ಕೆಂಪಾದವೊ... ಎಲ್ಲ ಕೆಂಪಾದವೋ...

ಕೆಂಪಾದವೊ... ಎಲ್ಲ ಕೆಂಪಾದವೋ...

ಬರಹ

‘ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ನನ್ನ ಪತಿಯನ್ನು ಎಳೆದು ಒಂದೇ ಸಮನೆ ಹೊಡೆಯತೊಡಗಿದರು. ತನಗೂ ಪೊಲೀಸರಿಗೂ ಸಂಬಂಧ ಇಲ್ಲ ಎಂದು ನನ್ನ ಪತಿ ಪರಿಪರಿಯಾಗಿ ಬೇಡಿಕೊಂಡರು, ನಾನು ಮತ್ತು ಮಗ ಬಿಟ್ಟು ಬಿಡಿ ಎಂದು ನಕ್ಸಲರ ಕಾಲಿಗೆ ಬಿದ್ದೆವು, ಆದರೂ ಅವರಿಗೆ ಕರುಣೆ ಬರಲಿಲ್ಲ’...

ಈ ಆಕ್ರಂದನದ ನೋವು ಅದೆಷ್ಟು ಮನ ಮುಟ್ಟಿರಬಹುದೋ? ಅದೂ ಬೆಂಗಳೂರಿನಲ್ಲಿ ಕುಳಿತ ಮಂದಿಗೇನು ಗೊತ್ತಾಗಬೇಕು...

ನೆನಪಾಯ್ತಾ, ಜೂನ್ ರಾತ್ರಿ ೭.೫೦ರ ಸುಮಾರಿಗೆ ಶೃಂಗೇರಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಗಂಡಘಟ್ಟದಲ್ಲಿ ಒಂದು ಮುಗ್ದ ಜೀವ ಹಾರಿಹೋಯಿತು. ನೆಂಟರ ಮನೆಯಲ್ಲಿ ನಡೆಯುವ ತೊಟ್ಟಿಲು ಶಾಸ್ತ್ರಕ್ಕೆ ಹೊರಟ ವೆಂಕಟೇಶ್ ನಕ್ಸಲರ ಆಕ್ರೋಶಕ್ಕೆ ತನ್ನ ಕುಟುಂಬ, ನೆಲ ಎಲ್ಲವನ್ನೂ ಬಿಟ್ಟು ಹೊರಟೇ ಹೋದರು.
ಪತ್ನಿ, ಮಗನ ಆರ್ತನಾದದಿಂದ ನಕ್ಸಲರ ಮನ ಕರಗಲೂ ಇಲ್ಲ. ಅವರ ಹಾರಿಸಿದ ಗುಂಡು, ಬೀಸಿದ ಲಾಂಗಿನ ಹೊಡೆತಕ್ಕೆ ಜರ್ಜರಿತವಾಗಿ ಬಿದ್ದಿತ್ತು ವೆಂಕಟೇಶನ ದೇಹ.
ವರ್ಷದ ಹಿಂದೆ ಚಂದ್ರಯ್ಯನನ್ನು ಅಡ್ಡಡ್ಡಾ ಮಲಗಿಸಿ ಇನ್ನೂ ಸರಿಯಾಗದ ರೀತಿಯಲ್ಲಿ ಮೈಮೂಳೆ ಮುರಿದಾಗಿದೆ. ಶೇಷಯ್ಯ ಗೌಡ್ಲುವನ್ನು ಮನೆ ಮುಂದೇ ಅಟ್ಟಾಡಿಸಿಕೊಂಡು ಕೊಂದಾಗಿದೆ.

