ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧

ಕೃಷ್ಣ ಪರಮೇಶ್ವರ ಭಟ್ಟ, ಹಂದಿಗೋಣ ( ಕೆ ಪಿ ಭಟ್ಟ) ಇವರನ್ನು ಸಾಹಿತಿ ಎನ್ನುವುದಕ್ಕಿಂತಲೂ ಸಾಹಿತ್ಯಾಸಕ್ತರು ಅಥವಾ ಸಾಹಿತ್ಯ ಪೋಷಕರು ಎನ್ನುವುದು ಸೂಕ್ತ. ಇವರು ಮೂಲತಃ ಪುಸ್ತಕ ಮುದ್ರಕರು. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಶ್ರೀ ಗಜಾನನ ಆಫ್ ಸೆಟ್ ಮುದ್ರಣಾಲಯದ ಮಾಲೀಕರು. ಹಲವಾರು ವರ್ಷಗಳಿಂದ ಕಥೆ, ಕವನ, ಕಾದಂಬರಿಗಳನ್ನು ತಮ್ಮ ಅಚ್ಚುಮೊಳೆಯ ಮುದ್ರಣಾಲಯದಲ್ಲಿ ಮುದ್ರಿಸುತ್ತಾ ಬಂದಿದ್ದ ಕೆ ಪಿ ಭಟ್ಟರಿಗೆ ಇಳಿವಯಸ್ಸಿನಲ್ಲಿ ಕವನ ಬರೆಯುವ ತುಡಿತ ಶುರುವಾಗಿ ಹಲವಾರು ಕವನಗಳನ್ನು ಬರೆದರು. ಅವರ ಕವನಗಳಿಗೆ ಮುನ್ನುಡಿಯನ್ನು ಬರೆಯಲು ಕನ್ನಡದ ಖ್ಯಾತ ಕವಿ, ಬರಹಗಾರ ಬಿ ಎ ಸನದಿ ಅವರನ್ನು ಕೋರಿಕೊಂಡರು. 

“ಕೆ ಪಿ ಭಟ್ಟರ ಕವನಗಳು ಅವರ ಸುದೀರ್ಘ ಜೀವನಾನುಭವದ ಮತ್ತು ಪರಿಪಕ್ವ ಮನಸ್ಸಿನ ಚಿಂತನೆಗಳಿಂದ ಮೂಡಿ ಬಂದಂಥವು. ಮೂಡು ಬಂದಾಗಲೆಲ್ಲಾ ಅವರ ಹೃದಯದ ಹಕ್ಕಿ ಹಾಡಿಕೊಂಡಂಥವು. ಹಾಡುವುದೇ ಅದರ ಧರ್ಮ. ಆದರೆ ಯಾವ ಹಕ್ಕಿಯೂ ಲೋಕದ ಜನ ತನ್ನ ದನಿಯನ್ನಾಗಲೀ ವಾಹ್ ವಾಹ್ ಎನ್ನಬೇಕೆಂಬ ಅಪೇಕ್ಷೆಯಿಟ್ಟುಕೊಂಡು ಹಾಡುವುದಿಲ್ಲ.” ಎಂದು ಸನದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕೃತಿಯಲ್ಲಿರುವ ಸುಮಾರು ೫೦ ಕವನಗಳು ಸರಳ ಹಾಗೂ ಸುಂದರವಾಗಿವೆ. ಹಳೆಯ ಕೃತಿ (ಮುದ್ರಣ: ಜನವರಿ ೨೦೧೦)ಯಾಗಿರುವುದರಿಂದ ಅನೇಕ ಜನರಿಗೆ ಇವರ ಬಗ್ಗೆ ತಿಳಿದಿರಲಾರದು ಎನ್ನುವ ಕಲ್ಪನೆಯೊಂದಿಗೆ ಅವರ ಕವನಗಳನ್ನು ಆಯ್ದು ‘ಸಂಪದ’ದಲ್ಲಿ ಪ್ರಕಟ ಮಾಡಲಿದ್ದೇವೆ. ‘ಈ ಮರದ ನೆರಳಿನಲಿ’ ಎನ್ನುವುದು ಅವರ ಕವನ ಸಂಕಲನದ ಹೆಸರು. ಈ ಕವನ ಸಂಕಲನದಿಂದ ಎರಡು ಕವನಗಳನ್ನು ಆಯ್ದು ಪ್ರಕಟಿಸಿದ್ದೇವೆ. ಓದಿ ಅಭಿಪ್ರಾಯಗಳನ್ನು ತಿಳಿಸಿ.

