ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ
ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ
ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ್ನು ತಿಳಿದುಕೊಂಡು,ಆತನ ಮರಣಾನಂತರ,ಆತನ ಅಂತಿಮ ಅಭಿಲಾಷೆಯನ್ನು ನೆರವೇರಿಸಿಕೊಡಲು ಸಹಾಯ ಮಾಡುತ್ತವೆ.ಡಿಜಿಟಲ್ ಉಯಿಲು ಮುಖ್ಯವಾಗಿ,ವ್ಯಕ್ತಿಯ ಅಂತರ್ಜಾಲದ ಬದುಕಿನ ಬಗ್ಗೆ ಇರುತ್ತದೆ.ಆತನ ಮಿಂಚಂಚೆ ಖಾತೆಗಳು,ಫೇಸ್‌ಬುಕ್,ಟ್ವಿಟರ್ ಅಂತಹ ಖಾತೆಗಳು,ಆತನ ಬ್ಲಾಗುಗಳು ಇವನ್ನು ಮರಣಾನಂತರ ಹೇಗೆ ನಿರ್ವಹಿಸಬೇಕೆನ್ನುವುದು ವ್ಯಕ್ತಿಯ ಅಂತಿಮ ಆಸೆ ಎನ್ನುವುದನ್ನು ತಿಳಿದುಕೊಂಡು,ಆ ಪ್ರಕಾರ ಕ್ರಮ ತೆಗೆದುಕೊಳ್ಳಲು ಈ ಅಂತರ್ಜಾಲ ತಾಣಗಳು ಸಹಾಯ ಮಾಡುತ್ತವೆ.ಸತ್ತ ನಂತರವೂ ಖಾತೆಗಳು ಚಾಲೂ ಇರುವುದು,ಆಭಾಸಕ್ಕೆ ದಾರಿ ಮಾಡಿಕೊಡುವುದನ್ನು ತಡೆಯಲು ಈ ಕ್ರಮ ಸಹಾಯ ಮಾಡುತ್ತದೆ.ವ್ಯಕ್ತಿ ಬಯಸಿದರೆ,ಆತನ ಮಿಂಚಂಚೆ ಸಂಪರ್ಕಗಳಿಗೆ,ಆತನ ಮರಣದ ಬಗ್ಗೆ ತಿಳಿಸುವುದು,ಬ್ಲಾಗ್-ಸಾಮಾಜಿಕ ಜಾಲತಾಣಗಳ ಆತನ ಸ್ನೇಹಿತರಿಗೆ ವ್ಯಕ್ತಿಯ ಅಂತ್ಯದ ಬಗ್ಗೆ ತಿಳಿಸುವುದೇ ಮುಂತಾದ ಅಗತ್ಯ ಕ್ರಮಗಳನ್ನು ಈ ತಾಣಗಳು ತೆಗೆದುಕೊಳ್ಳುತ್ತವೆ.ಬಯಸಿದರೆ,ಖಾತೆಗಳನ್ನು ಅಮಾನತುಗೊಳಿಸಲೂ ಸಾಧ್ಯ.ಈ ಸೇವೆಯು ಉಚಿತವಾಗಿ ಲಭ್ಯವಿದೆ.ಈ ಸೇವೆಯಲ್ಲಿ ಹತ್ತು ಖಾತೆಗಳನ್ನು ಅಮಾನತು ಮಾಡುವ ಸೇವೆಯಷ್ಟೇ ಸಿಗುತ್ತದೆ.ಆದರೆ ಮುನ್ನೂರು ಡಾಲರು ತೆತ್ತರೆ,ಬಯಸಿದ ಸೇವೆಯನ್ನು ನೀಡಲಾಗುತ್ತದೆ.
