ಕೊಕ್ಕೋ ಸಸ್ಯದ ಸೂಕ್ತ ನಿರ್ವಹಣೆ ಹೇಗೆ?
ಕೊಕ್ಕೋ ಗಿಡವನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ನಿರಂತರವಾಗಿ ಒಂದು ಆದಾಯ ನೀಡುವ ದಾರಿಯಾಗುತ್ತದೆ. ಒಂದು ಕೊಕ್ಕೋ ಗಿಡದಿಂದ ವಾರ್ಷಿಕ ಎರಡು ಬೆಳೆಗಳಲ್ಲಿ ಕನಿಷ್ಟ ೩-೪ ಕಿಲೋ ಹಸಿ ಬೀಜದ ಉತ್ಪಾದನೆ ಬರುತ್ತದೆ. ಒಂದು ಸಸ್ಯಕ್ಕೆ ರೂ. ೨೫೦ (ಹೆಚ್ಚು - ಕಮ್ಮಿ ಆಗುವ ಸಾಧ್ಯತೆ ಇದ್ದೇ ಇದೆ) ಹಣದ ರೂಪದ ಆದಾಯ, ಜೊತೆಗೆ ಮಣ್ಣಿಗೆ ವಾರ್ಷಿಕ ೨-೩ ಕಿಲೋ ಒಣ ಸಾವಯವ ಪದಾರ್ಥ ಮತ್ತು ೧೦-೨೦ ಕಿಲೋ ಹಸಿ ಸೊಪ್ಪು ದೊರೆಯುವ ಒಟ್ಟಾರೆ ಲಾಭದ ಬೆಳೆ ಇದು.
ಕೊಕ್ಕೋ ಸಸಿ ನೆಟ್ಟು ಎರಡನೇ ವರ್ಷಕ್ಕೆ ಫಸಲಿಗಾರಂಭಿಸುತ್ತದೆ. ನಂತರ ನಿರಂತರ ಹೆಚ್ಚುಹೆಚ್ಚು ಫಸಲು ಕೊಡುತ್ತಿರುತ್ತದೆ. ಮಾರ್ಚ್ ತಿಂಗಳಿಂದಾರಂಭವಾಗಿ ಜನವರಿ ತನಕವೂ ಫಸಲು ಇರುತ್ತದೆ. ಅಡಿಕೆ, ತೆಂಗು ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಸಲು ಇದು ಲಾಭದ ಸುಲಭದ ತೋಟಗಾರಿಕಾ ಬೆಳೆ. ಕರಾವಳಿ, ಮಲೆನಾಡು ಹಾಗೂ ಬಯಲು ನಾಡಿನಲ್ಲೂ ಇದನ್ನು ಬೆಳೆಸಲಾಗುತ್ತದೆ. ಕಾಲ ಬುಡದಲ್ಲೇ ಮಾರುಕಟ್ಟೆ ಇದೆ. ಹಣ್ಣಾದ ಕೋಡುಗಳನ್ನು ಸಸಿಯಿಂದ ಕೊಯ್ಯುವುದು, ಒಡೆಯುವುದು ತಕ್ಷಣ ಮಾರುವುದು, ಹಣ ಪಡೆಯುವುದು ಅಷ್ಟೇ ಕೆಲಸ. ಗಿಡದ ಸಸ್ಯದಲ್ಲಿ ಬೆಳೆದು ಉದುರುವ ಎಲೆ ಉತ್ತಮ ಸಾವಯವ ಗೊಬ್ಬರ. ತೋಟದ ಕಳೆ ನಿಯಂತ್ರಕವೂ ಹೌದು. ಸಸ್ಯ ಬೆಳವಣಿಗೆಯಾಗುತ್ತಿದ್ದಂತೆಯೇ ಬೆಳವಣಿಗೆ ನಿಯಂತ್ರಿಸಲು ಸವರುವಿಕೆ ಅಗತ್ಯ. ಸವರುವಿಕೆಯಲ್ಲಿ ದೊರೆಯುವ ಹಸಿ ಸೊಪ್ಪು ಸಸಾರಜನಕ ಯುಕ್ತ ಪಶು ಮೇವು. ಹಣ್ಣಾದ ಕೋಡುಗಳನ್ನು ಒಡೆದಾಗ ಅದರ ತೊಗಟೆಯೂ ಪಶುಗಳಿಗೆ ಪ್ರಿಯವಾದ ಆಹಾರ. ಆದ ಕಾರಣ ಕೊಕ್ಕೋ ಬಹು ಉಪಯೋಗಿ ಸಸ್ಯ ಎಂದರೂ ತಪ್ಪಾಗಲಾರದು.
