ಕೆ ಎಸ್ ನ ಅವರ ನೆನಪಿನ ಪುಟಗಳಿಂದ…

ಕೆ ಎಸ್ ನ ಅವರ ನೆನಪಿನ ಪುಟಗಳಿಂದ…

೧೯೫೪ರಲ್ಲಿ ಎಂದು ತೋರುತ್ತದೆ. ವಿ.ಸೀ. (ವಿ.ಸೀತಾರಾಮಯ್ಯ) ಅವರು ಆಕಾಶವಾಣಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದರು. ಆಗ ನಾನು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತೆಯಾಗಿದ್ದೆ. ಆಗ ವಿ.ಸೀ. ಅವರನ್ನು ನೋಡಲು ನಾನು ಮಾಡರ್ನ್ ಹೋಟಲಿಗೆ ಹೋದೆ. ವಿ.ಸೀ. ಅವರೊಂದಿಗೆ ಬಂದಿದ್ದ ಮೊಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳ ಪರಿಚಯ ನನಗಾದದ್ದು ಅಲ್ಲಿ.

೧೯೫೪ರ ಅಕ್ಟೋಬರಿನಲ್ಲಿ ನನಗೆ ಮೈಸೂರಿನಿಂದ ಬೆಂಗಳೂರಿಗೆ ವರ್ಗವಾಯಿತು. ತರುವಾಯ ಪರಿಚಯ ಸ್ನೇಹವಾಯಿತು. ಆ ಸಮಯದಲ್ಲಿ ವಿ.ಸೀ. ಅವರನ್ನು ಬೆಂಗಳೂರಿನ ಆಕಾಶವಾಣಿಯಲ್ಲಿ ಸಲಹೆಗಾರನ್ನಾಗಿ ನೇಮಕಮಾಡಿತು. ಪ್ರತಿದಿನ ಬೆಳಿಗ್ಗೆ ವಿ.ಸೀ. ಅವರು ಆಟೋರಿಕ್ಷಾ ಹಿಡಿದು ಕಚೇರಿಗೆ ಹೋಗುತ್ತಿದ್ದರು. ಕೆಲಸ ಮುಗಿಸಿಕೊಂಡು ಪ್ರತಿಸಂಜೆ ರಿಕ್ಷಾ ಹಿಡಿದು ಮನೆಗೆ ವಾಪಾಸಾಗುತ್ತಿದ್ದರು. ನಾನು ಕೆಲಸ ಮಾಡುತ್ತಿದ್ದ ಲೋಕಲ್ ಸೆಲ್ಫ್ ಗೌರ್ನಮೆಂಟ್ ಕಮೀಷನರ ಕಚೇರಿಗೂ ವಿ ಸೀ ಅವರ ಮನೆಗೂ ಕೇವಲ ಒಂದು ಫರ್ಲಾಂಗಿನ ಅಂತರ. ಒಂದು ಖಾಸಗಿ ವಿದ್ಯಾಶಾಲೆಯಲ್ಲಿ ಸಂಸ್ಕೃತ ಪಂಡಿತರಾಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯ ಶಾಸ್ತ್ರಿಯವರ ಮನೆಯೂ ವಿ.ಸೀ. ಅವರ ಮನೆಗೆ ಅಷ್ಟೇ ದೂರದಲ್ಲಿತ್ತು. ಹೀಗಾಗಿ ಪ್ರತಿಸಂಜೆ ವಿ.ಸೀ. ಅವರ ಮನೆಯಲ್ಲಿ ನಾವಿಬ್ಬರೂ ಸೇರುತ್ತಿದ್ದೆವು. ಸಂಜೆ ಆರರ ರೇಡಿಯೋ ಸುದ್ದಿ ಕೇಳಿಕೊಂಡು ನಾವು ಮೂವರೂ ಕೆಂಪುವೂ ಸಾಲ್ಮರದ ಹಾದಿಯಲ್ಲಿ ಲಾಲ್ ಭಾಗ್ ಕಡೆಗೆ ವಾಕಿಂಗ್ ಹೊರಡುತ್ತಿದ್ದೆವು.

