ಕೃಷ್ಣಾಗಮನ : ಕಾಂಗ್ರೆಸ್ಸಿನ ಸೋಲಿನ ರಾಜಕಾರಣ

ಕೃಷ್ಣಾಗಮನ : ಕಾಂಗ್ರೆಸ್ಸಿನ ಸೋಲಿನ ರಾಜಕಾರಣ

ಬರಹ

ಕೃಷ್ಣಾಗಮನ : ಕಾಂಗ್ರೆಸ್ಸಿನ ಸೋಲಿನ ರಾಜಕಾರಣ

ಕಾಂಗ್ರೆಸ್ಸಿಗರಿಗೆ ಕಾಂಗ್ರಸ್ಸಿಗರೇ ಶತ್ರುಗಳು ಎಂದು ಕಾಣುತ್ತದೆ. ಇಲ್ಲದಿದ್ದರೆ, ಚುನಾವಣೆಗಳು ಮೇನಲ್ಲೇ ಖಚಿತ ಎಂಬ ಸೂಚನೆ ಸಿಗುತ್ತಿದ್ದಂತೆ, ತರಾತುರಿಯಲ್ಲಿ ಎಸ್.ಎಂ.ಕೃಷ್ಣರನ್ನೇಕೆ ಮಹಾರಾಷ್ಟ್ರದ ರಾಜ್ಯಪಾಲರ ಹುದ್ದೆಯಿಂದ ಬಿಡುಗಡೆಗೊಳಿಸಿ ರಾಜ್ಯ ರಾಜಕೀಯಕ್ಕೆ ಕಳಿಸಲಾಗುತ್ತಿತ್ತು. ಮೊದಲಾಗಿ, ರಾಜ್ಯಪಾಲರಾಗಿದ್ದವರೊಬ್ಬರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವುದೇ ಅನೈತಿಕ ಹಾಗೂ ರಾಜ್ಯಪಾಲರ ಹುದ್ದೆಯ ಘನತೆಗೆ ಮಾಡುವ ಅವಮಾನ. ರಾಜ್ಯಪಾಲ ಹುದ್ದೆಯು ಪಕ್ಷ ರಾಜಕೀಯವನ್ನು ಮೀರಿ ಕಾರ್ಯ ನಿರ್ವಹಿಸಬೇಕಾದ ಸಂವೈಧಾನಿಕ ಮುತ್ಸದ್ದಿತನದ ಪ್ರತೀಕವಾಗಿದ್ದು, ಅದನ್ನು ರಾಜಕೀಯ ಆಸೆ - ಆಕಾಂಕ್ಷೆಗಳನ್ನು ಮೀರಿ ಬೆಳೆದವರು ಅಲಂಕರಿಸಬೇಕೆಂಬುದು ಜನ ತಂತ್ರ ವ್ಯವಸ್ಥೆಯಲ್ಲಿನ ಸಾಮಾನ್ಯ ನಂಬಿಕೆಯಾಗಿದೆ. ಕಾಂಗ್ರೆಸ್ ಹಲವು ಬಾರಿ ಈ ನಂಬಿಕೆಯನ್ನು ಧಿಕ್ಕರಿಸಿ ರಾಜ್ಯಪಾಲರ ಹುದ್ದೆಯ ಪಾವಿತ್ಯವನ್ನೇ ಹಾಳು ಮಾಡಿದೆ. ಈ ರಾಜಕೀಯ ಅನೈತಿಕತೆಯ ಬಗ್ಗೆ ಯಾವೊಂದು ಪಕ್ಷವೂ ಉಸಿರೆತ್ತದಿರುವುದು, ನಮ್ಮ ರಾಜಕೀಯ ಪಕ್ಷಗಳೆಲ್ಲವೂ ಹೇಗೆ ರಾಷ್ಟ್ರಾಡಳಿತದ ವಿಷಯವಾಗಿ ಎಲ್ಲ ಸೂಕ್ಷ್ಮತೆಗಳನ್ನೂ ಕಳೆದುಕೊಂಡಿವೆ ಎಂಬುದರ ಸೂಚನೆಯೂ ಆಗಿದೆ.

