮನೋಹರ, ಹಿರಿಯರಿಗೆ ಜಗದ್ಗುರು.

ನಾವು ಯಾವಾಗ ಹೇಗಿರಬೇಕೆಂದು, ಹೇಗೆ ಎಲ್ಲಿ ಎಷ್ಟು ಮಾತನಾಡಬೇಕೆಂದು ಸಾರಿದ ಮಹಾನ್ ಪಂಡಿತ. ಅದ್ಭುತ ಸಲಹೆಗಾರ, ತೂಕ ನೋಡಿ ಹದವರಿತ ಮಾತುಗಾರ, ಮನಸಿಜಪಿತ ಬಿರುದಾಂಕಿತ, ಮನವರಿತು ಸಹಕರಿಸುವವ. ಸೂಕ್ಷ್ಮತೆಯ ಹರಿಕಾರ ಕೃಷ್ಣ. ವಿಧಿಯಾಟದಂತೆ ನಡೆಯಬೇಕೆಂದು ತೋರಿಸಿಕೊಟ್ಟ ಧೀರ. ಅಚಲ ನಿರ್ಧಾರ, ಗುರಿ, ಸಾಧನೆಗಳೇ ಯಶಸ್ಸಿನ ಮೆಟ್ಟಿಲೆಂದ ದಾರ್ಶನಿಕ.

ಮಾನವ ಸಹಜ ದೌರ್ಬಲ್ಯಗಳ ಕಿತ್ತೆಸೆದು ಹೊರಬರೋಣ, ಧರ್ಮಕ್ಕೆ ಯಾವತ್ತೂ ಜಯವೆಂದು ಹೇಳಿದವ, ನಡೆದವ.

ಇಂಥ ಧೀಮಂತ ನಾಯಕ, ಓರ್ವ ವ್ಯಕ್ತಿಯಾಗದೆ ಮಹಾನ್ ಶಕ್ತಿಯಾಗಿ ಯುಕ್ತಿಯಿಂದ ಎಲ್ಲವನ್ನೂ ಸಾಧಿಸಿ ತೋರಿಸಿದವ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ದೇಶಾದ್ಯಂತ ಆಚರಿಸುತ್ತಾರೆ. ಪುಟ್ಟ ಮಕ್ಕಳಿಗೆ ರಾಧಾಕೃಷ್ಣ ರ ವೇಷ ತೊಡಿಸುವುದು, ಮೊಸರುಕುಡಿಕೆ ಉತ್ಸವ, ಆಟೋಟಗಳು, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು. ಈಗ ಮಾತ್ರ ಕೊರೊನಾ ಸಂಕಷ್ಟದಿಂದಾಗಿ ಸಂಭ್ರಮವೆಲ್ಲ ಮೂಲೆಗುಂಪಾಗಿದೆ.ಭಗವಾನ್ ಶ್ರೀಕೃಷ್ಣನನ್ನು ಪೊರೆಯುವ ಶಕ್ತಿಯಾಗಿ ನೋಡೋಣ.

ನಾವು ಯಾವುದೇ ಒಂದು ಕಾರ್ಯ ಮಾಡುವಾಗಲೂ ಎಡರುತೊಡರು ಸಾಮಾನ್ಯ, ಅದನ್ನು ದೂರಿಕರಿ‌ಸಿ ಮುನ್ನುಗ್ಗುವ ಛಲ ನಮ್ಮಲ್ಲಿರಲಿ. ಋಣಾತ್ಮಕ ಅಂಶಗಳನ್ನು ಬೇರು ಸಹಿತ ಕಿತ್ತು ಎಸೆಯೋಣ. ಧನಾತ್ಮಕವಾಗಿ ಯೋಚಿಸಿ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗೋಣ. ಇವೆಲ್ಲವೂ ಭಗವಂತನ ತಂತ್ರ ಗಾರಿಕೆ.

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಮ್|

ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್||

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