...
ಈಗ ಮತ್ತೆ ಮಲೆನಾಡಲ್ಲಿ ಪೊಲೀಸರ ಓಡಾಟ. ಅಲ್ಲಲ್ಲಿ ಸಭೆ, ಕೂಬಿಂಗ್. ಹಾಗೇ ಅತ್ತಿಂದಿತ್ತ ಬಾಲ ಸುಟ್ಟ ಬೆಕ್ಕಿನಿಂದ ತಿರುಗಾಡುತ್ತಿದ್ದಾರೆ. ಆದರೇನು ಪ್ರಯೋಜನ ಮತ್ತೊಂದು ಮುಗ್ದ ಜೀವ ಹೋಗಿಯಾಗಿದೆ.
ಮಲೆನಾಡಲ್ಲಿ ಕೆಂಪುಗಾಳಿ ಬೀಸಿದ್ದರ ಪ್ರತಿಫಲವಾಗಿ ಇದೀಗ ಏಳನೇ ಜೀವ ಹೋಗಿದೆ. ಅದೆಷ್ಟೋ ನೆಮ್ಮದಿ ಕೆಟ್ಟಿದೆ. ಅಕ್ಕಪಕ್ಕದವರನ್ನೂ ನಂಬದ ಸ್ಥಿತಿ. ನೆಮ್ಮದಿಗೆ ಕಲ್ಲು ಬಿದ್ದಿದೆ.
ಅತ್ತ ನಕ್ಸಲರ ಸಹವಾಸವೂ ಇತ್ತ ಪೊಲೀಸರಿಂದಲೂ ದೂರ ಇರಲಾಗದೆ ಬೆಂಕಿಯಿಂದ ಬಾಣಲೆಗೆ ಎಂಬಂತೆ ತತ್ತರಿಸಿ ಹೋಗಿದ್ದಾರೆ.
ನಕ್ಸಲರ ಪ್ರತಿಕಾರ ಭಾವನೆಗೆ ಈಗ ಬಲಿಯಾದ ವೆಂಕಟೇಶ್ ಕೆಸಮುಡಿ ಎನ್‌ಕೌಂಟರ್‌ಗೆ ಉತ್ತರವಂತೆ. ಆತ ಪೊಲೀಸರ ಇನ್‌ಫಾರ್‍ಮರ್ ಎಂಬ ಆರೋಪ. ಹೇಗಿದೆ ಪರಿಸ್ಥಿತಿ. ಪ್ರತೀಕಾರದ ನೆಪ. ಆದರೆ ಗಂಡಘಟ್ಟದಲ್ಲಿ ವೆಂಕಟೇಶನಿಗೆ ಉತ್ತಮ ಹೆಸರಿತ್ತು. ಸಣ್ಣ ವ್ಯಾಪಾರ ಮಾಡಿಕೊಂಡು ಈತ ಜೀವನ ನಿರ್ವಹಿಸುತ್ತಿದ್ದ. ಸ್ಥಳೀಯರು ಹೇಳುವಂತೆ ಈತನು ನಕ್ಸಲರ ತಂಟೆಗೆ ಹೋದವನೇ ಅಲ್ಲ.
ಈ ಮುಂಚೆ ಹೆಮ್ಮಿಗೆ ಚಂದ್ರಕಾಂತನ ಮೇಲೆ ಹಲ್ಲೆ ನಡೆಸಿದ ನಕ್ಸಲರು ೨೦೦೫ ರ ಮೇ ೧೭ರಂದುಶೇಷೇಗೌಡ್ಲು ಹತ್ಯೆ ಮಾಡಿದ್ದರು. ಜಿಲ್ಲೆಯಲ್ಲಿ ವೆಂಕಟೇಶ್ ನಕ್ಸಲರಿಗೆ ಎರಡನೇ ಬಲಿಯಾಯಿತು.
ಸಾಕೇತ ರಾಜನ್ ಸಾವಿಗೆ ಸೇಡು ತೀರಿಸಿಕೊಳ್ಳಲು ಶೇಷಯ್ಯಗೌಡ್ಲು ಹತ್ಯೆ ಮಾಡಿದ್ದರೆ, ದಿನಕರನ ಸಾವಿಗೆ ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿದೆ.
ಉದ್ಯಾನವ್ಯಾಪ್ತಿ ಪ್ರದೇಶದಲ್ಲಿ ನಕ್ಸಲರು ತಮ್ಮ ಕುರಿತು ಜನರಿಗೆ ತೀವ್ರ ಭಯ ಮೂಡಿಸುವ ಪ್ರಯತ್ನವಾಗಿ ವೆಂಕಟೇಶನನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸರ್ಕಾರದ ವಿರುದ್ಧ ಒಂದು ರೀತಿಯ ಸೇಡಿನ ಭಾವನೆ ಜನರಲ್ಲೂ ವ್ಯಾಪಿಸತೊಡಗಲು ಪ್ರಾರಂಭವಾಗಿದೆ. ತಮ್ಮ ನೆರೆ ಹೊರೆಯವರ ಮೇಲೆ ದಾಳಿ ನಡೆಯುತ್ತಿದೆ. ಮುಂದೊಂದು ದಿನ ತಮ್ಮ ಮೇಲೂ ನಡೆದೀತೆಂಬ ಆತಂಕ ಹೆಚ್ಚಿದೆ. ಸರ್ಕಾರ ಜನರ ರಕ್ಷಣೆಗೆ ಬರದೇ ತೆಪ್ಪಗೆ ಕುಳಿತಿರುವುದಕ್ಕೆ ಅಸಮಾಧಾನದ ಹೊಗೆ ಎದ್ದಿದೆ. ಅದು ಶೃಂಗೇರಿ ಬಂದ್ ಮೂಲಕ ವ್ಯಕ್ತವಾಯಿತು.

