ಕೆಲಸವೇ ದೇವರು
ಒಮ್ಮೆ ಒಬ್ಬರು ಮಹನೀಯರು ಜ್ಞಾನಿಗಳ ಹತ್ತಿರ ಕೇಳಿದರಂತೆ 'ನೀವು ಈಶ್ವರನನ್ನು ನೋಡಿದ್ದೀರಾ? ಈಶ್ವರನನ್ನು ನೋಡಿದ್ದೇನೆ ಎಂದು ಹೇಳುವಿರಾದರೆ, ಅವನ ರೂಪವನ್ನು ಹೇಳಿ ಎಂಬುದಾಗಿ. ಜ್ಞಾನಿಗಳೋ ಮಹಾ ತಪಸ್ವಿಗಳು. ಎಲ್ಲವನ್ನೂ ಒಳಗಣ್ಣಿಂದ ತಿಳಿದು ಹೇಳುವವರು.
ಅವರು ಹೇಳಿದರಂತೆ "ಕೂತಲ್ಲಿ ನಿಂತಲ್ಲಿ ಪರಮೇಶ್ವರನನ್ನು ಕಾಣಲು ಅಚಲ ಶೃದ್ಧೆ, ಭಕ್ತಿ, ಏಕಾಗ್ರತೆ ಬೇಕಪ್ಪ".
ಹೌದಾ 'ಅದು ಮಾತ್ರ ನನ್ನಿಂದಾಗದು' ಎಂದರಂತೆ. ನನ್ನಲ್ಲಿ ಬೇಕಾದಷ್ಟು ಹಣವಿದೆ, ಕೈಗೊಂದು ಕಾಲಿಗೊಂದು ಮನೆಯಲ್ಲಿ ಚಾಕರಿಗಾಗಿ ಜನ ಇದ್ದಾರೆ. ನಾನು ಅಗರ್ಭ ಶ್ರೀಮಂತ, ಆ ಈಶ್ವರನನ್ನು ನನ್ನ ಮನೆಗೆ ಬರಲು ಹೇಳಿ. ಎಷ್ಟು ಹಣ ಬೇಕಾದರೂ ಕೊಡಬಲ್ಲೆ' ಎಂಬುದಾಗಿ.
"ಹಣಕ್ಕೆಲ್ಲ ಆ ಪರಮೇಶ್ವರ ಬರಲಾರನು. ಅವನಿಗೆ ಹಾಗೆಲ್ಲ ಬರಲು ಪುರುಸೊತ್ತಿಲ್ಲ, ಇಡೀ ಬ್ರಹ್ಮಾಂಡವನ್ನು ಸಮತೋಲನಗೊಳಿಸುವ ಬೃಹತ್ ಉದ್ಯೋಗ ಮಾಡುತ್ತಿದ್ದಾನೆ, ಬೇಕಾದಾಗ ಅವನೇ ಬರಬಹುದು, ನೀವೀಗ ನಿಮ್ಮ ಮನೆಗೆ ಹೋಗಿ"ಎಂದರಂತೆ.
ಶಿವನನ್ನು ನೋಡಲು ಒಳಗಣ್ಣು ಬೇಕು. ಇಲ್ಲಿ ಒಳಗಣ್ಣು ಎಂದರೆ ಭಕ್ತಿ, ಯುಕ್ತಿ, ಶಕ್ತಿ, ಸಾಧನೆ, ಅಚಲತೆ, ಶೃದ್ಧೆ, ಏಕಾಗ್ರತೆ, ಪರಿಶುದ್ಧತೆ, ಆಚಾರ-ವಿಚಾರ, ನಡೆ ನುಡಿ, ಶುದ್ಧತೆ, ಪ್ರೀತಿ, ವಿಶ್ವಾಸ, ನಂಬಿಕೆ, ತೃಪ್ತಿ ಎಲ್ಲವೂ ನಮ್ಮ ದಿನ ನಿತ್ಯದ ವ್ಯವಹಾರದಲ್ಲಿರಬೇಕು. ಆಗ ಈಶ್ವರಾನುಗ್ರಹ ಸಿಗಬಹುದು ಅಲ್ಲವೇ?
ಆತ ನಿರಾಕಾರನೇನೋ ಸರಿ, ಆದರೆ ನಾವು ಅವನ ಆಕಾರವನ್ನು ಕಲ್ಪಿಸಿ ಕಣ್ಣೆದುರು ತಂದು ಕೊಳ್ತೇವೆ. ನಾವು ಮಾಡುವ ಕೆಲಸಗಳಲ್ಲಿ ಪರಿಶುದ್ಧತೆಯಿದ್ದರೆ ಕರೆಯದೆ ಓಡಿ ಬರುವ. ನಾವು ಎಸಗುವ ಕರ್ಮಗಳ ಫಲ ನೀಡುವ ದೇವನಾತ. ಪ್ರತಿಯೊಂದು ಕಲ್ಪದಲ್ಲಿಯೂ ಈಶ್ವರನ ಕೈಚಳಕವಿದೆ, ಅವನೇನೂ ನೀಡುವುದಲ್ಲ, ನಾವು ಮಾಡಿದ ಪಾಪ-ಪುಣ್ಯಗಳ ಫಲವನ್ನೇ ನೋಡಿ, ತಕ್ಕಡಿಯಲ್ಲಿ ತೂಗಿ ನೀಡುವನು ಅಷ್ಟೆ. ಈ ಪ್ರಪಂಚವೇ ಒಂದು ಮಾಯೆ ಆತ ಮಾಯೆಯ ನಿಯಂತ್ರಕ. ಆತ ಸರ್ವಜ್ಞನೆಂದರೂ ತಪ್ಪಾಗಲಾರದು. ಭಗವತ್ಪಾದರು ಒಂದೆಡೆ ಹೀಗೆ ಬರೆಯುತ್ತಾರೆ
*ಶರದಿಂದು ವಿಕಾಸಿ ಮಂದಹಾಸಾಂ*
*ಸ್ಫರದಿಂದೀವರಲೋಚನಾಭಿರಾಮಾಮ್*||
*ಅರವಿಂದ ಸಮಾನಸುಂದರಾಸ್ಯಾಂ*
*ಅರವಿಂದಸನಸುಂದರೀಮುಪಾಸೇ||*
ಭಗವತ್ಪಾದರ ಭಾಷ್ಯ ಗ್ರಂಥಗಳಲ್ಲಿ ಸುಲಭವಾದ ತತ್ವ ವನ್ನು ಅರಿಯುವಂಥ ಸರಳ ವಿಷಯಗಳನ್ನು ಅಳವಡಿಸಿದ್ದಾರೆ. ಆದರೆ ಎಲ್ಲವನ್ನೂ ಗುರುಮುಖೇನ ಕಲಿಯಿರೆಂದು ಕಿವಿಮಾತನ್ನು ತಿಳಿಸಿದ್ದಾರೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಗುಡಿ , ದೇವಸ್ಥಾನ ಸುತ್ತುವುದರಲ್ಲೇ ಕಾಲಹರಣ ಮಾಡದೇ, ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯಗಳಲ್ಲಿಯೇ ಭಗವಂತನನ್ನು ಕಾಣುವ ಹಾಗೆ ಮಾಡೋಣ. ಆ ಕಣ್ಣಿಗೆ ಕಾಣದ ಅದ್ಭುತ ಶಕ್ತಿ ತಾನಾಗಿ ಒಲಿಯುವ ಹಾಗೆ ನಮ್ಮ ಗುಣ-ನಡತೆ-ವ್ಯವಹಾರಗಳಿರಲಿ.
- ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