------------------------------------------
ಸೌರಫಲಕ ಅಳವಡಿಸಿದ ಹಡಗು
ಹಡಗನ್ನು ನಡೆಸಲು ಪೆಟ್ರೋಲಿಯಂ ತೈಲ ಬಳಸುತ್ತಾರಷ್ಟೇ?ಈ ತೈಲ ಅತ್ಯಂತ ಅಶುದ್ಧ ರೂಪದ ತೈಲವಾದ್ದರಿಂದ,ಹಡಗುಗಳು ಚಲಿಸುವಾಗ,ಹೊರ ಹಾಕುವ ತ್ಯಾಜ್ಯಗಳಲ್ಲಿ ಗಂಧಕದ ಡಯಾಕ್ಸೈಡ್ ಅತಿ ಹೆಚ್ಚಿರುತ್ತದೆ.ಈ ಅನಿಲ ವಾತಾವರಣಕ್ಕೆ ಹಾನಿ ತರುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲವಷ್ಟೇ? ಈ ತ್ಯಾಜ್ಯವನ್ನು ಕಡಿಮೆ ಮಾಡಲು ಹಡಗನ್ನು ನಡೆಸಲು ಸೌರಶಕ್ತಿಯನ್ನು ಬಳಸಿ ತಯಾರಿಸಿದ ವಿದ್ಯುಚ್ಛಕ್ತಿಯನ್ನು ಬಳಸುವ ತಂತ್ರಜ್ಞಾನವನ್ನು ಸೋಲಾರ್ ಸೈಲರ್ ಎನ್ನುವ ಹಾಂಕಾಂಗಿನ ಕಂಪೆನಿ ಪ್ರಯತ್ನಿಸುತ್ತಿದೆ.ಹಾಂಕಾಂಗಿನ ಬಂದರು ವಿಶ್ವದ ಅತ್ಯಂತ ಸಾರಿಗೆ ಹೊಂದಿರುವಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಬಂದರಾಗಿದೆ.ಹಾಂಕಾಂಗಿನ ವಾತಾವರಣ ಕುಲಗೆಟ್ಟು ಹೋಗುವುದಕ್ಕೆ ಬಂದರಿನ ಕಾಣಿಕೆಯೂ ಸಾಕಷ್ಟಿದೆ.ಸೋಲಾರ್ ಸೈಲರ್ ಕಂಪೆನಿಯು ಹಡಗಿನಲ್ಲಿ ಸೌರಫಲಕಗಳನ್ನು ಅಳವಡಿಸಿ,ಸೌರಶಕ್ತಿಯನ್ನು ತಯಾರಿಸಿ,ಅದರ ಮೂಲಕ ಹಡಗನ್ನು ಮುನ್ನಡೆಸುವ ತಂತ್ರಜ್ಞಾನವನ್ನು ಅಳವಡಿಸಿದೆ.ಸೌರಫಲಕನ್ನು ಬೇಕಾದ ದಿಕ್ಕಿಗೆ ತಿರುಗಿಸಲು ಬರುತ್ತದೆ.ಗಾಳಿ ಮತ್ತು ಸೂರ್ಯನ ದಿಕ್ಕನ್ನು ಅವಲಂಬಿಸಿ,ಫಲಕಗಳನ್ನು ತಿರುಗಿಸಬಹುದು.ಇದೇ ರೀತಿ ಪವನಶಕ್ತಿಯನ್ನೂ ಬಳಸಿಕೊಂಡು,ಹಡಗನ್ನು ಚಲಿಸುವ ಹಾಗೆ ಮಾಡುವ ಯೋಚನೆಯೂ ಕಂಪೆನಿಗಿದೆ.
---------------------------------------
ತುಳು ಲಿಪಿಗೆ ಯುನಿಕೋಡ್ ಲಭಿಸಲಿ
ಯಾವುದೇ ಭಾಷೆಯನ್ನು ಕಂಪ್ಯೂಟರಿನಲ್ಲಿ ರಗಳೆಯಿಲ್ಲದೆ ಬಳಸಲು ಭಾಷೆಯ ಲಿಪಿಯ ಅಕ್ಷರಗಳಿಗೆ ಯುನಿಕೋಡ್ ಶಿಷ್ಟಾಚಾರ ಪ್ರಕಾರ,ಸಂಕೇತಗಳನ್ನು ನೀಡಬೇಕು.ತುಳುವಿಗೆ ಅಧಿಕೃತ ಭಾಷೆಯ ಮನ್ನಣೆ ಸಿಕ್ಕಿದರೆ ಮಾತ್ರಾ ಈ ಸಂಕೇತಗಳನ್ನು ಪಡೆಯಲು ಸಾಧ್ಯವಾಗಬಹುದಾದ್ದರಿಂದ,ತುಳುವಿಗೆ ಅಧಿಕೃತ ಭಾಷೆಯ ಅಂಗೀಕಾರ ಪಡೆದ ನಂತರವೇ ಇದು ಸಾಧ್ಯವಾದೀತು.ಅದು ವರೆವಿಗೂ,ತುಳು ಲಿಪಿಯ ಫಾಂಟುಗಳನ್ನು ಅನುಷ್ಟಾಪಿಸಿದ ನಂತರವೇ ಕಂಪ್ಯೂಟರಿನಲ್ಲಿ ತುಳು ಲಿಪಿಯನ್ನು ಮೂಡಿಸಲು ಸಾಧ್ಯ.ಸದ್ಯಕ್ಕಂತೂ ತುಳುವರು ಕನ್ನಡದ ಲಿಪಿ ಬಳಸಿಯೇ ತುಳುವನ್ನು ಬ್ಲಾಗು ಬರಹಗಳಲ್ಲಿ ಬಳಸಬಹುದಷ್ಟೆ.