ಕೃಷ್ಣ ಹೇಳಿ ಕೇಳಿ ಕಳೆದ ಚುನಾವಣೆಗಳಲ್ಲಿ ರಾಜ್ಯ ಕಾಂಗೆಸ್ಸನ್ನು ಹೆಚ್ಚು ಕಡಿಮೆ ನಿರ್ನಾಮ ಮಾಡಿ - ಅದು ಎಂದೂ ವಿಧಾನ ಸಭೆಯಲ್ಲಿ ಅಷ್ಟು ಕಡಿಮೆ ಸ್ಥಾನಗಳನ್ನು ಪಡೆದಿರಲಿಲ್ಲ - ತಮ್ಮ ರಾಜಕೀಯ ಸ್ವೋಪಜ್ಞತನದಿಂದಾಗಿಯಷ್ಟೇ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯಲ್ಲಿ ಪುನರ್ವಸತಿ ಪಡೆದವರು. ಅವರು ಅದರ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ರಾಜ್ಯ ಘಟಕದ ಅಧ್ಯಕ್ಷರಾಗಿ ತಮ್ಮ ನೇತೃತ್ವದಲ್ಲಿ ಪಕ್ಷಕ್ಕೆ ಭಾರಿ ಗೆಲುವನ್ನು ತಂದುಕೊಟ್ಟಿದ್ದರು ಎಂದು ಅವರ ಪರವಾಗಿ ವಾದಿಸಬಹುದಾದರೂ, ಆ ನೇತೃತ್ವ ಅಧಿಕಾರ ವಹಿಸಿಕೊಂಡು ಎಂತಹ ಆಡಳಿತ ನೀಡಿತು, ಯಾರ ಪರವಾದ ಅಭಿವೃದ್ಧಿ ಕೈಗೊಂಡಿತು ಮತ್ತು ಆತ್ಯಂತಿಕವಾಗಿ ಜನ ಅದನ್ನು ಎಷ್ಟರ ಮಟ್ಟಿಗೆ ಒಪ್ಪಿತು ಎಂಬುದು, ಅವರ ರಾಜ್ಯ ರಾಜಕೀಯದ ಪುನರಾಗಮನವನ್ನು ನಿಶ್ಚಯಿಸುವಲ್ಲಿ ನಿರ್ಣಾಯಕ ಅಂಶವಾಗಬೇಕಿತ್ತು. ಏಕೆಂದರೆ, ಬಾಯಿ ಬಿಟ್ಟರೆ ಇಂಗ್ಲಿಷ್ ಮಾತನಾಡುತ್ತಾ, ಐ.ಟಿ.- ಬಿ.ಟಿ. ಉದ್ಯಮಪತಿಗಳ ಸಖ್ಯದಲ್ಲಿ ಸುಖ ಕಾಣುತ್ತಾ, ಬೆಂಗಳೂರನ್ನು ಸಿಂಗಪುರ ಮಾಡುವ ಕನಸು ಕೊಟ್ಟು; ಅದಕ್ಕೆ ತಕ್ಕ ಹಾಗೆ ತಮ್ಮ ಕ್ಷೇತ್ರವನ್ನು ಮದ್ದೂರಿನ ಹಳ್ಳಿಗಾಡಿನಿಂದ ಬೆಂಗಳೂರಿನ ಚಾಮರಾಜಪೇಟೆಗೆ ವರ್ಗಾಯಿಸಿಕೊಂಡ ಕೃಷ್ಣ, ಹೈಟೆಕ್ ಮುಖ್ಯಮಂತ್ರಿಯೆಂದೇ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡು ಅಂತಿಮವಾಗಿ ಚುನಾವಣೆಗಳಲ್ಲಿ ಮಣ್ಣು ಮುಕ್ಕಿದವರು.

