ಕೊರಗ ತನಿಯ
ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ “ತುಳು ಮತ್ತು ಕನ್ನಡದಲ್ಲಿ ನಿರಂತರ ಸಾಹಿತ್ಯ ಕೃಷಿ ಮಾಡುತ್ತಾ ಬರುತ್ತಿರುವ ರಘು ಇಡ್ಕಿದು ತಮ್ಮ ಸಜ್ಜನಿಕೆ, ಭಾಷಾ ಪ್ರೀತಿ, ಸಾಹಿತ್ಯ ಸೃಷ್ಟಿ ಮತ್ತು ಸಮತೋಲನದ ಜೀವನದೃಷ್ಟಿಗಳ ಕಾರಣವಾಗಿ ಕರಾವಳಿಯ ಹೊಸ ಪೀಳಿಗೆಯ ಲೇಖಕರಲ್ಲಿ ಅನನ್ಯರಾಗಿದ್ದಾರೆ.
ರಘು ಅವರು ತುಳು ಪಾಡ್ದನದ ಕಥಾಶರೀರವನ್ನು ಇಟ್ಟುಕೊಂಡೇ ಅದರ ಸಾಮಾಜಿಕ ಧ್ವನಿಗಳನ್ನು ಇಂದಿನ ಕಾಲಕ್ಕೂ ಅನ್ವಯಿಸುವಂತೆ ‘ಕೊರಗ ತನಿಯ' ನಾಟಕದಲ್ಲಿ ಹೊರಹೊಮ್ಮಿಸಿದ್ದಾರೆ. ರಘು ಇಡ್ಕಿದು ಅವರ ‘ಕೊರಗ ತನಿಯ' ಕನ್ನಡ ನಾಟಕದಲ್ಲಿ ಸರಳವಾದ ದೇಸೀ ಸತ್ವದ ಭಾಷಾ ಶೈಲಿ, ಲವಲವಿಕೆಯ ಸಂಭಾಷಣೆಗಳು, ವಾಚಾಳಿತನ ಹಾಗೂ ವೈಚಾರಿಕತೆಯ ಉದ್ಘೋಷಗಳಿಲ್ಲದ ಸೂಕ್ಷ್ಮ ರೂಪಾತ್ಮಕ ಪ್ರತಿರೋಧದ ಗುಣೀಭೂತ ವ್ಯಂಗ್ಯ ಗಮನ ಸೆಳೆಯುತ್ತದೆ. ತುಳು ನಾಟಕದ ತುಳು ದೇಸಿ ಸಂಭಾಷಣೆಗಳಿಗೆ ಅನುರೂಪವಾದ ಕನ್ನಡದ ಸೊಗಸಾದ ಭಾಷಾಶೈಲಿಯ ಕಾರಣವಾಗಿ ಇದು ಮಕ್ಕಳಿಗೂ ದೊಡ್ಡವರಿಗೂ ಸಮಾನ ಆಸಕ್ತಿಯ ಹಾಗೂ ರಂಗದಲ್ಲಿ ಪರಿಣಾಮಕಾರಿಯಾಗಬಲ್ಲ ನಾಟಕ.
ರಘು ಇಡ್ಕಿದು ಅವರು ಈ ನಾಟಕದ ಪುಸ್ತಕವನ್ನು ತಮ್ಮ ಅಪ್ಪ-ಅಮ್ಮನಿಗೆ ಅರ್ಪಿಸಿದ್ದಾರೆ. ಕನ್ನಡದಲ್ಲಿ ಈ ರೀತಿಯ ನಾಟಕದ ಬರಹಗಳು ಬಹಳ ಅಪರೂಪ. ದಕ್ಷಿಣ ಕನ್ನಡದಾದ್ಯಂತ ಬಹುವಾಗಿ ಆರಾಧಿಸುವ ದೈವ ಕೊರಗಜ್ಜ. ಈ ನಾಟಕವನ್ನು ಆಸಕ್ತರು ಇವರ ಅನುಮತಿಯನ್ನು ಪಡೆದುಕೊಂಡು ರಂಗಕ್ಕೆ ತಂದರೆ ಭಾರೀ ಸೊಗಸಾದೀತು.