ಕೆಲವರಿಗಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯವೇ?

ಕೆಲವರಿಗಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯವೇ?

ಕೇರಳದ ಖ್ಯಾತ ಗಾಯಕಿ ಕೆ ಎಸ್ ಚಿತ್ರಾ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಟೆ ನಡೆಯುವ ದಿನ ಶ್ರೀರಾಮ ನಾಮ ಜಪಿಸುವಂತೆ ಮತ್ತು ದೀಪ ಹಚ್ಚುವಂತೆ ಕೇರಳೀಯರಿಗೆ ಕರೆ ನೀಡಿರುವುದನ್ನು ಅಲ್ಲಿನ ಡೋಂಗಿ ಜಾತ್ಯಾತೀತರು ಮತ್ತು ಕಾಮ್ರೇಡ್ ಗಳು ಖಂಡಿಸಿದ್ದಾರೆ. ಜಿಹಾದಿ ಶಕ್ತಿಗಳೂ ಅವರೊಂದಿಗೆ ಕೈಜೋಡಿಸಿ ಚಿತ್ರಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪದ ಬಳಸಿವೆ. ಚಿತ್ರಾ ಅವರನ್ನು ನಿಂದಿಸುವಲ್ಲಿ ಕಮ್ಯುನಿಷ್ಟ್ ಕಾಮ್ರೇಡ್ ಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಕೇರಳದ ಇನ್ನಿತರ ಪ್ರಜ್ಞಾವಂತರು ತಕ್ಕುದಾದ ಮಾರುತ್ತರಗಳನ್ನು ಜಾಲತಾಣಗಳಲ್ಲಿ ನೀಡಿರುವುದು ನಿಜವಾದರೂ, ಅಲ್ಲಿನ ಎಡಪಂಥೀಯ ಸರಕಾರ ಮತ್ತು ಕೆಲವು ದುರುಳ ಶಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹನನ ಮಾಡಲು ನಡೆಸಿದ ಯತ್ನವನ್ನು ಖಂಡಿಸಲೇ ಬೇಕಾಗಿದೆ. ತಮ್ಮ ಅಭಿಪ್ರಾಯವನ್ನು ಯಾರಾದರೂ ಟೀಕಿಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂದು ಬೊಬ್ಬಿಡುವ ಈ ಮಂದಿಗಳು, ಚಿತ್ರಾ ಅವರಿಗೆ ಕೂಡಾ ತಮ್ಮದೇ ಆದ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬುದನ್ನು ಮರೆಯುವುದು ವಿಪರ್ಯಾಸ. ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರೋಧವಾಗಿ ಕೇಳಿಬರುವ ಧ್ವನಿಗಳನ್ನೆಲ್ಲ ದಮನಿಸುತ್ತಿರುವ ಪಿಣರಾಯಿ ವಿಜಯನ್ ಸರಕಾರವು, ಸನಾತನ ಧರ್ಮದ ವಿರುದ್ಧವಾಗಿ ಬಳಸಲಾಗುತ್ತಿರುವ ನಿಂದೆಗಳಿಗೆಲ್ಲ ಮೂಕ ಪ್ರೇಕ್ಷಕನಾಗಿ ಕೂರುವುದು ಖಂಡನೀಯವೇ ಸರಿ. ಅಭಿವ್ಯಕ್ತಿ ಸ್ವಾತಂತ್ರ್ಯವು ಕೆಲವರದಷ್ಟೇ ಸೊತ್ತಲ್ಲ ಎಂಬುದನ್ನು ಇವರು ಅರಿಯಬೇಕು. ಅಯೋಧೆಯಲ್ಲಿ ಶ್ರೀರಾಮ ಮಂದಿರವನ್ನು ಬೆಂಬಲಿಸುವವರನ್ನೆಲ್ಲ ಖಂಡಿಸ ಬೇಕು ಹಾಗೂ ಅವರ ತೇಜೋವಧೆ ಮಾಡಬೇಕು ಎಂಬ ಇವರೆಲ್ಲರ ಪ್ರಯತ್ನಕ್ಕೆ ಜನರಿಂದ ಸೂಕ್ತ ಪ್ರತ್ಯುತ್ತರ ದೊರಕುವುದರಲ್ಲಿ ಅನುಮಾನವಿಲ್ಲ.

ಕೇರಳದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಕುರಿತಂತೆ ಹಾಗೂ ಅದನ್ನು ಬೆಂಬಲಿಸುತ್ತಿರುವವರ ಕುರಿತಂತೆ ಕೇಳಿಬರುತ್ತಿರುವ ಈ ನಿಂದೆಗಳು ಹತಾಶೆಯಿಂದ ಹುಟ್ಟಿಕೊಂಡದ್ದು ಎನ್ನುವುದು ನಿರ್ವಿವಾದ. ಶ್ರೀರಾಮ ಅಕ್ಷತೆಯ ವಿತರಣಾ ಕಾರ್ಯಕ್ಕೆ ಕೇರಳದಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿರುವುದು, ಹಲವಾರು ಸೆಲೆಬ್ರಿಟಿಗಳು ಕೂಡಾ ಅದರಲ್ಲಿ ಪಾಲ್ಗೊಂಡಿರುವುದು ಇವರೆಲ್ಲರನ್ನು ಹತಾಶೆಗೆ ದೂಡಿದೆ. ಶ್ರೀರಾಮ ಪ್ರಾಣ ಪ್ರತಿಷ್ಟಾಪನೆಯ ದಿನ ಹತ್ತಿರ ಬರುತ್ತಿರುವಂತೆ ಕೇರಳದಲ್ಲಿ ಕೂಡಾ ಹಬ್ಬದ ಸಂಭ್ರಮ ಎದ್ದೇಳುತ್ತಿದೆ. ಕೇರಳದಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸ್ಪಂದನ ದೊರಕಲಾರದು ಎಂಬ ಸಿನಿಕರ ಅಭಿಪ್ರಾಯವನ್ನೆಲ್ಲ ಇದು ಸುಳ್ಳು ಮಾಡುತ್ತಿದೆ. ಕೇರಳದ ಜನರು ‘ಕೆಂಪು ಜಿಹಾದಿ' ಶಕ್ತಿಗಳ ಇಂತಹ ಪ್ರಯತ್ನವನ್ನು ವಿಫಲ ಮಾಡುವುದು ಖಂಡಿತವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೮-೦೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