ಹಾಗಾದರೆ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ವಾಸ್ತವವನ್ನು ಮರೆಸಿ, ಕೃಷ್ಣರನ್ನು ರಾಜ್ಯ ರಾಜಕೀಯಕ್ಕೆ ಮರಳಿ ತರುವಂತಹ ಬದಲಾವಣೆಗಳೇನಾದರೂ ಆಗಿವೆಯೇ? ಹಾಗೆ ನೋಡಿದರೆ, ಅಷ್ಟೇನೂ ಹೆಸರು ಕೆಡಿಸಕೊಂಡಿರದ ಹಾಗೂ ಹೈಟೆಕ್ ಅಥವಾ ಅಗ್ಗದ ರಾಜಕಾರಣದ ಅತಿಗಳಿಗೆ ಹೋಗದ ಅನುಭವಿ ರಾಜಕಾರಣಿಯಾದ ಖರ್ಗೆಯವರ ನೇತೃತ್ವದಲ್ಲಿ ರಾಜ್ಯ ಮೊಟ್ಟಮೊದಲ ದಲಿತ ಮುಖ್ಯಮಂತ್ರಿಯನ್ನು ಪಡೆಯುವ ಹಿರಿಮೆ ಹಾಗೂ ಸಾಧ್ಯತೆಗಳು ಒಡಮೂಡುವ ರೀತಿಯಲ್ಲಿ ರಾಜ್ಯ ರಾಜಕಾರಣವು ಕಾಂಗ್ರೆಸ್ಸಿನ ಸುತ್ತಮುತ್ತಲೇ ಎಲ್ಲ ಸಭ್ಯ ಹಾಗೂ ಜನಪರ ಮತ್ತು ಪ್ರಗತಿಪರ ಶಕ್ತಿಗಳು ಕ್ರೋಢೀಕೃತಗೊಳ್ಳುವಂತೆ ವಿನ್ಯಾಸಗೊಳ್ಳುತ್ತಿದ್ದಾಗ, ಕೃಷ್ಣರ ಈ ಪುನರಾಗಮನ ಕಾಂಗ್ರೆಸ್ ಪಾಲಿಗೆ ಒಂದು ಹಿನ್ನೆಡೆಯೇ ಆಗಿ ಪರಿಣಮಿಸಿದಂತಿದೆ. ಬಿಜೆಪಿಯ ಮತೀಯ ದ್ವೇಷದ ಹಾಗೂ ಅಗ್ಗದ ಜನಪ್ರಿಯ ರಾಜಕಾರಣ (ನಾನು ಮತ್ತೆ ಮುಖ್ಯಮಂತ್ರಿಯಾದರೆ, ಮಠಗಳಿಗೆ ಈಗ ಕೊಟ್ಟಿರುವುದರ ಹತ್ತು ಪಟ್ಟು ಹಣವನ್ನು ನೀಡಿಯೇನು ಎಂಬ ಯಡಿಯೂರಪ್ಪನವರ ಸವಾಲು ರೂಪದ ಹೇಳಿಕೆಯನ್ನು ಗಮನಿಸಿ!) ಹಾಗೂ ಜೆಡಿಎಸ್‌ನ ಭಂಡ ಕೌಟುಂಬಿಕ ರಾಜಕಾರಣ ಹುಟ್ಟುಹಾಕಿದ ಸ್ವಜನ ಪಕ್ಷಪಾತ, ಜಾತೀಯತೆ, ಎಗ್ಗಿಲ್ಲದ ಭ್ರಷ್ಟಾಚಾರ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಅವು ತಮ್ಮ ಅಧಿಕಾರಾವಧಿಯ ಅಂತ್ಯದಲ್ಲಿ ನಾಚಿಕೆಗೆಟ್ಟು ಪ್ರದರ್ಶಿಸಿದ ರಾಜಕೀಯ ಅಪ್ರಾಮಾಣಿಕತೆಯ ಪರಿಯನ್ನು ಕಂಡು ಗಾಬರಿಗೊಂಡಿದ್ದ ಸಾಮಾನ್ಯ ಜನತೆಗೆ; ಮತ್ತೆ ಕಾಂಗ್ರೆಸ್ಸಿನೆಡೆಗೆ ತಿರುಗಿ ನೋಡಬೇಕೆನ್ನಿಸಲಾರಂಭಿಸಿದ ಹೊತ್ತಿನಲ್ಲಿ, ಕಾಂಗ್ರೆಸ್ಸಿನ ವರಿಷ್ಠ ನಾಯಕತ್ವ ಆತುರದಲ್ಲಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಖರ್ಗೆಯವರ ಸಾಂಸ್ಥಿಕ ನಾಯಕತ್ವವಾಗಲೀ, ಮೊಯ್ಲಿಯವರ ಬೌಧ್ಧಿಕ ನಾಯಕತ್ವವಾಗಲೀ ದೆಹಲಿ ನಾಯಕತ್ವಕ್ಕೆ ಕರ್ನಾಟಕದ ರಾಜಕೀಯ ವಾಸ್ತವವನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದೇ ಇದರ ಅರ್ಥ.