ಬೆಳವಣಿಗೆ ನಿಯಂತ್ರಣದಿಂದ ತೊಂದರೆ ಇದೆಯೇ?: ಖಂಡಿತಾ ಇಲ್ಲ. ಕೊಕ್ಕೋ ಗಿಡವನ್ನು ತೋಟದೊಳಗೆ ಮಿಶ್ರ ಬೆಳೆಯಾಗಿ ಬೆಳೆಸಿದರೆ ಅದರಿಂದ ಮುಖ್ಯ ಬೆಳೆಗೆ ತೊಂದರೆಯಾಗುತ್ತದೆ. ಸಲ್ಪ ಆದಾಯಕ್ಕಾಗಿ ಹೆಚ್ಚು ಆದಾಯ ಕೊಡಬಲ್ಲ ಮುಖ್ಯ ಬೆಳೆಯನ್ನು ಹಾಳು ಮಾಡಿಕೊಳ್ಳುತ್ತೇವೆ ಎಂಬ ಭಿನ್ನಾಭಿಪ್ರಾಯವೂ ಇದೆ. ಈ ಭಿನ್ನಾಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ. ಕೊಕ್ಕೋ ಸಸ್ಯವನ್ನು ಸಸ್ಯವಾಗಿಯೂ, ಮರವಾಗಿಯೂ ಬೆಳೆಸಿಕೊಳ್ಳಬಹುದು. ಇದು ನಾವು ಅದನ್ನು ನಿರ್ವಹಣೆ ಮಾಡುವ ವಿಧಾನದಲ್ಲಿದೆ. ಸಸ್ಯವಾಗಿ ಉಳಿಸಿಕೊಂಡು ಸುಮಾರು ಎರಡು ಮೀಟರು ಎತ್ತರ ಹಾಗೂ ಎರಡು ಮೀಟರು ವಿಸ್ತಾರಕ್ಕೆ ಹಬ್ಬಿ ಬೆಳೆಯುವಂತೆ ಸವರುವಿಕೆ (ಪ್ರೂನಿಂಗ್) ಮಾಡುತ್ತಿದ್ದ ಸಸಿಯಿಂದ ಮುಖ್ಯ ಬೆಳೆಗೆ ತೊಂದರೆ ಕಡಿಮೆ. ಅದರಷ್ಟಕ್ಕೇ ಬೆಳೆಸಿದ ಸಸ್ಯ ನಾಲ್ಕು ಐದು ವರ್ಷಕ್ಕೆ ಮರವಾಗಿ ಬೆಳೆದು ಮುಖ್ಯ ಬೆಳೆಗೆ ಸ್ಪರ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಮೇಲಿನ ಬೆಳವಣಿಗೆಯನ್ನು ನಿಯಂತ್ರಿಸಿದಲ್ಲಿ ಭೂಮಿಯ ಅಡಿಯ ಬೆಳವಣಿಗೆಯೂ ನಿಯಂತ್ರಣದಲ್ಲಿರುತ್ತದೆ. ಯಾವಾಗಲೂ ಎರಡು ಅಡಿಕೆ ಮರದ ನಂತರ ಒಂದರಂತೆ ಮರಗಳೆರಡರ ಮಧ್ಯೆ ಸಸಿ ಬೆಳೆಸಿರಬೇಕು. (ಚಿತ್ರ ೧) ತೀರಾ ಹತ್ತಿರವಿದ್ದರೆ ಆಯ್ಕೆ ಮಾಡಿ ಗಿಡ ತೆಗೆಯಿರಿ.
