ಕೋದಂಡ ಕಲಿತ ಪಾಠ
ಕೋದಂಡ ಹತ್ತು ವರುಷ ವಯಸ್ಸಿನ ಹುಡುಗ. ಇತರರಿಗೆ ಉಲ್ಟಾ ಮಾತನಾಡುವುದೆಂದರೆ ಅವನಿಗೆ ಅದೇನೋ ಖುಷಿ. ಹಾಗೆ ಮಾತನಾಡುವುದೇ ಬುದ್ಧಿವಂತಿಕೆ ಎಂಬುದು ಅವನ ಭಾವನೆ.
ಇತರ ಹುಡುಗರು ಅವನ ವರ್ತನೆ ನೋಡಿ ಕೆಲವೊಮ್ಮೆ ನಗುತ್ತಿದ್ದರು. ಅದೇನಿದ್ದರೂ ಅವರು ಕೋದಂಡನ ಜೊತೆ ಸೇರಲು ಇಷ್ಟ ಪಡುತ್ತಿರಲಿಲ್ಲ.
ಹಿರಿಯರು ಮಾತನಾಡುವಾಗ ಅಡ್ಡಿ ಪಡಿಸುವುದು ಅವನ ಇನ್ನೊಂದು ಕೆಟ್ಟ ಅಭ್ಯಾಸ. ಅವನ ಅಮ್ಮ ತನ್ನ ಗೆಳತಿಯರ ಜೊತೆ ಮಾತನಾಡುವಾಗ ಅವನು ಅಮ್ಮನ ಕೈಹಿಡಿದು ಎಳೆಯುತ್ತಿದ್ದ. “ಕೋದಂಡ, ಹ್ಯಾಗಿದ್ದಿ? ನಿನಗೆ ಶಾಲೆ ಇಷ್ಟವಾಗುತ್ತಿದೆಯೇ?" ಎಂದು ಯಾರಾದರೂ ಕೇಳಿದರೆ, “ಇಲ್ಲ. ನನಗೆ ಶಾಲೆ ಸ್ವಲ್ಪವೂ ಇಷ್ಟವಿಲ್ಲ" ಎಂದು ಉತ್ತರಿಸುತ್ತಿದ್ದ. ಅದು ಸತ್ಯವಲ್ಲ. ಆದರೆ ಹೀಗೆ ಮಾತನಾಡಿದರೆ ಇತರರು ತನ್ನನ್ನು ಗಮನಿಸುತ್ತಾರೆ ಎಂಬುದು ಅವನ ತಪ್ಪು ಕಲ್ಪನೆ.
“ಇವತ್ತು ಬಹಳ ಸೆಕೆಯಾಗುತ್ತಿದೆ” ಎಂದು ಅವನ ಅಮ್ಮ ಹೇಳಿದರೆ, “ಇಲ್ಲ, ಇಲ್ಲ. ಇವತ್ತು ಭಾರೀ ಚಳಿ" ಎನ್ನುತ್ತಿದ್ದ ಕೋದಂಡ. ಅವನ ಅಮ್ಮನಿಗೆ ಇದರಿಂದಾಗಿ ಬಹಳ ಬೇಸರವಾಗುತ್ತಿತ್ತು. ಎರಡೇಟು ಬಿಗಿದು ಕೋಡಂಡನಿಗೆ ಸರಿಯಾದ ಬುದ್ಧಿ ಕಲಿಸ ಬೇಕಾಗಿತ್ತು. ಆದರೆ ಅವನ ಹೆತ್ತವರು ಹಾಗೆ ಮಾಡಲಿಲ್ಲ. ಕೊನೆಗೆ ಆತ ತನ್ನ ವರ್ತನೆಗೆ ದೊಡ್ಡ ಶಿಕ್ಷೆ ಅನುಭವಿಸಬೇಕಾಯಿತು.