ಕೃಷ್ಣರನ್ನು ದೇವೇಗೌಡರ ಒಕ್ಕಲಿಗರ ರಾಜಕಾರಣವನ್ನು ನಿಯಂತ್ರಿಸಲು ತರಲಾಗಿದೆಯಂತೆ... ಕಾಂಗೆಸ್ಸಿಗೆ ಆಧುನಿಕ ಮುಖ ನೀಡಲು ಅವರನ್ನು ಕರೆತರಲಾಗಿದೆಯಂತೆ... ಕಾಂಗ್ರೆಸ್ಸಿನ ಹಲವು ಗುಂಪುಗಳ ಏಕತೆಗಾಗಿ ಈ ರಾಜಕೀಯ ತಂತ್ರವಂತೆ... ಈ ಸಮರ್ಥನೆಗಳ ಹಿಂದೆ ಎಂತಹ ಅವಿವೇಕದ ಮಂಕು ಇದೆಯೆಂದರೆ, ಕೃಷ್ಣ ಇವೆಲ್ಲ ಆಗಿದ್ದಾಗಲೇ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅವಮಾನಕಾರಿ ರೀತಿಯಲ್ಲಿ ಸೋತದ್ದು ಎಂಬುದೂ ಈ ನಿರ್ಧಾರ ಕೈಗೊಂಡ ಪಕ್ಷದ ವರಿಷ್ಠ ನಾಯಕತ್ವದ ಗಮನಕ್ಕೆ ಬಾರದೇ ಹೋಗಿದೆ! ಹೋದ ಚುನಾವಣೆಗಳಲ್ಲಿ ಸೋಲಿನ ಭಯದಿಂದಾಗಿ ಒಕ್ಕಲಿಗರ ನೆಲೆಯಿಂದ ತಪ್ಪಿಸಿಕೊಂಡು ಬೆಂಗಳೂರಿನ ಮಧ್ಯಮ ವರ್ಗದ ಕ್ಷೇತ್ರಕ್ಕೆ ಓಡಿಬಂದ ಕೃಷ್ಣ, ಯಾವ ಕಾಲಕ್ಕೂ ಒಕ್ಕಲಿಗರ ನಾಯಕತ್ವಕ್ಕೆ ಬಾಧ್ಯರಾಗಲಾರರು. ಹಾಗೇ, ಅವರು ಕಾಂಗ್ರೆಸ್ಸಿಗೆ ಆಧುನಿಕ ಮುಖ ಒದಗಿಸುವರು ಎಂಬ ನಂಬಿಕೆ ಕೂಡಾ. ಅವರು ಎಷ್ಟು ಮತದಾರರನ್ನು ಈ ನೆಲೆಯಲ್ಲಿ ಸೆಳೆಯಬಲ್ಲರೋ, ಅದರ ಹಲವಾರು ಪಟ್ಟು ಮತದಾರರನ್ನು ತಮ್ಮ ಹೈಟೆಕ್ ಬಿಂಬದಿಂದಾಗಿ ಕಾಂಗ್ರೆಸ್ಸಿನಿಂದ ದೂರ ಸರಿಸುವ ಸಾಧ್ಯತೆಗಳೂ ಇವೆ! ಅಲ್ಲದೆ, ತಾವು ವಿಧಾನ ಸಭೆಗೆ ಸ್ಪರ್ಧಿಸುವುದೋ ಬಿಡುವುದೋ ಎಂಬುದನ್ನು ತೀರ್ಮಾನ ಮಾಡಿಲ್ಲವೆಂಬ ಕೃಷ್ಣರ ಹೇಳಿಕೆ, ಕಾಂಗೆಸ್ಸಿನಲ್ಲಿ ಹೆಚ್ಚೂ ಕಡಿಮೆ ಇತ್ಯರ್ಥವಾಗಿದ್ದ ನಾಯಕತ್ವದ ಗೊಂದಲವನ್ನು ಮತ್ತೆ ಸೃಷ್ಟಿಸಿದೆ.

