ಕೊಲ್ಲುವ ಸರಕನ್ನು ಪೂಜಿಸಲಾರೆ

ಕೊಲ್ಲುವ ಸರಕನ್ನು ಪೂಜಿಸಲಾರೆ

ಕವನ

ಕವಿತೆಯೋ...ಲೇಖನಿಯೋ

ಯಾವುದನ್ನೂ ಇನ್ನು ಆಯುಧವೆನ್ನಲಾರೆ!

 

ಲೋಕದ ಆಯುಧಗಳೆಲ್ಲವೂ

ಕೊಳೆತು ಗೊಬ್ಬರವಾಗಲಿ

ಅಸ್ತ್ರಗಳ ಪಳಿಯುಳಿಕೆಗಳ ಮೇಲೆ

ಒಂದು ಹೂ ಅರಳಲಿ, ಒಂದು ತೆನೆ ಕಾಳು ತುಂಬಲಿ

 

ಆಯುಧಗಳಲ್ಲ ಬೇಕಿರುವುದು ಸಾಧನ

ಒಂದು ನೇಗಿಲು, ಗಿರಣಿಯ ಒಂದು ಚಕ್ರ, 

ಸಿರಿಂಜರು, ಈಗೀಗಿನ ತುರ್ತು ಒಂದು ಕೀಬೋರ್ಡು, 

ಎಂಥದೋ ಸಾಫ್ಟುವೇರು, ಇತ್ಯಾದಿ

 

ಸಾಧನಗಳು‌ ಆಯುಧಗಳನ್ನು ಸೋಲಿಸಲಿ

ಸಾಧನಗಳೆಂದೂ ಆಯುಧಗಳಾಗದಿರಲಿ!

ಸೋಲಿಸಲೆಂದರೆ ಯುದ್ಧವೇ ಆಗಬೇಕಿಲ್ಲ

ಬೇಡ, ಈ ಲೋಕಕ್ಕೆ ಆಯುಧಗಳು ಬೇಡ

 

ಕೊಲ್ಲುವ ಸರಕನ್ನು ಪೂಜಿಸಲಾರೆ

ಶತೃವೇ ಆದರೂ ಸಾಯದಿರಲಿ

ಆತನೆದೆಯಲ್ಲಿ

ಒಂದು ಪುಟ್ಟ ಪ್ರೀತಿ ಅರಳಲಿ.

 

-ಬಿ.ಪೀರ್ ಬಾಷ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್