ಆಕಾಶವಾಣಿಯವರು ವಿ.ಸೀ. ಅವರಿಗೆ ೬೦೦ ರೂ. ಗಳ ಮಾಸಿಕ ಸಂಭಾವನೆ ಕೊಡುತ್ತಿದ್ದರು. ಅದರಲ್ಲಿ ರಿಕ್ಷಾ ಬಾಡಿಗೆಗಾಗಿ ೧೫೦ ರೂ. ಖರ್ಚಾಗುತ್ತಿತ್ತು. ಲಾಲ್ ಭಾಗ್ ಹಾದಿಯಲ್ಲಿರುವ ಮಾವಳ್ಳಿ ಟಿಫಿನ್ ರೂಮಿನಲ್ಲಿ ೩೦೦ ರೂ. ಸೋರಿಹೋಗುತ್ತಿತ್ತು. ನಾವು ದಿನವೂ ಅಲ್ಲಿಗೆ ಹೋಗುವುದು ಬೇಡ ಎಂದು ಎಷ್ಟೇ ಪ್ರತಿಭಟಿಸಿದರೂ ವಿ.ಸೀ. ಅದಕ್ಕೆ ಕಿವಿಗೊಡುತ್ತಿರಲಿಲ್ಲ. ವಿ.ಸಿ. ಅರ್ಥಶಾಸ್ತ್ರದಲ್ಲಿ ಕೋವಿದರಾಗಿದ್ದರೂ ಅವರ ಸ್ವಂತ ಬಜೆಟ್ ಯಾವಾಗಲೂ ಖೋತಾ. ಆಕಾಶವಾಣಿಯಲಿ ವಿಸೀ ಅವರಿಗೆ ಉದ್ಯೋಗ ಸಿಕ್ಕಿದರೂ ಅದರಿಂದ ವಿಸೀ ಅವರಿಗೆ ಎಷ್ಟೂ ಪ್ರಯೋಜನವಾಗುತ್ತಿಲ್ಲವಲ್ಲ ಎಂದು ನಾನೂ ಶಾಸ್ತ್ರಿಗಳೂ ಕೊರಗುತ್ತಿದ್ದೆವು. ಒಂದಂತೂ ಖಂಡಿತ ನಿಜ ; ವಿಸೀ ಅವರು ನಾನಾಗಲೀ ಶಾಸ್ತ್ರಿಗಳಾಗಲೀ ಒಂದು ದಿನವಾದರೂ ಬಿಲ್ ಹಣವನ್ನು ನಮ್ಮಿಂದ ಕೊಡಿಸಲಿಲ್ಲ.

ಶಾಸ್ತ್ರಿಗಳು ಎತ್ತರವಾದ ಮಜಬೂತಾದ ಆಳು. ಅವರು ಮೇಲುಕೋಟೆ ಪಂಚೆಯನ್ನು ತೀಡಿ ತೀಡಿ ಕಚ್ಚೆ ಉಡುತ್ತಿದ್ದರು. ತೊಡುತ್ತಿದ್ದುದು ಓಪನ್ ಕಾಲರ್ ಕೋಟು. ಹುಬ್ಬುಗಳ ಮಧ್ಯೆ ದಪ್ಪ ಸಾದಿನ ಬೊಟ್ಟು ; ತಲೆಗೆ ಕಪ್ಪು ಟೋಪಿ. ಬಲಗೈಯಲ್ಲಿ ಭಾರವಾದ ನಡೆಗೋಲು. ಕಾಲಿಗೆ ಕಪ್ಪು ಬಣ್ಣದ ಪಂಪ್ ಷೂ. ಸದಾ ನಗುಮುಖ. ಅವರು ಚಿಕ್ಕಪೇಟೆಯ ಒಂದು ಅಂಗಡಿಯಿಂದ ಉಂಡೆ ನಶ್ಯವನ್ನು ತರುತ್ತಿದ್ದರು. ಎಡ ಅಂಗೈಗೆ ತೆಳ್ಳಗೆ ಸುಣ್ಣ ಸವರಿ ಉಂಡೆ ನಶ್ಯವನ್ನು ತಿಕ್ಕಿ ತೀಡಿ, ಸಣ್ಣ ಸಣ್ಣ ನಶ್ಯದ ಚಿಟಿಕೆಗಳನ್ನು ತಯಾರಿಸಿ ಬೆಳ್ಳಿಯ ನಶ್ಯದ ಡಬ್ಬಿಗೆ ತುಂಬುತ್ತಿದ್ದರು. ನಶ್ಯ ಒಳ್ಳೆಯದಲ್ಲ, ಈ ದುರಭ್ಯಾಸವನ್ನು ಬಿಟ್ಟುಬಿಡಿ ಎಂದು ವೀಸೀ ಅವರು ಹೇಳಿದ್ದುಂಟು. ಆದರೂ ಕಡೆಯತನಕ ಈ ಚಟ ಅವರನ್ನು ಬಿಡಲಿಲ್ಲ.