ಕಳೆದ ಲೋಕಸಭಾ ಚುನಾವಣೆಗಳ ನಂತರದ ಯಾವ ಚುನಾವಣೆಗಳಲ್ಲೂ ಗೆಲುವಿನ ಮುಖ ಕಾಣದೇ ಹೋಗಿರುವ ಕಾಂಗ್ರೆಸ್, ಈ ವರ್ಷಾಂತ್ಯದಲ್ಲಿ ನಡೆಯಬೇಕಾದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ತನ್ನ ಪಾಲಿನ ಶುಭಾರಂಭವನ್ನು ಮೇನಲ್ಲಿ ಕರ್ನಾಟಕದಲ್ಲಿ ಸಾಧಿಸುವ ಕಾತರದಲ್ಲಿ ಈ ತಪ್ಪು ಹೆಜ್ಜೆ ಇಟ್ಟಂತಿದೆ. ಕಾಂಗ್ರೆಸ್ ಒಂದು ಕಡೆ ತನ್ನ ಇತ್ತೀಚಿನ ಮುಂಗಡ ಪತ್ರದ ಮೂಲಕ ಮತ್ತೆ ಗ್ರಾಮ ಪರ ತಾತ್ವಿಕತೆಯೆಡೆಗೆ ವಾಲಿದಂತೆ ತೋರಿದರೂ, ಅದು ದೇಶದಲ್ಲಿ ಆರ್ಥಿಕ ಜಾಗತೀಕರಣವನ್ನು ಅನಾವರಣ ಮಾಡಿದ ಪಕ್ಷವಾಗಿ ತನ್ನ ಹೈಟೆಕ್ ಸಂಸ್ಕೃತಿಯ ಪ್ರತಿಪಾದನೆಯನ್ನು ಬಿಟ್ಟುಕೊಡಲಾಗದ ಸಂದಿಗ್ಧಕ್ಕೂ ಸಿಕ್ಕಿಕೊಂಡಿದ್ದಂತೆ ಕಾಣುತ್ತದೆ. ಅದರ ಇಂದಿನ ಮೂವ್ವರು ಮುಖ್ಯ ನಾಯಕರಾದ ಸೋನಿಯಾ ಗಾಂಧಿ, ಮನಮೋಹನ ಸಿಂಗ್ ಹಾಗೂ ರಾಹುಲ ಗಾಂಧಿ ಮೂಲತಃ ಪ್ರಖರ ಜಾಗತೀಕರಣವಾದಿಗಳೇ ಆಗಿದ್ದು, ಈ ಜಾಗತೀಕರಣದ ಜವಾಬ್ದಾರಿಯನ್ನು ಅವರು ರಾಜ್ಯ ಮಟ್ಟದಲ್ಲಿ ಖರ್ಗೆ ಅಥವಾ ಸಿದ್ಧರಾಮಯ್ಯನವರಂತಹ 'ಹಿಂದುಳಿದ ಗ್ರಾಮೀಣ ಮುಖ'ಗಳಿಗೆ ವಹಿಸಲಾಗದು ಎಂಬ ನಿರ್ಧಾರಕ್ಕೆ ಬಂದಿದ್ದರೆ ಆಶ್ಚರ್ಯವಿಲ್ಲ! ಇದನ್ನು ಒಂದು ಉದಾಹರಣೆಯೊಂದಿಗೆ ವಿಷದೀಕರಿಸಿ ಹೇಳುವುದದರೆ, ಕ್ರಿಕೆಟ್‌ನ ಹೆಸರಿನಲ್ಲಿ ಇಂದು ರಾಷ್ಟ್ರಾದ್ಯಂತ ಹುಟ್ಟುಹಾಕುತ್ತಿರುವ ಹುಸಿ ಆವೇಶದ ವಾತಾವರಣದಲ್ಲಿ (ನಮ್ಮ ಕೆಲವು ಇಂಗ್ಲಿಷ್ ಟಿ.ವಿ.ವಾಹಿನಿಗಳಿಗೆ ಹೇಡನ್ ಎಂಬ ಹುಂಬ ಕ್ರಿಕೆಟಿಗ ತನ್ನ ದೇಶದ ಯಾವುದೇ ರೇಡಿಯೋ ವಾಹಿನಿಯಲ್ಲಿ ನಮ್ಮ ಇನ್ನೊಬ್ಬ ಹುಂಬ ಕ್ರಿಕೆಟಿಗ ಹರಭಜನನನ್ನು 'ಒಂದು ಹಾಳು ಕಳೆ' ಎಂದು ಕರೆದುದೇ ಮೊದಲ ಪ್ರಮುಖ ಸುದ್ದಿಯಾಗಿ, ಅದರ ಬಗ್ಗೆ ವೀಕ್ಷಕರ ಶಿಕ್ಷಣಕ್ಕಾಗಿ ದೊಡ್ಡ ಚರ್ಚೆಯನ್ನೇ ನಡೆಸಿದವು!) ವರ್ಣರಂಜಿತವಾಗಿ ಕಾಣಿಸಿಕೊಂಡು ಸಂಭ್ರಮಿಸಬಲ್ಲವರು ಮಾತ್ರ ಆಡಳಿತದ ಚುಕ್ಕಾಣಿ ಹಿಡಿದು ತಾವು ನಂಬಿರುವ ಜಾಗತಿಕ ಆರ್ಥಿಕತೆಯನ್ನು ದೇಶದಲ್ಲಿ ಬಲಪಡಿಸಬಲ್ಲರು ಎಂಬುದು ಕಾಂಗ್ರೆಸ್ ನಾಯಕತ್ವದ ನಂಬಿಕೆಯಾಗಿದ್ದಂತೆ ತೋರುತ್ತದೆ. ಅವರಿಗೆ ಕೃಷ್ಣರ 'ಮುಖ' ಈ ನಂಬಿಕೆಗೆ ಅರ್ಹವಾಗಿ ಕಂಡಿರಬೇಕು!