ಪ್ರೂನಿಂಗ್ ಯಾವಾಗ -ಯಾಕೆ?: ಕೊಕ್ಕೋ ಸಸ್ಯವನ್ನು ಹೂ ಬಿಡುವ ಸಮಯಕ್ಕೆ ಮುನ್ನ ಪ್ರೂನಿಂಗ್ ಮಾಡಬೇಕು. ಮಳೆಗಾಲ ಕಳೆದು ಚಳಿ ಬೀಳಲಾರಂಬಿಸಿದೊಡನೆ ಸಸ್ಯಗಳು ಹೂ ಬಿಡಲಾರಂಭಿಸುತ್ತದೆ. ಈ ಸಮಯಕ್ಕೆ ಪ್ರೂನಿಂಗ್ ಆಗಿರಬೇಕು. ಸರಿಯಾಗಿ ಪ್ರೂನಿಂಗ್ ಮಾಡಿದ ಸಸ್ಯ ಉತ್ತಮವಾಗಿ ಹೂ ಬಿಡುತ್ತದೆ. ಸಸ್ಯವು ಸುಮಾರು ಒಂದು ಮೀಟರು ಬೆಳೆಯುವ ತನಕ ನೇರವಾಗಿ ಬೆಳೆಯಬೇಕು. ನಂತರ ಅಡ್ದ ಗೆಲ್ಲುಗಳನ್ನು ಉಳಿಸಿಕೊಳ್ಳಬೇಕು. ಅದನ್ನು ಮೊದಲ ಜಾರ್ಕೆಟ್ ಎನ್ನುತ್ತಾರೆ. ಅಡ್ದ ಗೆಲ್ಲುಗಳನ್ನು ಒಂದು ಮೀಟರು ಉದ್ದಕ್ಕೆ ಮಾತ್ರವೇ ಬೆಳೆಯಲು ಬಿಡಬೇಕು.. ಅದಕ್ಕಿಂತ ಉದ್ದಕ್ಕೆ ಬೆಳೆಯುವಾಗ ಅದರ ತುದಿ ಕತ್ತರಿಸಬೇಕು. ಗೆಲ್ಲುಗಳು ಅಗಲಕ್ಕೆ ಕೆಳಮುಖವಾಗಿ ಬೆಳೆಯುವಾಗ ಬಾಗಿ ಅದರಲ್ಲಿ ಮತ್ತೆ ಅಡ್ದ ಚಿಗುರುಗಳು ಬರುತ್ತದೆ. ಇದನ್ನು ನಿರಂತರ ತೆಗೆಯುತ್ತಿರಬೇಕು. ಆಗ ಬೆಳವಣಿಗೆ ನಿಯಂತ್ರಣದಲ್ಲಿರುತ್ತದೆ. ಹೆಚ್ಚು ಗೆಲ್ಲುಗಳಿದ್ದಾಗ ಹೆಚ್ಚು ಫಸಲು ಎಂಬ ತಿಳುವಳಿಕೆ ತಪ್ಪು. ವಾಸ್ತವವಾಗಿ ಕೊಕ್ಕೋ ಸಸ್ಯದ ಕಾಂಡ ಮತ್ತು ದಪ್ಪದ ಕವಲು ಗೆಲ್ಲುಗಳ ಗಂಟುಗಳಲ್ಲಿ ಬಿಡುವ ಹೂವು ಫಲಿತಗೊಳ್ಳುವ ಪ್ರಮಾಣ ಜಾಸ್ತಿ. ಇದು ಪುಷ್ಟಿಯಾಗಿ ಬೆಳೆದು ಬೀಜಗಳೂ ಉತ್ತಮವಾಗಿರುತ್ತವೆ. ಗಾಳಿ ಬೆಳಕು ಉತ್ತಮವಾಗಿ ಲಭ್ಯವಾದಾಗ ಹೂವು ಉತ್ತಮವಾಗಿ ಬರುತ್ತದೆ. (ಚಿತ್ರ ೨) ಬೇಸಿಗೆಯಲ್ಲಿ ಕಾಂಡಕ್ಕೆ ಹೆಚ್ಚು ಬಿಸಿಲು ಬೀಳದಂತೆ ಸಣ್ಣ ಒಂದು ಗೆಲ್ಲನ್ನು ಉಳಿಸಿಕೊಳ್ಳಬಹುದು. ಗೆಲ್ಲು ಕತ್ತರಿಸಿದ ನಂತರ ನಿರಂತರ ವಾರಕ್ಕೊಮ್ಮೆ, ಇಲ್ಲವೇ ೧೫ ದಿನಕ್ಕೊಮ್ಮೆ ಅಲ್ಲಿ ಮೂಡುವ ಮೊಗ್ಗು ಚಿಗುರುಗಳನ್ನು ತೆಗೆಯುತ್ತಿರಬೇಕು. ಒಂದೆರಡು