ಕೊರೊನಾಗೆ ಧೈರ್ಯವೇ ಮೊದಲ ಮದ್ದು

ಹೊಸವರ್ಷವನ್ನು ಸಂತಸದಿಂದ ಬರಮಾಡಿಕೊಳ್ಳುವ ಉತ್ಸಾಹ ಎಲ್ಲೆಡೆ ಅರಳಿಕೊಂಡಿರುವ ಹೊತ್ತಿನಲ್ಲೇ ಕೊರೊನಾ ಆತಂಕ ಮತ್ತೊಮ್ಮೆ ಸದ್ದು ಮಾಡಿದೆ. ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳಲ್ಲಿ ಹಠಾತ್ ಜಿಗಿತ ಕಂಡುಬಂದಿದೆ. ಈ ಬಾರಿಯೂ ಕೇರಳವೇ ಸೋಂಕಿಗೆ ಬಾಗಿಲು ತೆರೆದುಕೊಂಡಿರುವುದು ಕರ್ನಾಟಕಕ್ಕೂ ಆತಂಕ ತಂದಿದೆ. ಕೊರೊನಾದ ಹೊಸ ರೂಪಾಂತರ ತಳಿಯನ್ನು ಜೆ ಎನ್ ೧ (J.N.1) ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಲ್ಲ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಕರ್ನಾಟಕವಲ್ಲದೆ ತಮಿಳುನಾಡು, ಕೇರಳ ಸರಕಾರಗಳು ಈಗಾಗಲೇ ಮಾರ್ಗಸೂಚಿಗಳನ್ನೂ ಪ್ರಕಟಿಸಿವೆ.
ಆರಂಭಿಕ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸರಕಾರಗಳು ಎಚ್ಚೆತ್ತು ಜನರನ್ನು ಜಾಗೃತರಾಗುವಂತೆ ಪ್ರೇರೇಪಿಸುತ್ತಿರುವುದು ಒಳ್ಳೆಯ ಸಂಗತಿ. ಹೊಸ ರೂಪಾಂತರದ ಪರಿಣಾಮಗಳು ಅಪಾಯಕಾರಿಯಲ್ಲದಿದ್ದರೂ, ಅದರ ಬಗ್ಗೆ ಎಚ್ಚರ ವಹಿಸುವ ಅವಶ್ಯಕತೆಯಂತೂ ಇದ್ದೇ ಇದೆ. ಏಕೆಂದರೆ, ಜನರ ಸಣ್ಣ ಅಜಾಗರೂಕತೆಯೂ ಗಂಭೀರ ಸಮಸ್ಯೆಯನ್ನೇ ಉಂಟುಮಾಡಬಹುದು ಎಂಬ ಪಾಠವನ್ನು ಈಗಾಗಲೇ ಕೊರೊನಾದ ಒಂದು ಮತ್ತು ಎರಡನೇ ಅಲೆಗಳಿಂದ ಕಲಿತಿದ್ದೇವೆ. ಕೊರೊನಾದ ಬಗ್ಗೆ ಯಾರೂ ಆತಂಕಗೊಳ್ಳದೆ, ಧೈರ್ಯದಿಂದ ಇರುವುದೇ ಈ ಸೋಂಕಿಗೆ ಮೊದಲ ಮದ್ದು.
ಮೂರು ವರ್ಷಗಳ ಹಿಂದಿನ ಕೊರೊನಾ ಕಾಲಘಟ್ಟದಲ್ಲಿ ಸಮಾಜದಲ್ಲಿ ಒಂದು ಆರೋಗ್ಯ ಶಿಸ್ತು ರೂಪುಗೊಂಡಿತ್ತು. ಮುಖಕ್ಕೆ ಮಾಸ್ಕ್ ಧರಿಸುವುದು, ಪದೇ ಪದೇ ಮುಖ-ಬಾಯಿಗಳನ್ನು ಸ್ಪರ್ಶಿಸದೇ ಇರುವುದು, ಸಾಮಾಜಿಕ ಅಂತರ, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು - ಇಂಥ ಸುರಕ್ಷತಾ ಕ್ರಮಗಳನ್ನು ಪುನಃ ಅಳವಡಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯ.
ವಾಸ್ತವವಾಗಿ, ಯಾವುದೇ ವೈರಾಣುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎನ್ನುವುದು ಕೊರೊನಾದ ಮರುಕಳಿಸುವಿಕೆಯಿಂದ ಪುನಃ ಸಾಬೀತಾಗಿದೆ. ಅದರಲ್ಲೂ ಕೊರೊನಾವು ಪರಿಸರ, ಹವಾಮಾನ ಇತ್ಯಾದಿಗಳಿಗೆ ಅನುಗುಣವಾಗಿ ತನ್ನ ರೂಪವನ್ನು ಬದಲಿಸುತ್ತಲೇ ಇದ್ದು, ಕೋವಿಡ್ ನೊಂದಿಗೆ ಜೀವಿಸುವುದನ್ನು ರೂಢಿಸಿಕೊಳ್ಳಬೇಕಿದೆ. ಹಿಂದಿನ ಮೂರು ಅಲೆಗಳ ಸಂದರ್ಭದಲ್ಲಿ ಬಹುತೇಕರು ಲಸಿಕೆಯನ್ನು ಪಡೆದಿದ್ದರೂ, ಅದರ ಪರಿಣಾಮಕಾರತ್ವಗಳನ್ನು ನಂಬಿ ಕೂರುವುದಕ್ಕಿಂತ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ಲಸಿಕೆಗಳಿಗಿಂತ ದೇಹದಲ್ಲಿ ಉತ್ಪಾದನೆಯಾಗುವ ರೋಗನಿರೋಧಕ ಶಕ್ತಿಯೇ ಶಾಶ್ವತ. ಇದಕ್ಕೆ ಪೂರಕವಾದ ಆಹಾರಕ್ರಮಗಳನ್ನು ರೂಢಿಸಿಕೊಳ್ಳುವುದು ಅತ್ಯವಶ್ಯ.
ಕೆಮ್ಮು, ನೆಗಡಿಯಂಥ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಯಾರೂ ನಿರ್ಲಕ್ಷಿಸಬಾರದು. ಇಂಥ ಸಂದರ್ಭದಲ್ಲಿ ಆದಷ್ಟು ಜನದಟ್ಟಣೆಯ ಪ್ರದೇಶಗಳಿಗೆ ತೆರಳದೆ, ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಈ ವಿಚಾರದಲ್ಲಿ ಅಜಾಗರೂಕತೆ ಸಲ್ಲದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ ಎನ್ನುವ ಸರಳ ಗುಟ್ಟು ಎಲ್ಲರ ಆದ್ಯತೆಯಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೧-೧೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