ಕ್ರಿಕೆಟ್, ಭಾರತದ ಮಟ್ಟಿಗೆ ಇಂದು ಅತಿ ಮಹತ್ವದ ಚಟುವಟಿಕೆಯಾಗಿ ಪ್ರಸ್ತುತಗೊಂಡಿರುವುದರ ಮರ್ಮವಾದರೂ ಏನು? ಹಣದ ದುರಾಶೆಯ ಆಡಳಿತಗಾರರ ಕೈಗೆ ಸಿಕ್ಕಿರುವ ಕ್ರಿಕೆಟ್, ಒಂದು ಆಟವಾಗಿ ಎಂದೋ ಮೃತ ಹೊಂದಿದೆ. ಐದು ದಿನಗಳ ಅವಧಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ಗಳ ಜೊತೆಗೆ ತಂಡದ ನಾಯಕತ್ವದಲ್ಲಿಯೂ ವಿವಿಧ ತೆರೆನ ಕೌಶಲ್ಯಗಳನ್ನು ಮರೆಯುವ ಮೂಲಕ ತನ್ನನ್ನು ಅತ್ಯಂತ ಸೂಕ್ಷ್ಮ ಮತ್ತು ಅದೇ ವೇಳೆಯಲ್ಲಿ ರೋಚಕ ಕ್ರೀಡೆಯನ್ನಾಗಿಯೂ ಪ್ರಸ್ತುತಗೊಳಿಸಿಕೊಂಡಿದ್ದ ಕ್ರಿಕೆಟ್, ಇತ್ತೀಚಿನ ವರ್ಷಗಳಲ್ಲಿ ಒಂದು ದಿನದ ಪಂದ್ಯವಾಗಿ;ನಂತರ 20-20 ಓವರ್‌ಗಳ ಪಂದ್ಯವಾಗಿ, ತನ್ನೆಲ್ಲಾ ಸಮಗ್ರತೆಯನ್ನೂ, ಕಲಾತ್ಮಕತೆಯನ್ನೂ ಕಳೆದುಕೊಂಡು ಈಗ ಬರೀ ಪೌರುಷ ಮೆರೆಯುವ ಶಕ್ತಿ ಕ್ರೀಡೆಯಾಗಿ ಅವನತಿ ಹೊಂದಿದೆ. ಈ ಅವನತಿಯ ಹಿಂದೆ ಇರುವುದು ಜಾಗತಿಕ ಮಾರ್ವಾಡಿಗಳ ಕೈವಾಡ. ನಮ್ಮ ಭಾರತದ ಕ್ರಿಕೆಟ್ ಮಂಡಳಿಯ ತುಂಬಾ ಇರುವವರು ಇವರ ಚೇಲಾಗಳೇ. ಶರದ್ ಪವಾರರು ಕೃಷಿ ಮಂತ್ರಿಯಾಗಿ ಎಂದಾದರೂ ಚಟುವಟಿಕೆಯಿಂದ ಇದ್ದುದನ್ನು ನೀವು ಈವರೆಗೆ ಕಂಡಿದ್ದಿರಾ? ಆದರೆ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮಾತ್ರ ಅವರು ಬಾಯಿ ತುಂಬಾ ನಗುವ ದೃಶ್ಯಗಳು ಈಗ ಕಿರುತೆರೆಯ ಮೇಲೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರ ಮರ್ಮವಾದರೂ ಏನು, ಯೋಚಿಸಿ! ಈಚೆಗೆ ಭಾರತ ತಂಡ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಮಣಿಸುವ ಮುನ್ನ, ಅದಕ್ಕೆ ಸ್ಪೂರ್ತಿ ಎಂಬಂತೆ, ನಮ್ಮ ಕ್ರಿಕೆಟ್ ಮಂಡಳಿ ಆ ದೇಶದ ಕ್ರಿಕೆಟ್ ಮಂಡಳಿಯನ್ನು ತನ್ನ ಆರ್ಥಿಕ ಬಲ ಬಳಿಸಿಯೇ ಮಣಿಸಿತ್ತು ಎಂಬುದನ್ನೂ ನೆನಪಿಡೋಣ...