-----------------------------------------------------------------------------------------
ತುಳು ಲಿಪ್ಯಂತರ ನಿಘಂಟು
ತುಳು ಶಬ್ದಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಅರ್ಥ ಹೇಳುವ ಲಿಪ್ಯಂತರ ಆಧಾರಿತ ನಿಘಂಟು ಅಂತರ್ಜಾಲದಲ್ಲಿದೆ.ಇದರಲ್ಲಿ ತುಳು ಶಬ್ದಗಳನ್ನು ಇಂಗ್ಲೀಷ್ ಅಕ್ಷರಗಳಲ್ಲೇ ಬರೆಯಲಾಗಿದ್ದು,http://www.websters-online-dictionary.org/translation/Tulu ಅಂತರ್ಜಾಲ ವಿಳಾಸದಲ್ಲಿ ಲಭ್ಯವಿದೆ.ಇಲ್ಲಿ ತುಳು ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು,ಶೋಧ ಸೇವೆಯೂ ಲಭ್ಯವಿದೆ.ದೈನಂದಿನ ವ್ಯವಹಾರದಲ್ಲಿ ಬಳಸುವ ವಾಕ್ಯಗಳನ್ನೂ ಇಲ್ಲಿ ಪಟ್ಟಿ ಮಾಡಲಾಗುವುದರಿಂದ,ಭಾಷೆಯನ್ನು ಕಲಿಯಲೂ ಸಹಾಯಕವಾಗಬಹುದು.
ಪದಗಳ ಮೂಲವನ್ನು ಹೇಳುವ ಕೋಶವೊಂದು ಅಂತರ್ಜಾಲದಲ್ಲಿ ಲಭ್ಯವಿದೆ.ಇದರಲ್ಲಿ ವಿವಿಧ ಶಬ್ದಗಳ ವ್ಯುತ್ಪತ್ತಿಯಾದ ಬಗೆಯನ್ನು ಹೇಳಲಾಗಿದೆ.ಇದರಲ್ಲಿ ತುಳು ಶಬ್ದಗಳನ್ನೂ ಉಲ್ಲೇಖಿಸಲಾಗಿದೆ.ದ್ರಾವಿಡ ಭಾಷೆಗಳ ಮೂಲವನ್ನು ಹೇಳುವ ಈ ನಿಘಂಟು http://dsal.uchicago.edu ಈ ಅಂತರ್ಜಾಲ ತಾಣದಲ್ಲಿ ಲಭ್ಯ.ಕನ್ನಡ,ತಮಿಳು,ಮಲೆಯಾಳಮ್,ಕೊಂಕಣಿ ಪದಗಳೂ ಇದರಲ್ಲಿ ಸಿಗುವುದು ವಿಶೇಷ.
----------------------------------------------------------------------------------
ತುಳು ತಂತ್ರಾಂಶ ತೌಳವ
ತೌಳವ 2.0 ಎನ್ನುವ ತುಳು ಲಿಪಿಯಲ್ಲಿ ಟೈಪ್ ಮಾಡಲು ಅನುವು ಮಾಡುವ ತಂತ್ರಾಂಶವೀಗ ಸಿದ್ಧವಾಗಿದೆ.ತುಳು ಲಿಪಿಯಲ್ಲಿ ಐವತ್ತು ಅಕ್ಷರಗಳಿದ್ದು,ಮಲಯಾಳವನ್ನು ಹೋಲುತ್ತದೆ.ಈ ಲಿಪಿಯನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.ನುಡಿ ತಂತ್ರಾಂಶದ ಕೀಲಿ ಮಣೆವಿನ್ಯಾಸವನ್ನು ಬಳಸಿ ಟೈಪ್ ಮಾಡಲು ಸಾಧ್ಯ.ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರ ಸಮಿತಿಯು ತಂತ್ರಾಂಶದ ಅಭಿವೃದ್ಧಿ ಮಾಡುತ್ತಲಿದೆ.ಉಜಿರೆಯಲ್ಲಿ ನಡೆದ ತುಳು ವಿಶ್ವಸಮ್ಮೇಳನದಲ್ಲಿ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಪ್ರದರ್ಶಿಸಿದಾಗ, ತಂತ್ರಾಂಶ ಪ್ರವೀಣ ಸತ್ಯಶಂಕರ ಮತ್ತು ಹರಿಕೃಷ್ಣ ಅವರು ಹಾಜರಿದ್ದರೆ,ನಿರ್ದೇಶಕರಾದಪ್ರವೀಣರಾಜ್ ರಾವ್,ತುಳು ಭಾಷಾ ಪ್ರವೀಣರಾದ ಪಿ.ವೆಂಕಟರಾಜ ಪುಣಿಂಚಿತಾಯ,ವಿಘ್ನರಾಜ್ ಧರ್ಮಸ್ಥಳ ಮತ್ತು ಪದ್ಮನಾಭ ಕೇಕುಣ್ಣಾಯ ಮುಂತಾದವರೂ ಭಾಗವಹಿಸಿದ್ದರು.