ಪರಿಹಾರ ಕೊಟ್ಟರೆ ಮುಗೀತೆ...
ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟಂತೆ ಸರ್ಕಾರ ಈಗ ಪರಿಹಾರ ಕೊಟ್ಟಿದೆ. ಆದರೆ ಅದರ ಮುಂದೀಗ ದೊಡ್ಡ ಸವಾಲಿದೆ. ಎಂ.ಪಿ. ಪ್ರಕಾಶ್ ಹೀಗೆ ಹೇಳುತ್ತಾರೆ... ‘ನಕ್ಸಲರನ್ನು ಮದ್ದು ಗುಂಡಿನಿಂದ ಮಟ್ಟ ಹಾಕಲು ಸಾಧ್ಯವಿಲ್ಲ, ಆ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬೇಕು ಅಷ್ಟೇ’.
ಹೀಗೇ ಹೇಳಿದರೆ ಆಯಿತೇ ಎಂಬುದು ಪ್ರಶ್ನೆ. ಈ ಭಾಗದಲ್ಲಿ ನಡೆಯುವ ದೊಡ್ಡ ಮಟ್ಟದ ನಕ್ಸಲ್ ಸಂಬಂಧಿತ ಘಟನೆ ನಂತರ ಸರ್ಕಾರದಿಂದ ಬರುತ್ತಿರುವ ಮಾತು. ಆದರೆ ಉಪಯೋಗವಾಗೇ ಇಲ್ಲ. ಇಂತಹ ಘಟನೆಗೆ ಸರ್ಕಾರವೂ ಹೊಣೆ ಹೋರಲೇಬೇಕಾಗಿದೆ. ಘಟನೆ ಪುನರಾವರ್ತನೆ ಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಮಾನವ ಹಕ್ಕು ಆಯೋಗ ನಕ್ಸಲರ ಹತ್ಯೆಯಾದಾಗ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಏನೆಲ್ಲಾ ಮಾಡಿತೆಂದುಗೊತ್ತಿದೆ. ಆದೇ ನಕ್ಸಲರಿಂದ ಜೀವವೊಂದು ಹೋಯಿತೆಂದರೆ ಅದು ತಣ್ಣಗಾಗಿ ಬಿಡುತ್ತಿದೆ.
ಅದೇ ರೀತಿ ರಾಜ್ಯದಲ್ಲಿ ನಕ್ಸಲ್ ನಿಗ್ರಹ ದಳ ರೂಪುಗೊಂಡರೂ ನಕ್ಸಲೀಯರನ್ನು ನಿಗ್ರಹಿಸುವ ತೀರಾ ಹಿಂದುಳಿದಿದೆ. ನಕ್ಸಲೀಯರು ಮಲೆನಾಡಿಗೆ ಅಡಿಯಿಟ್ಟು ಐದು ವರ್ಷಗಳೇ ಕಳೆದಿವೆ. ಈ ಐದು ವರ್ಷಗಳಲ್ಲಿ ನಡೆದಿರುವ ಒಟ್ಟಾರೆ ಘಟನೆಗಳನ್ನು ಗಮನಿಸಿದರೆ ಪೊಲೀಸರಿಗಿಂತ ನಕ್ಸಲರದೇ ಮೇಲುಗೈ.
ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಯಿತು. ಜೀಪು, ಕಂಪ್ಯೂಟರ್, ವಿಸಿಆರ್ ಮತ್ತು ಕಡತ ಬೆಂಕಿಗೆ ಆಹುತಿಯಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಜೀವಭಯದಲ್ಲಿ ಕೆಲಸ ಮಾಡುವ ಹಾಗಾಯಿತು.
ಪಶ್ಚಿಮಘಟ್ಟದ ದಟ್ಟ ಕಾನನ ಮಧ್ಯೆ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡಿನಲ್ಲಿ ರಕ್ತದ ಕೋಡಿ. ಶಾಂತಿಯ ನೆಲವೀಡಲ್ಲಿ ಈಗ ಗುಂಡಿನ ಸದ್ದು, ಕಾಳಗ, ಚಕಮಕಿ, ಅಪಹರಣ, ಹಲ್ಲೆ, ಕಾರ್ಯಾಚರಣೆ ಕೊನೆಗೆ ಸಾವಿನಲ್ಲಿ ಮುಕ್ತಾಯ. ಹೀಗೆ ಮಲೆನಾಡಿನಿಂದ ತುಂಗೆ, ಭದ್ರ ಹಾಗೇ ನೇತ್ರಾವತಿ ನದಿ ಹರಿಯುತ್ತಿದ್ದು ಅದರೊಂದಿಗೆ ರಕ್ತೇಶ್ವರಿ ಹರಿಯಲು ಸಿದ್ದತೆ ನಡೆಸಿದ್ದಾಳೆ. ರಕ್ತದ ತೊಟ್ಟು ಬೀಳಲಾರಂಭಿಸಿದೆ. ಹಲಿ ಗೂಡಿದರೆ ಹಳ್ಳ, ಹಳ್ಳ ಸೇರಿ ನದಿ....
ನಕ್ಸಲರ ವಿರುದ್ಧ ಈಗ ಪ್ರಬಲ ಜನಾಂದೋಲನ ಹುಟ್ಟಬೇಕಾದ್ದೊಂದೇ ಈ ಎಲ್ಲಾ ಸಮಸ್ಯೆ ಉತ್ತರವೇ?

ಕೆಂಪಾದವೊ... ಎಲ್ಲ ಕೆಂಪಾದವೋ...
ಹಸಿರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲಾ
ನೆತ್ತಾರು ಸುರಿದಂಗೆ ಕೆಂಪಾದವೋ
ಹೂವು ಬಳ್ಳಿಗಳೆಲ್ಲಾ ಕೆಂಪಾದವೋ,
ಊರು ಕಂದಮ್ಮಗಳು ಕೆಂಪಾದವೋ
....
ಭೂಮಿಯು ಎಲ್ಲಾನು ಕೆಂಪಾದವೋ...

ಲಂಕೇಶ ಅವರ ಈ ಸಾಹಿತ್ಯ ಮಲೆನಾಡಿಗೆ ಈಗ ಅನ್ವಯ.