ಅದೊಂದು ರಾತ್ರಿ ಕೋದಂಡನಿಗೆ ನಿದ್ದೆಯಿಂದ ಎಚ್ಚರವಾಯಿತು. ಆಗ ಗಡಿಯಾರ ಹನ್ನೆರಡು ಗಂಟೆ ಬಾರಿಸಿತು. ಆ ಕ್ಷಣದಲ್ಲಿ ಕೋದಂಡನಿಗೆ ತನ್ನ ಕೋಣೆಯಲ್ಲಿ ಯಾರೋ ಅತ್ತ ಸರಿದಂತಾಯಿತು. ಹಾಸಿಗೆಯಲ್ಲಿ ಎದ್ದು ಕುಳಿತ ಕೋದಂಡ ಅವನನ್ನೇ ನೋಡಿದ. ಕೇವಲ ಒಂದಡಿ ಎತ್ತರದ ಆ ವ್ಯಕ್ತಿ "ಹಲೋ, ನಾನು ದಾರಿ ತಪ್ಪಿ ಇಲ್ಲಿಗೆ ಬಂದೆ. ಇದು ನಿನ್ನ ಬೆಡ್-ರೂಮ್ ಹೌದೇನು?" ಎಂದು ಕೇಳಿದ. “ಅಲ್ಲಲ್ಲ, ಇದು ಅಡುಗೆ ಕೋಣೆ” ಎಂದು ಉತ್ತರಿಸಿದ ಕೋದಂಡ, ನೀನ್ಯಾರು ಎಂದು ಕೇಳಿದ. "ನಾನೊಬ್ಬ ಯಕ್ಷ” ಎಂದಾತ ಉತ್ತರಿಸಿದಾಗ, “ಏನೇನೋ ಮಾತಾಡಬೇಡ. ಯಕ್ಷರು, ಗಂಧರ್ವರು, ಭೂತಗಳು, ಪಿಶಾಚಿಗಳು ಅಂತೆಲ್ಲ ಇಲ್ಲವೇಇಲ್ಲ. ನನಗೆ ಗೊತ್ತಿದೆ. ಈಗ ಇಲ್ಲಿಂದ ಹೊರಡು" ಎಂದು ಗದರಿಸಿದ ಕೋದಂಡ.
ಕೋದಂಡನನ್ನು ದಿಟ್ಟಿಸಿ ನೋಡಿದ ಯಕ್ಷ ಪ್ರಶ್ನಿಸಿದ, “ನಿನ್ನಲ್ಲಿ ಒಳ್ಳೆಯ ವರ್ತನೆಗಳೇ ಇಲ್ಲವೇ?’ ಕೋದಂಡ ಉಲ್ಟಾ ಉತ್ತರಿಸಿದ, “ಬೇಕಾದಷ್ಟಿವೆ. ನಿನಗೂ ಕೆಲವು ಬೇಕೇನು?” ಯಕ್ಷ ಜುಗುಪ್ಸೆಯಿಂದ ಹೇಳಿದ, “ಉಡಾಫೆ ಮಾತಾಡಬೇಡ.” “ಹೋಗುಹೋಗಲೇ, ಉಡಾಫೆಯಂತೆ ಉಡಾಫೆ. ಹಾಗೆನ್ನಲು ನೀನು ಯಾವನಲೋ?”ಎಂದು ಸೊಕ್ಕಿನಿಂದ ಉತ್ತರಿಸಿದ ಕೋದಂಡ.
“ಓಹೋ, ಹಾಗೆನ್ನುತ್ತೀಯೇನು? ನೀನು ಕೋದಂಡ ಆಗಿರಲೇ ಬೇಕು. ಹಲವಾರು ಜನರು ನಿನ್ನ ದುರ್ಬುದ್ಧಿಯ ಬಗ್ಗೆ ಮಾತಾಡೋದನ್ನು ನಾನು ಕೇಳಿದ್ದೇನೆ. ಹೀಗೆಲ್ಲ ಉಡಾಫೆ ಮಾತಾಡುವ ನಿನ್ನ ಕೆನ್ನೆ ದಪ್ಪಗಾಗಲಿ, ನಿನ್ನ ಕೆನ್ನೆ ದಪ್ಪಗಾಗಲಿ” ಎಂದು ಶಾಪವಿತ್ತು ಯಕ್ಷ ಕಣ್ಮರೆಯಾದ.