ಪ್ರತಿದಿನ ಸಂಜೆ ಸುಮಾರು ೬.೧೫ರ ಹೊತ್ತಿಗೆ ಶಾಸ್ತ್ರಿಗಳು ತಮ್ಮ ಮನೆಯ ಬಾಗಿಲಿಗೆ ಬಂದು ಕಾಯುತ್ತಿದ್ದರು. ವಿಸೀ ಅವರೂ ನಾನೂ ಅಲ್ಲಿಗೆ ತಲುಪುತ್ತಿದ್ದೆವು. ನಮ್ಮನ್ನು ನೋಡಿದ ಕೂಡಲೇ ಶಾಸ್ತ್ರಿಗಳು ತಮ್ಮ ಜೇಬಿನಿಂದ ಗಡಿಯಾರ ತೆಗೆದು ನಕ್ಕು ಬಿಡುತ್ತಿದ್ದರು. ಬಳಿಕ ನಾವು ಮೂವರೂ-ರುಮಾಲು ಧರಿಸಿದ ವೀಸೀ ಅವರೂ, ಟೋಪಿ ಧರಿಸಿದ ಶಾಸ್ತ್ರಿಗಳೂ, ಬರಿ ತಲೆಯ ನಾನೂ, ಚಾಮರಾಜಪೇಟೆಯ ೩ನೆಯ ರಸ್ತೆಯನ್ನು ದಾಟುತ್ತಿದ್ದುದನ್ನು ಅನೇಕರು ನೋಡಿದ್ದಾರೆ.

ಅಲ್ಲಿಂದ ಉತ್ಸವ ಮಾವಳ್ಳಿ ಮಾರ್ಗವಾಗಿ ಎಂಟಿಆರ್ ಗೆ ತಲುಪುತ್ತಿತ್ತು. ಉಪಾಹಾರ ಮುಗಿಸಿಕೊಂಡು ಸುಮಾರು ಏಳೂವರೆಯ ಹೊತ್ತಿಗೆ ಗಾಜಿನಮನೆಯ ಹತ್ತಿರವಿರುವ ಒಂದು ನಿರ್ದಿಷ್ಟ ಸ್ಥಳದಲ್ಲಿ ಝಾಂಡಾ ಹಾಕುತ್ತಿದ್ದೆವು. ಶಾಸ್ತ್ರಿಗಳಾಗಲಿ ನಾನಾಗಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ವಿಸೀ ಅವರು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಹಿತ್ಯಕ ಎಲ್ಲ ವಿಷಯಗಳನ್ನೂ ಕುರಿತು ಧಾರಾಳವಾಗಿ ಮಾತನಾಡುತ್ತಿದ್ದರು. ಸುಮಾರು ರಾತ್ರಿ ಒಂಬತ್ತರ ವೇಳೆಗೆ ನಾವು ಮನೆಗೆ ಚೆದರುತ್ತಿದ್ದೆವು. ಶಾಸ್ತ್ರಿಗಳಿಗೆ ವಿಶ್ವೇಶ್ವರಪುರದ ತುಂಬ ಶಿಷ್ಯರು ; ಅವರನ್ನೆಲ್ಲಾ ಮಾತಾಡಿಸಿಕೊಂಡು ಹೆಜ್ಜೆ ಹಾಕುತ್ತಿದ್ದರು.

ಶಾಸ್ತ್ರಿಗಳು ಭೋಜನ ಪ್ರಿಯರು. ತಿಂಡಿತೀರ್ಥಗಳನ್ನು ಅವರು ಬಗೆಬಗೆಯಾಗಿ ವರ್ಣಿಸುತ್ತಿದ್ದರು. ಅವರು ದೈವಭಕ್ತರಾದರೂ, ಅದು ಮೂಢನಂಬಿಕೆಯಾಗಿರಲಿಲ್ಲ. ಅವರ ಸಜ್ಜನಿಕೆ ಅವರಿಗೆ ಅನೇಕ ಸ್ನೇಹಿತರನ್ನು ಒದಗಿಸಿತ್ತು. ಅವರು ಹೊಸಕಾಲದ ಸಾಹಿತ್ಯ ಕೃತಿಗಳನ್ನು ಸ್ವಾಗತಿಸುತ್ತಿದ್ದರು. ಹಳೆಗಾಲದ ಸಾಹಿತ್ಯ ಕೃತಿಗಳ ಸೌಂದರ್ಯಗಳನ್ನು ಕುರಿತು ಚರ್ಚಿಸುತ್ತಿದ್ದರು. ಎಲ್ಲಾ ಗುಣಗಳನ್ನು ಎತ್ತಿ ಹಿಡಿಯುತ್ತಿದ್ದರು. ಇಂಥವರು ಅಪರೂಪ.

ರಾಮಾಯಣ ಪಾರಾಯಣ ಅವರಿಗೆ ಬಲು ಇಷ್ಟ. ಅವರು ರಾಮಾಯಣ ಪಾರಾಯಣ ಮಾಡಿದ ಹಾಗೆ ಇನ್ನೊಬ್ಬರು ಮಾಡಲಿಲ್ಲವೆಂದು ನನಗೆ ತೋರುತ್ತದೆ.

-ಕೆ.ಎಸ್. ನರಸಿಂಹಸ್ವಾಮಿ 

 ಕೃಪೆ: ‘ಗಾಂಧಿ ಬಜಾರ್ ಪತ್ರಿಕೆ'

ಚಿತ್ರ ಕೃಪೆ: ಅಂತರ್ಜಾಲ ತಾಣ