ಆಸ್ಟ್ರೇಲಿಯಾದಲ್ಲಿನ ನಮ್ಮ ಕ್ರಿಕೆಟ್ ವಿಜಯ ನಿಜವಾಗಿಯೂ ನಮ್ಮೆಲ್ಲರಿಗೆ ಹೆಮ್ಮೆ ಹಾಗೂ ಸಂತೋಷ ತಂದಿದೆ. ಆದರೆ ಇದು ನಿಜವಾಗಿಯೂ ಇವರೆಲ್ಲ - ಅಂದರೆ ಕ್ರಿಕೆಟ್ ಆಡಳಿತಗಾರರು ಹಾಗೂ ಮಾಧ್ಯಮದವರು - ಸಂಭ್ರಮಿಸುತ್ತಿರುವ ಪ್ರಮಾಣದ ರಾಷ್ಟ್ರೀಯ ಮಹತ್ವ ಹೊಂದಿದೆಯಾ? ಯಾಕೆ ಹೀಗೆ ಆಟಗಾರರಿಗೆ, ತರಬೇತಿದಾರರಿಗೆ, ಆಯ್ಕೆದಾರರಿಗೆ ಕೋಟಿ ಕೋಟಿ ರೂಪಾಯಿಗಳ ಹಣವನ್ನು ಎರಚಲಾಗುತ್ತಿದೆ? ಇವರು - ಈಚೆಗೆ ವಿಶ್ವ ಕಪ್ ಗೆದ್ದು ಬಂದ ಕಿರಿಯರ ಕ್ರಿಕೆಟ್ ತಂಡವೂ ಸೇರಿದಂತೆ - ಪ್ರದರ್ಶಿಸುತ್ತಿರುವ ಕ್ರಿಕೆಟ್ ಸಾಮಥ್ರ್ಯ, ನಮ್ಮ ಜನರ ಇತರೇ ಯಾವುದೇ ತೆರೆನ ಸಾಮಥ್ರ್ಯಕ್ಕಿಂತ ಅಷ್ಟು ಅಮೂಲ್ಯವಾಗಿದೆಯೇ? ಭಾರತದ ಒಬ್ಬ ಸಾಮಾನ್ಯ ಪ್ರಜೆ ಜೀವನ ಪೂರ್ತಿ ದುಡಿದೂ ಉಳಿತಾಯ ಮಾಡಲಾಗದಷ್ಟರ ಹಲವು ಪಟ್ಟು ಹಣವನ್ನು ಈ ಆಟಗಾರರಿಗೆ ಒಂದು ಪಂದ್ಯಾವಳಿಯನ್ನು ಗೆದ್ದುದಕ್ಕೆ ಏಕೆ ಕೊಡಲಾಗುತ್ತಿದೆ? ಯಾರ ಹಣ ಅದು? ಯಾವ ಆರ್ಥಿಕತೆ ಇದು? ಇಂತಹ ಪ್ರಶ್ನೆಗಳು ಏಳದಂತೆ ಜನರನ್ನು ಮಾರುಕಟ್ಟೆ ರೋಚಕತೆಯಲ್ಲಿ ಮುಳುಗಿಸಿ ಅವರ ವೈಚಾರಿಕತೆಯನ್ನು ನಾಶ ಮಾಡುವುದೇ ಜಾಗತಿಕ ಅರ್ಥಿಕತೆಯ ಗುರಿ ಮತ್ತು ಮಾರ್ಗಗಳೆರಡೂ ಆಗಿವೆ.