“ಇದೇನೋ ಕನಸು ಆಗಿರಬೇಕು. ಕೆಟ್ಟ ಕನಸು. ಆದರೆ ಕನಸಿನಲ್ಲಿಯೂ ನಾನು ಬುದ್ಧಿವಂತನಾಗಿದ್ದೆ” ಎಂದುಕೊಂಡ ಕೋದಂಡ. ಅನಂತರ ಅವನು ಪುನಃ ಮಲಗಿ ನಿದ್ದೆಗೆ ಜಾರಿದ.
ಮರುದಿನ ಬೆಳಗ್ಗೆ ಎದ್ದು, ಹಲ್ಲುಜ್ಜಲಿಕ್ಕಾಗಿ ಕನ್ನಡಿಯೆದುರು ನಿಂತಾಗ ಕೋದಂಡನಿಗೆ ಅಚ್ಚರಿಯಾಯಿತು. ಅವನ ಎರಡೂ ಕೆನ್ನೆಗಳೂ ಬಾತಿದ್ದವು. ಈಗ ಅವನಿಗೆ ಹೆದರಿಕೆಯಾಯಿತು. ಅವನು ಮಾಳಿಗೆಯ ತನ್ನ ಕೋಣೆಯಿಂದ ಕೆಳಗಿಳಿದು ಬಂದಾಗ, ಅವನ ಅಪ್ಪ ಮತ್ತು ಅಮ್ಮ ಅವನನ್ನು ಎವೆಯಿಕ್ಕದೆ ನೋಡಿದರು. “ಕೋದಂಡ, ಇದೇನಿದು? ನಿನಗೆ ಹಲ್ಲು ನೋಯುತ್ತಿದೆಯೇ?ನೀನು ಹಲ್ಲಿನ ಡಾಕ್ಟರ ಹತ್ತಿರ ಹೋಗಬೇಕು” ಎಂದು ಅವನ ಅಪ್ಪ ಹೇಳಿದರು.
"ನಾನು ಅಲ್ಲಿಗೆ ಹೋಗೋದಿಲ್ಲ; ನನಗೆ ಹಲ್ಲು ನೋಯುತ್ತಿಲ್ಲ” ಎಂದ ಕೋದಂಡ. "ಹೋಗಲೇ ಬೇಕು ಕೋದಂಡ” ಎಂದು ಅಮ್ಮ ಹೇಳಿದಾಗಲೂ ಅವನದು ಅದೇ ಉತ್ತರ. ಕೊನೆಗೆ, ಅವನ ಕೆನ್ನೆಗಳು ಬಲೂನಿನಂತೆ ಊದಿಕೊಂಡದ್ದನ್ನು ನೋಡಿದ ಅವನ ಅಪ್ಪ, ಕೋದಂಡನನ್ನು ಹಲ್ಲಿನ ಡಾಕ್ಟರ ಬಳಿಗೆ ಕರೆದೊಯ್ಯ ಬೇಕೆಂದು ಅಮ್ಮನಿಗೆ ತಾಕೀತು ಮಾಡಿದರು.
ಅಂತೂ ಹಲ್ಲಿನ ಡಾಕ್ಟರ ಬಳಿ ಹೋದಾಗ, ಅವರು ಕೋದಂಡನ ಕೆನ್ನೆ ನೋಡಿ ಆಶ್ಚರ್ಯ ಪಡುತ್ತಾ ಹಲ್ಲುಗಳನ್ನು ಪರೀಕ್ಷಿಸಿದರು. “ಇವನ ಕೊನೆಯ ಹಲ್ಲೊಂದನ್ನು ತೆಗೆಯ ಬೇಕಾಗುತ್ತದೆ. ಇಷ್ಟು ದಪ್ಪವಾಗಿ ಕೆನ್ನೆ ಊದಿಕೊಳ್ಳಲು ಅದೊಂದೇ ಕಾರಣ” ಎಂದರು ಹಲ್ಲಿನ ಡಾಕ್ಟರ್. ಹಲ್ಲು ಕಿತ್ತು ತೆಗೆದ ನಂತರವೂ ಕೋದಂಡನ ಕೆನ್ನೆಗಳು ಸರಿಹೋಗಲಿಲ್ಲ. ಅವನ ಅಮ್ಮನಿಗೆ “ಇದು ಮಂಗನಬಾವು ರೋಗ ಆಗಿರಬಹುದು” ಎಂದು ಚಿಂತೆಯಾಯಿತು.