ಹಚ್ಚು ದೀಪವ

ಹಚ್ಚು ದೀಪವ

ನೆಚ್ಚಿನೆಣ್ಣೆಯ 

ಸುರಿದು ಮಣ್ಣಿನ ಪಣತೆಗೆ

ಬಿಚ್ಚು ಮನದಲಿ

ಮೆಚ್ಚುವನುಪಮ 

ಸ್ವಚ್ಛ ನಡತೆಯ ದೃಢತೆಗೆ !

 

ಕಳೆದ ನಿನ್ನೆಯ 

ಬರುವ ನಾಳೆಯ

ನೆನಪುಗಳ ಸರಮಾಲೆಯ

ಸುಳಿಗೆ ಸಿಲುಕಿದ

ಬಾಳ ಬವಣೆಯ 

ಸೆಳಕುಗಳ ಬಹು ಲೀಲೆಯ !

 

ಬವಣೆ ಬೇಗುದಿ

ಹವಣಿಕೆಯ ಕುದಿ

ಆವರಿಸೆ ಬಲು ತಳಮಳ

ಜೀವನದಿ ಬಹ

ಭಾವನೆಗೆ ನಿಜ

ಜೀವಕಳೆಯೇ ಸಮಬಲ !

 

ಹಚ್ಚು ದೀಪವ

ನೆಚ್ಚಿನೆಣ್ಣೆಯ 

ಸುರಿದು ಮಣ್ಣಿನ ಪಣತೆಗೆ

ಬಿಚ್ಚು ಮನದಲಿ

ಮೆಚ್ಚುವನುಪಮ 

ಸ್ವಚ್ಛ ನಡತೆಯ ದೃಢತೆಗೆ !

***

ಸದ್ಗುರು

ಅಂತರಂಗದೀ ಅಂತರಾಳದಲಿ

ನಿಂತ ಪ್ರಭುವು ನೀನು ;

ಸಂತ ಸದ್ಗುರು ಮಹಾಂತ ಮಂತ್ರ-

ದೃಷ್ಟಾರ ವಿಭುವು ನೀನು !

 

ಸುಮ್ಮನಿದ್ದು ಸರ್ವವನು ಅರಿತ

ಸುಜ್ಞಾನ ನಿಧಿಯು ನೀನು

ಮೌನಿಯಾಗಿ ದರ್ಶಿಸುವ ಭಕ್ತರಿಗೆ

ಮಾರ್ಗದರ್ಶಿ ಭಾನು !

 

ಗಹನವಾದುದನು ಸಹಜವಾಗಿಸುವ

ಗರ್ವರಹಿತ ಧೇನು ;

ಸರ್ವರಲ್ಲಿಯೂ ಆತ್ಮಚಿಂತನೆಯ

ಸೃಜಿಪ ಶ್ರೇಷ್ಟ ನೀನು !

 

ನಿನ್ನನುಗ್ರಹದ ಕೃಪೆಯ ಸೆಳಕೊಂದು

ಬೆಳಕ ಚೆಲ್ಲಿ ಬರಲಿ ;

ನಿನ್ನ ಪದತಳದ ದಯೆಯ ನೆಲೆಯೊಂದು

ಸದಾ ನನಗೆ ಇರಲಿ !

***