ಹಾಗಾಗಿಯೇ ಭಾರತದ ಕ್ರಿಕೆಟ್ ಮಂಡಳಿಯ ಆಶ್ರಯದಲ್ಲಿಯೇ ಹೆಂಡದ ಕುಳಗಳು, ಭಾರಿ ಉದ್ಯಮಪತಿಗಳು ಹಾಗೂ ಸಿನೆಮಾ ನಟ ನಟಿಯರು ಕ್ರಿಕೆಟಿಗರನ್ನು ಹರಾಜಿನಲ್ಲಿ ಕೂಗಿ, ಕೊಂಡು; 'ಆಟ'ದ ಹೆಸರಿನಲ್ಲಿ ಬಹುಮುಖ ಮನರಂಜನೆಯ - ಇದರಲ್ಲಿ ಅರೆಬೆತ್ತಲೆಯ ಹೆಣ್ಣುಗಳ ಕುಣಿತವೂ ಸೇರಿದೆ - ಹಲವು 'ಪ್ಯಾಕೇಜ್'ಗಳನ್ನು ಜನರ ಮುಂದಿಟ್ಟಿದೆ! ಸುಸಂಸ್ಕೃತ ಆಟಗಾರರೆಂದೇ ಹೆಸರಾದ ಕುಂಬ್ಳೆ ಹಾಗೂ ದ್ರಾವಿಡರನ್ನೊಳಗೊಂಡ 'ರಾಯಲ್ ಚಾಲೆಂಜರ್ಸ್' ಎಂಬ ನಮ್ಮ ಬೆಂಗಳೂರು ತಂಡ, ಅದರ ಮಾಲೀಕ ವಿಜಯ ಮಲ್ಯ ತಯಾರಿಸುವ ಹೆಂಡದಿಂದಲೇ ತನ್ನ ಹೆಸರನ್ನು ಪಡೆದುಕೊಂಡಿದೆ ಎಂಬ ಸಂಗತಿ, ಕ್ರಿಕೆಟ್ ಎಂಬ ಉದ್ಯಮ ಮುಂದೆ ಹರಡಲಿರುವ 'ಮೌಲ್ಯಾಧಾರಿತ' ಸಂಸ್ಕೃತಿ ಎಂತಹದಿರುತ್ತದೆ ಎಂಬುದರ ಸೂಚಕವಾಗಿಯೂ ಇದ್ದಂತಿದೆ. ಇಂತಹುದನ್ನೆಲ್ಲ ಕಣ್ತುಂಬಾ ನೋಡಿ, ಬಾಯ್ತುಂಬಾ ಮೆಚ್ಚಬಲ್ಲ ಹೈಟೆಕ್ ಒಲವಿನ ಇಂಗ್ಲಿಷ್ಮನ್ ಕೃಷ್ಣರು ಕಾಂಗ್ರೆಸ್ ವರಿಷ್ಠ ಮಂಡಳಿಗೆ ಈ ಸಂದರ್ಭಕ್ಕೆ ತಕ್ಕ ರಾಜಕಾರಣಿಯಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ!

ಅಂದಹಾಗೆ: ಅಂತೂ ಸಿದ್ಧಗಂಗೆ ಮಠದ ಪದಚ್ಯುತ ಕಿರಿಯ ಸ್ವಾಮಿಗಳು 24 ವರ್ಷಗಳ ಕಾನೂನು ಹೋರಾಟದ ನಂತರ ತಮ್ಮ ವಿರುದ್ಧ ಮಾಡಲಾಗಿದ್ದ ಸಲಿಂಗಕಾಮದ ಆರೋಪದಿಂದ ಮುಕ್ತರಾಗಿದ್ದಾರೆ. ಎರಡೂ ಕೆಳ ನ್ಯಾಯಾಲಯಗಳು ಗೌರಿಶಂಕರರು ನಿರಪರಾಧಿ ಎಂದು ತೀರ್ಪಿತ್ತಿದ್ದರೂ, ಆ ತೀರ್ಪುಗಳ ವಿರುದ್ಧ ಹಠಕ್ಕೆ ಬಿದ್ದವರಂತೆ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ತಮ್ಮ ಪರ ತೀರ್ಪು ಪಡೆದವರ ಹಿತಾಸಕ್ತಿಗಳು, ಈ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಹಲವರು ಆಪಾದಿಸಿದಂತೆ, ಅನುಮಾನಾಸ್ಪದವೇ ಆಗಿದ್ದವು ಎಂಬುದು ಸರ್ವೋಚ್ಛ ನ್ಯಾಯಾಲಯದ ವಿಷದವಾದ ತೀರ್ಪಿನಿಂದ ಸಾಬೀತಾಗಿದೆ. ಸಲಿಂಗ ಕಾಮದ ಅಪರಾಧಕ್ಕೆ ಉಚ್ಛ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಲಕ್ಷ ರೂಪಾಯಿಗಳ ದಂಡ ನಮ್ಮ ನ್ಯಾಯಾಂಗ ಇತಿಹಾಸದಲ್ಲೇ ಕೇಳರಿಯದಷ್ಟು ಅತಿಯಾದದ್ದು ಎಂಬ ಸಂಗತಿಯೂ ಇದನ್ನು ಪುಷ್ಟೀಕರಿಸುತ್ತದೆ.

ಅದೇನೇ ಇರಲಿ, ಈ ಬಗ್ಗೆ ಮಠದ ಗೌರವಾನ್ವಿತ ಹಿರಿಯ ಸ್ವಾಮಿಗಳು ಏನು ಹೇಳುತ್ತಾರೋ ಕಾದು ನೋಡಬೇಕಾಗಿದೆ!