"ಬಾ, ನಾವೀಗ ಡಾಕ್ಟರ್ ಹತ್ತಿರ ಹೋಗೋಣ" ಎಂದಳು ಅಮ್ಮ. “ಇಲ್ಲ, ಇಲ್ಲ. ಇವತ್ತು ಶನಿವಾರ. ನಾನು ಸೋಮುವಿನ ಮನೆಗೆ ಆಟವಾಡಲು ಹೋಗಲೇ ಬೇಕು” ಎಂದು ಹಟ ಮಾಡಿದ ಕೋದಂಡ. ಪಕ್ಕದಲ್ಲೇ ಇದ್ದ ಸೋಮುವಿನ ಮನೆಗೆ ಕೋದಂಡ ಧಾವಿಸಿದಾಗ, ಅವನ ಅಮ್ಮನೂ ಅವನನ್ನು ಹಿಂಬಾಲಿಸಿದಳು.
ಕೋದಂಡನನ್ನು ಕಂಡ ಸೋಮುವಿನ ಅಮ್ಮ ದಂಗಾದಳು. “ಇಲ್ಲಿಂದ ಈಗಲೇ ಹೊರಟು ಹೋಗು. ನಿನಗೆ ಏನೋ ಭಯಂಕರ ರೊಗ ಬಂದಿದೆ. ಮಂಗನಬಾವು ಆಗಿರಬಹುದು. ಅದು ಬೇರೆಯವರಿಗೂ ಹರಡುತ್ತದೆ. ನೀನು ಸೋಮುವಿನ ಹತ್ತಿರ ಬರೋದೇ ಬೇಡ. ನೀನು ಶಾಲೆಗೂ ಹೋಗದಿದ್ದರೆ ಒಳ್ಳೆಯದು” ಎಂದು ಅವಳು ಕೂಗಿದಳು.
ಅವಳು ಹೇಳಿದ್ದನ್ನೆಲ್ಲ ಕೋದಂಡನ ಅಮ್ಮ ಕೇಳಿಸಿಕೊಂಡು, ಅವನನ್ನು ಕೂಡಲೇ ಡಾಕ್ಟರ ದವಾಖಾನೆಗೆ ಕರೆದೊಯ್ದಳು. ಡಾಕ್ಟರ್ ಕೋದಂಡನನ್ನು ಬಹಳ ಹೊತ್ತು ಪರೀಕ್ಷಿಸಿದರು. “ಇದು ತೀರ ವಿಚಿತ್ರವಾಗಿದೆ. ಇವನ ಕಾಯಿಲೆ ಮಂಗನಬಾವು ಆಗಿರಬಹುದು. ಯಾಕೆಂದರೆ ಹಲ್ಲಿನ ಡಾಕ್ಟರ್ ಹಲ್ಲು ತೆಗೆದ ನಂತರವೂ ಇವನ ಕೆನ್ನೆಗಳ ಊದುವಿಕೆ ಕಡಿಮೆಯಾಗಿಲ್ಲ. ಇದು ಕಡಿಮೆಯಾಗುವ ತನಕ ಇವನನ್ನು ಬೇರೆ ಮಕ್ಕಳ ಹತ್ತಿರವೂ ಸೇರಿಸಬಾರದು” ಎಂದರು ಡಾಕ್ಟರ್.
"ನಾನು ಇವತ್ತು ಸಂಜೆ ಒಂದು ಪಾರ್ಟಿಗೆ ಹೋಗಿಯೇ ಹೋಗುತ್ತೇನೆ. ನೀವು ಹೇಳಿದ್ದನ್ನೆಲ್ಲ ಕೇಳಲಿಕ್ಕೆ ನನ್ನಿಂದಾಗದು” ಎಂದ ಕೋದಂಡ. ಡಾಕ್ಟರ್ ಕೋದಂಡನನ್ನು ದಿಟ್ಟಿಸಿ ನೋಡಿದರು. ಅನಂತರ ಗಡಸು ಧ್ವನಿಯಲ್ಲಿ ಹೇಳಿದರು, “ಅದೆಲ್ಲ ಸಾಧ್ಯವಿಲ್ಲ. ನಾನು ಹೇಳಿದಂತೆ ನೀನು ಕೇಳಲೇ ಬೇಕು. ನಿನಗೆ ಕಹಿ ಮದ್ದು ಕೊಡುತ್ತೇನೆ. ಮತ್ತು ನಿನ್ನ ಕೆನ್ನೆಗಳಿಗೆ ಹಚ್ಚಿಕೊಳ್ಳಲು ದ್ರಾವಣ ಕೊಡುತ್ತೇನೆ. ಅದನ್ನು ಹಚ್ಚಿಕೊಂಡಾಗ ಬಹಳ ಉರಿಯುತ್ತದೆ.”
ಕೋದಂಡ ಮನೆಗೆ ಹೋಗಿ ತೆಪ್ಪಗೆ ಮಲಗಿಕೊಳ್ಳಬೇಕಾಯಿತು. ಇಡೀ ದಿನ ಅವನು ಕಹಿಮದ್ದು ಕುಡಿಯುತ್ತಾ, ಕೆನ್ನೆಗಳಿಗೆ ಉರಿ ದ್ರಾವಣ ಹಚ್ಚಿಕೊಳ್ಳುತ್ತಾ ಇರಬೇಕಾಯಿತು. ಕೆಲವೊಮ್ಮೆ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡ ಕೋದಂಡ ಕೊನೆಗೊಮ್ಮೆ ಅಮ್ಮನ ಬಳಿ ಕೇಳಿದ, “ಅಮ್ಮ, ನನ್ನ ಕೆನ್ನೆಗಳು ಇನ್ನು ಯಾವಾಗಲೂ ಹೀಗೆ ಊದಿಕೊಂಡೇ ಇರುತ್ತವೇನು?” ಅಮ್ಮ ಅವನನ್ನು ಸಮಾಧಾನ ಪಡಿಸುತ್ತಾ ಹೇಳಿದಳು, “ನಿನ್ನ ಕೆನ್ನೆಗಳ ಉಬ್ಬುವಿಕೆ ವಾಸಿಯಾದಾಗ ನೀನು ಮೊದಲಿನಂತೆಯೇ ಕಾಣಿಸುತ್ತಿ. ಈಗ ಸ್ವಲ್ಪ ಮಲಗಿಕೋ.”
ಅವತ್ತು ಸಂಜೆ ಪಕ್ಕದ ಮನೆಯಲ್ಲಿ ಪಾರ್ಟಿ ನಡೆಯಿತು. ಅಲ್ಲಿ ಸೇರಿದ್ದ ಮಕ್ಕಳಿಗೆ ಸಂಭ್ರಮ. ಅವರ ಗಲಾಟೆ ಮತ್ತು ಅವರು ಸಿಡಿಸಿದ ಪಟಾಕಿಗಳ ಸದ್ದು ಕೋದಂಡನಿಗೆ ಕೇಳಿಸುತ್ತಿತ್ತು. ಆ ಪಾರ್ಟಿ ತಪ್ಪಿಹೋಯಿತೆಂದು ಅವನಿಗೆ ಬಹಳ ದುಃಖವಾಯಿತು. ಅವನಿಗೆ ಯಕ್ಷನೊಬ್ಬ ಕಾಣಿಸಿದ ಕನಸಿನ ನೆನಪಾಯಿತು. ಅದು ನಿಜವಾಗಿ ನಡೆದ ಘಟನೆ ಎಂದು ಅವನಿಗೆ ಈಗ ಅನಿಸಿತು.
ಮರುದಿನವೂ ಕೋದಂಡನ ಕೆನ್ನೆಗಳ ಊದುವಿಕೆ ಕಡಿಮೆಯಾಗಲಿಲ್ಲ. ಗಂಟೆಗೊಮ್ಮೆ ಕಹಿಮದ್ದು ಕುಡಿಯುತ್ತಾ, ಎರಡು ಗಂಟೆಗೊಮ್ಮೆ ಕೆನ್ನೆಗಳಿಗೆ ಉರಿದ್ರಾವಣ ಸವರಿಕೊಳ್ಳುತ್ತಾ ಅವನು ಇರಬೇಕಾಯಿತು. ಅವನು ಇಡೀ ದಿನ ಯೋಚನೆ ಮಾಡಿದ. ಫಕ್ಕನೆ ಅವನು ಒಂದು ಸಂಗತಿ ಗಮನಿಸಿದ. ಅದೇನೆಂದರೆ, ಅವನು ಉಡಾಫೆ ಮಾತನಾಡಿದಾಗೆಲ್ಲ ಅವನ ಕೆನ್ನೆಗಳು ಇನ್ನಷ್ಟು ಊದಿಕೊಳ್ಳುತ್ತಿದ್ದವು. ಹಾಗೂ ಅವನು ವಿನಯದಿಂದ ಮಾತನಾಡಿದಾಗೆಲ್ಲ ಅವನ ಕೆನ್ನೆಗಳ ಊದುವಿಕೆ ಕಡಿಮೆಯಾಗುತ್ತಿತ್ತು. ಆದ್ದರಿಂದ ತನ್ನ ಕೆನ್ನೆಗಳ ಊದುವಿಕೆ ವಾಸಿ ಮಾಡಿಕೊಳ್ಳುವುದು ತನ್ನ ಕೈಯಲ್ಲೇ ಇದೆ ಎಂದು ಅವನಿಗೆ ಅರ್ಥವಾಯಿತು.
ಅವತ್ತಿನಿಂದಲೇ ಕೋದಂಡ ಎಲ್ಲರೊಂದಿಗೂ ವಿನಯದಿಂದ ಮಾತನಾಡಲು ಶುರು ಮಾಡಿದ. ಇತರರಿಗೆ ಎದುರುತ್ತರ ಕೊಡುವುದನ್ನು ನಿಲ್ಲಿಸಿದ. ಹಿರಿಯರು ಮಾತನಾಡುವಾಗ ನಡುವೆ ಬಾಯಿಹಾಕುವುದನ್ನೂ ನಿಲ್ಲಿಸಿದ. ಕ್ರಮೇಣ ಅವನ ಕೆನ್ನೆಗಳ ಊದುವಿಕೆ ಕಡಿಮೆಯಾಯಿತು. ಮುಂದೊಂದು ದಿನ ಅವನ ಕೆನ್ನೆಗಳ ಊದುವಿಕೆ ಸಂಪೂರ್ಣ ವಾಸಿಯಾಯಿತು.
ಕೋದಂಡನನ್ನು ನೋಡಿದ ಡಾಕ್ಟರ್ ಹೇಳಿದರು, “ಇವನ ಅನಾರೋಗ್ಯ ಸಂಪೂರ್ಣ ಗುಣವಾಗಿದೆ. ಇವನಿನ್ನು ಶಾಲೆಗೆ ಹೋಗಬಹುದು. ಅಂತೂ ಇದೊಂದು ವಿಚಿತ್ರ ಕಾಯಿಲೆ. ಈಗಲೂ ಅದೇನೆಂದು ನನಗೆ ಗೊತ್ತಾಗುತ್ತಿಲ್ಲ.”
ಅವನ ಅಮ್ಮ ಸಂತೋಷದಿಂದ ಹೇಳಿದಳು, “ಅದೇನಿದ್ದರೂ ಇದರಿಂದ ಅವನಿಗೆ ಒಳ್ಳೆಯದಾಗಿದೆ, ಡಾಕ್ಟರೇ. ಅವನೀಗ ಬೇರೆಯೇ ಹುಡುಗ ಅನಿಸುತ್ತದೆ. ಯಾರೊಂದಿಗೂ ಉಡಾಫೆ ಮಾಡುವುದಿಲ್ಲ. ಒಳ್ಳೆಯ ಹುಡುಗನಾಗಿದ್ದಾನೆ.”
ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