----------------------------------------------------
ಮೊಬೈಲ್‌ನಲ್ಲಿ ಕ್ಷಣ-ಕ್ಷಣ
ಮೊಬೈಲಿನಿಂದಲೇ ಜೀವನದ ಆಗುಹೋಗುಗಳನ್ನು ದಾಖಲಿಸುವುದನ್ನು ಹವ್ಯಾಸವಾಗಿಸಿಕೊಂಡಿರುವ,ಕಂಪ್ಯೂಟರ್ ತಂತ್ರಜ್ಞ ತೇಜೇಶ್,ತಮ್ಮ ಮೊಬೈಲ್ ಸಾಧನದಿಂದ ಸೆರೆ ಹಿಡಿದಿರುವ ಚಿತ್ರಗಳನ್ನು ತಮ್ಮ ಬ್ಲಾಗ್ http://thej.inನಲ್ಲಿ ನೋಡಬಹುದು.ಇದರ ಜತೆಗೆ,ಅವರು ಮೊಬೈಲಿನಿಂದ ಕಳುಹಿಸಿದ,ಟ್ವಿಟರ್ ಸಂದೇಶಗಳು,ಅವರ ಯೋಚನಾ ಲಹರಿಯನ್ನು ಜನರಿಗೆ ತೆರೆದಿಡುತ್ತದೆ.ಪ್ರಶಾಂತ್ ಎಂ ಎಂಬ ಇನ್ನೋರ್ವ ಬ್ಲಾಗರ್ ತಮ್ಮ ಛಾಯಾಚಿತ್ರಗಳನ್ನು http://clicks.pqrshanth.comನ ವಿಳಾಸದಲ್ಲಿರುವ ಬ್ಲಾಗಿನಲ್ಲಿ ಜನರಿಗೆ ಲಭ್ಯವಾಗಿಸಿದ್ದಾರೆ.ಇಲ್ಲಿರುವ ಅವರು ಕ್ಲಿಕ್ಕಿಸಿದ ಚಿತ್ರಗಳು ವೈಶಿಷ್ಟ್ಯವನ್ನು ಮೆರೆಯುತ್ತವೆ.ಈ ಡಿಜಿಟಲ್ ಯುಗದಲ್ಲಿ ಕ್ಯಾಮರಾ ಹಿಡಿದು ಎಲ್ಲರೂ ಕ್ಲಿಕ್ಕಿಸುವುದು ಸಾಮಾನ್ಯವಾಗಿರುವಾಗ,ಅವರೆಲ್ಲರಿಗಿಂತ ವಿಭಿನ್ನವಾಗಿರುವುದು ನಿಜಕ್ಕೂ ಸವಾಲೇ ಸರಿ.ಇಲ್ಲಿನ ಚಿತ್ರಗಳು ಆ ಸವಾಲಿಗೆ ಉತ್ತರವಾಗಿವೆ ಎನ್ನಲಡ್ಡಿಯಿಲ್ಲ.ಕನ್ನಡದಲ್ಲೂ ಬ್ಲಾಗಿಸುವ ಪ್ರಭುರಾಜ ಮೂಗಿ ಅವರ ನನ್ನಾK ಬ್ಲಾಗು "ನನ್ನಾಕೆಯ ಬಗ್ಗೆ ನನ್ನ ಕಲ್ಪನೆ,ಕತೆ,ಕೀಟಲೆಗಳು" ಎಂದು ಪ್ರಭುರಾಜ್ ಹೇಳಿಕೊಂಡಿದ್ದಾರೆ.ನನ್ನಾK ಸರಣಿಯಲ್ಲಿ ಐವತ್ತಕ್ಕಿಂತ ಹೆಚ್ಚು ಬರಹಗಳು ಇದೀಗಲೇ ಪ್ರಕಟವಾಗಿವೆ.ಬ್ಲಾಗಿನ ತಾಣದ ವಿಳಾಸ http://blog.telprabhu.com ಆಗಿದೆ.
------------------------------------------------------------------------------------
*ಅಶೋಕ್‌ಕುಮಾರ್ ಎ