ಬಾರಿ ತೆಗೆದ ನಂತರ ಅಲ್ಲಿ ಮತ್ತೆ ಗಂಟು ಏರ್ಪಡುತ್ತದೆ (ಚಿತ್ರ ೩). ಇದರಲ್ಲಿ ಮತ್ತೆ ಹೂ ಮೊಗ್ಗು ಬರುತ್ತದೆ. ನೀರಾವರಿ ಮತ್ತು ತೋಟದ ಕೆಲಸಕ್ಕೆ ತೊಂದರೆಯಾಗುವ ಸಂದರ್ಭದಲ್ಲಿ ಗಿಡದಲ್ಲಿ ಮೊದಲನೆಯ ಜಾರ್ಕೆಟ್ ಬಂದ ನಂತರ ಅದರ ಕೆಳಗಡೆಯಿಂದ ಬರುವ ಚಿಗುರು ಬೆಳೆದು ಅದರಲ್ಲಿ ಮತ್ತೆ ಮೂರು- ನಾಲ್ಕು ಕವಲು ಗೆಲ್ಲುಗಳು ಬರುವುದನ್ನು ಬೆಳೆಯಲು ಬಿಟ್ಟು ಕೆಳಭಾಗದ ಗೆಲ್ಲನ್ನು ತೆಗೆಯಬೇಕು. ತುಂಬಾ ವಿಶಾಲವಾಗಿ ಬೆಳೆದ ಅನಿಯಂತ್ರಿತ ಬೆಳವಣಿಗೆಯಲ್ಲಿರುವ ಸಸ್ಯವನ್ನು ನೆಲಮಟ್ಟದಿಂದ ಸುಮಾರು ೧/೨ ಅಡಿ ಎತ್ತರಕ್ಕೆ ಕಾಂಡ ಸಿಗಿಯದಂತೆ ಕಡಿದು ಪ್ಲಾಸ್ಟಿಕ್ ಕೊಟ್ಟೆ ಹಾಕಿ ಬರುವ ಹೊಸ ಒಂದು ಚಿಗುರನ್ನು ಉಳಿಸಿ ಪುನಃಶ್ಚೇತನ ಮಾಡಿದರೆ ಅನುಕೂಲ.
ಹೂವು ಬಿಡುವ ಸಮಯದಲ್ಲಿ ಎಳೆ ಮಿಡಿಗಳಿಗೆ ಕಜ್ಜಿ ಕೀಟದ, ಹೇನಿನ ತೊಂದರೆ ಇರುತ್ತದೆ. ಇದರಿಂದ ಕೋಡುಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ. ಆದಕ್ಕಾಗಿ ಹೂ ಬಿಟ್ಟು ಕಾಯಿಯಾಗುವ ಸಮಯದಲ್ಲಿ ಒಂದು ಬಾರಿ ಮತ್ತು ಬಹುತೇಕ ಹೂ ಮುಗಿಯುವ ಸಮಯದಲ್ಲಿ ಮತ್ತೊಮ್ಮೆ ಇಮಿಡಾಕ್ಲೋಫ್ರಿಡ್ ಅಥವಾ ಎಕಾಲಕ್ಸ್ ಕೀಟನಾಶಕ ೨ ಮಿಲಿ. ೧ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಕೊಕ್ಕೋ ಬೆಳೆಗೆ ಉತ್ತಮ ಭವಿಷ್ಯವಿದ್ದು ಉತ್ತಮ ಧಾರಣೆಯೂ ಲಭ್ಯವಾಗುತ್ತಿದೆ. ಈ ಕಾರಣದಿಂದ ಕೊಕ್ಕೋ ಸಸಿಯನ್ನು ನೆಟ್ಟು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದರೆ ಭವಿಷ್ಯದಲ್ಲಿ ಉತ್ತಮ ಫಲ ಖಂಡಿತಾ ಕೊಡುತ್ತದೆ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ.